7
ಸ್ವಚ್ಛಗೊಂಡಿಲ್ಲ ಗಟಾರಗಳು; ಇನ್ನೂಪೂರ್ಣಗೊಂಡಿಲ್ಲ ತುರ್ತು ಕಾಮಗಾರಿಗಳು

ಮಳೆಗಾಲಕ್ಕೆ ಸಿದ್ಧಗೊಳ್ಳದ ಪಟ್ಟಣ ಪಂಚಾಯ್ತಿ

Published:
Updated:
ಮಳೆಗಾಲಕ್ಕೆ ಸಿದ್ಧಗೊಳ್ಳದ ಪಟ್ಟಣ ಪಂಚಾಯ್ತಿ

ಯಲ್ಲಾಪುರ: ಮುಂಗಾರು ಪೂರ್ವದ ಮಳೆ ಒಂದು ವಾರದಿಂದ ಸುರಿಯುತ್ತಿದೆ. ನಿಗಧಿತ ಅವಧಿಯಲ್ಲಿ ಮಳೆಗಾಲ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಪಟ್ಟಣ ಪಂಚಾಯ್ತಿ ಮಳೆಗಾಲದ ಪೂರ್ವ ಕಾಮಗಾರಿಗಳು ಹಾಗೂ ಸವಾಲುಗಳಿಗೆ ಯಾವುದೇ ಸಿದ್ಧತೆ ನಡೆಸದೆ ಇನ್ನೂ ನಿದ್ರಾವಸ್ಥೆಯಲ್ಲಿದೆ.

ಪ್ರತಿ ವರ್ಷವೂ ಮಳೆಗಾಲ ಸಮೀಪಿಸುತ್ತಿದ್ದಂತೆ, ಪಟ್ಟಣದ ಮುಖ್ಯ ರಸ್ತೆಗಳಂಚಿನ ಗಟಾರಗಳನ್ನು ಸಮರೋಪಾದಿಯಲ್ಲಿ ಸ್ವಚ್ಚ ಮಾಡುವ ಕೆಲಸ ನಡೆಯುತ್ತಿತ್ತು. ಈ ಬಾರಿ ಚುನಾವಣೆಯ ಕಾರಣದಿಂದಾಗಿ ಕೆಲಸ ವಿಳಂಬವಾಗಿರಬಹುದಾದರೂ, ಚುನಾವಣೆ ಮುಗಿದು ವಾರವಾದರೂ ಕೆಲಸಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೀಸಗೋಡ ಕ್ರಾಸ್ನಿಂದ ಬಾಳಗಿ ಮನೆಯವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಗಟಾರ ಮತ್ತು ಫುಟ್‌ಪಾತ್ ನಿಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಹಲವು ತಾಂತ್ರಿಕ ಕಾರಣಗಳಿಂದ ಕೆಲವೆಡೆ ಕಾಮಗಾರಿ ಸ್ಥಗಿತಗೊಂಡಿದೆ. ಮಳೆ ಪ್ರಾರಂಭವಾದರೆ ಸಹಜವಾಗಿಯೇ ಕಾಮಗಾರಿ ಸ್ಥಗಿತಗೊಳ್ಳಲಿದೆ.

‘ಅಪೂರ್ಣ ಕಾಮಗಾರಿಯಿಂದಾಗಿ ರಸ್ತೆಯ ತುಂಬಾ ನೀರು ನಿಲ್ಲಲಿದೆ. ರಸ್ತೆಯ ಇಕ್ಕೆಲಗಳ ಫುಟ್‌ಪಾತ್ ಅಂಚಿಗೆ ಅಗಲಗೊಳಿಸಿದ ರಸ್ತೆ ಕಾಮಗಾರಿಯೂ ಸಮರ್ಪಕವಾಗಿ ನಡೆದಿಲ್ಲ. ರಸ್ತೆಯ ವಿವಿಧೆಡೆಗಳಲ್ಲಿ ಕಂಡು ಬರುವ ಅನೇಕ ಏರು ಮತ್ತು ತಗ್ಗುಗಳಲ್ಲಿ ನೀರು ನಿಲ್ಲುವಂತಾಗಿ, ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ’ ಎಂದು ಕಾಳಮ್ಮನಗರ ನಿವಾಸಿ ಮಹೇಶ ನಾಯ್ಕ ಅವರು ಹೇಳಿದರು.

ಶಿವಾಜಿ ವೃತ್ತದಿಂದ ಪಟ್ಟಣದಲ್ಲಿನ ಎಂ.ಕೆ.ಬಿ.ಯಿಂದ ಆರಂಭಗೊಂಡಿರುವ ಬೆಲ್ ರಸ್ತೆಯ ಕಾಮಗಾರಿ ಸುವ್ಯವಸ್ಥಿತವಾಗಿ ನಡೆದಿಲ್ಲ. ಇದರಿಂದಾಗಿ, ರಸ್ತೆಯಂಚಿನ ಅಪೂರ್ಣ ಗಟಾರದಲ್ಲಿ ತುಂಬಿಕೊಳ್ಳುತ್ತಿರುವ ಕೊಚ್ಚೆ ನೀರಿನಿಂದಾಗಿ ಸೊಳ್ಳೆಗಳು ಹೆಚ್ಚುತ್ತಿವೆ. ಈ ಕುರಿತು ಪಟ್ಟಣ ಪಂಚಾಯ್ತಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪಟ್ಟಣದ ಕೆಲವು ಒಳ ರಸ್ತೆಗಳಲ್ಲಿ ಗಟಾರದ ಸ್ವಚ್ಚತಾ ಕಾರ್ಯ ನಡೆದಿದೆ. ಆದರೆ ಬಹುತೇಕ ರಸ್ತೆಗಳಿಗೆ ಗಟಾರ ವ್ಯವಸ್ಥೆಯೇ ಇಲ್ಲ. ಸ್ವಚ್ಛತಾ ಕೆಲಸಕ್ಕೆ ನಿಯೋಜಿಸಿರುವ ಸಿಬ್ಬಂದಿ ಕೂಡ ಸಾಕಾಗುವುದಿಲ್ಲ. ಪಟ್ಟಣದ ತಟಗಾರ್ ರಸ್ತೆಯಲ್ಲಿರುವ ರೋಟರಿ ಶಾಲೆಯ ಎದುರು ಗಟಾರದಲ್ಲಿ ನೀರು ನಿಲ್ಲುವುದರಿಂದ, ಆ ಜಾವೀಗ ಹಂದಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ’ ಎಂದು ತಟಗಾರ್ ರಸ್ತೆಯ ನಿವಾಸಿ ಗಣೇಶ ವೈದ್ಯ ಗಮನ ಸೆಳೆದರು.

ಮಳೆಗಾಲ ಸಮೀಪಿಸುತ್ತಿದ್ದರೂ, ಸ್ವಚ್ಚತೆ ಕುರಿತು ಪಟ್ಟಣ ಪಂಚಾಯ್ತಿ ಇನ್ನೂ ಗಮನ ಹರಿಸಿಲ್ಲ. ಮಳೆ ಬಂದಾಗ ಪರದಾಡುವ ಮೊದಲು, ಈಗಲೇ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಕೆಲಸಗಳನ್ನು ಮುಗಿಸಬೇಕು. ಆ ಮೂಲಕ, ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.

**

ಪಟ್ಟಣದ ಸ್ವಚ್ಚತೆಯ ಕುರಿತಾಗಿ ಮತ್ತು ಗಟಾರ ಸ್ವಚ್ಚ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದೇವೆ. ಕೆಲವೆಡೆ ಈಗಾಗಲೇ ಪ್ರಾರಂಭಿಸಿದ್ದೇವೆ 

– ಮಹೇಂದ್ರ ತಿಮ್ಮಾನಿ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯ್ತಿ

ನಾಗರಾಜ ಮದ್ಗುಣಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry