ಸೋತವರು ವಾಸ್ತವ್ಯ ಮುಂದುವರೆಸುವರೇ?

7
ವಲಸಿಗರಿಗೆ ಒಲಿಯದ ವಿಜಯಮಾಲೆ

ಸೋತವರು ವಾಸ್ತವ್ಯ ಮುಂದುವರೆಸುವರೇ?

Published:
Updated:

ಹಾಸನ: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹೊರತು ಪಡಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಹೊಸಬರ ಜೊತೆಗೆ ವಲಸಿಗರಿಗೆ ಮಣೆ ಹಾಕಿದ್ದವು. ಆದರೆ ಹೊರಗಿನ ಅಭ್ಯರ್ಥಿಗಳಿಗೆ ವಿಜಯಮಾಲೆ ಒಲಿಯಲಿಲ್ಲ.

ಸೋತವರು ನಿರಾಶೆಯಿಂದ ವಾಪಸ್‌ ತಮ್ಮ ಊರಿಗೆ ಹೋಗುತ್ತಾರಾ? ಅಥವಾ ನಿರೀಕ್ಷೆಯಿಂದ ಕ್ಷೇತ್ರದಲ್ಲೇ ಉಳಿಯುತ್ತಾರಾ? ಎಂಬ ಪ್ರಶ್ನೆಗಳು ಅನೇಕರನ್ನು ಕಾಡಿದೆ.

ಹಾಸನ ವಿಧಾನ ಸಭಾ ಕ್ಷೇತ್ರದ ಮಟ್ಟಿಗೆ ಹೇಳುವುದಾದರೆ, ಮೂರು ಪಕ್ಷಗಳ ಅಭ್ಯರ್ಥಿಗಳೂ ಸ್ಥಳೀಯರಾಗಿದ್ದರಿಂದ ಅಂತಹ ಪ್ರಶ್ನೆ ಉದ್ಬವಿಸಿಲ್ಲ.

ಅರಸೀಕೆರೆಯಲ್ಲಿ ಶಿವಲಿಂಗೇಗೌಡ ಹೊರತು ಪಡಿಸಿ ಕಾಂಗ್ರೆಸ್ ನಿಂದ ಶಶಿಧರ್ ಮತ್ತು ಬಿಜೆಪಿಯಿಂದ ಮರಿಸ್ವಾಮಿ ಎಂಬುವರಿಗೆ ಟಿಕೆಟ್ ನೀಡಲಾಗಿತ್ತು. ಇವರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂಬಂಧಿ ಮರಿ ಸ್ವಾಮಿ ಹೊರಗಿನವರು.  ಒಲ್ಲದ ಮನಸ್ಸಿನಿಂದಲೇ ಸ್ಪರ್ಧಿಸಿದ್ದ ಕ್ಷೇತ್ರದಲ್ಲೇ ಉಳಿಯುವ ಲಕ್ಷಣಗಳು ಇಲ್ಲ.

‘ಅರಸೀಕೆರೆ ನಗರಸಭೆ ಹಾಗೂ ಬಾಣಾವರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಉಪ ಚುನಾವಣೆ ವೇಳೆ ಬರುತ್ತೇನೆ. ಕ್ಷೇತ್ರಕ್ಕೆ ಆಗಾಗ್ಗೆ ಭೇಟಿ ನೀಡುತ್ತೇನೆ’ ಎಂದು ಫಲಿತಾಂಶ ಪ್ರಕಟವಾದ ಬಳಿಕ ಕಾರ್ಯಕರ್ತರಿಗೆ ಮರಿಸ್ವಾಮಿ ಹೇಳಿ ಹೋದರು.

ಬೇಲೂರಿನಲ್ಲಿ ಇಬ್ಬರು ಹೊರತು ಪಡಿಸಿ ಬಿಜೆಪಿ ಅಭ್ಯರ್ಥಿ ಎಚ್.ಕೆ.ಸುರೇಶ್, ಕ್ಷೇತ್ರದಲ್ಲೇ ವಾಸ್ತವ್ಯ ಹೂಡುತ್ತಾರೆಯೋ? ಅಥವಾ ಹಾಸನ-ಬೆಂಗಳೂರಿಗೆ ತಮ್ಮ ಉದ್ಯಮ ವಿಸ್ತರಿಸಿಕೊಂಡು ಹೋಗುತ್ತಾರೆಯೋ ಕಾದು ನೋಡಬೇಕು.

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೀರ್ತನಾ ರುದ್ರೇಶ್ ಗೌಡ ಸಕ್ರಿಯ ರಾಜಕೀಯದಿಂದ ದೂರ ಉಳಿಯುವ ಬಗ್ಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ದಿ. ವೈ.ಎನ್‌.ರುದ್ರೇಶ್‌ಗೌಡರಿಗೆ ತಮ್ಮ ಪತ್ನಿ ರಾಜಕೀಯಕ್ಕೆ ಬರುವುದು ಇಷ್ಟವಿರಲಿಲ್ಲ. ವರಿಷ್ಠರು ಮತ್ತು ಕ್ಷೇತ್ರದ ಕಾರ್ಯಕರ್ತರ ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದರು.

ಜಿದ್ದಾಜಿದ್ದಿಯ ಕಣವಾಗಿದ್ದ ಸಕಲೇಶಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಿದ್ದಯ್ಯ ಮತ್ತು ಬಿಜೆಪಿಯ ಜಿ.ಸೋಮಶೇಖರ್ ಹೊರಗಿನವರು. ಸೋಮಶೇಖರ್ ಕ್ಷೇತ್ರದಲ್ಲಿ ಕಾಫಿ ತೋಟ ಖರೀದಿ ಮಾಡಿದ್ದರೂ ಅವರ ಉದ್ಯಮ ಬೆಂಗಳೂರಿನಲ್ಲಿರುವ ಕಾರಣ ಮುಂದಿನ ಚುನಾವಣೆವರೆಗೂ ಇರುವುದಿಲ್ಲ.

ಇನ್ನು ಮಾಜಿ ಸಿ.ಎಂ. ಸಿದ್ದರಾಮಯ್ಯ ಸೂಚನೆಯಂತೆ ಕಣಕ್ಕಿಳಿದಿದ್ದ ನಿವೃತ್ತ ಐ ಎ ಎಸ್ ಅಧಿಕಾರಿ ಸಿದ್ದಯ್ಯ ಸಹ ಉಳಿಯುವ ಬಗ್ಗೆ ಅನುಮಾನ ಇದೆ.

‘ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನರ ಜತೆ ಸಂಪರ್ಕ ಇಟ್ಟುಕೊಂಡಿರುತ್ತೇನೆ. ವಾರದಲ್ಲಿ ಒಮ್ಮೆ ಭೇಟಿ ನೀಡುವುದಾಗಿ’ ಸಿದ್ದಯ್ಯ  ಭರವಸೆ ನೀಡಿದ್ದಾರೆ.

ಸಿದ್ದರಾಮಯ್ಯ ಖುದ್ದು ಆಸಕ್ತಿ ವಹಿಸಿ ಕಣಕ್ಕಿಳಿಸಿದ್ದ ಹೊಳೆನರಸೀಪುರ ಕ್ಷೇತ್ರದ ಬಿ.ಪಿ. ಮಂಜೇಗೌಡ ಅವರ ಮುಂದಿನ ನಡೆ ಸ್ಪಷ್ಟವಾಗಿಲ್ಲ. ‘ಲೋಕಸಭೆ ಚುನಾವಣೆಗೆ ಸ್‍ಪರ್ಧಿಸುತ್ತಾರೆ, ಮುಂದಿನ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ’ ಎಂಬ ಸುದ್ದಿ ಹರಿದಾಡುತ್ತಿದೆ.

‘ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಕಾರ್ಯಕರ್ತರು ಹಾಗೂ ಜನರ ಜತೆ ನಿಕಟ ಸಂಪರ್ಕ ಇಟ್ಟುಕೊಂಡು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ಮಂಜೇಗೌಡರು ಹೇಳಿದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಸತತ ಎರಡು ಸೋಲಿನೊಂದಿಗೆ ಕಾಂಗ್ರೆಸ್‌ನ ಸಿ.ಎಸ್.ಪುಟ್ಟೇಗೌಡ ಅವರು ರಾಜಕೀಯಕ್ಕೆ ವಿದಾಯ ಹೇಳಿದರು. ಮೊದಲ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಸ್ಥಳೀಯರಾದ ಬಿಜೆಪಿಯ ಶಿವನಂಜೇಗೌಡ, ಮುಂದಿನ ಚುನಾವಣಾ ರಾಜಕೀಯಕ್ಕೆ ಇಳಿಯುವುದು ಖಚಿತ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry