ಕನಕದಾಸರು ಬಿತ್ತಿದ ‘ರಾಮಧಾನ್ಯ’ದ ಕನಸು

7

ಕನಕದಾಸರು ಬಿತ್ತಿದ ‘ರಾಮಧಾನ್ಯ’ದ ಕನಸು

Published:
Updated:
ಕನಕದಾಸರು ಬಿತ್ತಿದ ‘ರಾಮಧಾನ್ಯ’ದ ಕನಸು

ಚಿತ್ರ: ರಾಮಧಾನ್ಯ

ನಿರ್ಮಾಣ: ದಶಮುಖ ವೆಂಚರ್ಸ್

ನಿರ್ದೇಶನ: ಟಿ.ಎನ್‌. ನಾಗೇಶ್‌

ತಾರಾಗಣ: ಯಶಸ್‌ ಸೂರ್ಯ, ನಿಮಿಕಾ ರತ್ನಾಕರ, ಮಂಡ್ಯ ರಮೇಶ್‌

ಸಂತರು ಹಾಗೂ ದಾಸವರೇಣ್ಯರ ಜೀವನ ಆಧಾರಿತ ಸಾಕಷ್ಟು ಚಿತ್ರಗಳು ಈಗಾಗಲೇ ತೆರೆಕಂಡಿವೆ. ಭಕ್ತಿ ಮತ್ತು ದೈವೀಕರಣದ ಮೂಲಕ ಪ್ರೇಕ್ಷಕರನ್ನು ತಲುಪುವ ಹಂಬಲ ನಿರ್ದೇಶಕರದ್ದು. ದೃಶ್ಯವೈಭವವೇ ಇಂತಹ ಸಿನಿಮಾಗಳ ಪ್ರಮುಖ ಆಕರ್ಷಣೆ. ಸಮಕಾಲೀನ ಕಥೆಯ ಒಂದು ಎಳೆಯೊಂದಿಗೆ ಕನಕದಾಸರ ಬದುಕಿನ ಪ್ರಮುಖ ಘಟ್ಟಗಳನ್ನು ನಿರ್ದೇಶಕ ಟಿ.ಎನ್‌. ನಾಗೇಶ್‌ ‘ರಾಮಧಾನ್ಯ’ ಚಿತ್ರದಲ್ಲಿ ಕಟ್ಟಿದ್ದಾರೆ. ಇದೇ ಹೆಸರಿನಲ್ಲಿ ಬಂದಿದ್ದ ನಾಟಕವನ್ನು ಆಧರಿಸಿ ಈ ಸಿನಿಮಾವನ್ನು ಹೆಣೆಯಲಾಗಿದೆ.

ಕನಕದಾಸರು ದಾಸ ಪರಂಪರೆಯ ಅಗ್ರಗಣ್ಯರು. ಅವರು ರಚಿಸಿದ ಕಾವ್ಯದ ಹೆಸರು ‘ರಾಮಧಾನ್ಯ ಚರಿತೆ’. ಇದರಲ್ಲಿ ಧಾನ್ಯಗಳ ನಡುವಿನ ಶ್ರೇಷ್ಠತೆಯ ನಿರ್ಣಯಕ್ಕೆ ಸಂಬಂಧಿಸಿದ ಕಥೆ ಚಿತ್ರಿತವಾಗಿದೆ. ಭತ್ತ ಮತ್ತು ರಾಗಿಯನ್ನು ರೂಪಕಗಳಾಗಿ ಬಳಸಿಕೊಂಡು ಸಮಾಜದಲ್ಲಿ ಆಳವಾಗಿ ಬೇರೂರಿರುವ ಮೇಲು- ಕೀಳು ಎಂಬ ತಾರತಮ್ಯದ ಪರಮಾವಧಿಯನ್ನು ಲೇವಡಿ ಮಾಡಿದ್ದಾರೆ.  

ಮನುಷ್ಯ ಶ್ರೇಷ್ಠತೆಯ ವ್ಯಸನಕ್ಕೆ ಸಿಲುಕಿದಾಗ ಎದುರಾಗುವ ಸಂಕಷ್ಟ ಕುರಿತು ನಿರ್ದೇಶಕರು ಚಿತ್ರದಲ್ಲಿ ಬೆಳಕು ಚೆಲ್ಲಿದ್ದಾರೆ. ಜಾತೀಯತೆಯ ಸಂಕೋಲೆಯೊಳಗೆ ಸಮಾಜ ಸಿಲುಕಿ ನರಳುತ್ತಿರುವ ಬಗ್ಗೆ ಚಿತ್ರಿಸಿದ್ದಾರೆ. ಸಮಾಜಕ್ಕೆ ಕಂಟಕವಾಗಿರುವ ಅನಿಷ್ಟ ಜಾತಿಪದ್ಧತಿಯ ಮೂಲೋತ್ಪಾಟನೆಗೆ ಕನಕದಾಸರ ಕೀರ್ತನೆಗಳೇ ದಾರಿದೀಪ ಎಂಬ ಆಶಯವನ್ನು ಚಿತ್ರ ಒಳಗೊಂಡಿದೆ.

ಹಲವು ಶತಮಾನದ ಹಿಂದೆ ಬದುಕಿದ್ದ ಕನಕದಾಸರನ್ನು ನೋಡುಗರ ಮನಸ್ಸಿಗೆ ಒಗ್ಗಿಸಲು ನಿರ್ದೇಶಕರು ಪಟ್ಟಿರುವ ಶ್ರಮ ಎದ್ದುಕಾಣುತ್ತದೆ. ಇದಕ್ಕಾಗಿ ಕೆಲವು ರಂಜನೀಯ ಅಂಶಗಳನ್ನೂ ಸೇರಿಸಿದ್ದಾರೆ. ಕೆಲವೆಡೆ ರಂಜನೆಯೇ ಮುನ್ನೆಲೆಗೆ ಬಂದು ಉಳಿದ ಅಂಶಗಳು ಹಿನ್ನೆಲೆಗೆ ಸರಿಯುತ್ತವೆ. ಚಿತ್ರದಲ್ಲಿ ಬರುವ ಸರಸ ದೃಶ್ಯ ಇದಕ್ಕೊಂದು ನಿದರ್ಶನ. ಕನಕದಾಸರ ಕೀರ್ತನೆಗಳನ್ನು ಗೀತೆ, ಸಂಭಾಷಣೆ ರೂಪದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ, ಕೀರ್ತನೆಗಳಿಗೆ ಸಂಗೀತದ ಗಟ್ಟಿತನ ಸಿಕ್ಕಿಲ್ಲ.

ನಿರ್ದೇಶಕರ ಕಲ್ಪನೆಯ ರಾಮ ಮತ್ತು ಕನಕದಾಸರ ಪಾತ್ರಕ್ಕೆ ಸಂಪೂರ್ಣವಾಗಿ ಒಗ್ಗಿಕೊಳ್ಳಲು ಯಶಸ್‌ ಸೂರ್ಯ ಯಶಸ್ವಿಯಾಗಿದ್ದಾರೆ. ಕನಕದಾಸರ ಹೆಂಡತಿ ಪಾತ್ರಧಾರಿಯಾಗಿ ನಿಮಿಕಾ ರತ್ನಾಕರ ಕಣ್ಮನ ಸೆಳೆಯುತ್ತಾರೆ. ಸೀತೆಯಾಗಿ, ಕನಕನ ಪತ್ನಿಯಾಗಿ ಹಾಗೂ ಆಧುನಿಕ ಹುಡುಗಿಯಾಗಿ ಅವರ ಅಭಿನಯ ಗಮನ ಸೆಳೆಯುತ್ತದೆ. ಬೆನಕ ರಾಜು ಅವರ ಛಾಯಾಗ್ರಹಣ ಚಿತ್ರದ ಧನಾತ್ಮಕ ಅಂಶ. ಕನಕದಾಸರ ಭಕ್ತಿಪರವಶತೆಯ ಭಾವವನ್ನು ಕ್ಯಾಮೆರಾದಲ್ಲಿ ಸೊಗಸಾಗಿ ಸೆರೆ ಹಿಡಿದಿದ್ದಾರೆ.

ಬಸವರಾಜ ಸೂಳೇರಿಪಾಳ್ಯ ಅವರ ಸಂಭಾಷಣೆ ಚಿತ್ರಕ್ಕೆ ಗಟ್ಟಿತನ ಒದಗಿಸಿದೆ. ಭತ್ತ ಮತ್ತು ರಾಗಿ ನಡುವೆ ನಡೆಯುವ ದೃಶ್ಯಗಳ ಸಂಭಾಷಣೆ ಇದಕ್ಕೊಂದು ಉದಾಹರಣೆ. ದೇಸಿ ಮೋಹನ್‌ ಸಂಗೀತ ಚಿತ್ರಕ್ಕೆ ಹೊಸದೇನನ್ನೂ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry