ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಅಪಹರಣ: ಪೋಷಕರಲ್ಲಿ ನಿವಾರಣೆಯಾಗದ ಭೀತಿ

ಮಕ್ಕಳ ಅಪಹರಣ; ಪೊಲೀಸರ ಕ್ರಮಗಳ ಬಗ್ಗೆ ಸಾರ್ವಜನಿಕರ ಅಸಮಾಧಾನ
Last Updated 25 ಮೇ 2018, 9:54 IST
ಅಕ್ಷರ ಗಾತ್ರ

ಕೆಜಿಎಫ್‌: ಮಕ್ಕಳ ಅಪಹರಣದ ಕುರಿತ ವದಂತಿ ಹಾಗೂ ಅಮಾಯಕರ ಮೇಲೆ ಹಲ್ಲೆ ನಡೆಯುತ್ತಿರುವ ಬಗ್ಗೆ ಪೊಲೀಸರು ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ಕಳೆದ ಒಂದು ವಾರದಿಂದ ಕೆಜಿಎಫ್ ಪೊಲೀಸ್‌ ಜಿಲ್ಲೆಯಲ್ಲಿ ನಾಲ್ಕು ಕಡೆ ಅಮಾಯಕರ ಮೇಲೆ ಹಲ್ಲೆ ನಡೆದಿವೆ.

ಸಾರ್ವಜನಿಕರು ಮಕ್ಕಳನ್ನು ಒಂಟಿಯಾಗಿ ಬಿಡಲು ಭಯಪಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪೊಲೀಸರು ಕರಪತ್ರಗಳನ್ನು ಹೊರಡಿಸಿ, ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಮಾತ್ರ ಜಾಗೃತಿ ಮೂಡಿಸುತ್ತಿದ್ದಾರೆ.

ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಸೋಮವಾರದಿಂದ 90 ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಪುನರಾರಂಭವಾಗಿದೆ. ಆದರೆ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಅಕಸ್ಮಾತ್‌ ಕಳಿಸಿದರೂ, ತಾವೇ ಕರೆ ತರುವರು. ಶಾಲೆ ಬಿಟ್ಟ ನಂತರ ಕರೆದುಕೊಂಡು ಹೋಗುತ್ತಿದ್ದಾರೆ.

ಪೊಲೀಸರು ಗುರುವಾರದಿಂದ ಆಟೊಗಳಲ್ಲಿ ಜಾಗೃತಿ ನಡೆಸುತ್ತಿದ್ದಾರೆ. ಆದರೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಧೈರ್ಯ ತುಂಬುವ ಮತ್ತು ಭೀತಿಯ ನಿವಾರಣೆ ಮಾಡುವ ಕೆಲಸ ಪೊಲೀಸರಿಂದ ಆಗಬೇಕಾಗಿತ್ತು. ನಗರದಲ್ಲಿ ನೂರಾರು ಮಹಿಳಾ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳು ಪ್ರತಿ ವಾರ ಸಭೆ ಸೇರುತ್ತವೆ. ಇಂತಹ ಸಭೆಯಲ್ಲಿ ಬೀಟ್‌ ಪೊಲೀಸರು ಭಾಗವಹಿಸಿ ವದಂತಿಗಳ ಬಗ್ಗೆ ತಿಳಿವಳಿಕೆ ಹೇಳಬೇಕಿತ್ತು. ಆದರೆ ಈ ರೀತಿ ಮಾಡುತ್ತಿಲ್ಲ ಎಂದು ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸುವರು.

ವಾಟ್ಸ್‌ಆ್ಯಪ್‌ನಲ್ಲಿ ಅನಗತ್ಯ ಸಂದೇಶ ‌ಕಳುಹಿಸುತ್ತಿರುವ, ಭೀತಿ ಸೃಷ್ಟಿಸುತ್ತಿರುವವರ ವಿರುದ್ಧ ಇಲಾಖೆ ಇದುವರೆವಿಗೂ ಕ್ರಮ ಕೈಗೊಂಡಿಲ್ಲ. ಮಕ್ಕಳ ಅಪಹರಣದ ಬಗ್ಗೆ ಸುಳ್ಳು ಸುದ್ದಿ ಹರಡಿಸುತ್ತಿರುವವರ ವಿರುದ್ಧ ಸೈಬರ್‌ ಪೊಲೀಸರು ಒಂದು ಪ್ರಕರಣವನ್ನು ಕೂಡ ದಾಖಲು ಮಾಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಗಾರಪೇಟೆ ಪೊಲೀಸರು ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಪೊಲೀಸ್‌ ಠಾಣೆಯ ಪೊಲೀಸರು ಹೊರಡಿಸಿದ್ದ ಮಕ್ಕಳ ಅಪಹರಣದ ವಾಟ್ಸ್‌ಆ್ಯಪ್ ಸಂದೇಶವನ್ನು ಯಥಾವತ್ತಾಗಿ ನಕಲು ಮಾಡಿ, ಅದರ ಕೆಳಗೆ ಬಂಗಾರಪೇಟೆ ಪೊಲೀಸ್ ಎಂದು ಸಂದೇಶ ಹರಿಯಬಿಟ್ಟಿದ್ದು ನಗೆಪಾಟಲಿಗೆ ಗುರಿಯಾಗಿತ್ತು.

ಶಾಲೆಗಳಲ್ಲಿ ಈಗ ಮಕ್ಕಳ ದಾಖಲಾತಿ ಶುರುವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂತಹ ಶಾಲೆಗಳಿಗೆ ಪೊಲೀಸರು ಹೋಗಿ ಧೈರ್ಯ ತುಂಬಬೇಕು ಎಂದು ಶಾಲಾ ಆಡಳಿತ ಮಂಡಳಿಗಳು ಕೋರುತ್ತಿವೆ.

**
ಪೊಲೀಸರು ಶಾಲೆಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಮಕ್ಕಳಿಗೆ, ಪೋಷಕರಿಗೆ ತಿಳಿಸಬೇಕಾಗಿತ್ತು. ಇದುವರೆವಿಗೂ ಯಾವುದೇ ಶಾಲೆಗಳಿಗೆ ಭೇಟಿ ನೀಡಿಲ್ಲ
– ಕಿರಣ್‌ ಕುಮಾರ್‌, ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT