ಬೆಮೆಲ್‌ ವಹಿವಾಟು ಹೆಚ್ಚಳ ನಿರೀಕ್ಷೆ

7
ನಾಲ್ಕನೇ ತ್ರೈಮಾಸಿಕದಲ್ಲಿ ₹ 187 ಕೋಟಿ ನಿವ್ವಳ ಲಾಭ

ಬೆಮೆಲ್‌ ವಹಿವಾಟು ಹೆಚ್ಚಳ ನಿರೀಕ್ಷೆ

Published:
Updated:
ಬೆಮೆಲ್‌ ವಹಿವಾಟು ಹೆಚ್ಚಳ ನಿರೀಕ್ಷೆ

ಬೆಂಗಳೂರು: ‘ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ಶೇ 30ಕ್ಕೂ ಅಧಿಕ ಪ್ರಮಾಣದಲ್ಲಿ ವಹಿವಾಟು ಪ್ರಗತಿ ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಭಾರತ್‌ ಅರ್ತ್‌ ಮೂವರ್ಸ್‌ ಲಿಮಿಟೆಡ್‌ನ (ಬೆಮೆಲ್‌)  ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಡಿ.ಕೆ. ಹೋಟಾ ತಿಳಿಸಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷಕ್ಕೆ ವಿವಿಧ ಉಪಕರಣಗಳ ತಯಾರಿಕೆಗೆ ₹ 6,700 ಕೋಟಿ ಮೌಲ್ಯದ ಬೇಡಿಕೆ ಬಂದಿದೆ. ವಹಿವಾಟಿಗೆ ಉತ್ತೇಜನಕಾರಿಯಾದ ಹಲವು ಸಂಗತಿಗಳಿದ್ದು, ಸಂಸ್ಥೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಗುರಿ ಸಾಧಿಸುವ ವಿಶ್ವಾಸವಿದೆ. ಬಾಹ್ಯಾಂತರಿಕ್ಷ ಮತ್ತು ಗರಿಷ್ಠ ವೇಗದ ರೈಲು ಕ್ಷೇತ್ರದ ಬಗ್ಗೆ ಹೆಚ್ಚು ಗಮನ ನೀಡಲಾಗುವುದು’ ಎಂದು ಹೇಳಿದರು.

ಶುಕ್ರವಾರ ಇಲ್ಲಿ 2017–18ನೇ ಹಣಕಾಸು ವರ್ಷದ ಆರ್ಥಿಕ ಸಾಧನೆ ಪ್ರಕಟಿಸಿ ಮಾತನಾಡಿದ ಅವರು, ‘ಹಲವು ಸವಾಲುಗಳ ಹೊರತಾಗಿಯೂಉತ್ತಮ ಪ್ರಗತಿ ಸಾಧ್ಯವಾಗಿದೆ. ಸಂಸ್ಥೆಯ ನಿವ್ವಳ ಮಾರಾಟ ವಹಿವಾಟು ₹ 3,246 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 30 ರಷ್ಟು ಪ್ರಗತಿ ಸಾಧ್ಯವಾಗಿದೆ’ ಎಂದರು.

‘ಗಣಿಗಾರಿಕೆ ಮತ್ತು ನಿರ್ಮಾಣ ವಹಿವಾಟು ಶೇ 11 ರಷ್ಟು ಬೆಳವಣಿಗೆ ಕಂಡಿದೆ. ರೈಲು ಮತ್ತು ಮೆಟ್ರೊ ವಹಿವಾಟು ಶೇ 114 ರಷ್ಟು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, 244 ಮೆಟ್ರೊ ಬೋಗಿಗಳನ್ನು ತಯಾರಿಸಲಾಗಿದೆ. ಹೀಗಾಗಿ ತೆರಿಗೆ ಪೂರ್ವ ಲಾಭವು 5 ವರ್ಷಗಳ ಬಳಿಕ ₹ 164 ಕೋಟಿಗೆ ಅಂದರೆ ಶೇ 67 ರಷ್ಟು ಪ್ರಗತಿ ಸಾಧ್ಯವಾಗಿದೆ.

‘ಹಿಂದಿನ ಹಣಕಾಸು ವರ್ಷದಲ್ಲಿ ರೈಲು ಮತ್ತು ಮೆಟ್ರೊ ವಿಭಾಗದಲ್ಲಿ ಮಹತ್ವದ ಮೈಲುಗಲ್ಲು ಸಾಧ್ಯವಾಗಿದೆ. 240ಕ್ಕೂ ಅಧಿಕ ಮೆಟ್ರೊ ಬೋಗಿಗಳನ್ನು ತಯಾರಿಸಲಾಗಿದೆ. ಸಂಸ್ಥೆಯು ವರ್ಷವೊಂದರಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಕೆ ಮಾಡಿರುವುದು ಇದೇ ಮೊದಲು. ಇದರಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) 150 ಬೋಗಿಗಳನ್ನು ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಲ್ಲಿ ಮೂರು ಬೋಗಿಗಳನ್ನು ಹಸ್ತಾಂತರಿಸುವ ಸಿದ್ಧತೆ ನಡೆದಿದೆ.

‘ಕೋಲ್ಕತ್ತ ಮೆಟ್ರೊ ರೈಲ್‌ ಕಾರ್ಪೊರೇಷನ್‌ಗೆ (ಕೆಎಂಆರ್‌ಸಿಎಲ್‌) ಹಾಗೂ ಮೂರನೇ ಹಂತದ ಯೋಜನೆಗೆ ಬೋಗಿಗಳನ್ನು ಒದಗಿಸಲು ತಯಾರಿಕೆ ಹೆಚ್ಚಿಸಲಾಗಿದೆ’ ಎಂದು ವಿವರಿಸಿದರು.

2017–18ರ ನಾಲ್ಕನೇ ತ್ರೈಮಾಸಿಕದಲ್ಲಿ ₹ 187.6 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 186.4 ಕೋಟಿ ನಿವ್ವಳ ಲಾಭ ಗಳಿಸಿತ್ತು. ವರಮಾನ ₹ 1,345 ಕೋಟಿಯಿಂದ ₹ 1,264 ಕೋಟಿಗೆ ಇಳಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry