ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೂಲು ಶುರುವಾಯಿತು ತಾಯಿಗೂ ಮಗುವಿಗೂ!

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ‘ತಂಪು’ ಎನಿಸಿದ್ದ ಬಿರುಬೇಸಿಗೆ ಹಿಂದಕ್ಕೆ ಸರಿದು ಒತ್ತಡದ ‘ಕುದಿ ಎಸರಿನ’ ಮಳೆಗಾಲ ಬಂದಿದೆ. ಮಳೆಗಾಲವೆಂಬುದು ಕುದಿ ಎಸರೇ? ಅಲ್ಲದೇ ಏನು?

ಬೇಸಿಗೆ ರಜೆಯ ನೆಪದಲ್ಲಿ ಮಜ್ಜಿಗೆ–ಮೊಸರು, ಲಸ್ಸಿ, ಐಸ್‌ಕ್ರೀಂ, ಪಾನಕ, ಸೀಕರಣೆಯಲ್ಲಿ ಮಿಂದೇಳುತ್ತಿದ್ದ ಮಕ್ಕಳು ಇದೀಗ ಮಣಭಾರದ ಪಾಟಿಚೀಲ (ಪಾಟಿ?) ಹೊತ್ತು ಜಿಟಿಜಿಟಿ ಮಳೆಯಲ್ಲಿ ಶಾಲೆಗೆ ಹೊರಡಬೇಕೆಂದರೆ ಸುಮ್ಮನೆಯೇ?

ಎರಡು ದಿನ ರಜೆ ಹಾಕಿ ಮೂರನೇ ದಿನ ಕೆಲಸಕ್ಕೆ ಹೋಗಬೇಕೆಂದರೆ ದೊಡ್ಡವರಿಗೇ ಮೈಗೆ ಮುಳ್ಳು ಚುಚ್ಚಿದಂತಾಗುತ್ತದೆ. ಇನ್ನು, ಎರಡು ತಿಂಗಳ ಸುದೀರ್ಘ ರಜೆಯಲ್ಲಿದ್ದ ಮಕ್ಕಳ ಮನಸ್ಸು ಹೇಗಿದ್ದೀತು? ಇತ್ತ ಬಿಸಿಲು ಸರಿದು ಮಳೆ ಶುರುವಾಗುವುದಕ್ಕೂ ರಜೆ ಮುಗಿದು ಶಾಲೆ ಆರಂಭವಾಗುವುದಕ್ಕೂ ಸರಿ ಹೋಗುತ್ತದೆ.

ಇಂಥ ಹೊತ್ತಿನಲ್ಲಿ ಆ ಎಳೆಯರ ಮನಸ್ಸನ್ನು ಮತ್ತೆ ಶಾಲೆಯೆಡೆಗೆ ಹರಿಸುವ, ಅವರ ಆಟ–ಪಾಠ, ಊಟೋಪಚಾರಗಳನ್ನು ಕ್ರಮಬದ್ಧಗೊಳಿಸುವುದು ಪಾಲಕರಿಗೆ ದೊಡ್ಡ ಸವಾಲೇ ಸರಿ.

ಹೆಚ್ಚು ಕಡಿಮೆ, ಮಕ್ಕಳು ಹೈಸ್ಕೂಲು ಮೆಟ್ಟಿಲೇರುವವರೆಗೂ ಇದು ಪೋಷಕರಿಗೆ ‘ವಾರ್ಷಿಕ ಅಸೈನ್‌ಮೆಂಟ್‌’. ಬದಲಾದ ಪ್ರಕೃತಿ ಹಾಗೂ ಬದಲಾದ ತರಗತಿ – ಇವೆರಡೂ ಎಳೆಯರನ್ನು ತುಸು ಕಕ್ಕಾಬಿಕ್ಕಿಯಾಗಿ ಮಾಡುವ ಹೊತ್ತು ಇದು. ಈ ಸಮಯದಲ್ಲಿ ತಂದೆ–ತಾಯಿ ಇಬ್ಬರಿಗೂ ತಮ್ಮ ಕೆಲಸ–ಕಾರ್ಯಗಳ ನಡುವೆಯೇ ಮಕ್ಕಳ ಪ್ರತಿಯೊಂದು ಅಗತ್ಯಕ್ಕೂ ಸ್ಪಂದಿಸುವ ತಾಳ್ಮೆ ಬೇಕಾಗುತ್ತದೆ.

ಸಿಹಿನಿದ್ದೆಯಲ್ಲಿರುವ ಹಾಲುಗಲ್ಲದ ಮಗುವನ್ನು ಅನಾಮತ್ತಾಗಿ ಎತ್ತಿಕೊಂಡು ಬಚ್ಚಲುಮನೆಯಲ್ಲಿ ಕೂಡಿಸುವುದಕ್ಕೂ, ಅದು ತಂತಾನೇ ಹುರುಪಿನಲ್ಲಿ ಎದ್ದು ಶಾಲೆಗೆ ಹೊರಡಲು ಅನುವಾಗುವುದಕ್ಕೂ ವ್ಯತ್ಯಾಸವಿದೆಯಲ್ಲವೇ? ಹಾಗಿದ್ದರೆ ಅದನ್ನು ಹೇಗೆ ಸಾಧಿಸುವುದು?

ಮೊದಲೇ ಅಮ್ಮನಿಂದ ಬೇರ್ಪಡುವ ಆತಂಕದಲ್ಲಿರುವ ಮಕ್ಕಳಲ್ಲಿ ಮತ್ತೊಂದಿಷ್ಟು ದುಗುಡಕ್ಕೆ ದಾರಿ ಮಾಡಬಾರದು. ಇದಕ್ಕಾಗಿ ಶಾಲೆ ಆರಂಭವಾಗುವ ವಾರ–ಹದಿನೈದು ದಿನ ಮೊದಲೇ ಅವರಿಗೆ ಶಾಲೆಯ ಚಿತ್ರಣವನ್ನು ಪರಿಚಯಿಸುತ್ತ ಹೋಗಬೇಕು. ಹೊಸ ಪುಸ್ತಕಗಳು, ಅಲ್ಲಿ ಸಿಗುವ ಸ್ನೇಹಿತರು, ಆಟಿಕೆಗಳು, ಆಟದ ಮೈದಾನ, ಶಿಕ್ಷಕರ ಬಗ್ಗೆ ಹೇಳುತ್ತ ಹೋಗಬೇಕು. ಆಗ ಶಾಲೆಗೆ ಹೋಗಲು ಮಗು ಮಾನಸಿಕವಾಗಿ ಸಿದ್ಧವಾಗುತ್ತದೆ. ಇದು ಮೊದಲ ಬಾರಿಗೆ ಶಾಲೆಯ ಮುಖ ನೋಡುವ ಮಗುವಿನ ಮಾತಾಯಿತು.

ಇನ್ನು, ನರ್ಸರಿಯಿಂದ ಒಂದನೇ ತರಗತಿಗೆ ಸೇರುವ ಮಕ್ಕಳಿಗೂ ಹಾಗೂ ಅಲ್ಲಿಂದ ಮುಂದಿನ ತರಗತಿಗೆ ಹೋಗುವ ಮಕ್ಕಳಿಗೂ ವ್ಯತ್ಯಾಸವಿದೆ. ಮೊದಲು ಅರ್ಧದಿನವಷ್ಟೇ ಶಾಲೆಯಲ್ಲಿ ಕಳೆಯುತ್ತಿದ್ದ ಮಗು ಈಗ ಸಂಜೆವರೆಗೂ ಶಾಲೆಯಲ್ಲಿರಬೇಕಾಗುತ್ತದೆ. ಆಗ ಅದಕ್ಕೆ ತನ್ನನ್ನು ಕೂಡಿಹಾಕಿದ ಅನುಭವ! ಮನೆಗೆ ಬಂದ ವೇಳೆ, ತಾಯಿ–ತಂದೆಯ ಪೈಕಿ ಯಾರೊಬ್ಬರೂ ಮನೆಯಲ್ಲಿ ಇಲ್ಲದೇ ಹೋದಲ್ಲಿ ಆ ಭಾವ ಇನ್ನಷ್ಟು ಜಾಸ್ತಿಯಾಗಿ ಮಗುವನ್ನು ಕಂಗಾಲು ಮಾಡುತ್ತದೆ.

ಬಹುಶಃ ಈ ಸ್ಥಿತಿಯನ್ನೇ ಈಗಿನ ಬಹುಪಾಲು ಮಕ್ಕಳು ಅನುಭವಿಸುತ್ತಿರುವುದು. ಮೊದಲಾಗಿದ್ದರೆ, ‘ಶಾಲೆಗೆ ಹೋಗಲೊಲ್ಲೆ’ ಎಂದು ಹಟ ಮಾಡಿದ ಮಕ್ಕಳನ್ನು ಹತ್ತಿಕಟ್ಟಿಗೆ, ತೊಗರಿಕಟ್ಟಿಗೆಯಿಂದ ಹೊಡೆಯುತ್ತ ಶಾಲೆಗೆ ಕಳಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಏಳೆಂಟು ಮಕ್ಕಳಿದ್ದ ಮನೆಯಲ್ಲಿ ಹೊಡೆದಾಟ, ಆ ಬಳಿಕ ಮತ್ತೆ ಕೂಡಿ ಉಂಡು ಆಡುತ್ತಿದ್ದ ದೃಶ್ಯ ಕೂಡ ಅಷ್ಟೇ ಸಾಮಾನ್ಯವಾಗಿತ್ತು. ಈಗ, ವಿಭಕ್ತ ಕುಟುಂಬಗಳಲ್ಲಿ ‘ಒಂದು ಬೇಕು; ಒಂದೇ ಸಾಕು’ ಎನ್ನುವ ಸ್ಥಿತಿ. ಅಂಥ ಮಕ್ಕಳಲ್ಲಿ ಸಹಜವಾಗಿಯೇ ಹೊಂದಾಣಿಕೆಯ ಕೊರತೆ, ಅಭದ್ರತೆಯ ಭಾವ ಕಾಣುತ್ತದೆ. ಈಗಾಗಲೇ ನಾಲ್ಕು ಅಥವಾ ಐದನೇ ತರಗತಿಗೆ ಬಂದ ಮಕ್ಕಳ ಮನದಲ್ಲೂ ಆತ್ಮವಿಶ್ವಾಸದ ಕೊರತೆ ಕಾಣುತ್ತದೆ. ಒಂದು ಪೆನ್ಸಿಲ್‌ ಮರೆತುಹೋದರೂ ಶಾಲೆಯಲ್ಲಿ ಗಡಗಡ ನಡುಗುತ್ತಾರೆ. ಇನ್ನೊಬ್ಬರನ್ನು ಕೇಳಲೂ ಮುಜುಗರ. ಟೀಚರ್‌ ಬೈಯ್ದರೆ? ಕ್ಲಾಸಿನಿಂದ ಹೊರಗೆ ನಿಲ್ಲಿಸಿದರೇ? ನನ್ನ ಕ್ಲಾಸ್‌ ವರ್ಕ್‌ ಪೆಂಡಿಂಗ್‌ ಉಳಿದರೆ? ಹೀಗೆ ನೂರೆಂಟು ಆತಂಕಗಳು ಅವರನ್ನು ಹೈರಾಣು ಮಾಡುತ್ತವೆ.

ಇಂಥ ಹೊತ್ತಿನಲ್ಲಿ ಪಾಲಕರು ತಮ್ಮ ಮಕ್ಕಳ ಮನೋದೈಹಿಕ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು? ಅದಕ್ಕಾಗಿ ಅವರು ಶೈಕ್ಷಣಿಕ ವರ್ಷದ ಆರಂಭದಲ್ಲಷ್ಟೇ ಅಲ್ಲ; ಆರಂಭದಿಂದಲೇ ಕಾರ್ಯಪ್ರವೃತ್ತರಾಗಬೇಕು. ತಮ್ಮ ಮಕ್ಕಳ ಸಾಮರ್ಥ್ಯ, ಶಕ್ತಿಯನ್ನು ಅರಿತುಕೊಂಡು ಅದಕ್ಕೆ ತಕ್ಕುದಾಗಿ ಗುರಿಗಳನ್ನು ಇಟ್ಟುಕೊಳ್ಳಲು ಅನುವು ಮಾಡಿಕೊಡಬೇಕು ಹಾಗೂ ಅದಕ್ಕೆ ಬೆಂಬಲವಾಗಿ ನಿಲ್ಲಬೇಕು ಎನ್ನುತ್ತಾರೆ, ಧಾರವಾಡದ ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ.

ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಹೋದಂತೆಲ್ಲ ಪಠ್ಯಕ್ರಮ ಕಠಿಣವಾಗುತ್ತ ಹೋಗುತ್ತದೆ. ಕಳೆದ ವರ್ಷ ಪಡೆದಷ್ಟೇ ಅಂಕಗಳನ್ನು ಮುಂದಿನ ವರ್ಷವೂ ತರಬೇಕು ಅಥವಾ ಅದಕ್ಕಿಂತಲೂ ಹೆಚ್ಚು ತರಬೇಕು ಎಂಬುದನ್ನು ಆರಂಭದಲ್ಲಿಯೇ ಮಕ್ಕಳ ತಲೆಗೆ ಹಾಕಿದರೆ, ಅವರಿಗೆ ಒತ್ತಡವಾಗುತ್ತದೆ. ಅದು ಅವರ ಮಾನಸಿಕ ಜೊತೆಜೊತೆಗೆ ದೈಹಿಕ ಸ್ವಾಸ್ಥ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅವರು.

ಹಾಗಿದ್ದರೆ ಏನು ಮಾಡಬೇಕು? ಬೇರೆ ಮಕ್ಕಳೊಂದಿಗೆ ನಮ್ಮ ಮಕ್ಕಳನ್ನು ಹೋಲಿಸಬಾರದು. ನಮ್ಮ ಮಗುವಿನ ಶಕ್ತಿಯ ಪರಿಚಯ ಮೊದಲು ನಮಗಿರಬೇಕು. ಅದಕ್ಕೆ ತಕ್ಕಂತೆ, ಶಾಲೆ ಪುನರಾರಂಭ ಆಗುತ್ತಿದ್ದಂತೆಯೇ ಪಾಲಕರೇ ಯೋಜನೆಯೊಂದನ್ನು ರೂಪಿಸಿಕೊಂಡು ಆ ಪ್ರಕಾರವಾಗಿ ಕಾರ್ಯಪ್ರವೃತ್ತರಾಗಬೇಕು. ಸಕಾರಾತ್ಮಕವಾಗಿ ವಿಚಾರ ಮಾಡಿ, ಮಕ್ಕಳೊಂದಿಗೂ ಹಾಗೆಯೇ ಮುಂದುವರಿಯಬೇಕು. ಸಾಧ್ಯವಿದ್ದಷ್ಟು ಸಮಯವನ್ನು ಅವರೊಂದಿಗೆ ಕಳೆಯಬೇಕು. ತಂದೆ–ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾಗಿದ್ದರೆ, ಅವರ ಸಮಯ ಮಕ್ಕಳಿಗೆ ಇನ್ನೂ ಅಮೂಲ್ಯ. ಇಂಥ ಹೊತ್ತಿನಲ್ಲಿ ಅವರಿಗೆ ಭಾವನಾತ್ಮಕ ಬೆಂಬಲ ತುಂಬಾ ಮುಖ್ಯ.

ಆರಂಭದಿಂದಲೇ ಅವರ ಅಸೈನ್‌ಮೆಂಟ್‌, ಪ್ರಾಜೆಕ್ಟ್‌ ವರ್ಕ್‌ಗಳನ್ನು ಕೇಳುವುದು, ಅದಕ್ಕೆ ಅಗತ್ಯ ಮಾರ್ಗದರ್ಶನ ಮಾಡುವುದು, ಶಾಲಾ ಕ್ಯಾಲೆಂಡರ್‌, ನೋಟಿಸ್‌ ಪರಿಶೀಲಿಸುವುದು – ಇಂಥ ಸಣ್ಣಪುಟ್ಟ ವಿಷಯಗಳತ್ತ ಗಮನ ಹರಿಸುವುದೇ ಅವರಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುತ್ತದೆ. ಮಕ್ಕಳು ಹೇಳುವುದಕ್ಕೂ ಮುನ್ನ ಅವರ ಬಗ್ಗೆ ಆಡಿದ ಮಾತು, ತೋರಿದ ಕಾಳಜಿ ಅವರಿಗೆ ನೂರಾನೆ ಬಲ ತಂದುಕೊಡುತ್ತದೆ ಎನ್ನುತ್ತಾರೆ, ಡಾ. ಪಾಂಡುರಂಗಿ.

ಶಾಲೆ ಆರಂಭವಾಗಿದೆ ಎಂದ ಮಾತ್ರಕ್ಕೆ ಅವರ ಹವ್ಯಾಸಗಳಿಗೆಲ್ಲ ಅಡ್ಡಿ ಮಾಡಬಾರದು; ಬದಲಿಗೆ ಖುಷಿಪಟ್ಟು ಪ್ರೋತ್ಸಾಹಿಸಬೇಕು. ‘ಸೂಟಿ ಮುಗೀತು ಬ್ಯಾಟ್‌ ಇಡು, ಪುಸ್ತಕ ಹಿಡಿ’ ಎನ್ನುವುದಾಗಲೀ ‘ಪೇಂಟಿಂಗ್‌ ಬಾಕ್ಸ್‌ ಎತ್ತಿ ಒಗೀತೇನಿ’ ಎನ್ನುವುದು ಸರಿಯಲ್ಲ. ಇಷ್ಟು ದಿನ ಸರಿಯಾಗಿಯೇ ಇದ್ದದ್ದು ಈಗೇಕೆ ತಪ್ಪು? ಎಂಬ ಗೊಂದಲಕ್ಕೆ ಬೀಳುತ್ತಾರೆ ಮಕ್ಕಳು. ಬದಲಾದ ಪಠ್ಯದ ಬಗ್ಗೆ, ಅದು ಬೇಡುವ ಸಮಯದ ಬಗ್ಗೆ ಅವರಿಗೆ ಮನವರಿಕೆಯಾಗುವಂತೆ ತಿಳಿಹೇಳಬೇಕು.

ಮಕ್ಕಳ ದೈಹಿಕ ಆರೋಗ್ಯ ಕೂಡ ಅವರ ಮನಸ್ಸಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ರಜೆಯ ಅವಧಿಯಲ್ಲಿ ನಾನಾ ನಮೂನೆಯ ಹಣ್ಣು–ಹಂಪಲು, ರಸ–ಪಾನಕಗಳ ಜೊತೆಗೆ ವೈವಿಧ್ಯಮಯವಾದ ಊಟದ ರುಚಿ ಕಂಡ ಅವರು, ಇನ್ನು ಮುಂದೆ ‘ಲಂಚ್‌ ಬಾಕ್ಸ್‌’ಗೆ ಸೀಮಿತರಾಗುತ್ತಾರೆ. ಅವರ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು ಅವರ ಊಟದ ಡಬ್ಬಿಯಲ್ಲಿ ಸಿಗದೇ ಹೋದರೆ ಮಂಕಾಗುತ್ತಾರೆ. ಆರೋಗ್ಯಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡು ಅವರ ಕಲಿಕೆಯ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ, ಹುಬ್ಬಳ್ಳಿಯ ಡಾ. ಅನಿತಾ ಕೆಂಭಾವಿ. ಹೀಗಾಗಿ, ಪಾಲಕರು ಮಕ್ಕಳು ಬೇಡುವುದನ್ನಷ್ಟೇ ತಿನ್ನಿಸದೇ ಅವರಿಗೆ ಅಗತ್ಯವಿರುವುದನ್ನು ತಿನ್ನಲು ಕಲಿಸಬೇಕು ಎನ್ನುತ್ತಾರೆ ಅವರು.

ಸ್ಕೂಲು ಶುರುವಾಯಿತು...
ಹಾಗಿದ್ದರೆ ಏನು ಮಾಡಬೇಕು? ಬೇರೆ ಮಕ್ಕಳೊಂದಿಗೆ ಹೋಲಿಸಬಾರದು. ನಮ್ಮ ಮಗುವಿನ ಶಕ್ತಿಯ ಪರಿಚಯ ಮೊದಲು ನಮಗಿರಬೇಕು. ಅದಕ್ಕೆ ತಕ್ಕಂತೆ, ಶಾಲೆ ಪುನರಾರಂಭ ಆಗುತ್ತಿದ್ದಂತೆಯೇ ಪಾಲಕರೇ ಯೋಜನೆಯೊಂದನ್ನು ರೂಪಿಸಿಕೊಂಡು ಆ ಪ್ರಕಾರವಾಗಿ ಕಾರ್ಯಪ್ರವೃತ್ತರಾಗಬೇಕು. ಸಕಾರಾತ್ಮಕವಾಗಿ ವಿಚಾರ ಮಾಡಿ, ಮಕ್ಕಳೊಂದಿಗೂ ಹಾಗೆಯೇ ಮುಂದುವರಿಯಬೇಕು. ಸಾಧ್ಯವಿದ್ದಷ್ಟು ಸಮಯವನ್ನು ಅವರೊಂದಿಗೆ ಕಳೆಯಬೇಕು. ತಂದೆ–ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾಗಿದ್ದರೆ, ಅವರ ಸಮಯ ಮಕ್ಕಳಿಗೆ ಇನ್ನೂ ಅಮೂಲ್ಯ. ಇಂಥ ಹೊತ್ತಿನಲ್ಲಿ ಅವರಿಗೆ ಭಾವನಾತ್ಮಕ ಬೆಂಬಲ ತುಂಬಾ ಮುಖ್ಯ.

ಆರಂಭದಿಂದಲೇ ಅವರ ಅಸೈನ್‌ಮೆಂಟ್‌, ಪ್ರೊಜೆಕ್ಟ್‌ ವರ್ಕ್‌ಗಳನ್ನು ಕೇಳುವುದು, ಅದಕ್ಕೆ ಅಗತ್ಯ ಮಾರ್ಗದರ್ಶನ ಮಾಡುವುದು, ಶಾಲಾ ಕ್ಯಾಲೆಂಡರ್‌, ನೋಟಿಸ್‌ ಪರಿಶೀಲಿಸುವುದು... ಇಂಥ ಸಣ್ಣಪುಟ್ಟ ವಿಷಯಗಳತ್ತ ಗಮನ ಹರಿಸುವುದೇ ಅವರಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುತ್ತದೆ. ಮಕ್ಕಳು ಹೇಳುವುದಕ್ಕೂ ಮುನ್ನ ಅವರ ಬಗ್ಗೆ ಆಡಿದ ಮಾತು, ತೋರಿದ ಕಾಳಜಿ ಅವರಿಗೆ ನೂರಾನೆ ಬಲ ತಂದುಕೊಡುತ್ತದೆ ಎನ್ನುತ್ತಾರೆ ಡಾ. ಪಾಂಡುರಂಗಿ.

ಶಾಲೆ ಆರಂಭವಾಗಿದೆ ಎಂದ ಮಾತ್ರಕ್ಕೆ ಅವರ ಹವ್ಯಾಸಗಳಿಗೆಲ್ಲ ಅಡ್ಡಿ ಮಾಡಬಾರದು; ಬದಲಿಗೆ ಖುಷಿಪಟ್ಟು ಪ್ರೋತ್ಸಾಹಿಸಬೇಕು. ‘ಸೂಟಿ ಮುಗೀತು ಬ್ಯಾಟ್‌ ಇಡು, ಪುಸ್ತಕ ಹಿಡಿ’ ಎನ್ನುವುದಾಗಲೀ ‘ಪೇಂಟಿಂಗ್‌ ಬಾಕ್ಸ್‌ ಎತ್ತಿ ಒಗೀತೇನಿ’ ಎನ್ನುವುದು ಸರಿಯಲ್ಲ. ಇಷ್ಟು ದಿನ ಸರಿಯಾಗಿಯೇ ಇದ್ದದ್ದು ಈಗೇಕೆ ತಪ್ಪು? ಎಂಬ ಗೊಂದಲಕ್ಕೆ ಬೀಳುತ್ತಾರೆ ಮಕ್ಕಳು. ಬದಲಾದ ಪಠ್ಯದ ಬಗ್ಗೆ, ಅದು ಬೇಡುವ ಸಮಯದ ಬಗ್ಗೆ ಅವರಿಗೆ ಮನವರಿಕೆಯಾಗುವಂತೆ ತಿಳಿಹೇಳಬೇಕು.

ಮಕ್ಕಳ ದೈಹಿಕ ಆರೋಗ್ಯವೂ ಅವರ ಮನಸ್ಸಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ರಜೆಯಲ್ಲಿ ನಾನಾ ನಮೂನೆಯ ಹಣ್ಣು–ಹಂಪಲು, ರಸ–ಪಾನಕಗಳ ಜೊತೆಗೆ ವೈವಿಧ್ಯಮಯವಾದ ಊಟದ ರುಚಿ ಕಂಡ ಅವರು, ಇನ್ನು ಮುಂದೆ ‘ಲಂಚ್‌ ಬಾಕ್ಸ್‌’ಗೆ ಸೀಮಿತರಾಗುತ್ತಾರೆ. ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು ಊಟದ ಡಬ್ಬಿಯಲ್ಲಿ ಸಿಗದೇ ಹೋದರೆ ಮಂಕಾಗುತ್ತಾರೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು ಅವರ ಕಲಿಕೆಯ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಹುಬ್ಬಳ್ಳಿಯ ಡಾ. ಅನಿತಾ ಕೆಂಭಾವಿ.

ಹೀಗಾಗಿ, ಪಾಲಕರು ಮಕ್ಕಳು ಬೇಡುವುದನ್ನಷ್ಟೇ ತಿನ್ನಿಸದೇ ಅವರಿಗೆ ಅಗತ್ಯವಿರುವುದನ್ನು ತಿನ್ನಲು ಕಲಿಸಬೇಕು ಎನ್ನುತ್ತಾರೆ ಅವರು. ಆಯಾ ಋತುಮಾನಕ್ಕೆ ಅನುಗುಣವಾಗಿ ಯಾವ ಆಹಾರ ಪದಾರ್ಥ ಒಳ್ಳೆಯದು; ಯಾವುದು ಅಲ್ಲ ಎಂಬುದನ್ನು ಆರಂಭದಲ್ಲೇ ತಿಳಿಸಿಹೇಳುವುದರಿಂದ ಮಕ್ಕಳು ಜಂಕ್‌ ಫುಡ್‌ಗೆ ಜೋತುಬೀಳುವುದಿಲ್ಲ. ಎಂದೋ ಒಂದು ದಿನ ಮನೆಯಡುಗೆ ಉಂಡು ಉಳಿದೆಲ್ಲ ದಿನ ಹೊರಗಿನ ಊಟ, ತಿಂಡಿಯನ್ನೇ ಆಶ್ರಯಿಸಿದ ಮಕ್ಕಳ ದೈಹಿಕ ಕ್ಷಮತೆ, ರೋಗನಿರೋಧಕ ಶಕ್ತಿ ಕುಂದಿರುವುದನ್ನು ಅವರು ಉದಾಹರಣೆ ಸಮೇತ ವಿವರಿಸುತ್ತಾರೆ.

ಇತ್ತೀಚೆಗೆ, ಮಕ್ಕಳ ಆಹಾರ ಕ್ರಮ ಹದೆಗೆಡುವಲ್ಲಿ ತಾಯಂದಿರ ಪಾತ್ರವೇ ಹೆಚ್ಚು ಎಂದು ತುಸು ಖಾರವಾಗಿಯೇ ಹೇಳುವ ಅವರು, ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು, ಪ್ರತಿಷ್ಠೆಗೆ ಕಟ್ಟುಬಿದ್ದು ಸಿದ್ಧಪಡಿಸುವ ಖಾದ್ಯಗಳು ತಮ್ಮನ್ನೇ ಮುಗಿಸುತ್ತಿವೆ ಎಂಬ ಅರಿವು ಅವರಿಗೆ ಬರುತ್ತಿಲ್ಲ ಎಂದು ವಿಷಾದಿಸುತ್ತಾರೆ.
ರೊಟ್ಟಿ, ತರಕಾರಿ, ಬೇಳೆ, ಹಣ್ಣು–ಹಂಪಲುಗಳ ಸ್ಥಳೀಯವಾದ ಸಹಜ ಆಹಾರಪದ್ಧತಿಯನ್ನು ಕೈಬಿಟ್ಟು, ಹೆಚ್ಚು ಎಣ್ಣೆ–ಬೆಣ್ಣೆ ಬೇಡುವ, ಅಧಿಕ ಕ್ಯಾಲೊರಿಯ ನೋಡಲು ಚೆಂದ ಕಾಣುವ ಬಣ್ಣ ಹಾಕಿದ ತಿನಿಸುಗಳನ್ನು ಮಾಡುತ್ತಿದ್ದಾರೆ. ‘ರೆಡಿ ಟು ಈಟ್‌’ ತಿನಿಸುಗಳು, ಹುರಿದ, ಕರಿದ ಕುರುಕುಲುಗಳು ಅಡುಗೆಮನೆಗೆ ಬಂದು, ಮನೆ ಕೂಡ ರೆಸ್ಟೋರೆಂಟ್‌ ಆಗಿ ಪರಿವರ್ತನೆಯಾಗುತ್ತಿದೆ. ಶೇಂಗಾ ಚಟ್ನಿ, ಅಗಸಿ ಚಟ್ನಿ, ಗುರೆಳ್ಳು ಚಟ್ನಿ, ಉಪ್ಪಿನಕಾಯಿ ಎಂಬ ವ್ಯಂಜನಗಳ ಜಾಗವನ್ನೆಲ್ಲ ಕೆಚಪ್‌ಗಳ ಬಾಟಲಿಗಳು ಆಕ್ರಮಿಸಿವೆ. ಹೀಗಾಗಿ ಮಕ್ಕಳಿಗೆ ರೊಟ್ಟಿ ಮಾನಿಸುವುದಿಲ್ಲ; ಬೇಳೆ ಹಿಡಿಸದಂತಾಗಿದೆ ಎಂಬುದು ಅವರ ಅನಿಸಿಕೆ.

ಬೇಕರಿಗಳು ಹಾಗೂ ಶಾಲಾ ಮಕ್ಕಳಿಗೆ ಊಟದ ಡಬ್ಬಿ ಪೂರೈಸುವ ಸೆಂಟರ್‌ಗಳಿಂದ ಸಿಗುವ ಆಹಾರ ಎಷ್ಟು ಶುಚಿ–ಎಷ್ಟು ರುಚಿ? ಇಷ್ಟಕ್ಕೂ ಶಾಲೆಯಲ್ಲಿ ಮಕ್ಕಳಿಗೆ ನೆಮ್ಮದಿಯಾಗಿ ಊಟ ಮಾಡಲು ಎಷ್ಟು ಸಮಯವಿದೆ ಹೇಳಿ? ಎಂದು ಕೇಳುತ್ತಾರೆ ಡಾ.ಅನಿತಾ.

ಇಷ್ಟೆಲ್ಲ ಗೊತ್ತಿದ್ದ ಮೇಲೂ ನಮ್ಮ ಮಕ್ಕಳ ಬಗ್ಗೆ ನಾವೇ ಕಾಳಜಿ ವಹಿಸದಿದ್ದರೆ ಇನ್ನಾರು ಬರುತ್ತಾರೆ? ದುಡಿಯುವ ತಾಯಿಯೇ ಆಗಲಿ, ಮನೆಯಲ್ಲಿ ಇರುವವರೇ ಆಗಲಿ ಮಕ್ಕಳಿಗೆ ಶುಚಿ–ರುಚಿಯಾದ ಆಹಾರ ಹಾಗೂ ಅದನ್ನು ಸೇವಿಸುವ ಪದ್ಧತಿಯನ್ನು ರೂಢಿ ಮಾಡಬೇಕು. ಜೊತೆಗೇ ಪಾಲಕರಿಬ್ಬರೂ ಆ ಪದ್ಧತಿಗೆ ಬದ್ಧರಾಗಿರಬೇಕು.

ಹೀಗಾಗಿ, ಉಣ್ಣುವ ಊಟ ದೈಹಿಕ ಸ್ವಾಸ್ಥ್ಯವನ್ನು ಪ್ರತಿಬಿಂಬಿಸಿದರೆ, ನೋಡುವ ನೋಟ ಮಾನಸಿಕ ಆರೋಗ್ಯವನ್ನು ನಿರ್ಧರಿಸುತ್ತದೆ. ಎಲ್ಲವನ್ನೂ ತಿಳಿದೂ ಮಕ್ಕಳಿಗೆ ಏನನ್ನೂ ಹೇಳದೇ ಹೋದರೆ, ಕಲಿಸಿಕೊಡದೇ ಉಳಿದರೆ ಅವರು ಏನಾಗಿದ್ದರೋ, ಏನಾಗಲಿದ್ದಾರೋ ಅದಕ್ಕೆ ನಾವೇ ಹೊಣೆ. ಅದಕ್ಕಾಗಿ ಆರಂಭದಿಂದಲೇ ನಾವೂ ಬದಲಾಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT