ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ‍ಪಾಶ್ಚಾತ್ಯ ತತ್ತ್ವಜ್ಞಾನ

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಗ್ರೀಕ್‌ತತ್ತ್ವಜ್ಞಾನವೇ ಪ್ರಾಚೀನ ಪಾಶ್ಚಾತ್ಯ ತತ್ತ್ವಜ್ಞಾನದ ಮೂಲ ಎಂದು ಈ ಮೊದಲು ನೋಡಿದ್ದೇವೆ. ಆದರೆ ಪಾಶ್ಚಾತ್ಯ ತತ್ತ್ವಜ್ಞಾನ ಅಂದಿನಿಂದಲೂ ನಿರಂತರವಾಗಿ ಬೆಳೆಯುತ್ತಲೇ ಬಂದಿದೆ. ಆಧುನಿಕ ಪಾಶ್ಚಾತ್ಯ ತತ್ತ್ವಜ್ಞಾನದ ಸ್ವರೂಪವನ್ನು ಕುರಿತು ಜಿ. ಹನುಮಂತರಾವ್‌ ಅವರು ಹೀಗೆಂದಿದ್ದಾರೆ:

ಪ್ರಾಚೀನ ಪಾಶ್ಚಾತ್ಯತತ್ತ್ವ ಪ್ರಕೃತಿಕೇಂದ್ರವಾದುದು. ಮಧ್ಯಯುಗದ ತತ್ತ್ವ ಈಶ್ವರಕೇಂದ್ರವಾದುದು. ಆಧುನಿಕತತ್ತ್ವ ಜೀವನಕೇಂದ್ರವಾದುದು ಎಂದು ಹೇಳುವುದು ವಾಡಿಕೆಯಾಗಿದೆ. ಆಧುನಿಕ ಪಾಶ್ಚಾತ್ಯತತ್ತ್ವವನ್ನು ಜೀವತತ್ತ್ವ ಕೇಂದ್ರವಾದುದೆಂದು ಕರೆಯುವುದಕ್ಕಿಂತ ಮಾನವಕೇಂದ್ರವಾದುದೆಂದಲ್ಲಿ ಹೆಚ್ಚು ಸಂಗತ. ಪ್ರಾಚೀನ ಗ್ರೀಕ್‌ ತಾತ್ತ್ವಿಕರು ಪ್ರಕೃತಿಗೆ ಸಂಬಂಧಪಟ್ಟ ತತ್ತ್ವಕ್ಕೆ ಹೆಚ್ಚು ಗಮನಕೊಟ್ಟರು. ಮಧ್ಯಯುಗದ ತಾತ್ತ್ವಿಕರು ಈಶ್ವರನಿಗೆ ಸಂಬಂಧಪಟ್ಟ ತತ್ತ್ವಕ್ಕೆ ಹೆಚ್ಚು ಗಮನಕೊಟ್ಟರು. ಆಧುನಿಕ ತತ್ತ್ವಜ್ಞರಾದರೋ ಮಾನವಜೀವನಕ್ಕೆ ಸಂಬಂಧಪಟ್ಟ ತತ್ತ್ವಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರು, ಕೊಡುತ್ತಿದ್ದಾರೆ.

ಆಧುನಿಕ ತತ್ತ್ವದ ಆರಂಭ ಕಾಲ ಕ್ರಿ.ಶ. ಹದಿನಾರನೆಯ ಶತಮಾನ. ಇದು ಪ್ರತಿಭಟನೆಯ ಕಾಲ. ಕಲೆ, ರಾಜಕೀಯ, ಮತ, ತತ್ತ್ವ– ಈ ಎಲ್ಲ ವಿಚಾರಗಳಲ್ಲೂ ಮಧ್ಯಯುಗದ ರೀತಿ–ನೀತಿಗಳಿಗೆ ಪ್ರತಿಭಾಶಾಲಿಗಳಾದವರು ಎದುರುಬಿದ್ದ ಕಾಲ. ಕ್ರೈಸ್ತಗುರು ಪೋಪನ ಅಧಿಕಾರವನ್ನು ಯರೋಪಿನ ರಾಜರೂ ಜನರೂ ಸೇರಿ ಪ್ರತಿಭಟಿಸಿ ಮಠದ ಆಶ್ರಯವನ್ನು ಕೋರದೆ, ರಾಜಕೀಯವನ್ನು ಲೌಕಿಕವಾಗಿ ಮಾರ್ಪಡಿಸಲು ಪಣ ತೊಟ್ಟರು. ಕೇವಲ ಲೌಕಿಕ ದೃಷ್ಟಿಯಿಂದ ರಾಜಕೀಯ ತತ್ತ್ವವನ್ನು ನಿರೂಪಿಸಲು ಮೊಟ್ಟಮೊದಲಿಗೆ ಪ್ರಯತ್ನ ಮಾಡಿದವ ನಿಕೊಲೊ ಮೆಕಿಯವೆಲ್ಲಿ (1469–1527). ಆತ ಬರೆದ ಪ್ರಿನ್ಸ್ (‘ರಾಜಕುಮಾರ’) ಎಂಬ ಗ್ರಂಥದಲ್ಲಿ ರಾಜಕೀಯದಲ್ಲೂ ಜ್ಞಾನಾನ್ವೇಷಣಕಾರ್ಯದಲ್ಲೂ ಮತಾಧಿಕಾರಿಗಳ ಅತಿಕ್ರಮ ಪ್ರವೇಶವನ್ನು ಖಂಡಿಸಿದ. ರಾಷ್ಟ್ರದ ಮತ್ತು ಜನರ ಮುಖಂಡನಾದ ರಾಜನ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ. ಜೀನ್‌ ಬೋಡಿನ್‌ (1530–1596) ಎಂಬ ರಾಜ್ಯಶಾಸ್ತ್ರಜ್ಞ ಜನರು ರಾಜರೊಡನೆ ಏರ್ಪಡಿಸಿಕೊಂಡ ಒಪ್ಪಂದವೇ ರಾಜನ ಅಧಿಕಾರಕ್ಕೆ ಆಶ್ರಯವೆಂದು ಸಾರಿದ. ಜೊಹಾನಸ್‌ ಅಲ್‌ತೂಸಿಯಸ್ (1557–1638) ಜನರೊಡನೆ ಮಾಡಿಕೊಂಡ ಒಪ್ಪಂದವನ್ನು ಮುರಿದ ರಾಜನನ್ನು ಜನ ಪಟ್ಟದಿಂದ ಉರುಳಿಸಬಹುದೆಂದೂ ಗಲ್ಲಿಗೇರಿಬಹುದೆಂದೂ ಘೋಷಿಸಿದ. ನ್ಯಾಯದ ಹಕ್ಕು ಮಾನವನಿಗೆ ಸ್ವಾಭಾವಿಕವಾದ, ಹುಟ್ಟುಹಕ್ಕು, ದೇವರಿಗೆ ಕೂಡ ಈ ಹಕ್ಕನ್ನು ಕಸಿದುಕೊಳ್ಳುವ ಹಕ್ಕಿಲ್ಲವೆಂದು ಹ್ಯೂಗೊ ಗ್ರೋಸಿಯಸ್ (1583–1645) ವಾದಿಸಿದ. ಮಾನವರು ಪಾಪಿಗಳು, ಮಾನವನ ಲೌಕಿಕ ಜೀವನ ಹೇಯವಾದ ಜೀವನವೆಂಬ ಭಾವನೆಗಳನ್ನು ತೊರೆದು ಕವಿಗಳು ಕಲೆಗಾರರು ಸಾಂಸಾರಿಕ ಜೀವನವನ್ನು ತಮ್ಮ ಕಾವ್ಯ ಹಾಗೂ ಕಲೆಗಳ ವಸ್ತುವಾಗಿ ಮಾಡಿಕೊಂಡರು. ಅಂಥ ಜೀವನವನ್ನು ಪ್ರತಿಬಿಂಬಿಸಿದ ಗ್ರೀಕ್ ಸಾಹಿತ್ಯಕ್ಕೆ ಮತ್ತು ಕಲೆಗೆ ಪ್ರಾಶಸ್ತ್ಯ ಬಂತು. ಹದಿನಾಲ್ಕನೆಯ ಶತಮಾನದ ಒಬ್ಬ ಸಾಹಿತಿ ಪೆಟ್ರಾರ್ಚ್‌ ಲ್ಯಾಟಿನ್ ಭಾಷೆಯನ್ನು ಬಿಟ್ಟು ಮಾತೃಭಾಷೆಯಲ್ಲಿ ಕಾವ್ಯಗಳನ್ನು ಬರೆದ. ಲಿಯೋನಾರ್ಡೋ ಡಾ ವಿಂಚಿ (1452–1519), ಕೋಪರ್ನಿಕಸ್‌ (1473–1543), ಗೆಲಿಲಿಯೊ (1564–1641) ವಿಚಾರಸ್ವಾತಂತ್ರ್ಯವನ್ನು ಎತ್ತಿ ಹಿಡಿದರು. ಕ್ರೈಸ್ತಮತವಿಚಾರದಲ್ಲೂ ಮತಾಧಿಕಾರಿಗಳ ಹಂಗಿಲ್ಲದೆ ನೇರವಾಗಿ ಯೇಸುಕ್ತಿಸನ ಮಾತುಗಳಿಂದಲೇ ಪ್ರಚೋದನೆ ಪಡೆಯುವ ಹಕ್ಕು ಉಂಟೆಂದು ಮಾರ್ಟಿನ್ ಲ್ಯೂಥರ್ (1483–1546) ಸಾರಿದ. ಜೀವನದಲ್ಲಿ ಉತ್ಸಾಹ, ವ್ಯಕ್ತಿತ್ವದಲ್ಲಿ ನೆಚ್ಚಿಕೆ, ಸ್ವಪ್ರಯತ್ನದಲ್ಲಿ ಭರವಸೆ, ಸ್ವಾತಂತ್ರ್ಯದಲ್ಲಿ ಪ್ರೀತಿ, ಅನ್ವೇಷಣದಲ್ಲಿ ಆಸಕ್ತಿ – ಈ ಭಾವಗಳ ಹಿನ್ನೆಲೆಯಲ್ಲಿ ಆಧುನಿಕ ತತ್ತ್ವ ಉದಯಿಸಿತು.

ರನೆ ಡೇಕಾರ್ಟ್ (1596–1650) ಫ್ರಾನ್ಸಿನ ಪ್ರಸಿದ್ಧ ತಾತ್ತ್ವಿಕ. ಆಧುನಿಕ ತತ್ತ್ವಶಾಸ್ತ್ರದ ಜನಕ. ಕೆಲವರು ಈ ಪಟ್ಟ ನ್ಯಾಯವಾಗಿ ಫ್ರಾನ್ಸಿಸ್ ಬೇಕನ್‌ಗೆ (1561–1626) ಸಲ್ಲಬೇಕೆಂದು ಅಭಿಪ್ರಾಯಪಟ್ಟಿರುತ್ತಾರೆ. ಬೇಕನ್ ಡೇಕಾರ್ಟ್‌ಗಿಂತ ಮುಂಚೆ ಹುಟ್ಟಿದವ. ಇಬ್ಬರಿಗೂ ಸಾಮಾನ್ಯವಾದ ಕೆಲವು ಭಾವನೆಗಳಿವೆ. ಆದರೂ ಬೇಕನ್‌ ತತ್ತ್ವಶಾಸ್ತ್ರದ ಮುಖ್ಯ ಸಮಸ್ಯೆಗಳನ್ನು
ಡೇಕಾರ್ಟ್‌ನಷ್ಟು ಸ್ವಷ್ಟವಾಗಿ ನಿರೂಪಣೆ ಮಾಡಲಿಲ್ಲ. ವಿಶೇಷವಾಗಿ ವಿಜ್ಞಾನಕ್ಕೂ ವೈಜ್ಞಾನಿಕ ಅನುಗಮನ ವಿಧಾನಕ್ಕೂ (ಇಂಡಕ್ಷನ್‌) ಹೆಚ್ಚು ಗಮನ ಕೊಟ್ಟ. ಆಗಿನ ಕಾಲದಲ್ಲಿ ಅವನ ಪ್ರಭಾವ ವಿಶೇಷವಾಗಿ ಕಾಣಿಸಿಕೊಂಡದ್ದು ಆಧುನಿಕ ತರ್ಕಶಾಸ್ತ್ರದಲ್ಲಿ ಮಾತ್ರ. ಪರತತ್ತ್ವ (ಮೆಟಫಿಸಿಕ್ಸ್), ಜ್ಞಾನಮೀಮಾಂಸೆ (ಎಪಿಸ್ಟಿಮಾಲಜಿ), ಮತಮೀಮಾಂಸೆ (ಫಿಲಾಸಫಿ ಆಫ್ ರಿಲಿಜನ್) – ಈ ಮೂರರ ಮೇಲೆ ಇವನ ಪ್ರಭಾವ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈ ಮೂರರ ಮೇಲೆ ಹೆಚ್ಚು ಪ್ರಭಾವ ಬೀರಿದವ ಡೇಕಾರ್ಟ್. ಅದ್ದರಿಂದ ಡೇಕಾರ್ಟ್ ಆಧುನಿಕ ತತ್ತ್ವಶಾಸ್ತ್ರದ ಜನಕನೆಂದು ಹೇಳುವುದರಲ್ಲಿ ಹೆಚ್ಚು ಔಚಿತ್ಯವಿದೆ.

(‘ಜಿ. ಹನುಮಂತರಾಯ ಅವರ ಆಯ್ದ ಲೇಖನಗಳು’, ಸಂ.: ದೇಜಗೌ)

→ – ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT