ಸಂತಾನಕ್ಕಾಗಿ ಒದಗಿದ ಪಾಯಸ

7

ಸಂತಾನಕ್ಕಾಗಿ ಒದಗಿದ ಪಾಯಸ

Published:
Updated:
ಸಂತಾನಕ್ಕಾಗಿ ಒದಗಿದ ಪಾಯಸ

ರಾವಣನ ಸಂಹಾರಕ್ಕಾಗಿ ದೇವತೆಗಳು ಪ್ರಾರ್ಥಿಸಿದ್ದುದನ್ನು ಕೇಳಿದ ಶ್ರೀಮಹಾವಿಷ್ಣು ಅವರನ್ನು ಉದ್ದೇಶಿಸಿ ಹೀಗೆ ಹೇಳಿದ:

‘ಎಲೈ ದೇವತೆಗಳೆ ಹೆದರಬೇಡಿರಿ! ನಿಮ್ಮ ಹಿತಕ್ಕೋಸ್ಕರ ನಾನು ಯುದ್ಧದಲ್ಲಿ ರಾವಣನನ್ನು ಸಂಹರಿಸುತ್ತೇನೆ. ಅವನ ಮಕ್ಕಳನ್ನೂ ಮಂತ್ರಿಗಳನ್ನೂ ಬಂಧುಗಳನ್ನೂ ಕೊಲ್ಲುವೆ. ಅವನು ಕ್ರೂರ; ದುರಾತ್ಮ; ದೇವತೆಗಳಿಗೂ ಋಷಿಗಳಿಗೂ ಭಯಂಕರ. ಅವನನ್ನು ಸಂಹರಿಸಿದಮೇಲೆ ಹನ್ನೊಂದು ಸಾವಿರ ವರ್ಷಗಳವರೆಗೆ ಭೂಮಿಯನ್ನು ಪಾಲಿಸುತ್ತ ಮನುಷ್ಯ ಲೋಕದಲ್ಲಿ ವಾಸಿಸುವೆ.’

ಮಹಾವಿಷ್ಣುವಿನ ಅಭಯವನ್ನು ಕೇಳಿ ದೇವತೆಗಳಿಗೆ ಸಂತೋಷವಾಯಿತು.

‘ಮನುಷ್ಯನಾಗಿ ನಾನು ಎಲ್ಲಿ ಅವತರಿಸಬೇಕು’  – ಹೀಗೆಂದು ಮಹಾವಿಷ್ಣು ಆಲೋಚಿಸಿದ. ಅವನು ತನ್ನನ್ನು ತಾನೇ ನಾಲ್ಕು ಅಂಶಗಳನ್ನಾಗಿ ವಿಭಾಗಿಸಿ
ಕೊಂಡನಂತೆ. ದಶರಥನ ಮಗನಾಗಿ ಜನಿಸಲು ತೀರ್ಮಾನಿಸಿದ. ‘ದೇವತೆಗಳೇ, ಆ ರಾಕ್ಷಸರ ರಾಜನಾದ ರಾವಣನನ್ನು ಹೇಗೆ ಸಂಹರಿಸಲಿ’ ಎಂದು ದೇವತೆಗಳನ್ನೇ, ತನಗೆ ಗೊತ್ತಿದ್ದರೂ, ಪ್ರಶ್ನಿಸಿದನಂತೆ! ಆಗ ರಾವಣನ ತಪಸ್ಸು, ಮನುಷ್ಯನಲ್ಲದೆ ತನಗೆ ಬೇರೆ ಯಾರಿಂದಲೂ ಸಾವು ಬರದಂತೆ ಅವನು ಬ್ರಹ್ಮನಿಂದ ವರವನ್ನು ಪಡೆದುಕೊಂಡದ್ದು – ಎಲ್ಲವನ್ನೂ ದೇವತೆಗಳು ಮಹಾವಿಷ್ಣುವಿಗೆ ಹೇಳಿದರು.

ಹೀಗೆ ದೇವತೆಗಳು ದೇವಲೋಕದಲ್ಲಿ ಸಭೆಯನ್ನು ನಡೆಸುತ್ತಿರಲು, ಇತ್ತ ದಶರಥನು ಮಾಡುತ್ತಿದ್ದ ಪುತ್ರ ಕಾಮೇಷ್ಟಿಯಾಗವೂ ನಡೆದಿತ್ತು.

ಯಾಗವು ಸಮಾಪ್ತಿಯ ಹಂತಕ್ಕೆ ಬಂದಿತ್ತು. ಯಜ್ಞಕುಂಡದ ಅಗ್ನಿಜ್ವಾಲೆಗಳ ನಡುವೆ ದಿವ್ಯಪುರುಷನೊಬ್ಬ ಕಾಣಿಸಿಕೊಂಡ. ಅವನ ಕಾಂತಿಯು ಕಣ್ಣು ಕೋರೈಸುವಂತಿತ್ತು. ಕಪ್ಪುಬಣ್ಣ; ಕೆಂಪುಬಟ್ಟೆಯನ್ನು ಧರಿಸಿದ್ದಾನೆ; ಕಣ್ಣುಗಳು ಕೆಂಪಾಗಿವೆ; ಗಡ್ಡ–ಮೀಸೆಗಳು ಸಿಂಹದ ಕೇಸರಗಳಂತಿವೆ; ಲಕ್ಷಣವಾಗಿದ್ದಾನೆ; ದಿವ್ಯವಾದ ಆಭರಣಗಳನ್ನು ಧರಿಸಿದ್ದಾನೆ; ಶಕ್ತಿಶಾಲಿಯಾದ ಶರೀರ. ಅವನ ಕೈಯಲ್ಲಿ ಒಂದು ದೊಡ್ಡ ಚಿನ್ನದ ಪಾತ್ರೆಯಿದೆ. ಅದಕ್ಕೆ ಬೆಳ್ಳಿಯ ಮುಚ್ಚಳ. ಪ್ರೀತಿಯ ಹೆಂಡತಿಯನ್ನು ಗಂಡನನ್ನು ಹೇಗೆ ಆಲಂಗಿಸಿಕೊಳ್ಳುವನೋ ಹಾಗೆ ಅವನು ಆ ಪಾತ್ರೆಯನ್ನು ಎರಡು ತೋಳುಗಳಿಂದ ಆವರಿಸಿ ಹಿಡಿದುಕೊಂಡಿದ್ದಾನೆ. ಆ ಪಾತ್ರೆಯಲ್ಲಿ ದಿವ್ಯವಾದ ಪಾಯಸವಿದೆ.

ಆ ದಿವ್ಯಪುರುಷ ದಶರಥನನ್ನು ಉದ್ದೇಶಿಸಿ ‘ಎಲೈ ರಾಜ! ನನ್ನನ್ನು ಪ್ರಜಾಪತಿಯೇ ಕಳುಹಿಸಿದ್ದಾನೆ’ ಎಂದನು.

ದಶರಥ ಕೈಮುಗಿದುಕೊಂಡು ನಿಂತಿದ್ದಾನೆ. ‘ನಿನ್ನನ್ನು ಹೇಗೆ ಸತ್ಕರಿಸಬೇಕೆಂದು ತಿಳಿಸು’ ಎಂದು ಕೇಳಿಕೊಂಡ. ಆಗ ಆ ದಿವ್ಯಪುರುಷನು ‘ದಶರಥ! ತೆಗೆದುಕೋ. ದೇವತೆಗಳಿಂದ ಸಿದ್ಧವಾಗಿರುವ ಪಾಯಸವಿದು. ನೀನು ದೇವತೆಗಳನ್ನು ಆರಾಧಿಸಿದ್ದರ ಫಲವಾಗಿ ಇದು ನಿನಗೆ ದೊರೆತಿದೆ. ಇದು ನಿನಗೆ ಸಂತಾನಭಾಗ್ಯವನ್ನು ಕರುಣಿಸುತ್ತದೆ. ಜೊತೆಗೆ ಇದು ಆರೋಗ್ಯಕಾರಿಯೂ ಸಂಪತ್ಕರವೂ ಹೌದು. ಇದನ್ನು ನಿನ್ನ ಪತ್ನಿಯರಿಗೆ ಕೊಡು’ ಎಂದ. ಪಾಯಸದ ಪಾತ್ರೆಯನ್ನು ಸ್ವೀಕರಿಸಿದ ದಶರಥನು ಸಂತೋಷದಿಂದ ಉಬ್ಬಿಹೋದ. ದಿವ್ಯಪುರುಷ
ನಿಗೆ ತಲೆಬಾಗಿ ಆ ಬಂಗಾರದ ಪಾತ್ರೆಯನ್ನು ಸ್ವೀಕರಿಸಿದ. ಅನಂತರ ಅಗ್ನಿಜ್ವಾಲೆಗಳ ನಡುವೆ ಪ್ರಜಾಪತಿಯ ದೂತ ಆ ದಿವ್ಯಪುರುಷ ಮರೆಯಾದ.

ಈ ಎಲ್ಲ ಘಟನೆಗಳನ್ನೂ ನೋಡುತ್ತಿದ್ದ ದಶರಥನ ಮಡದಿಯರ ಅಂತರಂಗದಲ್ಲಿ ಹರ್ಷವೋ ಹರ್ಷ! ರಾಣಿಯರ ಮುಖದ ಕಾಂತಿಯಿಂದ ಇಡಿಯ ಅಂತಃಪುರವೇ ಬೆಳಗಿತು.

ದಶರಥ ಮೊದಲಿಗೆ ಕೌಸಲ್ಯೆಯ ಅಂತಃಪುರಕ್ಕೆ ನಡೆದ. ದಿವ್ಯಪಾಯಸದಲ್ಲಿ ಅರ್ಧ ಭಾಗದಷ್ಟನ್ನು ಅವಳಿಗೆ ಕೊಡುತ್ತ ‘ನಿನಗೆ ಮಗನನ್ನು ಕರುಣಿಸುವ ಈ ದಿವ್ಯವಾದ ಪಾಯಸವನ್ನು ಸೇವಿಸು’ ಎಂದ. ಉಳಿದುದರಲ್ಲಿ ಅರ್ಧ ಭಾಗವನ್ನು ಸುಮಿತ್ರೆಗೆ ಕೊಟ್ಟು, ಅನಂತರ ಉಳಿದುದನ್ನು ಕೈಕೇಯಿಗೂ ಕೊಟ್ಟ.

ಹೀಗೆ ಮೂವರು ರಾಜಪತ್ನಿಯರು ಆ ಪಾಯಸವನ್ನು ಭಕ್ಷಿಸಿದ ಫಲವಾಗಿ ಗರ್ಭವನ್ನು ಧರಿಸಿದರು. ಈ ವಿಷಯ ತಿಳಿದು ದಶರಥನಿಗೆ ಸಂತೋಷವಾಯಿತು. ಸ್ವರ್ಗದಲ್ಲಿ ಇಂದ್ರನೂ ಸಂತುಷ್ಟನಾದನಂತೆ!

* * *

ದಶರಥನು ಹಂಚಿದ ಆ ದಿವ್ಯವಾದ ಪಾಯಸ ಅವನ ರಾಣಿಯರಲ್ಲಿ ಯಾರಿಗೆ ಎಷ್ಟು ಸೇರಿತು? ಇದನ್ನು ಮುಂದೆ ನೋಡೋಣ.

ರಾಮಾಯಣವು ಪ್ರಾಚೀನ ಭಾರತೀಯ ಸಂಸ್ಕೃತಿಯ ವಿಶ್ವಕೋಶವೂ ಹೌದು –  ಎನ್ನುವುದನ್ನು ಆಗಾಗ ನೋಡುತ್ತಬಂದಿದ್ದೇವೆ. ಅಲ್ಲಿ ಬರುವ ಎಷ್ಟೋ ಮಾತುಗಳಿಗೆ ವಿಸ್ತೃತವಾದ ಅರ್ಥಪರಂಪರೆಯೇ ಇದೆ. ಇಲ್ಲಿಯವರೆಗಿನ ಕೆಲವೊಂದು ವಿವರಗಳನ್ನು ಇಲ್ಲಿ ನೋಡೋಣ.

ಮೊದಲಿಗೆ ‘ಆಚಾರ್ಯ’ – ಈ ಶಬ್ದವನ್ನು ನೋಡೋಣ. ಅಶ್ವಮೇಧಯಾಗಕ್ಕೆ ಯಾರೆಲ್ಲ ಬಂದಿದ್ದರು ಎಂದು ಹೇಳುವಾಗ ಹಲವರು ಆಚಾರ್ಯರೂ ಬಂದಿದ್ದರು ಎಂಬ ವಿವರ ಬಂದಿದೆ. ಈ ಶಬ್ದ ಒಂದು ಪಾರಿಭಾಷಿಕಪದವೇ ಹೌದು. ಎಲ್ಲರೂ ಆಚಾರ್ಯರಲ್ಲ; ಆ ಪದವಿಗೆ ನಿರ್ದಿಷ್ಟ ಅರ್ಹತೆಗಳಿವೆ ಎನ್ನುತ್ತದೆ ಶಾಸ್ತ್ರ. ಸಾಮಾನ್ಯವಾಗಿ ನಾವು ಆಚಾರ್ಯ, ಉಪಾಧ್ಯಾಯ ಮತ್ತು ಗುರು – ಈ ಪದಗಳ ಅರ್ಥವನ್ನು ಒಂದೇ ಎಂದು ಎಣಿಸುತ್ತೇವೆ. ಆದರೆ ಶಾಸ್ತ್ರೀಯ ನಿರ್ವಚನ ಈ ಮೂರು ಶಬ್ದಗಳಿಗೂ ಬೇರೆ ಬೇರೆ ಇದೆ. ಆಚಾರ್ಯ ಯಾರು – ಎನ್ನುವುದಕ್ಕೆ:

ಉಪನೀಯ ತು ಯಃ ಶಿಷ್ಯಂ ವೇದಮಧ್ಯಾಪಯೇದ್ದ್ವಿಜಃ |

ಸಕಲ್ಪಂ ಸರಹಸ್ಯ ಚ ತಮಾಚಾರ್ಯಂ ಪ್ರಚಕ್ಷತೇ || ಎಂದರೆ, ‘ಯಾರು ಶಿಷ್ಯನಿಗೆ ಉಪನಯನವನ್ನು ಮಾಡಿ ಅವನಿಗೆ ಸಮಸ್ತ ವೇದ–ವೇದಾಂಗಗಳನ್ನು ಅವುಗಳ ಅಂತರಾರ್ಥಸಹಿತವಾಗಿ ಕಲಿಸುತ್ತಾನೋ, ಅಂಥವನು ಆಚಾರ್ಯ ಎನಿಸಿಕೊಳ್ಳುತ್ತಾನೆ.’

ಉಪಾಧ್ಯಾಯನನ್ನು ಶಾಸ್ತ್ರ ಲಕ್ಷಣೀಕರಿಸಿರುವುದು ಹೀಗೆ:

ಏಕದೇಶಂ ತು ವೇದಸ್ಯ ವೇದಾಂಗಾನ್ಯಪಿ ವಾ ಪುನಃ |

ಯೋsಧ್ಯಾಪಯತಿ ವ್ಯತ್ಯರ್ಥಮುಪಾಧ್ಯಾಯಃ ಸ ಉಚ್ಯತೇ ||

‘ಯಾರು ಜೀವನೋಪಾಯದ ವೃತ್ತಿಯನ್ನಾಗಿ ಅಂಗೀಕರಿಸಿ, ವೇದವನ್ನು, ವೇದಾಂಗವನ್ನು ಭಾಗಶಃ ಕಲಿಸುತ್ತಾನೋ ಅವನು ಉಪಾಧ್ಯಾಯ ಎನಿಸಿಕೊಳ್ಳುತ್ತಾನೆ.’

ಹಾಗಾದರೆ ಗುರು ಯಾರು?

ನಿಷೇಕಾದೀನಿ ಕರ್ಮಾಣಿ ಯಃ ಕರೋತಿ ಯಥಾವಿಧಿ|

ಸಂಭಾವಯತಿ ಚಾನ್ನೇನ ವಿಪ್ರೋ ಗುರುರುಚ್ಯತೇ || ‘ನಿಷೇಕ ಮುಂತಾದ ಸಂಸ್ಕಾರಕರ್ಮಗಳನ್ನು ಶಾಸ್ತ್ರೋಕ್ತವಾಗಿ ಮಾಡಿಸುತ್ತಲೂ ಮಾಡುತ್ತಲೂ ಯಾರು ಅನ್ನವಿತ್ತು ಕಾಪಾಡುವನೋ ಅವನು ಗುರು ಎನಿಸಿಕೊಳ್ಳುತ್ತಾನೆ.’

ಹೀಗೆಯೇ ಶಿಕ್ಷಕ, ಕುಲಪತಿ – ಶಬ್ದಗಳಿಗೂ ಶಾಸ್ತ್ರೀಯವಾದ ಅರ್ಥವಿದೆ. ಮಾತ್ರವಲ್ಲ, ಶಿಷ್ಯನೆಂದರೆ ಯಾರು – ಎನ್ನುವುದನ್ನೂ ಅವು ನಿರ್ದೇಶಿ
ಸುತ್ತವೆ. ಹೀಗಾಗಿ ಪ್ರಾಚೀನ ವಾಙ್ಮಯವನ್ನು ಅರ್ಥಮಾಡಿ
ಕೊಳ್ಳಲು ವಿಶಾಲ ಅಧ್ಯಯನದ ಅನಿವಾರ್ಯವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ನಾವು ನಿತ್ಯವ್ಯವಹಾರದಲ್ಲಿ ಯಾವ ಅರ್ಥದಲ್ಲಿ ಮಾತುಗಳನ್ನು ಬಳಸುತ್ತೇವೆಯೋ ಅವು ಅದೇ ಅರ್ಥದಲ್ಲಿ ಈ ವಾಙ್ಮಯದಲ್ಲಿ ಬಳಕೆಯಾಗಿರುತ್ತವೆ ಎಂದು ಊಹಿಸುವುದು ತಪ್ಪಾಗುತ್ತದೆ. ಬ್ರಹ್ಮ, ಧರ್ಮ, ದೇವ, ಆತ್ಮ, ಸಂಸ್ಕಾರ, ಯಜ್ಞ, ಯಾಗ, ಇಷ್ಟ, ಯೋಗ, ಕ್ಷೇಮ, ಬ್ರಾಹ್ಮಣ, ಶೂದ್ರ, ಋಷಿ, ಸತ್ಯ, ಶಾಸ್ತ್ರ, ವೇದ, ಪುರುಷಾರ್ಥ, ಕಾಮ, ಅಧ್ಯಾತ್ಮ – ಹೀಗೆ ನೂರಾರು ಪ್ರಾಚೀನಪದಗಳನ್ನು ಇಂದಿಗೂ ಬಳಸುತ್ತಿದ್ದೇವೆ, ದಿಟ. ಆದರೆ ಅವುಗಳ ಮೂಲಾರ್ಥಕ್ಕೂ ನಮ್ಮ ಇಂದಿನ ಬಳಕೆಗೂ ಎಷ್ಟೋ ಸಂದರ್ಭದಲ್ಲಿ ಹೊಂದಿಕೆಯಾಗದು. ಇಂಥ ಪದಗಳು ಸಂದರ್ಭನಿಷ್ಟವೂ ಆಗಿರುತ್ತವೆ. ಹೀಗಾಗಿ ಅವುಗಳಿಗೆ ಅರ್ಥಮಾಡುವಾಗ ಎಚ್ಚರಿಕೆ ಬೇಕಾಗುತ್ತದೆ; ಅಧ್ಯಯನದ ನೆರವೂ ಬೇಕಾಗುತ್ತದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry