4

ಬೊಜ್ಜು–ಮಧುಮೇಹ: ಎಚ್ಚರಿಕೆ ಅಗತ್ಯ

Published:
Updated:
ಬೊಜ್ಜು–ಮಧುಮೇಹ: ಎಚ್ಚರಿಕೆ ಅಗತ್ಯ

ನಮ್ಮ ದೇಶದ ಜನರಲ್ಲಿ ಕಾಡುತ್ತಿರುವ ಒಂದು ಗಂಭೀರವಾದ ಸಮಸ್ಯೆ ಎಂದರೆ –  ಅತಿಯಾದ ತೂಕ (ಬೊಜ್ಜು) ಮತ್ತು ಮಧುಮೇಹವೆಂಬ ಕಾಯಿಲೆ (OBESITY and DIABETES MELLITUS). ಒಬ್ಬ ವ್ಯಕ್ತಿಯು ಮೈ ಕೈ ತುಂಬಿಕೊಂಡಿರುವುದನ್ನು ನೋಡಿ, ಆ ವ್ಯಕ್ತಿಯ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಚೆನ್ನಾಗಿದೆ ಎಂದು ಜನರು ಈ ಹಿಂದೆ ಭಾವಿಸುತ್ತಿದ್ದರು. ಈ ಮಾತು ಸ್ವಲ್ಪ ಮಟ್ಟಿಗೆ ಸತ್ಯವೇನೋ ಹೌದು. ಆದರೆ ಆದು ಸಮತೋಲನವಾದ ತೂಕವಾಗಿರಬೇಕು. ಹಾಗಲ್ಲದೆ ನಾವು ಈಗ ಕಾಣುತ್ತಿರುವ ಅಸಮತೋಲನವಾದ ತೂಕ ಹಾಗೂ ಮೈಕಟ್ಟು ಒಂದು ರೀತಿಯಲ್ಲಿ ವಿಕಾರವೂ ಮತ್ತು ದೇಹದ ಸೌಂದರ್ಯವನ್ನು ವಿರೂಪಗೊಳಿಸುವ ಸಮಸ್ಯೆಯಾಗಿಯೂ ಕಾಡುತ್ತಿದೆ. ಇದಕ್ಕಿಂತ ಹೆಚ್ಚಾಗಿ ಅದು ದೇಹದ ಆರೋಗ್ಯವನ್ನು ನಾನಾ ರೀತಿಯಲ್ಲಿ ಏರುಪೇರು ಮಾಡಿ ಮಧುಮೇಹ, ರಕ್ತದ ಒತ್ತಡ ಮುಂತಾದ ದೊಡ್ಡ ಸವಾಲಗಳನ್ನೇ ನಾವು ಎದುರಿಸುವಂತೆ ಮಾಡುತ್ತಿದೆ.

ಇನ್ನು ಮಧುಮೇಹವನ್ನು ಕುರಿತು ಹೇಳುವುದಾದರೆ, ಭಾರತವನ್ನು ಮಧುಮೇಹದ ‘ರಾಜಧಾನಿ’ ಎಂದೇ ಕರೆಯಲಾಗುತ್ತಿದೆ! ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯಿಂದ ಕೂಡಿದ ಮಧುಮೇಹ ರೋಗದಿಂದ ಬಳಲುತ್ತಿರುವ ಜನರು ನಮ್ಮ ದೇಶದಲ್ಲಿದ್ದಾರೆ. ಸುಮಾರು ಐದಾರು ಕೋಟಿ  ಭಾರತೀಯರು ಈ ರೋಗದಿಂದ ಬಳಲುತ್ತಿದ್ದಾರೆ ಎಂಬುದು ಅಂಕಿ–ಅಂಶಗಳಿಂದ ತಿಳಿದು ಬಂದಿದೆ. ಬೊಜ್ಜು ಮತ್ತು ಮಧುಮೇಹ – ಈ ಎರಡೂ ಸಮಸ್ಯೆಗಳನ್ನು ಸೂಕ್ತ ಕ್ರಮಗಳಿಂದ ತಡೆಗಟ್ಟದೆ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಅದರ ಗಂಭೀರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಅತಿಯಾದ ತೂಕಕ್ಕೆ ಕಾರಣವೇನು?

ಅತ್ಯಂತ ಸರಳವಾದ ಉತ್ತರವೆಂದರೆ ನಾವು ಸೇವಿಸುವ ಆಹಾರಪದಾರ್ಥಗಳು. ನಮ್ಮ ಆಹಾರ ಮಿತಿ ಮೀರಿದ ಪ್ರಮಾಣದಲ್ಲಿದ್ದರೆ, ಆ ಹೆಚ್ಚಿನ ಅಂಶವು ಕೊಬ್ಬಿನ ಪದಾರ್ಧವಾಗಿ ಮಾರ್ಪಾಡಾಗುತ್ತದೆ. ಹಾಗೆಯೇ ನಾವು ತಿಂದ ಆಹಾರವನ್ನು ದೈಹಿಕ ಕ್ರಿಯೆಗಳಿಂದ ಪೂರ್ಣವಾಗಿ ಅರಗಿಸಿಕೊಳ್ಳದಿದ್ದರೆ ಅದು ಕೊಬ್ಬಿನ ಅಂಶವಾಗಿ ಪರಿಣಾಮ ಹೊಂದಿ ಅತಿಯಾದ ತೂಕಕ್ಕೆ ಕಾರಣವಾಗುತ್ತದೆ. ಭಾರತೀಯರಲ್ಲಿ ಆನುವಂಶಿಕ ಕಾರಣಗಳಿಂದ ಬೊಜ್ಜು ಬರುವ ಸಾಧ್ಯತೆ ಹೆಚ್ಚು. ತಂದೆ, ತಾಯಿ, ತಾತ, ಅಜ್ಜಿ – ಹೀಗೆ ಇತರ ಹತ್ತಿರ ಸಂಬಂಧಿಕರಲ್ಲಿ ತೂಕದ ಸಮಸ್ಯೆ ಇದ್ದರೆ ಮುಂಬರುವ ಪೀಳಿಗೆಗೂ ಬರುವ ಸಾಧ್ಯತೆ ಇರುತ್ತದೆ.

ಇದಲ್ಲದೆ ನಾವು ಸೇವಿಸುವ ಆಹಾರ ಪದಾರ್ಥಗಳು ನಮ್ಮ ದೇಹದ ಮೇಲೆಯೂ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ನಮ್ಮ ಆಹಾರದ ಆಯ್ಕೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ನೈಸರ್ಗಿಕವಾದ ಪದಾರ್ಥಗಳನ್ನು ಬಿಟ್ಟು, ಪೂರ್ವ ತಯಾರಿಯಾದ (Processed, Canned foods) ತಿಂಡಿ–ತಿನಿಸುಗಳ ಬಳಕೆಯಿಂದ ತೂಕದ ಸಮಸ್ಯೆ ಏರುತ್ತಿದೆ. ಇನ್ನು ಮಕ್ಕಳು ಮತ್ತು ಯುವಪೀಳಿಗೆಯವರು ‘ಜಂಕ್’ ತಿನಿಸುಗಳನ್ನು ಅತಿಯಾಗಿ ಸೇವಿಸುವುದರಿಂದ, ಅದರಲ್ಲಿರುವ ಹೆಚ್ಚಿನ ಜಿಡ್ಡಿನಾಂಶ ಮತ್ತು ಸಕ್ಕರೆಯ ಅಂಶದಿಂದ ಚಿಕ್ಕ ವಯಸ್ಸಿನಲ್ಲೇ ಈ ಸಮಸ್ಯೆಯು ಪ್ರಬಲವಾಗಿ ಕಾಣುತ್ತಿದೆ.

ಮತ್ತೊಂದು ಮುಖ್ಯ ಕಾರಣವೆಂದರೆ ವ್ಯಾಯಾಮ ಮತ್ತು ದೈಹಿಕ ಕ್ರಿಯೆಗಳ ಕೊರತೆ. ಸಮಯಾನುಭಾವ, ಸುಖಜೀವನ, ಸೋಮಾರಿತನ – ಈ ಎಲ್ಲ ಕಾರಣಗಳಿಂದ ದೈಹಿಕ ಕ್ರಿಯೆಗಳು ಕಡಿಮೆಯಾಗಿ ಮೈತೂಕ ಹೆಚ್ಚುವಂತಾಗುತ್ತಿದೆ.ಮೈತೂಕದ ಅಳತೆಗೋಲು ಯಾವುದು?

ಅತಿ ಸಾಮಾನ್ಯವಾದ ತೂಕದ ಯಂತ್ರದಿಂದ ಹಿಡಿದು ಅತ್ಯಾಧುನಿಕವಾದ ಯಂತ್ರಗಳ ಮೂಲಕ ಮೈತೂಕವನ್ನು ಮತ್ತು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ತುಲನ ಮಾಡಬಹುದು. ಆದರೆ ಬಹುಪ್ರಚಲಿತವಾದ ಮತ್ತು ನಿತ್ಯ ಬಳಕೆಯಲ್ಲಿರುವ ಸಾಧನಗಳು ಎರಡು.

1. ಬಾಡಿ ಮಾಸ್ ಇಂಡೆಕ್ಸ್ (ಬಿ.ಎಂ.ಐ.) ಸೂತ್ರ:

ವ್ಯಕ್ತಿಯ ಮೈ ತೂಕ (ಕೆ.ಜಿ.) ಕೆ.ಜಿ.

ಮೀ.2 = ವ್ಯಕ್ತಿಯ ಎತ್ತರ x ವ್ಯಕ್ತಿಯ ಎತ್ತರ

ಬಿ.ಎಂ.ಐ.: 25–30 ಕೆ.ಜಿ./ ಮೀ.2 ಪರಿಮಿತಿಯಲ್ಲಿ ಇದ್ದರೆ ಅದನ್ನು ‘ಪ್ರೀ ಒಬೆಸಿಟಿ’ (Pre–obesity) ಎಂದು ಕರೆಯಲಾಗುತ್ತದೆ.

ಬಿ.ಎಂ.ಐ.: 30 ಕೆ.ಜಿ./ಮೀ.2 ಕ್ಕಿಂತ ಜಾಸ್ತಿ ಇದ್ದರೆ ಅದನ್ನು ಅತಿಯಾದ ತೂಕ ಅಥವಾ ಒಬೆಸಿಟಿ ಎಂದು ಕರೆಯಲಾಗುತ್ತದೆ.

ಭಾರತೀಯ ಜನಾಂಗದಲ್ಲಿ ಬಿ.ಎಂ.ಐ.>23ನ್ನು ‘ಪ್ರೀ ಒಬೆಸಿಟಿ’ ಎಂದು ಮತ್ತು ಬಿ.ಎಂ.ಐ.>25ನ್ನು ‘ಒಬೆಸಿಟಿ‘ (ಬೊಜ್ಜು) ಎಂದು ಪರಿಗಣಿಸಲಾಗುತ್ತದೆ.

2. ಸೊಂಟದ ಸುತ್ತಳತೆ

ಭಾರತೀಯ ಪುರುಷರಲ್ಲಿ ಸುತ್ತಳತೆ > 90 ಸೆಂ.ಮೀ. ಇದ್ದರೆ ಹಾಗೂ ಸ್ತ್ರೀಯರಲ್ಲಿ ಸುತ್ತಳೆ > 80 ಸೆಂ.ಮೀ. ಇದ್ದರೆ ಅದನ್ನು ಅತಿಯಾದ ತೂಕವೆಂದು ಪರಿಗಣಿಸಲಾಗುತ್ತದೆ.

ದೇಹದ ಒಟ್ಟು ತೂಕಕ್ಕಿಂತ, ಆ ಹೆಚ್ಚಿನ ಕೊಬ್ಬಿನಾಂಶ ಯಾವ ಸ್ಥಳದಲ್ಲಿ ಶೇಖರಣೆಯಾಗಿದೆ ಎಂಬುದು ಬಹಳ ಮುಖ್ಯ. ಸೊಂಟದ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಬ್ಬಿನ ಅಂಶದ ಶೇಖರಣೆ (Apple Shape/ Abdominal obesity) ಹಾಗೂ ಪೃಷ್ಠಭಾಗ ಮತ್ತು ತೊಡೆಗಳಲ್ಲಿ ಹೆಚ್ಚಿನ ಶೇಖರಣೆ (Pear shape) ಎಂಬ ಎರಡು ಮಾದರಿಗಳನ್ನು ನಾವು ಕಾಣುತ್ತೇವೆ. ಇವೆರಡರಲ್ಲಿ ಮೊದಲನೆಯ ಗುಂಪಿಗೆ ಸೇರಿದ ವ್ಯಕ್ತಿಗಳಲ್ಲಿ ಹೆಚ್ಚಿನ ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತವೆ.

ಆರೋಗ್ಯದ ಮೇಲೆ ತೂಕದ ದುಷ್ಪರಿಣಾಮ: ಅತಿಯಾದ ತೂಕವು ದೇಹದ ಎಲ್ಲ ಅಂಗಾಂಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವವನ್ನು ಬೀರುತ್ತದೆ. ಅದರ ದುಷ್ಪರಿಣಾಮಗಳ ಪಟ್ಟಿ ಬಹಳ ದೊಡ್ಡದಾಗಿದೆ. ಹೃದಯ, ಶ್ವಾಸಕೋಶ, ಎಲುಬುಗಳು, ಮೂತ್ರಪಿಂಡ, ಜೀರ್ಣಾಂಗಗಳಾದ ಲಿವರ್, ಗಾಲ್ ಬ್ಲ್ಯಾಡರ್, ಉದರ, ಅನ್ನನಾಳ ಮತ್ತಿತರ ಅವಯವಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಕಾಣುತ್ತೇವೆ. ಇದಲ್ಲದೆ ನಿದ್ದೆಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಮಾನಸಿಕ ಕಾಯಿಲೆಗಳು ಸಹ ಬರುವ ಸಂಭವ ಹೆಚ್ಚಾಗುತ್ತದೆ. ಇದರ ಫಲಿತದಿಂದ ಈ ಕೆಳಕಂಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ:

1. ಹೃದ್ರೋಗ

2. ಜೀರ್ಣಶಕ್ತಿಗೆ ಸಂಬಂಧಪಟ್ಟ ಸಮಸ್ಯೆಗಳು

3. ಮಧುಮೇಹ

4. ರಕ್ತದ ಒತ್ತಡ

5. ಮಂಡಿಗಳ ಸವೆಯುವಿಕೆ

6. ಅತಿಯಾದ ನಿದ್ದೆ

7. ಸಂತಾನದ ದೌರ್ಬಲ್ಯ

8. ಮಾನಸಿಕ ರೋಗಗಳು

9. ಸ್ತ್ರೀಯರಲ್ಲಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್

10. ಸಾಮಾಜಿಕ ಸಮಸ್ಯೆಗಳು

ಅತಿಯಾದ ತೂಕ ಮತ್ತು ಮಧುಮೇಹ – ಭಾರತದ ಪ್ರತ್ಯೇಕತೆ: ಭಾರತೀಯರಲ್ಲಿ ಹೊಟ್ಟೆಯ ಮುಂಭಾಗದಲ್ಲಿ ಕೊಬ್ಬಿನ ಅಂಶದ ಶೇಖರಣೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂಬ ಅಂಶವನ್ನು ಹಿಂದೆಯೇ ತಿಳಿಸಲಾಗಿದೆ. ಇದನ್ನು ‘ಅಬ್ಡಮಿನಲ್ ಒಬೆಸಿಟಿ’ ಎಂದು ಕರೆಯಲಾಗುತ್ತದೆ. ಇಂತಹವರಲ್ಲಿ ಮಧುಮೇಹ ರೋಗವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೊದಲ ಬಾರಿಗೆ ಮಧುಮೇಹದ ರೋಗವನ್ನು ಪತ್ತೆ ಹಚ್ಚುವ ಸಮಯದಲ್ಲಿ ಶೇ 55 ಜನರಲ್ಲಿ, ಮೇಲೆ ಹೇಳಿದ ಅತಿಯಾದ ಬೊಜ್ಜನ್ನು ಕಾಣುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿರುವ ಕೊಬ್ಬಿನ ಕಣಗಳಿಂದ, ದೇಹದಲ್ಲಿ ಉತ್ಪತ್ತಿಯಾಗುವ ‘ಇನ್ಸುಲಿನ್’ ಪದಾರ್ಥವು ಸರಿಯಾಗಿ ಕೆಲಸ ಮಾಡುವುದಿಲ್ಲ. ಯಾವಾಗ ‘ಇನ್ಸುಲಿನ್’ ಪದಾರ್ಥವು ಸರಿಯಾಗಿ ಕೆಲಸ ಮಾಡುವುದಿಲ್ಲವೋ, ಆಗ ಅದು ಮಧುಮೇಹಕ್ಕೆ ಕಾರಣವಾಗುತ್ತದೆ.

ಪರಿಹಾರ

1. ಆಹಾರಸೇವನೆ: 
ಪೂರ್ವ ತಯಾರಿಯಾದ ಪದಾರ್ಥಗಳನ್ನು ವರ್ಜ್ಯ ಮಾಡಿ, ಸಾಧ್ಯವಾದಷ್ಟು ನೈಸರ್ಗಿಕ ಪದಾರ್ಥಗಳನ್ನು ಬಳಸುವುದರಿಂದ ತೂಕವನ್ನು ತಡೆಗಟ್ಟಬಹುದು. ಯಾವ ತಿನಿಸುಗಳಲ್ಲಿ ಸಕ್ಕರೆ, ಲವಣ ಮತ್ತು ಜಿಡ್ಡಿನ ಅಂಶಗಳು ಹೆಚ್ಚಾಗಿರುತ್ತವೋ ಅಂತಹ ಪದಾರ್ಥಗಳ ಸೇವನೆಯನ್ನು ತಗ್ಗಿಸಬೇಕು. ಆದಷ್ಟು ಸಸ್ಯಾಹಾರಿ ಪದಾರ್ಥಗಳನ್ನು ಸೇವಿಸುವುದು ಒಳಿತು. ಮಾಂಸಾಹಾರಿಗಳು ಕುರಿ ಮತ್ತು ಇತರ ಮಾಂಸಗಳನ್ನು ತಗ್ಗಿಸಿ, ಮೀನು ಮತ್ತು ಕೋಳಿಯ ಸೇವನೆಯನ್ನು ಮಾಡಬಹುದು.

2. ದೈಹಿಕ ಚಟುವಟಿಕೆ: ಇದು ಬಹಳ ಮುಖ್ಯವಾದ ಅಂಶ. ಸೋಮಾರಿತನವನ್ನು ಬಿಟ್ಟು ಲವಲವಿಕೆಯಿಂದ ಕೆಲಸ ಕಾರ್ಯಗಳನ್ನು ಸ್ವತಃ ಮಾಡುವುದರಿಂದ ಕೊಬ್ಬಿನ ಅಂಶವು ಕರಗುತ್ತದೆ. ಬಹುತೇಕ ಮಂದಿ ಅತಿಯಾದ ದೇಹದ ಭಾರದಿಂದ ತಾವು ನಡೆಯಲು ಮತ್ತು ಇತರ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂಬ ಮನೋಭಾವದಿಂದ ನಿಷ್ಕ್ರಿಯರಾಗಿ ತಮ್ಮ ಜೀವನವನ್ನು ನಡೆಸುತ್ತಾರೆ. ತಮ್ಮ ದೈನಂದಿನ ಕಾರ್ಯಗಳಿಗೆ ಬೇರೆಯವರನ್ನು ಅವಲಂಭಿಸುತ್ತಾರೆ. ಇಂತಹ ಮನೋಭಾವವನ್ನು ತೊರೆದು ಚಟುವಟಿಕೆಯಿಂದ ಇರುವುದನ್ನು ಬೆಳೆಸಿಕೊಳ್ಳಬೇಕು. ಪ್ರಾರಂಭದಲ್ಲಿ ಆಯಾಸ ಮತ್ತು ನೋವುಗಳು ಇದ್ದರೂ, ಕ್ರಮೇಣ ದೇಹವು ಒಗ್ಗಿಕೊಳ್ಳುತ್ತದೆ. ಕನಿಷ್ಠ ಪಕ್ಷ 30ರಿಂದ 45 ನಿಮಿಷಗಳವರೆಗೆ ಒಂದಲ್ಲ ಒಂದು ರೀತಿಯ ವ್ಯಾಯಾಮವನ್ನು ಅಭ್ಯಾಸ ಮಾಡಬೇಕು. ಅದು ಸುಲಭವಾದ ನಡಿಗೆ, ಜಾಗಿಂಗ್ ಅಥವಾ ಜಿಮ್‌ನಲ್ಲಿ ಮಾಡುವ ಕ್ರಿಯೆಗಳು, ಯಾವುದಾದರೂ ಆಗಬಹುದು. ಆದರೆ ಇದನ್ನು ತಪ್ಪದೇ ಸತತವಾಗಿ ಮಾಡುವುದರಿಂದ ಫಲಿತಾಂಶಗಳು ಹೆಚ್ಚುವುದು. ಕ್ರಮಕ್ರಮವಾಗಿ ವ್ಯಾಯಾಮದ ಸಮಯ ಮತ್ತು ತೀವ್ರತೆಯನ್ನು ಹೆಚ್ಚಿಸುವುದು ಸೂಕ್ತ.

ಔಷಧ ಮತ್ತು ಶಸ್ತ್ರಚಿಕಿತ್ಸೆ

ಹಿಂದಿನಿಂದಲೂ ಕೆಲವು ಔಷಧಗಳನ್ನು ಉಪಯೋಗಿಸಿ ತೂಕವನ್ನು ಇಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಇದು ಒಳ್ಳೆಯ ಫಲಿತಾಂಶವನ್ನು ನೀಡುವುದಿಲ್ಲ ಎಂಬುದು ವೈದ್ಯರ ಅಭಿಪ್ರಾಯ. ಮಧುಮೇಹಕ್ಕೆ ಉಪಯೋಗಿಸುವ ಕೆಲವು ಔಷಧಗಳು ತೂಕವನ್ನು ಕಡಿಮೆ ಮಾಡುತ್ತದೆ ಎಂಬುದು ಸತ್ಯಾಂಶ.

ಈಗ ಕೆಲವು ದಶಕಗಳಿಂದ ಅತಿಯಾದ ತೂಕಕ್ಕೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಈ ವಿಧಾನದಿಂದ ಸಾಕಷ್ಟು ಜನ ಉತ್ತಮವಾದ ಫಲಿತಾಂಶಗಳನ್ನು ಹೊಂದಿರುವ ದಾಖಲೆಗಳಿವೆ. ಆದರೆ ಈ ಚಿಕಿತ್ಸೆಯಲ್ಲಿ ಸ್ವಾಭಾವಿಕವಾಗಿ ಒಳಿತು ಮತ್ತು ಕೆಡಕುಗಳನ್ನು ಎದುರಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡ ವ್ಯಕ್ತಿಗಳನ್ನು ಕೂಲಂಕುಶವಾಗಿ ಪರೀಕ್ಷೆಗಳಿಗೆ ಒಳಪಡಿಸಿರಿ, ಶಸ್ತ್ರಚಿಕಿತ್ಸೆಗೆ ಅರ್ಹರು ಎಂಬ ನಿರ್ಧಾರವನ್ನು ತಜ್ಞರು ತೆಗೆದುಕೊಳ್ಳುತ್ತಾರೆ. ಅತಿಯಾದ ತೂಕದ ಜೊತೆಗೆ ನಿಯಂತ್ರಣವಿಲ್ಲದ ಮಧುಮೇಹರೋಗ ಯಾರನ್ನು ಕಾಡುತ್ತಿರುವುದೋ ಅಂತಹವರಿಗೆ ಈ ಶಸ್ತ್ರಚಿಕಿತ್ಸೆ ಒಂದು ವರದಾನವಾಗಬಹುದು. ಇದರಿಂದ ಹೆಚ್ಚಾಗಿ ಸೇವಿಸುವ ಮಾತ್ರೆ ಮತ್ತು ಇನ್ಸುಲಿನ್ ಮದ್ದುಗಳನ್ನು ಕಡಿಮೆ ಮಾಡುವ ಅಥವಾ ನಿಲ್ಲಿಸುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನುರಿತ ಶಸ್ತ್ರವೈದ್ಯರಿಂದ ಪಡೆಯುವುದು ಸೂಕ್ತ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry