ಬೇಡಿಕೆಯಿದ್ದರೂ ಪೂರೈಕೆಯಾಗದ ಒಣಮೀನು

7
ಯಾಂತ್ರಿಕ ಮೀನುಗಾರಿಕೆಯಿಂದ ಸಮುದ್ರದಲ್ಲಿ ಮತ್ಸ್ಯಕ್ಷಾಮ; ಮೀನುಗಾರರಿಗೆ ಸಂಕಷ್ಟ

ಬೇಡಿಕೆಯಿದ್ದರೂ ಪೂರೈಕೆಯಾಗದ ಒಣಮೀನು

Published:
Updated:
ಬೇಡಿಕೆಯಿದ್ದರೂ ಪೂರೈಕೆಯಾಗದ ಒಣಮೀನು

ಕಾರವಾರ: ಈ ವರ್ಷದ ಮುಂಗಾರು ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಕರಾವಳಿಯ ಮಾರುಕಟ್ಟೆಗಳಲ್ಲಿ ಒಣಮೀನಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಈ ಬಾರಿ ಸಮುದ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮೀನು ಸಿಗದಿರುವುದರಿಂದ, ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲಾಗದ ಸ್ಥಿತಿಯಲ್ಲಿ ಮೀನುಗಾರರಿದ್ದಾರೆ.

ಜೂನ್ 1ರಿಂದ ಜುಲೈ 31ರವರೆಗೆ ಯಾಂತ್ರೀಕೃತ ಮೀನುಗಾರಿಕೆಯನ್ನು ನಿಷೇಧಿಸಿ ಮೀನುಗಾರಿಕೆ ಇಲಾಖೆ ಆದೇಶಿಸಿದೆ. ಮುಂದಿನ 61 ದಿನಗಳಲ್ಲಿ ತಾಜಾ ಮೀನುಗಳು ಸಿಗುವುದಿಲ್ಲ. ಈ ಅವಧಿಯಲ್ಲಿ ಒಣಮೀನುಗಳನ್ನು ಮನೆಗಳಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಖಾದ್ಯ ಸಿದ್ದಪಡಿಸಲಾಗುತ್ತದೆ.

ಆದರೆ, ಈ ಬಾರಿ ಲೈಟ್‌ ಫಿಶಿಂಗ್, ಬುಲ್ ಟ್ರೋಲ್‌ ಮುಂತಾದ ಯಾಂತ್ರೀಕೃತ ಮೀನುಗಾರಿಕೆಯಿಂದಾಗಿ ಮತ್ಸ್ಯ ಸಂಕುಲ ಬಹುಬೇಗ ಖಾಲಿಯಾಗಿದೆ. ಇದರಿಂದ ಸಾಂಪ್ರದಾಯಿಕ ಮೀನುಗಾರರು ಕಂಗಾಲಾಗಿದ್ದು, ಒಣಮೀನು ಮಾಡಲು ತೊಂದರೆಯಾಗಿದೆ. ಒಂದಷ್ಟು ಕಾಸು ಮಾಡಿಕೊಳ್ಳುವ ವಿಶ್ವಾಸದಲ್ಲಿದ್ದವರು ಚಿಂತೆಗೀಡಾಗಿದ್ದಾರೆ.

‘ಸಾಂಪ್ರದಾಯಿಕ ಮೀನುಗಾರಿಕೆ ಸರಿಯಾಗಿ ನಡೆಯುತ್ತಿದ್ದರೆ ಮಾರುಕಟ್ಟೆಯಲ್ಲಿ ಒಣಮೀನು ಸಿಗುತ್ತದೆ. ಈ ಬಾರಿ ಹಸಿ ಮೀನನ್ನೇ ಬೇಡಿಕೆಗೆ ಸರಿಯಾಗಿ ಮಾರುಕಟ್ಟೆಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಂತಹದ್ದರಲ್ಲಿ ಒಣಮೀನು ಮಾಡಲು ಹೇಗೆ ಮಾಡುವುದು’ ಎಂದು  ಪ್ರಶ್ನಿಸುತ್ತಾರೆ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಅಧ್ಯಕ್ಷ ಸದಾನಂದ ಹರಿಕಂತ್ರ.

ಮಹಿಳೆಯರೇ ಹೆಚ್ಚು:

‘ಬೇಲೆಕೇರಿ ಭಾಗದಲ್ಲಿ 200– 300 ಮಹಿಳೆಯರು ಇದೇ ವೃತ್ತಿ ಮಾಡುತ್ತಿದ್ದರು. ಇಲ್ಲಿ ಸಿದ್ಧಪಡಿಸಿದ ಕ್ವಿಂಟಲ್‌ಗಟ್ಟಲೆ ಮೀನನ್ನು ಗೋವಾದಲ್ಲಿ ಕೂಡ ಮಾರಾಟ ಮಾಡುತ್ತಿದ್ದರು. ಆದರೆ, ಕಬ್ಬಿಣದ ಅದಿರು ರಫ್ತು ಚಟುವಟಿಕೆಯಿಂದಾಗಿ ಮೀನು ಒಣಗಿಸುವ ಚಟಾಯಿ ಹಾಸಲು ಜಾಗ ಸಿಗಲಿಲ್ಲ. ಕೊನೆಗೆ ಆ ಮಹಿಳೆಯರೆಲ್ಲ ವೃತ್ತಿಯಿಂದಲೇ ದೂರವಾದರು. ತದಡಿ ಬಂದರಿನಲ್ಲೂ ಇದೇ ಪರಿಸ್ಥಿತಿಯಾಯಿತು’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಯಾವುದು ಸೂಕ್ತ?:

‘‌ಕೊಬ್ಬಿನಾಂಶ ಕಡಿಮೆ ಇರುವ ಸಮ್ಮದಾಳೆ, ದೋಡಿ, ಸೊರ, ದಂಡಸಿ, ಸಟ್ಲೆ ಮುಂತಾದ ಮೀನುಗಳು ಒಣಗಿಸಲು ಸೂಕ್ತವಾಗಿವೆ. ಅವು 4ರಿಂದ 5 ತಿಂಗಳು ಕೆಡದೇ ಇರುತ್ತವೆ. ದೂರದ ಊರುಗಳಲ್ಲಿರುವ ಕರಾವಳಿಯ ಜನರು ಇದೇ ಕಾರಣಕ್ಕೆ ಈ ಮೀನುಗಳನ್ನು ಹುಡುಕಿಕೊಂಡು ಹೋಗಿ ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ’ ಎಂದು ಅವರು ಹೇಳುತ್ತಾರೆ.

‘ಮರೆಯಾದ ಭಾವನಾತ್ಮಕ ನಂಟು’

‘ಸಮುದ್ರದಲ್ಲಿ ಸಾಂಪ್ರದಾಯಿಕವಾಗಿ ಹಿಡಿದ ಮೀನನ್ನು ಉಪ್ಪಿನಲ್ಲಿ 8ರಿಂದ 10 ತಾಸು ಇಡಬೇಕು. ನಂತರ ಅವುಗಳನ್ನು ಸಮುದ್ರದ ನೀರಿನಲ್ಲೇ ತೊಳೆದು ಚಟಾಯಿ ಮತ್ತು ಬಂಡೆಗಳ ಮೇಲೆ ಒಣಗಿಸಬೇಕು. ಇವುಗಳಿಗೆ ಬೇಡಿಕೆ ಹೆಚ್ಚಿದ್ದು, ದರವೂ ಜಾಸ್ತಿಯಿರುತ್ತದೆ.

‘ಈ ಮೊದಲು ಯಾರ ಮನೆಯಲ್ಲಿ ಗುಣಮಟ್ಟದ ಒಣಮೀನು ಸಿಗುತ್ತದೆ ಎಂಬುದು ಗ್ರಾಹಕರಿಗೂ ತಿಳಿದಿರುತ್ತಿತ್ತು. ಆಗ ಮಾರಾಟಗಾರ ಮತ್ತು ಗ್ರಾಹಕರ ನಡುವೆ ಭಾವನಾತ್ಮಕ ನಂಟಿತ್ತು. ಈಗ ಎಲ್ಲವೂ ವ್ಯಾಪರೀಕರಣಗೊಂಡಿದೆ’ ಎಂದು ಸದಾನಂದ ಹರಿಕಂತ್ರ ವಿಷಾದ ವ್ಯಕ್ತಪಡಿಸುತ್ತಾರೆ.

**

ಎರಡು ವರ್ಷದ ಹಿಂದೆ 10 ಒಣ ಬಾಂಗ್ಡೆ ₹ 100ಕ್ಕೆ ಸಿಗ್ತಿತ್ತು. ನಂತರ ₹ 125 ಆಯ್ತು, ₹ 150ಕ್ಕೆ ತಲುಪಿತು. ಮತ್ಸ್ಯ ಕ್ಷಾಮದಿಂದ ದರ ಗಗನಕ್ಕೇರಿದೆ

– ಸದಾನಂದ ಹರಿಕಂತ್ರ, ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry