ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ; ನೀರಿಗೂ ಸಂಕಟ

7
ಬಿರುಗಾಳಿ ಮಳೆ: ಗಂಗಾವತಿಯಲ್ಲಿ 24ಗಂಟೆ ವಿದ್ಯುತ್ ಪೂರೈಕೆ ಸ್ಥಗಿತ

ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ; ನೀರಿಗೂ ಸಂಕಟ

Published:
Updated:
ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ; ನೀರಿಗೂ ಸಂಕಟ

ಗಂಗಾವತಿ: ಗಂಗಾವತಿ ಪಟ್ಟಣ ಹಾಗೂ ಸುತ್ತಮತ್ತ ಬುಧವಾರ ಸಂಜೆ ಸುರಿದ ಭಾರಿ ಬಿರುಗಾಳಿ ಮತ್ತು ಮಳೆಗೆ ರಾಯಚೂರು ಶಾಖೋತ್ಪನ್ನ ವಿದ್ಯುತ್ (ಆರ್‌ಟಿಪಿಎಸ್) ಕೇಂದ್ರದ ಮೂಲಕ ಪೂರೈಕೆಯಾಗುವ ವಿದ್ಯುತ್ ಟವರ್ ಲೈನ್ ತುಂಡಾದ ಪರಿಣಾಮ ನಗರಕ್ಕೆ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.

ಬುಧವಾರ ಸಂಜೆ 4ಗಂಟೆಗೆ ಸ್ಥಗಿತವಾದ ವಿದ್ಯುತ್ ಗುರುವಾರ ಸಂಜೆಯಾದರೂ ಪೂರೈಕೆಯಾಗಲಿಲ್ಲ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕುಡಿಯುವ ಮತ್ತು ಬಳಕೆಯ ನೀರಿಲ್ಲದೇ ರೋಗಿಗಳ ಪರದಾಡಿದರು. ನಗರಸಭೆಯ ಶುದ್ಧ ಕುಡಿಯುವ ನೀರಿನ ಘಟಕಗಳಿಂದಲೂ ನೀರು ಸಿಗದೆ ನಾಗರಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಇಡೀ ರಾತ್ರಿ ಜನ ನಿದ್ದೆಯಿಲ್ಲದೇ ಕಳೆದರು. ಮೊಬೈಲ್ ಚಾರ್ಜ್ ಮಾಡಲೂ ವಿದ್ಯುತ್ ಸಮಸ್ಯೆಯಾಗಿದ್ದರಿಂದ ಬಹುತೇಕರ ಮೊಬೈಲ್ ಸಂಪರ್ಕ ಸಮಸ್ಯೆಯಾಗಿತ್ತು.

ನಗರದ ಗಾಂಧಿವೃತ್ತ, ಮಹಾವೀರ ವೃತ್ತ, ಓಎಸ್‌ಬಿ, ಎಸ್‌ಬಿಎಚ್‌, ಸಿಬಿಎಸ್ ವೃತ್ತ, ಬಂಬೂಬಜಾರ, ಶಿವ ಟಾಕೀಸ್, ಬನ್ನಿಗಿಡಕ್ಯಾಂಪ್, ಗಣೇಶ ವೃತ್ತ, ಗುಂಡಮ್ಮಕ್ಯಾಂಪ್, ಬಸವಣ್ಣ ಸರ್ಕಲ್, ಸರೋಜಾನಗರ, ಕೇಂದ್ರ ಬಸ್ ನಿಲ್ದಾಣ ಮೊದಲಾದ ಭಾಗದಲ್ಲಿ ವಿದ್ಯುತ್ ಸಂಪೂರ್ಣ ಸ್ಥಗಿತವಾಗಿತ್ತು.

ಬ್ಯಾಟರಿಗಳ ಮೇಲೆ ಹಲವು ಗಂಟೆಗಳ ಕಾಲ ಜನ ಪರ್ಯಾಯ ವಿದ್ಯುತ್ ಅವಲಂಬಿಸಿದರು. ಆದರೆ ಚಾರ್ಜ್‌ ಇಲ್ಲದ ಪರಿಣಾಮ ಕೇವಲ ನಾಲ್ಕಾರು ಗಂಟೆಗೆ ಅವೂ ಕೈಕೊಟ್ಟ ಪರಿಣಾಮ ಜನ ತೀವ್ರ ತೊಂದರೆಗೆ ಸಿಲುಕಿದರು. ಕೇವಲ ನಗರಕ್ಕೆ ಮಾತ್ರ ಈ ಸಮಸ್ಯೆ ಸೀಮಿತವಾಗಿರಲಿಲ್ಲ. ಗ್ರಾಮೀಣ ಭಾಗದ ಶ್ರೀರಾಮನಗರ, ಮರಳಿ, ಪ್ರಗತಿನಗರ, ಹೊಸಕೇರಿ, ಆಚಾರನರಸಾಪುರ, ಬಾಪಿರೆಡ್ಡಿಕ್ಯಾಂಪ್, ಹೇರೂರು, ಭಟ್ಟರನರಸಾಪುರ, ಕೇಸಕ್ಕಿ ಹಂಚಿನಾಳ, ಸಂಗಾಪುರ ಮೊದಲಾದ ಗ್ರಾಮಗಳಲ್ಲಿಯೂ ವಿದ್ಯುತ್ ಕಂಬಗಳು ಹಾನಿಗೀಡಾಗಿ ವಿದ್ಯುತ್ ಸಮಸ್ಯೆ ಎದುರಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry