ಗೆಲುವು ಎಲ್ಲರದ್ದು ಬಹುಮಾನ ಯಾರದ್ದು?

7

ಗೆಲುವು ಎಲ್ಲರದ್ದು ಬಹುಮಾನ ಯಾರದ್ದು?

Published:
Updated:
ಗೆಲುವು ಎಲ್ಲರದ್ದು ಬಹುಮಾನ ಯಾರದ್ದು?

ನೂರಾರು ಕನಸುಗಳನ್ನು ಹೊತ್ತ ಮರಿ ಕೋಗಿಲೆಗಳು ರಾಜ್ಯದ ವಿವಿಧ ಜಿಲ್ಲೆ, ಪ್ರದೇಶಗಳಿಂದ ಬೆಂಗಳೂರಿಗೆ ಹಾರಿ ‘ಸರಿಗಮಪ ಲಿಟ್ಲ್ ಚಾಂಪ್ಸ್‌ ಸೀಸನ್‌ 14’ರ ಸೆಟ್‌ಗೆ ಬಂದಿದ್ದವು. ವಾರಗಳ ಕಾಲ ಸಂಗೀತ ಲೋಕದಲ್ಲಿ ಸಾಧನೆಗೈಯಲು ಹಾತೊರೆದು ತಮ್ಮದೇ ಆದ ಭಾವಭಂಗಿ, ಗಾನ ವೈಖರಿಯಿಂದ ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಗಾನ ಬಜಾನದ ಮೂಲಕ ರಂಜಿಸಿವೆ. 

ಈ ಗಾನ ಬನದಲ್ಲಿ ಒಂದಕ್ಕಿಂತ ಒಂದರ ಧ್ವನಿ ಮಧುರ. ಜತೆಗೆ ಪರಿಣಿತ ಹಿರಿ ಕೋಗಿಲೆಗಳ ರಮ್ಯಗಾನದ ಸೆಳೆತ, ಕುಣಿತ... ಹಂಸಲೇಖ ಮಹಾಗುರುವಾಗಿ, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಖ್ಯಾತ ಗಾಯಕ ವಿಜಯಪ್ರಕಾಶ್‌ ನಿರ್ಣಾಯಕರಾಗಿದ್ದಾರೆ. ಈ ಮರಿಕೋಗಿಲೆಗಳಿಗೆ ತರಬೇತಿ ನೀಡುತ್ತಿರುವವರು ಪ್ರೊ.ಸುಚೇತನ ರಂಗಸ್ವಾಮಿ.

ಇದೀಗ ಅವರ ಸಂಗೀತ ಪಯಣ ಅಂತಿಮ ಸ್ಪರ್ಧೆಯತ್ತ ದಾಪುಗಾಲು ಹಾಕಿದ್ದು, ಫೈನಲ್‌ ಸ್ಪರ್ಧೆಗೆ 5 ಜನ ಆಯ್ಕೆ ಆಗಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ನಗರದ ನಾಗವಾರ ಬಳಿಯ ವೈಟ್‌ ಆರ್ಕಿಡ್‌ ಕನ್ವೆಕ್ಷನ್‌ ಸೆಂಟರ್‌ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ  ಅಂತಿಮ ಸ್ಪರ್ಧೆ ನಡೆಯಲಿದೆ. 

ಅಂತಿಮ ಸ್ಪರ್ಧೆಗೆ ಅಣಿಯಾಗುವ ಮುನ್ನ ಪುಟಾಣಿ ಕೋಗಿಲೆಗಳು ತಮ್ಮ ಗಾನಬಜಾನದ ತರಾವರಿ ತಯಾರಿ ಮತ್ತು ಖುಷಿಯ ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಎಲ್ಲ ಗುರುವಿನ ಇಚ್ಛೆ

ಭಾಳ ಖುಷಿಯಾಗೆದ್ರಿ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದು. ಟಿ.ವಿಯಲ್ಲಿ ಹಾಡಬೇಕೆನ್ನುವ ಆಸೆ ಭಾಳ ಇತ್ರೀ ನನಗ್. ನಮ್ಮ ಗುರುಗಳ ಆಶೀರ್ವಾದದಿಂದ ಇಲ್ಲಿಗೆ ಬಂದೆರ್ರೀ. ಅಪ್ಪ ಅಮ್ಮನಿಗೂ ಭಾಳ ಖುಷಿ ಆಗೆದ್‌ರ್ರೀ. ಇನ್ನೂ ದೈವ, ಗುರುವಿನ ಇಚ್ಛೆಯಂತೆ ನನ್ನ ಪಯಣ. ಕಠಿಣ ಸಂಗೀತ ಒಲಿಯುವುದು ಖರೇನ ಭಾಳ ಕಷ್ಟ ಐತಿರ್ರಿ. ಆದರೂ ನಾನು ಅದನ್ನ ಬಿಡಲ್ಲ, ಪ್ರಯತ್ನ ಮಾಡ್ತೀನಿ. ಅಂತಿಮ ಸ್ಪರ್ಧೆಯಲ್ಲಿ ಗೆಲ್ತೀನಿ ಅಂತ ಭರವಸೆ ಅದರ್ರಿ.

-ಜ್ಞಾನೇಶ, ಬಳ್ಳಾರಿ.

*

ಅಪ್ಪ–ಅಮ್ಮ ಪಟ್ಟ ಕಷ್ಟ ಸಾರ್ಥಕ

ನಾನು ಅಂತಿಮ ಸುತ್ತಿಗೆ ಆಯ್ಕೆ ಆಗ್ತಿನಿ ಅಂತಾನೇ ಅಂದು ಕೊಂಡಿರಲಿಲ್ಲ. ಅಪ್ಪ–ಅಮ್ಮ ಪಟ್ಟ ಕಷ್ಟ ಸಾರ್ಥಕವಾಯಿತು ಅಂತ ಅನ್ನಿಸಿದೆ. ಸಂಗೀತಗಾರರು, ನಮ್ಮ ಮೆಂಟರ್‌ ಸುಚೇತನ ಸರ್‌ ನಮಗೆಲ್ಲ ಚೆನ್ನಾಗೆ ಕಲಿಸಿಕೊಟ್ಟಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಸಂಗೀತ ಅಭ್ಯಾಸ ಆರಂಭವಾಗುತ್ತೆ. ಅಂತಿಮ ಸ್ಪರ್ಧೆಗಾಗಿ ಒಂದು ವಾರದಿಂದಲೇ ತಯಾರಿ ನಡೆಸಿದ್ದೀವಿ. ಸ್ಪರ್ಧೆಯಲ್ಲಿ ಯಾರು ಗೆಲ್ತೀವೊ ಗೊತ್ತಿಲ್ಲ.

-ಕೀರ್ತನಾ, ಬೆಂಗಳೂರು.

*

ಅಂತಿಮ ಸ್ಪರ್ಧೆಗೆ ಆಯ್ಕೆ ಸುಲಭದ ಮಾತಲ್ಲ..

ಅಂತಿಮ ಸ್ಪರ್ಧೆಗೆ ಆಯ್ಕೆ ಆಗುವುದೆಂದರೆ ಅಷ್ಟು ಸುಲಭದ ಮಾತಲ್ಲ. ತುಂಬಾ ಕಠಿಣ ಸ್ಪರ್ಧೆ ನಡೀತಾ ಇತ್ತು. ಆದರೂ ಒಂದೆಡೆ ನಾನು ಮಾಡಿದ ಪ್ರಯತ್ನ ವಿಫಲವಾಗಲ್ಲ, ಅಂತಿಮ ಸುತ್ತಿಗೆ ಬರ್ತೇನೆ ಎನ್ನುವ ಆತ್ಮವಿಶ್ವಾಸ ಇತ್ತು. ವಿಶ್ವಪ್ರಸಾದ್‌, ಕೀರ್ತನಾ, ಜ್ಞಾನೇಶ ಎಲ್ಲರೂ ತುಂಬಾ ಚೆನ್ನಾಗಿ ಹಾಡಿ, ಕಠಿಣ ಸ್ಪರ್ಧೆಯನ್ನು ಒಡ್ಡಿದ್ದರು. ನನ್ನ ಹೊರತು ಇನ್ನೂ ಕೆಲವು ಸ್ಪರ್ಧಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗುವ ಸಾಮರ್ಥ್ಯ ಇರುವವರು ಇದ್ದರು. ಅವರು ಆಯ್ಕೆ ಆದರೆ ನಾನೇನಾಗ್ತೀನೋ ಅಂತಾನೂ ಭಯ ಇತ್ತು. ಈಗ ಅದನ್ನೇಲ್ಲ ಬದಿಗಿಟ್ಟು, ಸ್ಪರ್ಧೆಗೆ ಬೇಕಾದ ಪೂರಕ ತಯಾರಿಯತ್ತ ಗಮನಹರಿಸಿ, ಶ್ರದ್ಧೆಯಿಂದ ಅಭ್ಯಾಸ ಮಾಡ್ತಿದ್ದೀನಿ. ನನ್ನ ಪ್ರಯತ್ನ ನಾ ಮಾಡುವೆ, ನಿರಂತರ ಪ್ರಯತ್ನಕ್ಕೆ ಒಂದಲ್ಲ ಒಂದು ಸರಿ ಫಲ ಸಿಕ್ಕೆ ಸಿಗುತ್ತೆ ಎನ್ನುವ ನಂಬಿಕೆಯಲ್ಲಿದ್ದೀನಿ.

-ಅಭಿಜಾತ್‌ ಭಟ್‌, ಉಡುಪಿ.

*

ಚೆನ್ನಾಗಿ ಹಾಡಿ ತೋರಿಸ್ತೀನಿ...

ಭಜರಂಗಿ ಹಾಡಿನಿಂದಾಗಿ ನಾನು ನೇರವಾಗಿ ಅಂತಿಮ ಸ್ಪರ್ಧೆಗೆ ಆಯ್ಕೆ ಆಗಿರೋದು ತುಂಬಾ ಖುಷಿ ತಂದಿದೆ. ಅಂತಿಮ ಸ್ಪರ್ಧೆಯಲ್ಲಿ ಚೆನ್ನಾಗಿ ಹಾಡಿ ತೋರಿಸ್ತೀನಿ. ಹಾಡುವಾಗೋ ಯಾವುದು ಕಷ್ಟ ಅನ್ನಿಸಲ್ಲ. ಒಂದುವರೆ ಗಂಟೆಗೂ ಹೆಚ್ಚು ನಿರಂತರ ಅಭ್ಯಾಸ ಮಾಡ್ತೀನಿ, ಅದರಿಂದ ಎಲ್ಲವೂ ಸರಾಗವಾಗಿದೆ.

ತೇಜಸ್‌ಶಾಸ್ತ್ರೀ, ಚೆನ್ನಗಿರಿ.

*

ರಾಗಗಳ ಕಾಲಕ್ಕೆ ತಕ್ಕಂತೆ ಸಂಗೀತಾಭ್ಯಾಸ

ನಾನು ಹಿಂದೂಸ್ತಾನಿ ಸಂಗೀತ ಕಲಿತಿದ್ದರಿಂದ  ಕರ್ನಾಟಕ ಸಂಗೀತ ಹಾಡೋವಾಗ ಸ್ವಲ್ಪ ಕಷ್ಟ ಅನ್ನಿಸುತ್ತಿತ್ತು. ಆದರೆ ಇಲ್ಲಿ ನೀಡಿದ ತರಬೇತಿ ಮತ್ತು ಮಾರ್ಗದರ್ಶನದಿಂದಾಗಿ ಮತ್ತಷ್ಟು ಸಹಕಾರಿಯಾಗಿದೆ. ರಾಗಗಳ ಕಾಲಕ್ಕೆ ತಕ್ಕಂತೆ ಸಂಗೀತಾಭ್ಯಾಸ ಮಾಡುವೆ. ಅಂತಿಮ ಸ್ಪರ್ಧೆಗೆ ಬೇಕಾದ ಅಗತ್ಯ ತಯಾರಿಗಳನ್ನೆಲ್ಲ ಮಾಡಿಕೊಂಡಿರುವೆ.

–ವಿಶ್ವಪ್ರಸಾದ, ಇಟಗಿ, ಬೆಳಗಾವಿ.

*ಆಂಗಿಕ, ಮಾನಸಿಕ ಚಾತುರ್ಯದ ಸಿದ್ಧತೆ

ಇಲ್ಲಿ ಸಂಗೀತದ ಗಂಧ ಗಾಳಿ ಗೊತ್ತಿಲ್ಲದ, ಮತ್ತು ಸಂಗೀತ ಬಲ್ಲ ಸ್ಪರ್ಧಿಗಳೂ ಇದ್ದರು. ಎಲ್ಲಾ ರೀತಿಯ ಪ್ರತಿಭೆಗಳನ್ನು ಸಮಾನವಾಗಿ ಪ್ರೋತ್ಸಾಹಿಸುವ ಧ್ಯೇಯ ನಮ್ಮದು. ಗಾಯನದ ಬಗೆಗಿನ ಜ್ಞಾನ, ಅದರ ಹಿಂದಿನ ವಿಜ್ಞಾನವನ್ನು ತಿಳಿಸಿ, ಸಂಗೀತಶಾಸ್ತ್ರದ ಪರಿಚಯ, ಶಾರೀರಿಕ ಪೋಷಣೆಯ ಜತೆಗೆ ಆಂಗಿಕ, ಮಾನಸಿಕ ಚಾತುರ್ಯದ ಪರಿಚಯ, ತರಬೇತಿ ಸಹ ಇಲ್ಲಿ ನೀಡಿದ್ದೇವೆ.

ಗಾಯನದ ಕ್ರಮಾನುಗತಿಗಳನ್ನು ತಿಳಿಸಿ, ಗೀತೆಯ ಸನ್ನಿವೇಷ, ಹಾವಭಾವ, ಸಾಹಿತ್ಯ, ಸಂಗೀತ ಸಂಯೋಜನೆ ಎಲ್ಲದರ ತರಬೇತಿ ನೀಡಿದ ಬಳಿಕ ವಾದ್ಯವೃಂದದ ಜತೆಗೆ ಅಭ್ಯಾಸ ಮಾಡಿಸಲಾಗುತ್ತಿದೆ ಎಂದು ಧ್ವನಿ ಸಂರಕ್ಷಣೆಯಲ್ಲಿ ಪರಿಣಿತರಾದ ‘ವೈಸ್‌ಗುರು’ ಮತ್ತು ಸ್ಪರ್ಧಿಗಳ ಮೆಂಟರ್‌ ಆದ ಪ್ರೊ.ಸುಚೇತನ ರಂಗಸ್ವಾಮಿ ತರಬೇತಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಹಂಸಲೇಖ ಅವರ ಮೆಚ್ಚುಗೆ ಮತ್ತು ಆಯ್ಕೆ ಮೇರೆಗೆ 5 ವರ್ಷದ ಬೇಲೂರಿನ ನೇಹಾ, ತನ್ನ ಪುಟ್ಟ ಕಂಠದಿಂದ ಸ್ಪೇಷಲ್‌ ಕಂಟೆಸ್ಟಂಟ್‌ ಆಗಿ ಫೈನಲ್‌ನಲ್ಲೂ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. 

ತುಂಬಾ ಕಠಿಣವಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಅಂತಿಮವಾಗಿ ಗೆಲುವು ಯಾರ ಪಾಲಾಗಲಿದೆ ಎನ್ನುವುದು ಎಲ್ಲ ಸಂಗೀತ ಪ್ರೇಮಿಗಳಲ್ಲೂ ಕುತೂಹಲ ಉಂಟು ಮಾಡಿರುವುದಂತು ಅಕ್ಷರಶಃ ನಿಜ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry