ಜಿಲ್ಲೆಯಾದ್ಯಂತ ಈಗ ನಿಫಾ ಮೇಲೆ ನಿಗಾ

7
ಹಾವೇರಿ ನಗರದ ಜನವಸತಿ ಪ್ರದೇಶಗಳಲ್ಲಿ ಹಂದಿಗಳ ಉಪಟಳ; ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತ

ಜಿಲ್ಲೆಯಾದ್ಯಂತ ಈಗ ನಿಫಾ ಮೇಲೆ ನಿಗಾ

Published:
Updated:
ಜಿಲ್ಲೆಯಾದ್ಯಂತ ಈಗ ನಿಫಾ ಮೇಲೆ ನಿಗಾ

ಹಾವೇರಿ: ಜಿಲ್ಲೆಯ 2 ನಗರ ಮತ್ತು 7 ಪಟ್ಟಣ ಸೇರಿದಂತೆ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ಹಂದಿ ಕಾಟವು ಹೆಚ್ಚಿದ್ದು, ಸಾರ್ವಜನಿಕರು ದೂರಿಕೊಂಡರೂ ಸ್ಥಳೀಯಾಡಳಿತ ಸಂಸ್ಥೆಗಳು ಸಮರ್ಪಕ ಕ್ರಮ ಕೈಗೊಂಡಿರಲಿಲ್ಲ. ಈಗ, ಅವುಗಳ ಮೂಲಕ ಹರಡುವ ‘ನಿಫಾ’ ಆತಂಕ ಸೃಷ್ಟಿಸಿದೆ.

‘ಎಲ್ಲ ನಗರ ಮತ್ತು ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯ ಅಧಿಕಾರಿಗಳಿಗೆ ಹಂದಿಗಳ ನಿಯಂತ್ರಣ ಬಗ್ಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಸತ್ತ ಹಂದಿ ಕಂಡುಬಂದರೆ ಸ್ಥಳೀಯಾಡಳಿತ ಸಂಸ್ಥೆಯ ಆರೋಗ್ಯ ನಿರೀಕ್ಷಕರು ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ’ ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.

ಪ್ರತ್ಯೇಕ ವಾರ್ಡ್‌: ‘ಜಿಲ್ಲೆಯ ವೈದ್ಯಾಧಿಕಾರಿಗಳ ಸಭೆಯಲ್ಲಿ ‘ನಿಫಾ ವೈರಾಣು’ ಕುರಿತು ಚರ್ಚಿಸಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ, ಸಿದ್ಧತೆಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಹುಬ್ಬಳ್ಳಿ ವಿಮಾನ ನಿಲ್ದಾಣವು ಜಿಲ್ಲೆಗೆ ಸಮೀಪ ಇದೆ. ಇನ್ನೊಂದೆಡೆ ಕೆಲಸಕ್ಕಾಗಿ ಇತರ ಪ್ರದೇಶಗಳಿಗೆ ಹೋಗಿ ಬಂದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ’ ಎಂದರು.

‘ಸರ್ಕಾರದ ಅಧಿಸೂಚನೆ ಮತ್ತು ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ‘ನಿಫಾ’ ಸೋಂಕಿತರಿಗೆ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ. ಆದರೆ, ಈ ತನಕ ನಿಫಾ ಸೋಂಕಿನ ವರದಿ ಆಗಿಲ್ಲ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಟಿ. ನಾಗರಾಜ ನಾಯ್ಕ ತಿಳಿಸಿದರು.

‘ಆಸ್ಪತ್ರೆಗೆ ಬರುವ ಪ್ರತಿ ರೋಗಿಯ ಪ್ರಯಾಣದ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ. ನಿಫಾ ಪೀಡಿತ ಪ್ರದೇಶದಿಂದ ಬಂದವರ ಆರೋಗ್ಯವನ್ನು ಮತ್ತೊಮ್ಮೆ ತಪಾಸಣೆ ನಡೆಸಲಾಗುತ್ತಿದೆ’ ಎಂದರು.

‘ನಿಫಾ ವೈರಾಣು ಸೋಂಕಿದರೆ ಶೇ 75ರಷ್ಟು ಜೀವ ಉಳಿಸಿಕೊಳ್ಳುವುದು ಕಷ್ಟ ಸಾಧ್ಯ. ಹೀಗಾಗಿ ತೀವ್ರ ಎಚ್ಚರಿಕೆ ವಹಿಸಿದ್ದು, ಔಷಧಿಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ’ ಎಂದರು.

ಸೋಂಕು ಕುರಿತು ಎಚ್ಚರಿಕೆ: ಸೋಂಕಿತ ವ್ಯಕ್ತಿಯ ಜೊಲ್ಲು, ಎಂಜಲು, ಬೆವರು ಅಥವಾ ವಾಂತಿ ಸ್ಪರ್ಶವಾದರೆ ವೈರಾಣು ಹರಡುತ್ತದೆ. ಬಾವಲಿಗಳು ತಿಂದು ಬಿಸಾಡಿದ ಅಥವಾ ಅವುಗಳ ಜೊಲ್ಲು, ಮೂತ್ರ ಬಿದ್ದ ವಸ್ತುಗಳ ಸ್ಪರ್ಶದಿಂದ ಹಾಗೂ ಹಂದಿಗಳ ಮಲ, ಮೂತ್ರ, ಜೊಲ್ಲು ಮತ್ತು ಸರಿಯಾಗಿ ಬೇಯಿಸದ ಹಂದಿ ಮಾಂಸ ಸೇವನೆಯಿಂದ ಸೋಂಕು ಹರಡುವ ಸಾಧ್ಯತೆ ಇದೆ. ಈ ರೋಗವು ಹಂದಿ, ನಾಯಿ, ಬೆಕ್ಕು, ಮೇಕೆ ಮತ್ತು ಕುದುರೆಗಳಲ್ಲಿ ಕಂಡುಬರುತ್ತದೆ. ಕುರಿಗಳಲ್ಲೂ ಕಂಡು ಬರುವ ಸಾಧ್ಯತೆಯನ್ನು ನಿರಾಕರಿಸುವಂತಿಲ್ಲ ಎನ್ನುತ್ತಾರೆ ಪಶು ಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎನ್.ಎಫ್ ಕಮ್ಮಾರ.

ಈ ರೋಗದ ವೈರಾಣುವು ಮನುಷ್ಯನ ದೇಹದೊಳಗೆ ಪ್ರವೇಶಿಸಿದ 4 ರಿಂದ 18 ದಿನಗಳೊಳಗಾಗಿ ರೋಗ ಲಕ್ಷಣ ಕಂಡುಬರುತ್ತವೆ. ಭಾರತದಲ್ಲಿ 2003, 2004, 2007 ಮತ್ತು 2008 ರಲ್ಲಿ ಮನುಷ್ಯರಲ್ಲಿ ಕಂಡು ಬಂದಿದೆ. ಸಾಕು ಪ್ರಾಣಿಗಳಲ್ಲಿ ಅಷ್ಟಾಗಿ ಕಂಡು ಬಂದಿಲ್ಲ ಎಂದು ಕಮ್ಮಾರ ವಿವರಿಸಿದರು.

ಜಿಲ್ಲೆಯಲ್ಲಿ ಎಚ್ಚರಿಕೆ ಅಗತ್ಯ ಏಕೆ?

*ಅತ್ಯಧಿಕ ಸಂಖ್ಯೆಯಲ್ಲಿ ಬೀದಿ ಹಂದಿಗಳು ಮತ್ತು ನಾಯಿಗಳ ಕಾಟ

*ಜೀವನೋಪಾಯಕ್ಕಾಗಿ ಸಾರ್ವಜನಿಕ ಸ್ಥಳದಲ್ಲೇ ಹಂದಿ ಸಾಕಾಣಿಕೆ ನಡೆಸುವ ನಿರ್ದಿಷ್ಟ ಸಮುದಾಯಗಳು

*ಗ್ರಾಮೀಣ ಪ್ರದೇಶದಲ್ಲಿ ಊರ ಹೊರಗಿನ ಹುಣಸೆ, ಆಲದ (ಗೋಣಿ ಹಣ್ಣುಇ) ಮರಗಳಲ್ಲಿ ಅತ್ಯಧಿಕ ಬಾವಲಿಗಳು

* ಗೋವಾ, ಕೇರಳ ಸೇರಿದಂತೆ ಕರಾವಳಿಗೆ ಕೆಲಸಕ್ಕಾಗಿ ವಲಸೆ ಹೋಗುವವರ ಸಂಖ್ಯೆಯೂ ಅಧಿಕ

*ಸಂತೆ, ಜಾತ್ರೆ, ಮದುವೆ, ಆಚರಣೆ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳು

*ಬೀದಿ ಬದಿಯ ಆಹಾರ ಪದಾರ್ಥಗಳ ಮಾರಾಟ (ಎಗ್‌ ರೈಸ್ ಇತ್ಯಾದಿ) ಸ್ಥಳಗಳಲ್ಲೇ ಹಂದಿಗಳ ವಾಸಸ್ಥಾನ

*ನಗರ– ಪಟ್ಟಣಗಳಲ್ಲಿ ಅಸಮರ್ಪಕ ತ್ಯಾಜ್ಯ ವಿಲೇವಾರಿ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ನೀಡಿದ ಮುನ್ನೆಚ್ಚರಿಕೆಗಳು ಇಂತಿವೆ...

1. ಹಂದಿ ಮತ್ತು ಸಾಕಾಣಿಕೆದಾರರೊಂದಿಗಿನ ಸಂಪರ್ಕದಿಂದ ದೂರವಿರುವುದು

2. ವೈಯಕ್ತಿಕ ಹಾಗೂ ಪರಿಸರದ ಸ್ವಚ್ಛತೆ ಕಾಪಾಡುವುದು

3. ಕಚ್ಚಾ ಹಣ್ಣುಗಳನ್ನು ಸೇವನೆ ಮಾಡದಿರುವುದು

4. ಚೆನ್ನಾಗಿ ಬೇಯಿಸಿದ ಆಹಾರ ಸೇವಿಸುವುದು

5.ಸಾರ್ವಜನಿಕ ಪ್ರದೇಶಗಳಲ್ಲಿ ಎನ್‌–95 ಮಾಸ್ಕ್ ಧರಿಸುವುದು

6, ಸೋಂಕಿತ ಹಂದಿಗಳನ್ನು ಸಾಮೂಹಿಕವಾಗಿ ನಾಶ ಪಡಿಸುವುದು

7. ತಾತ್ಕಾಲಿಕವಾಗಿ ಹಂದಿ ಸಾಕಾಣಿಕೆ ಮತ್ತು ಆಮದು ನಿಷೇಧಿಸುವುದು

8. ಸತ್ತ ಹಂದಿ, ಪ್ರಾಣಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು

9. ಜಾನುವಾರು ಸಾಕಾಣಿಕಾ ಕೇಂದ್ರಗಳ ಸರ್ವೇಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು

ಹೋಲಿಕೆಯಾಗದ ಗಣತಿ ಮತ್ತು ವಾಸ್ತವ

ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆ 2012ರಲ್ಲಿ ನಡೆಸಿದ 19ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 6,453 ಹಂದಿಗಳಿವೆ. ಆದರೆ, ಈಗ ಇವುಗಳ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿವೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಕೇವಲ ಹಾವೇರಿ ಮತ್ತು ರಾಣೆಬೆನ್ನೂರಿನಲ್ಲೇ 10 ಸಾವಿರಕ್ಕೂ ಹೆಚ್ಚು ಹಂದಿಗಳು ಇವೆ ಎಂದು ಸಾರ್ವಜನಿಕರು ದೂರುತ್ತಾರೆ.

**

ಜಿಲ್ಲೆಯಲ್ಲಿ ಈ ತನಕ ‘ನಿಫಾ ವೈರಾಣು’ ಸೋಂಕು ವರದಿಯಾಗಿಲ್ಲ, ಆದರೆ, ಎಚ್ಚರಿಕೆ ವಹಿಸಲಾಗಿದೆ

ಡಾ.ವೆಂಕಟೇಶ್‌, ಎಂ.ವಿ. ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry