ಬ್ಯೂಟಿಷಿಯನ್ ವೃತ್ತಿಗೆ ಹೆಚ್ಚಿನ ಬೇಡಿಕೆ

7
ಕೆನರಾ ಬ್ಯಾಂಕ್‌ ಸಹಾಯಕ ಮಹಾಪ್ರಬಂಧಕ ಜಯಪ್ರಕಾಶ್ ಅಭಿಮತ

ಬ್ಯೂಟಿಷಿಯನ್ ವೃತ್ತಿಗೆ ಹೆಚ್ಚಿನ ಬೇಡಿಕೆ

Published:
Updated:

ಹಾಸನ: ದೇಶದಲ್ಲಿ ಯುವಜನರನ್ನು ಸ್ವಾವಲಂಬಿ ಬದುಕಿನಲ್ಲಿ ಸಬಲೀಕರಣ ಮಾಡುವ ಸಲುವಾಗಿ ಕೆನರಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿವಿಧ ರೀತಿಯ ನೂರಾರು ವೃತ್ತಿ ತರಬೇತಿ ನೀಡುತ್ತಿದೆ ಎಂದು ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಜಯಪ್ರಕಾಶ್ ಹೇಳಿದರು.

ನಗರದ ಕೆನರಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸೌಂದರ್ಯ ವರ್ಧಕ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಸೌಂದರ್ಯ ವರ್ಧಕ ವೃತ್ತಿಗೆ ಪ್ರಸ್ತುತ ವಿಶ್ವದಲ್ಲಿ ಭಾರಿ ಬೇಡಿಕೆಯಿದ್ದು, ಇದನ್ನು ನಿರುದ್ಯೋಗ ಮಹಿಳೆಯರು ತರಬೇತಿ ಪಡೆದು ಸ್ವಾವಲಂಬಿ ಜೀವನ ನಡೆಸುವತ್ತ ಚಿತ್ತಹರಿಸಬೇಕಾಗಿದೆ ಎಂದರು.

ದೇಶದೆಲ್ಲೆಡೆ ಬ್ಯಾಂಕ್ ವತಿಯಿಂದ ಒಟ್ಟು 607 ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಕೆನರಾ ಬ್ಯಾಂಕ್ ವತಿಯಿಂದ 27 ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರಗಳು, 5 ಶಿಲ್ಪಕಲೆ ತರಬೇತಿ ಕೇಂದ್ರಗಳು, 5 ಮಾಹಿತಿ ಮತ್ತು ತಂತ್ರಜ್ಞಾನ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಇವುಗಳಿಂದ ಲಕ್ಷಾಂತರ ಜನರು ತರಬೇತಿ ಪಡೆದು ಸ್ವ ಉದ್ಯೋಗ ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಸಂಸ್ಥೆಯ ನಿರ್ದೇಶಕ ಜಿ.ರಂಗಸ್ವಾಮಿ ಮಾತನಾಡಿ, ಬದುಕಿನಲ್ಲಿ ಗುರಿ ಅಥವಾ ಸ್ವಾವಲಂಬನೆ ಸಾಧಿಸಬೇಕಾದರೆ ಸತತ ಪರಿಶ್ರಮ ಹಾಗೂ ತಾಳ್ಮೆ ಮುಖ್ಯ. ದೇಶದಲ್ಲಿ ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರಕಲು ಸಾಧ್ಯವಿಲ್ಲ.

ಆದರೆ, ಪ್ರತಿಯೊಬ್ಬರೂ ಸ್ವಾವಲಂಬಿಯಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ವಿಫುಲ ಅವಕಾಶಗಳಿದ್ದು, ಯುವಜನರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬಹುದು.

ಶಿಬಿರಾರ್ಥಿಗಳು ಪಡೆದಿರುವ ಸೌಂದರ್ಯವರ್ಧಕ ತರಬೇತಿಯನ್ನು ಇನ್ನಷ್ಟು ಕ್ರಮಬದ್ಧತೆಯಿಂದ ಮಾಡುವ ಮೂಲಕ ತಮ್ಮ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಅಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, ಸೌಂದರ್ಯ ವರ್ಧಕ ವೃತ್ತಿಗೆ ಬಹಳಷ್ಟು ಬೇಡಿಕೆಯಿದ್ದು, ತರಬೇತಿ ಪಡೆದ ಮಹಿಳೆಯರು ಯಶಸ್ಸು ಕಾಣುವ ಮೂಲಕ ಕುಟುಂಬಕ್ಕೆ ಆಧಾರವಾಗಬೇಕು ಎಂದರು.

ತರಬೇತುದಾರರಾದ ಜ್ಯೋತಿ, ಹರಿಪ್ರಸಾದ್, ಏಕಲವ್ಯ ಮುಕ್ತ ರೋವರ್ಸ್‌ ದಳದ ನಾಯಕ ಆರ್.ಜಿ.ಗಿರೀಶ್, ರೋವರ್ ಬಿ.ಟಿ.ಚನ್ನಬಸವೇಶ್ವರ, ಜಯಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry