ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್‌ನ ನೆನಪಿನಲ್ಲಿ ನಾಟಕೋತ್ಸವ

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಕನ್ನಡ ಸಾಂಸ್ಕೃತಿಕ ಲೋಕದ ‘ಯೂತ್ ಐಕಾನ್’ ಆಗಿದ್ದವರು ನಟ ಶಂಕರನಾಗ್. ಅಕಾಲಿಕ ಸಾವಿಗೀಡಾದ ಶಂಕರ್ ಇಂದಿಗೂ ಯುವಜನರ ನೆಚ್ಚಿನ ನಾಯಕ. ಸೃಜನಶೀಲತೆ, ಹೊಸ ಪ್ರಯೋಗಗಳಿಗೆ ಸದಾ ತುಡಿಯುತ್ತಿದ್ದ ಅವರು ಅನೇಕರಿಗೆ ಮಾದರಿಯಾಗಿದ್ದವರು. ರಂಗಭೂಮಿ, ಸಿನಿಮಾ, ನಗರಾಭಿವೃದ್ಧಿ, ತಂತ್ರಜ್ಞಾನ, ನೇಪಥ್ಯ ಹೀಗೆ ಎಲ್ಲದರಲ್ಲೂ ಹೊಸತನ, ವಿಭಿನ್ನ ಭಾವಭಿತ್ತಿಯನ್ನೇ ಹೊಂದಿದ್ದ ಶಂಕರನಾಗ್ ನೆನಪಿನಲ್ಲಿ ‘ಸಾತ್ವಿಕ ಮತ್ತು ರಂಗಪಯಣ’ ಮೇ 27ರಿಂದ 30ರ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ಶಂಕರನಾಗ್ ನಾಟಕೋತ್ಸವ ಆಯೋಜಿಸಿದೆ.

ದಶಮಾನೋತ್ಸವ ಸಂಭ್ರಮದಲ್ಲಿರುವ ಸಾತ್ವಿಕ ಮತ್ತು ರಂಗಪಯಣದ ರೂವಾರಿಗಳಾದ ರಾಜ್‍ಗುರು ಹೊಸಕೋಟೆ ಮತ್ತು ನಯನಾ ಸೂಡ ಅವರ ಬಹುದಿನಗಳ ಕನಸು ಶಂಕರನಾಗ್ ನಾಟಕೋತ್ಸವದ ಮೂಲಕ ನನಸಾಗುತ್ತಿದೆ.

‘ರಾಜ್‍ಗುರು ಶಾಲಾ ದಿನಗಳಿಂದಲೂ ಶಂಕರನಾಗ್ ಅವರ ಅಭಿಮಾನಿ. ರಾಜ್‍ಗುರು ತಮ್ಮ ಜತೆ ಸೇರಿದವರಿಗೂ ಶಂಕರನಾಗ್ ಅವರ ಗುಂಗು ಹಿಡಿಸುತ್ತಾರೆ. ಹಾಗಾಗಿ, ಶಂಕರ್ ನೆನಪಿನಲ್ಲಿ ಏನಾದರೊಂದು ಕಾರ್ಯಕ್ರಮ ಮಾಡಬೇಕೆಂಬುದು ಸಾತ್ವಿಕ ಮತ್ತು ರಂಗಪಯಣದ ಆಸೆಯಾಗಿತ್ತು. ನಮ್ಮ ರಂಗತಂಡಗಳ ದಶಮಾನೋತ್ಸವದ ನೆಪದಲ್ಲಿ ಶಂಕರನಾಗ್ ಅವರ ನೆನಪುಗಳೂ ಬೆರೆತರೆ ಚಂದ ಅನಿಸಿತು. ಹಾಗಾಗಿ, ಶಂಕರನಾಗ್ ಹೆಸರಿನಲ್ಲಿ ನಾಟಕೋತ್ಸವ ಆಯೋಜಿಸಿದೆವು’ ಎನ್ನುತ್ತಾರೆ ರಂಗಕರ್ಮಿ ನಯನಾ ಸೂಡ.

ನಾಟಕೋತ್ಸವದಲ್ಲಿ ನಾಲ್ಕು ವಿಭಿನ್ನ ನೆಲೆಯ ನಾಟಕಗಳನ್ನು ಪ್ರದರ್ಶಿಸಲಾಗುವುದು. ಶಂಕರನಾಗ್ ಅಭಿನಯದ ಮೊದಲ ಸಿನಿಮಾ ‘ಒಂದಾನೊಂದು ಕಾಲದಲ್ಲಿ’ ಸ್ವರ್ಣಕಮಲ ಪ್ರಶಸ್ತಿಗೆ ಭಾಜನವಾಗಿತ್ತು. ಮರಾಠಿ ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಶಂಕರ್‌ನಾಗ್ ಅವರಿಗೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ನಾವೀನ್ಯ ಸ್ಪರ್ಶ ನೀಡುವ ಹಂಬಲವಿತ್ತು. ಈ ಆಶಯವನ್ನು ಹೊತ್ತುಕೊಂಡ ಶಂಕರ ಅವರ ಮೊದಲ ಸಿನಿಮಾದ ನೆನಪಿಗಾಗಿಯೇ ‘ಒಂದಾನೊಂದು ಕಾಲದಲ್ಲಿ’ ಸಿನಿಮಾವನ್ನು ರಂಗಭೂಮಿಗೆ ಅಳವಡಿಸಲಾಗಿದೆ. ಇದು ಒಂದು ರೀತಿಯಲ್ಲಿ ಹೊಸ ಪ್ರಯತ್ನ.  ಅಭಿನಯತರಂಗದ ವಿದ್ಯಾರ್ಥಿಗಳು ರೂಪಿಸಿರುವ ‘ಟ್ರೈನ್ ಟು ಪಾಕಿಸ್ತಾನ್’ ನಾಟಕವನ್ನು ಪ್ರದರ್ಶಿಸಲಾಗುವುದು. ಮೂರನೇ ದಿನ ರಾಜ್‍ಗುರು ಹೊಸಕೋಟೆ ಅಭಿನಯ ಮತ್ತು ಗಾಯನವಿರುವ ‘ಶರೀಫ’ ಮತ್ತು ಕೊನೆಯ ದಿನ ಜ್ಯೋತಿ ಹಿಟ್ನಾಳ್ ನಿರ್ದೇಶನದ ‘ನೀಲಿ ರಿಬ್ಬನ್’ ನಾಟಕ ಪ್ರದರ್ಶನವಾಗಲಿದೆ ಎಂದು ವಿವರಿಸುತ್ತಾರೆ ಅವರು.

ಶಂಕರನಾಗ್ ನಟ, ನಿರ್ದೇಶಕ ಅಷ್ಟೇ ಅಲ್ಲ. ನೇಪಥ್ಯದಲ್ಲೂ ಕೆಲಸ ಮಾಡಿದವರು. ಈ ಹಿನ್ನೆಲೆಯಲ್ಲಿ ನೇಪಥ್ಯ ಕ್ಷೇತ್ರದಲ್ಲಿ ದುಡಿದ ಆರು ಮಂದಿಗೆ ‘ಶಂಕರನಾಗ್’ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ರಂಗಕರ್ಮಿ ಶಶಿಧರ ಅಡಪ ಅವರು ಆಕರ್ಷಕ ಪ್ರಶಸ್ತಿ ಫಲಕಗಳನ್ನು ರೂಪಿಸಿದ್ದಾರೆ. ನಾಟಕೋತ್ಸವಕ್ಕೆ ಹಿರಿಯರಾದ ಡಿ.ಕೆ.ಚೌಟ, ಶಶಿಧರ ಅಡಪ, ಚನ್ನಪ್ಪ, ರಂಗನಿರಂತರ ತಂಡ ಹೀಗೆ ರಂಗಭೂಮಿಯ ಅನೇಕರು ನಮ್ಮ ಜತೆ ಕೈಜೋಡಿಸಿದ್ದಾರೆ. ನಾಗರಕಟ್ಟೆ ವೇದಿಕೆಯಲ್ಲಿ ಶಂಕರ್ ಜತೆ ಇದ್ದವರು, ಅವರ ಜತೆ ಅಭಿನಯಿಸಿದ್ದವರು ಒಟ್ಟು ಸೇರಿ ಶಂಕರನಾಗ್ ಅವರ ಕುರಿತು ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಇಡೀ ನಾಟಕೋತ್ಸವದ ಕೇಂದ್ರಬಿಂದು ಈ ನಾಗರಕಟ್ಟೆ. ನಾಲ್ಕೂ ದಿನಗಳ ಕಾಲ ಶಂಕರನಾಗ್ ನೆನಪುಗಳ ಮೆರವಣಿಗೆಯೇ ನಾಟಕೋತ್ಸವದಲ್ಲಿ ಮೇಳೈಸಿರುತ್ತದೆ.

27ರಂದು ಸಂಜೆ 5.30ಕ್ಕೆ ನಾಟಕೋತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಹಿರಿಯ ನಟರಾದ ಶಿವರಾಮ್, ರಮೇಶ್ ಭಟ್, ನಟಿ ಸುಂದರಶ್ರೀ, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ನಟ ಮಂದೀಪ್ ರೈ ಪಾಲ್ಗೊಳ್ಳುವರು. 28ರಂದು ಸಂಜೆ 5ಕ್ಕೆ ಕವಿಸಮಯದಲ್ಲಿ ಕವಯತ್ರಿಯರಾದ ಹೇಮಲತಾ ಮೂರ್ತಿ, ದೀಪಾ ಗಿರೀಶ್, ಗಿರೀಶ್ ಹಂದಲಗೆರೆ, ರೂಪಾ ಕೋಟೇಶ್ವರ, ಹರವು ಸ್ಫೂರ್ತಿ, ಸ್ಮಿತಾ ಮಾಕಳ್ಳಿ, ಮಂಜುಳಾ ಹುಲಿಕುಂಟೆ ಪಾಲ್ಗೊಳ್ಳುವರು. ಸಂಜೆ 6ಕ್ಕೆ ನಾಗರಕಟ್ಟೆಯಲ್ಲಿ ನಟರಾದ ರಾಮಕೃಷ್ಣ, ಕೆ. ಪ್ರದೀಪ್, ಲೇಖಕ ಎನ್.ಸಿ.ಮಹೇಶ್ ಶಂಕರನಾಗ್ ನೆನಪುಗಳನ್ನು ಹಂಚಿಕೊಳ್ಳುವರು.

29ರಂದು ನಿರ್ದೇಶಕರೊಂದಿಗೆ ಸಂವಾದದಲ್ಲಿ ಬಿ.ಎಂ.ಗಿರಿರಾಜ್, ಮನ್ಸೂರ್ ಭಾಗವಹಿಸುವರು. ನಾಗರಕಟ್ಟೆಯಲ್ಲಿ ಸುಂದರಶ್ರೀ, ಜಾನ್ ದೇವರಾಜ್ ಮತ್ತು ರಮೇಶ್ ಪಂಡಿತ್ ಶಂಕರನ ನೆನಪುಗಳನ್ನು ಹಂಚಿಕೊಳ್ಳುವರು. 30ರಂದು ನಡೆಯಲಿರುವ ಸಮಾರೋಪದಲ್ಲಿ ಡಾ.ವಿಜಯಾ, ಹಂಸಲೇಖ, ಶ್ರೀನಿವಾಸ್ ಜಿ. ಕಪ್ಪಣ್ಣ, ಶಶಿಧರ ಅಡಪ, ಮಾಸ್ಟರ್ ಮಂಜುನಾಥ ಪಾಲ್ಗೊಳ್ಳುವರು. ಸಂಜೆ 6.30ಕ್ಕೆ ಶಂಕರನಾಗ್ ಪ್ರಶಸ್ತಿ ಪ್ರದಾನ ನಡೆಯಲಿದೆ. ನೇಪಥ್ಯ ಕಲಾವಿದರಾದ ರಾಮಕೃಷ್ಣ ಕನ್ನರ್‍ಪಾಡಿ, ರಶ್ಮಿ, ನಾರಾಯಣ್ ರಾಯಚೂರು, ಕೃಷ್ಣ, ಮಾಲತೇಶ್ ಬಡಿಗೇರ್, ಸುಂದರಶ್ರೀ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ನಾಟಕೋತ್ಸವಕ್ಕೆ ಉಚಿತ ಪ್ರವೇಶವಿದೆ. ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನ್ ಬಳಿ ಪಾಸ್‍ಗಳು ದೊರೆಯುತ್ತವೆ. ಸಂಪರ್ಕ: 99641 40723, 88847 64509 

*
ಅಮೆರಿಕ ವೇಗವಾಗಿದೆ. ಮುಂಬೈ, ಕೋಲ್ಕತ್ತಾ ಕೂಡಾ ವೇಗದ ಗತಿ ಪಡೆದುಕೊಂಡಿದೆ. ಆದರೆ, ಬೆಂಗಳೂರು ಮಾತ್ರ ನಿಧಾನಗತಿಯದ್ದಾಗಿದೆ. ಇದನ್ನು ಮೊದಲು ಕಂಡುಕೊಂಡವರು ಅನಂತನಾಗ್ ಮತ್ತು ಶಂಕರನಾಗ್. ಅನಂತ್ ಸುಮ್ಮನಾದರು. ಆದರೆ, ಶಂಕರ್ ಈ ವಿಷಯದಲ್ಲಿ ಸುಮ್ಮನೇ ಕೂಡಲಿಲ್ಲ. ಏನಾದರೂ ಮಾಡಬೇಕು. ಹೊಸತನ ತರಬೇಕೆಂದು ತುಡಿಯುತ್ತಿದ್ದರು. ಅವರ ಈ ಆಶಯ ಹೊತ್ತು ನಡೆಯುತ್ತಿರುವ ಈ ನಾಟಕೋತ್ಸವ ಮುಂದಿನ ರಂಗಪೀಳಿಗೆಗೆ ಉದ್ದೀಪನವಾಗಲಿ.
-ಹಂಸಲೇಖ, ಸಂಗೀತ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT