ನಿಫಾ ವೈರಾಣು ಆತಂಕ ಬೇಡ

7
ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಸಿ.ಜಾಫರ್ ಸೂಚನೆ

ನಿಫಾ ವೈರಾಣು ಆತಂಕ ಬೇಡ

Published:
Updated:

ಹಾಸನ: ದಕ್ಷಿಣ ರಾಜ್ಯಗಳಲ್ಲಿ ಆತಂಕ ಮೂಡಿಸಿರುವ ಮಾರಣಾಂತಿಕ ನಿಫಾ ವೈರಾಣು ಸೋಂಕು ಜಿಲ್ಲೆಗೂ ಹರಡದಂತೆ ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಸಿ.ಜಾಫರ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಫಾ ಸೋಂಕು ನಿಯಂತ್ರಣ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ನಗರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈ ವೈರಾಣು ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವಂತೆ ನಿರ್ದೇಶನ ನೀಡಿದರು.

ನಿಫಾ ವೈರಾಣು ಅತ್ಯಂತ ಅಪಾಯಕಾರಿ ಎಂದು ಈಗಾಗಲೇ ದೃಢಪಟ್ಟಿದೆ. ಕೇರಳ ರಾಜ್ಯದಿಂದ ಪ್ರಾರಂಭವಾಗಿ ಈಗಾಗಲೇ 11 ಮಂದಿ ಮೃತಪಟ್ಟಿದ್ದಾರೆ. 19 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಈಗ ಮಂಗಳೂರಿಗೂ ವ್ಯಾಪಿಸಿದೆ.  ಹಾಗಾಗಿ ಜಿಲ್ಲೆಯುಲ್ಲಿಯೂ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

ನಿಫಾ ವೈರಾಣು ಸೋಂಕಿಗೆ ಒಳಗಾದ ರೋಗಿಗಳ ಸಂಪರ್ಕಕ್ಕೆ ಬಂದವರಿಗೂ ಸೋಂಕು ಹರಡಿದೆ. ಬಾವಲಿ, ಇತರೆ ಸೋಂಕಿತ ಹಕ್ಕಿ, ಪ್ರಾಣಿಗಳ ಮಲ, ಮೂತ್ರ ಜೊಲ್ಲು ಹಾಗೂ ಅವುಗಳ ಸಂಪರ್ಕಕ್ಕೆ ಬಂದ ನೀರಿನ ಮೂಲಕ ಇದು ಹರಡುತ್ತದೆ. ಹಾಗಾಗಿ ಹೆಚ್ಚಿನ ಮುತುವರ್ಜಿ ಮತ್ತು ಮುಂಜಾಗ್ರತೆ ಅಗತ್ಯ. ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಹೆಚ್ಚು ಅಪಾಯಕ್ಕೆ ತಮ್ಮನ್ನು ಒಡ್ಡಿಕೊಳ್ಳುವುದರಿಂದ ಅವರು ಕಡ್ಡಾಯವಾಗಿ ಆರೋಗ್ಯ ಸುರಕ್ಷತಾ ಸಾಧನಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಅವರು ನಿಫಾ ವೈರಾಣು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಜಗದೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್, ನಗರಸಭೆ ಆಯುಕ್ತ ಪರಮೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ತೋಟಗಾರಿಕೆ, ಅಬಕಾರಿ ಇಲಾಖೆಗಳ ಅಧಿಕಾರಿಗಳು, ಮತ್ತಿತರ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪಶು, ಹಂದಿ ಸಾಕಣೆದಾರರಿಗೆ ಸೂಚನೆ

ಹಂದಿ, ಇತರೆ ಪಶು ಸಾಕಾಣಿಕೆ ಮಾಡುವವರು ಹಾಗೂ ಅದರೊಂದಿಗೆ ಹೆಚ್ಚಿನ ಸಂಪರ್ಕ ವಹಿಸುವವರು ಮುಂಜಾಗ್ರತೆಯಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನಿಫಾ ವೈರಾಣು ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಹಕ್ಕಿಗಳು ಕಚ್ಚಿದ ಹಣ್ಣುಗಳನ್ನು ತಿನ್ನಬಾರದು. ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಸಮೀಪದ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry