ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌಲಸ್ಥ್ಯ’ನ ಪ್ರಣಯ ಕಥೆ 27ಕ್ಕೆ ಪ್ರದರ್ಶನ

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಲತಾ-ವಂಶಿ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿ ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ಎಸ್.ವಿ.ಕೃಷ್ಣ ಶರ್ಮ ಅವರು ಬರೆದ ಕಾದಂಬರಿಯಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡ ಯಶಸ್ವಿ ನಾಟಕ ‘ಪೌಲಸ್ಥ್ಯನ ಪ್ರಣಯ ಕಥೆ’.

ರಾವಣನ ಪಾತ್ರವೇ ನಾಟಕದ ಜೀವಾಳ. ಅವನೇ ಸೂತ್ರಧಾರನಾಗಿ ರಾಮಾಯಣ ಕಾವ್ಯರಚನೆಗೆ ಪ್ರೇರಕನಾಗಿ ಕಥೆಯನ್ನು ನಡೆಸಿಕೊಂಡು ಹೋಗುತ್ತಾನೆ. ವಾಲ್ಮಿಕಿಗೆ ಹೆಜ್ಜೆ ಹೆಜ್ಜೆಗೂ ಸ್ಫೂರ್ತಿಯಾಗುತ್ತಾನೆ. ಮಹಾ ವೈಣಿಕನೂ, ವೈಯಾಕರಣಿಯೂ, ದಶರಾಗಗಳ ಜನಕನೂ ಆದ ಮಹಾಬ್ರಾಹ್ಮಣ ರಾವಣನ ನಿಜ ಅಂತರಂಗದ ಪರಿಚಯವಾಗುತ್ತ ಹೋಗುತ್ತದೆ.

ರಾವಣನ ಬಗ್ಗೆ ವಿನೂತನ ಪರಿಕಲ್ಪನೆಯನ್ನು ಹುಟ್ಟುಹಾಕುವ ನಾಟಕವಿದು. ಅವನ ಅಂತರಂಗದ ಪದರಗಳನ್ನು ಸೂಕ್ಷ್ಮವಾಗಿ ಸೆಳೆಯುತ್ತದೆ. ಬ್ರಹ್ಮನ ಮೊಮ್ಮಗನಾದ ಪೌಲಸ್ಥ್ಯನ ಸುತ್ತ ಪರಿಭ್ರಮಿಸುವ ಈ ರಾಮಾಯಣದ ಕಥೆ ಹೊಸ ಆಯಾಮವನ್ನು ಹೊಂದಿದೆ. ಹೊಸ ಹೊಸ ರಾಗಗಳನ್ನು ಸೃಷ್ಟಿಸಬಲ್ಲ ಸಂಗೀತ ವಿದ್ವಾಂಸ ದಶಕಂಠನ ಔನ್ನತ್ಯವನ್ನು ಇಲ್ಲಿ ಕಾಣಬಹುದು.

ಸಾಂಪ್ರದಾಯಕ ಕಥೆಗೆ ಯಾವ ಲೋಪವೂ ಬಾರದಂತೆ ನಡೆದ ಘಟನೆಗಳಿಗೆ ಹೊಸದೊಂದು ಕಾರಣ-ಅರ್ಥ ಸ್ಫುರಿಸುವ ಈ ನಾಟಕದಲ್ಲಿ ಧೀರೋದಾತ್ತ ರಾವಣನ ಬಗ್ಗೆ ಉತ್ತಮ ಕಲ್ಪನೆ ಮೂಡುತ್ತದೆ. ಮಹಾನಾಯಕನಾಗಿ ವಿಜೃಂಭಿಸುವ ಆಧ್ಯಾತ್ಮಿಕ ಸ್ತರದ ಲಂಕೇಶ್ವರನ ವಿಶಿಷ್ಟ ಗುಣಗಳು, ಅವನ ಆಂತರ್ಯದ ಪದರಗಳು ಬಿಚ್ಚಿಕೊಳ್ಳುತ್ತ ಹೋದಂತೆ, ನಾಟಕದಲ್ಲಿ ಉಳಿದ ಪಾತ್ರಗಳೂ ಅಷ್ಟೇ ಮನೋಜ್ಞವಾಗಿ ಚಿತ್ರಿತವಾಗಿವೆ.

ನಾಟಕಕಾರ ಎಸ್.ವಿ.ಕೃಷ್ಣ ಶರ್ಮರ ಲೇಖನಿಯಿಂದ ಇಂಥವೇ ಬಗೆಯ ಹೊಸ ಅನ್ವೇಷಕ ದೃಷ್ಟಿಯಿಂದ ಸೃಷ್ಟಿಗೊಂಡ ಸುಯೋಧನ (ಮಹಾಭಾರತಕ್ಕೊಂದು ಹೊಸ ಆಯಾಮ), ಸೊಹ್ರಾಬ್ -ರುಸ್ತುಂ (ರಾಜಕೀಯ ಕಣದಲ್ಲಿ, ಜನಸಾಮಾನ್ಯರನ್ನು ಪ್ರತಿನಿಧಿಸುವ ಅಮಾಯಕ ತಂದೆ-ಮಕ್ಕಳ ಬಲಿದಾನ) ಮುಂತಾದ ನಾಟಕಗಳನ್ನು, ಪ್ರದರ್ಶಿಸುತ್ತ ಬಂದ ‘ಸಂಧ್ಯಾ ಕಲಾವಿದರು’ ಪ್ರಸಿದ್ಧ ಹವ್ಯಾಸಿ ನಾಟಕ ತಂಡ, ಕಳೆದ ನಲವತ್ತೊಂದು ವರುಷಗಳಿಂದ ಪರಿಣಾಮಕಾರಿಯಾದ ನಾಟಕ ಪ್ರದರ್ಶನಗಳನ್ನು ನೀಡುತ್ತ ಬಂದಿದೆ.

ರಾವಣನ ಅಂತರಂಗದ ನುಡಿಗಳನ್ನಾಲಿಸಲು, ಅವನ ಭಾವನೆಗಳಿಗೆ ಸ್ಪಂದಿಸಲು, ಕುತೂಹಲಕಾರಿಯಾದ ಸ್ವಾರಸ್ಯಕರ ಕಥಾ ಪಾತ್ರ-ಸನ್ನಿವೇಶಗಳಿಗೆ ಸಾಕ್ಷಿಯಾಗಲು, ಈ ಚಿಂತನಶೀಲ ನಾಟಕವು ಅನುವು ಮಾಡಿಕೊಡುತ್ತದೆ. ನಾಟಕದ ರಚನೆ ಮತ್ತು ನಿರ್ದೇಶನದ ಜೊತೆ ರಾವಣನ ಪಾತ್ರದಲ್ಲಿ ಎಸ್.ವಿ .ಕೃಷ್ಣ ಶರ್ಮ ಅಭಿನಯಿಸುತ್ತಾರೆ. ಸಂಗೀತ ಸಂಯೋಜನೆ ಪದ್ಮಚರಣ್, ಗಾಯನ್ ಎಸ್.ಶಂಕರ್.

ಇದೇ ಮೇ ತಿಂಗಳ 27 ರಂದು ಭಾನುವಾರ ಸಂಜೆ 7 ಗಂಟೆಗೆ. ಹನುಮಂತನಗರದ ಕೆ.ಹೆಚ್.ಕಲಾಸೌಧದಲ್ಲಿ ಸಂಧ್ಯಾ ಕಲಾವಿದರು ‘ಪೌಲಸ್ಥ್ಯನ ಪ್ರಣಯ ಕಥೆ’ ನಾಟಕವನ್ನು ಪ್ರದರ್ಶಿಸಲಿದ್ದಾರೆ.
-ಎಚ್.ಆರ್.ರಾಧಿಕಾ ರಾವ್

ಸಪ್ತಕದಲ್ಲಿ ಸಂಗೀತ ಸಂಭ್ರಮ
ಕಳೆದ ಎಂಟು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಸಪ್ತಕ ಸಂಸ್ಥೆಯು 12ನೇ ವಾರ್ಷಿಕೋತ್ಸವದ ಪ್ರಯುಕ್ತ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿದೆ. ಮೇ 27 ( ಭಾನುವಾರ) ನಡೆಯಲಿದ್ದು, ಜೈಪುರದ ಪಂ. ವಿಶ್ವ ಮೋಹನ್ ಭಟ್, ತಬಲದಲ್ಲಿ  ಹಿಮಾಂಶು ಮಹಾಂತ್, ವಡೋದರ, ಗಾಯನದಲ್ಲಿ ಕೋಲ್ಕತ್ತದ ಓಂಕಾರ್ ದಾದರ್‍ಕರ್, ಹಾರ್ಮೋನಿಯಂ ರವೀಂದ್ರ ಕಾಟೊಟಿ ಭಾಗವಹಿಸಲಿದ್ದಾರೆ.
ಸ್ಥಳ: ಚೌಡಯ್ಯ ಮೆಮೋರಿಯಲ್‌ ಸಭಾಂಗಣ, ವೈಯಾಲಿಕಾವಲ್‌, ಭಾನುವಾರ ಸಂಜೆ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT