ಹಿರೇಕೆರೂರ: ಬಿತ್ತನೆಗೆ ಭರದ ಸಿದ್ಧತೆ

7
ಭೂಮಿ ಹದಗೊಳಿಸುವ ಕಾರ್ಯ ಚುರುಕುಗೊಳಿಸಿದ ಅನ್ನದಾತರು

ಹಿರೇಕೆರೂರ: ಬಿತ್ತನೆಗೆ ಭರದ ಸಿದ್ಧತೆ

Published:
Updated:

ಹಿರೇಕೆರೂರ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಹೊಲ, ಗದ್ದೆಗಳನ್ನು ಸಿದ್ಧಗೊಳಿಸುವ ಕಾಯಕದಲ್ಲಿ ರೈತರು ತೊಡಗಿದ್ದು, ಕೃಷಿ ಕಾರ್ಮಿಕರಿಗೆ ಬಿಡುವಿಲ್ಲದ ಕೆಲಸ ದೊರಕಿದೆ. ಉತ್ತಮ ಮಳೆಯಾಗಿರುವುದರಿಂದ ಕಳೆದ ವರ್ಷದ ಹತ್ತಿ ಗಿಡಗಳನ್ನು ಕೀಳುವ, ರಂಟೆ ಹೊಡೆಯುವ, ಕುಂಟೆ ಹೊಡೆದು ಸಮತಟ್ಟು ಮಾಡುವ ಕಾರ್ಯ ಚುರುಕಾಗಿದೆ.

‘ಬಿತ್ತನೆಗೆ ಬಹಳಷ್ಟು ರೈತರು ಈಗಾಗಲೇ ಹೊಲಗಳನ್ನು ಸಿದ್ಧಗೊಳಿಸಿದ್ದಾರೆ. ಕೆಲವರು ಇನ್ನೂ ರಂಟೆ ಹೊಡೆಯುತ್ತಿದ್ದು, ಹತ್ತಿ ಬಿತ್ತನೆಗೆ ಸಾಲು ಹೊಡೆಯುತ್ತಿದ್ದೇವೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಳೆ ಬಂದರೆ ತಕ್ಷಣ ಬಿ.ಟಿ.ಹತ್ತಿ ಬೀಜಗಳನ್ನು ಭೂಮಿಗೆ ಹಾಕಲು ಆರಂಭಿಸುತ್ತೇವೆ. ಹತ್ತಿ ಬೀಜ ಹಾಕುವ ಕೆಲಸ ಮುಗಿದ ನಂತರ ಗೋವಿನ ಜೋಳ ಸೇರಿದಂತೆ ವಿವಿಧ ಬೀಜಗಳ ಬಿತ್ತನೆ ಆರಂಭಿಸುತ್ತೇವೆ’ಎಂದು ಕಳಗೊಂಡ ಗ್ರಾಮದ ರೈತ ಭರಮಗೌಡ ದಂಡಿಗಿಹಳ್ಳಿ ತಿಳಿಸಿದರು.

2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಒಟ್ಟು 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬಹುದು. ಅದರಲ್ಲಿ ಸುಮಾರು ಶೇ 90ರಷ್ಟು ಕ್ಷೇತ್ರದಲ್ಲಿ ಗೋವಿನ ಜೋಳ ಹಾಗೂ ಬಿ.ಟಿ.ಹತ್ತಿ ಬಿತ್ತನೆಯಾಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ರಂಟೆ, ಕುಂಟೆ ಹೊಡೆದು, ಕಸ–ಕಟ್ಟಿಗೆಗಳನ್ನು ಆರಿಸಿ ಹೊಲಗಳನ್ನು ಸಿದ್ಧಗೊಳಿಸಿಕೊಂಡಿರುವ ರೈತರು ರಾಸಾಯನಿಕ ಗೊಬ್ಬರ ಹಾಗೂ ಬಿತ್ತನೆ ಬೀಜ ಖರೀದಿಗೆ ಮುಂದಾಗುತ್ತಿದ್ದಾರೆ.

‘ವಾಣಿಜ್ಯ ಬೆಳೆಯಾಗಿರುವ ಹತ್ತಿ ಬಿತ್ತನೆ ಕ್ಷೇತ್ರ 15 ಸಾವಿರದಿಂದ 16 ಸಾವಿರ ಹೆಕ್ಟೇರ್ ಆಗಬಹುದು. ಬಿತ್ತನೆ ಬೀಜಗಳು ಎಲ್ಲ ಖಾಸಗಿ ಪರಿಕರ ಮಾರಾಟಗಾರರ ಮಳಿಗೆಗಳಲ್ಲಿ ದಾಸ್ತಾನು ಇದೆ. ರೈತರು ಅಧಿಕೃತ

ರಶೀದಿ ಪಡೆದು ಬೀಜ ಖರೀದಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಮಲ್ಲಾಡದ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕದ ಕೀಟದ ಬಾಧೆ ಹೆಚ್ಚುತ್ತಿದ್ದು, ಹತೋಟಿ ಕ್ರಮಕ್ಕಾಗಿ ಆಯಾ ವಲಯದ ಕೀಟ ನಿರೋಧಕ ತಳಿಗಳನ್ನು ರೈತರು ಬಳಸಬೇಕು. ಬಿ.ಟಿ.ಹತ್ತಿ ಹೊಲದ ಸುತ್ತ ನಾನ್ ಬಿ.ಟಿ.ಹತ್ತಿಯನ್ನು ಬೆಳೆಯುವ ಮೂಲಕ ಬಿ.ಟಿ.ಹತ್ತಿ ಬೆಳೆಯಲ್ಲಿ ಕೀಟ ನಿರೋಧಕತೆ ಹೆಚ್ಚಿಸಬಹುದು. ಹಿಂದಿನ ವರ್ಷ ಬೆಳೆದ ಹತ್ತಿ ಕಟ್ಟಿಗೆಯನ್ನು ಹೊಲದಲ್ಲಿ ಹಾಗೆಯೇ ಬಿಡದೆ ಜಮೀನಿನಲ್ಲಿ ಕ್ರೋಡೀಕರಿಸಿ ಹೊಲದಿಂದ ಆಚೆಗೆ ಸುಡುವ ಮೂಲಕ ಈ ಕೀಟದ ಮೊಟ್ಟೆಗಳನ್ನು ನಾಶಪಡಿಸಿ ಕೀಟದ ಹತೋಟಿ ಮಾಡಬಹುದಾಗಿದೆ’ ಎಂದು ಅವರು ರೈತರಿಗೆ ಸಲಹೆ ನೀಡಿದ್ದಾರೆ.

‘ತಾಲ್ಲೂಕಿಗೆ ಮುಂಗಾರು ಹಂಗಾಮಿನಲ್ಲಿ ಒಟ್ಟು 20 ಸಾವಿರ ಮೆಟ್ರಿಕ್ ಟನ್ ರಾಸಾಯನಿಕ ಗೊಬ್ಬರದ ಬೇಡಿಕೆ ಇದೆ. ಜೂನ್ ತಿಂಗಳಿಗೆ ಬೇಕಾಗುವ 10 ಸಾವಿರ ಮೆಟ್ರಿಕ್ ಟನ್ ಗೊಬ್ಬರವು ಟಿಎಪಿಸಿಎಂಎಸ್ ಶಾಖೆಗಳಲ್ಲಿ, ಸೊಸೈಟಿಗಳಲ್ಲಿ ಹಾಗೂ ಖಾಸಗಿ ಪರಿಕರ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಮಾಡಲಾಗಿದೆ. ಯಾವುದೇ ರೀತಿ ಗೊಬ್ಬರದ ಕೊರತೆ ಇಲ್ಲ’ ಎಂದು ಅವರು ತಿಳಿಸಿದರು.

**

ತಾಲ್ಲೂಕಿಗೆ ಮುಂಗಾರು ಹಂಗಾಮಿನಲ್ಲಿ ಒಟ್ಟು 20 ಸಾವಿರ ಮೆಟ್ರಿಕ್ ಟನ್ ರಾಸಾಯನಿಕ ಗೊಬ್ಬರದ ಬೇಡಿಕೆ ಇದೆ. ಅಷ್ಟು ಗೊಬ್ಬರಕ್ಕೆ ಕೊರತೆ ಇಲ್ಲ

ಶಿವಕುಮಾರ ಮಲ್ಲಾಡದ ಸಹಾಯಕ ಕೃಷಿ ನಿರ್ದೇಶಕ, ಹಿರೇಕೆರೂರ

-ಕೆ.ಎಚ್.ನಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry