ಸದನದ ಘನತೆ ಕಾಪಾಡಿ

7

ಸದನದ ಘನತೆ ಕಾಪಾಡಿ

Published:
Updated:
ಸದನದ ಘನತೆ ಕಾಪಾಡಿ

ಬೆಂಗಳೂರು: ‘ಕೋರಂ ಬೆಲ್‌ ಹೊಡೆಯುತ್ತಾ ಇದ್ದರೂ ಶಾಸಕರು ಬರಲಿಲ್ಲ ಎಂಬ ಸ್ಥಿತಿಯನ್ನು ದಯವಿಟ್ಟು ತರಬೇಡಿ. ಸದನದ ಘನತೆಯನ್ನು ಕಾಪಾಡಿ. ಭಾಷೆಯನ್ನು ವಿಕೃತಗೊಳಿಸಬೇಡಿ. ಅರ್ಥಗರ್ಭಿತವಾಗಿ ವರ್ತಿಸಿ...

ಶಾಸಕರಿಗೆ ನೂತನ ವಿಧಾನಸಭಾಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ ಅವರ ಕಿವಿಮಾತಿದು. ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನಸಭೆ ಪವಿತ್ರ ಅಂಗ. ಜನಪ್ರತಿನಿಧಿಗಳು ನಾವು ಎಂಬ ಪ್ರಜ್ಞೆ ಎಲ್ಲ ಶಾಸಕರ ಮನಸ್ಸಿನಲ್ಲಿ ಇರಬೇಕು’ ಎಂದರು.

‘ಈ ಹಿಂದೆ ಪುಂಡರು, ಬಲಾಢ್ಯರು ಸಮಾಜದ ಮೇಲೆ ಹಿಡಿತ ಸಾಧಿಸಿದ್ದರು. ಪುಂಡರು ದೊರೆಗಳಾಗುತ್ತಿದ್ದರು. ಅವರಿಗಿಂತ ದೊಡ್ಡ ಪುಂಡರು ಚಕ್ರವರ್ತಿಗಳಾಗುತ್ತಿದ್ದರು. ಕೆಲವು ರಾಜರು ಭಯಭಕ್ತಿಯಿಂದ ಕೆಲಸ ಮಾಡಿದರೆ, ಇನ್ನು ಕೆಲವರು ಮನಸೋ ಇಚ್ಛೆ ಕೆಲಸ ಮಾಡುತ್ತಿದ್ದರು. ಬ್ರಿಟನ್‌ನಲ್ಲಿ ರಾಜರು ವಿಲಾಸಿ ಜೀವನ ನಡೆಸುತ್ತಿದ್ದರು. ರಾಜರ ಇಂತಹ ಧೋರಣೆ ವಿರುದ್ಧ ಜನ ತಿರುಗಿ ಬಿದ್ದರು. 1630ರಲ್ಲಿ ಪಾರ್ಲಿಮೆಂಟ್‌ನಲ್ಲೇ ರಾಜನ ಶಿರಚ್ಛೇದ ಮಾಡಿದರು. ಇಲ್ಲಿಂದ ಪ್ರಭುತ್ವದ ವಿರುದ್ಧ ಪ್ರತಿರೋಧ ಶುರುವಾಯಿತು’ ಎಂದರು.

‘ಇಂದಿರಾ ಗಾಂಧಿ ಅವರಿಂದಾಗಿ ನಾನು ರಾಜಕೀಯಕ್ಕೆ ಬರುವಂತಾಯಿತು. ರಾಜಕಾರಣದ ಮೊದಲ ಹೆಜ್ಜೆ ಹೇಳಿಕೊಟ್ಟವರು ದೇವರಾಜ ಅರಸು. ರಾಜಕೀಯ ಸಂಸ್ಕಾರ ತಿಳಿಸಿದವರು ಕೆ.ಎಚ್.ರಂಗನಾಥ್‌. ಮೊದಲ ಅವಕಾಶ ನೀಡಿದವರು ಎಚ್‌.ಡಿ.ದೇವೇಗೌಡರು’ ಎಂದು ನೆನಪಿಸಿಕೊಂಡರು.

‘ನನ್ನ ಅಣ್ಣ ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು. ಪ್ರೌಢ ಶಿಕ್ಷಣಕ್ಕಾಗಿ ನಾನು ಬೆಂಗಳೂರಿಗೆ ಬಂದೆ. ಆಗ ಕೈ ಹಿಡಿದು ಮುನ್ನಡೆಸಿದವರು ಅವರು. ನನಗೆ ಆಗ ಚಪ್ಪಲಿ ಹಾಕಿಕೊಳ್ಳಲು ಕೂಡಾ ಬರುತ್ತಿರಲಿಲ್ಲ. ಇಂಗ್ಲಿಷ್‌ ಗೊತ್ತಿರಲಿಲ್ಲ. ಇಂಗ್ಲಿಷ್‌ ಪುಸ್ತಕ ತೆಗೆಸಿಕೊಟ್ಟು ದಿನಕ್ಕೆ ಐದು ಶಬ್ದಗಳನ್ನು ಕಲಿಯುವಂತೆ ತಿಳಿಸಿದರು. ಅಣ್ಣ–ಅತ್ತಿಗೆಯ ಕೃಪೆಯಿಂದಾಗಿ ಈ ಸ್ಥಾನಕ್ಕೆ ಬಂದೆ’ ಎಂದು ಸ್ಮರಿಸಿದರು.

‘1994ರಲ್ಲಿ ನಾನು ಸಭಾಧ್ಯಕ್ಷ ಆಗಿದ್ದೆ. ಆಗ ಜಗದೀಶ ಶೆಟ್ಟರ್‌ ಶಾಸಕರಾಗಿದ್ದರು. ಗುರುಗಳೇ ಎಂದು ಸಂಬೋಧಿಸುತ್ತಿದ್ದರು. ಬಳಿಕ ಅವರು ವಿರೋಧ ಪಕ್ಷದ ನಾಯಕರಾದರು, ಸಚಿವರಾದರು, ಮುಖ್ಯಮಂತ್ರಿಯೂ ಆದರು. ಡಿ.ವಿ. ಸದಾನಂದ ಗೌಡರೂ ಹಾಗೆಯೇ. ಅವರೂ ಬಲು ಬೇಗ ಬಡ್ತಿ ಪಡೆದರು. ಆದರೆ, ಬಡ್ತಿ ಪಡೆಯುವ ತಂತ್ರವನ್ನು ಮಾತ್ರ ಗುರುವಿಗೆ ಹೇಳಿಕೊಡಲೇ ಇಲ್ಲ’ ಎಂದು ಹೇಳಿದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತು.

ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದಕ್ಕೆ: ಸಭಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶಾಸಕ ಎಸ್‌.ಸುರೇಶ್‌ ಕುಮಾರ್‌ ಗುರುವಾರ ನಾಮಪತ್ರ ಸಲ್ಲಿಸಿದ್ದರು. ಕಲಾಪ ಆರಂಭವಾಗುತ್ತಿದ್ದಂತೆ ಶಾಸಕ ಸುನಿಲ್‌ ಕುಮಾರ್‌, ಸಭಾಧ್ಯಕ್ಷ ಸ್ಥಾನಕ್ಕೆ ಅವರ ಹೆಸರನ್ನು ಸೂಚಿಸುವುದಿಲ್ಲ ಎಂದು ಪ್ರಕಟಿಸಿದರು. ಹೀಗಾಗಿ ರಮೇಶ್‌ ಕುಮಾರ್‌ ಅವಿರೋಧವಾಗಿ ಆಯ್ಕೆಯಾದರು. ‘48 ಗಂಟೆಗಳಿಂದ ವಿಚಿತ್ರ ಮನಸ್ಥಿತಿಯಲ್ಲಿದ್ದೆ. ಈಗ ನಿರಾಳವಾಗಿದೆ’ ಎಂದು ಸುರೇಶ್‌ ಕುಮಾರ್‌ ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ, ‘ತಂದೆ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ರಮೇಶ್‌ ಕುಮಾರ್ ಸಭಾಧ್ಯಕ್ಷರಾಗಿದ್ದರು. ನಾನು ಮುಖ್ಯಮಂತ್ರಿಯಾದಾಗಲೂ ಅವರೇ ಸಭಾಧ್ಯಕ್ಷ. ಇದು ಕಾಕತಾಳೀಯ. ನಿಮ್ಮ ನಡವಳಿಕೆಯಿಂದ ಸದನದ ಗೌರವ ಹೆಚ್ಚಿಸಿದ್ದೀರಿ’ ಎಂದರು.

ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ‘ಸಾಕಷ್ಟು ಮಂದಿ ಹೊಸಬರು ಸದನಕ್ಕೆ ಬಂದಿದ್ದಾರೆ. ಅವರಿಗೆ ಮಾತನಾಡಲು ಹೆಚ್ಚು ಅವಕಾಶ ನೀಡಬೇಕು’ ಎಂದು ವಿನಂತಿಸಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ನಾವು ವಕೀಲ ವೃತ್ತಿ ಮಾಡಿದವರು. ಆದರೆ, ವಕೀಲ ವೃತ್ತಿ ಮಾಡದಿದ್ದರೂ ರಮೇಶ್‌ ಕುಮಾರ್ ಉತ್ತಮ ಕ್ರಿಮಿನಲ್‌ ವಕೀಲ ಆಗಬಲ್ಲರು’ ಎಂದರು.

ಎರಡನೇ ಬಾರಿ ಸಭಾಧ್ಯಕ್ಷ

ಶ್ರೀನಿವಾಸಪುರ ಕ್ಷೇತ್ರದಿಂದ 10 ಬಾರಿ ಸ್ಪರ್ಧಿಸಿರುವ ರಮೇಶ್‌ ಕುಮಾರ್‌ ಆರು ಬಾರಿ ಗೆದ್ದಿದ್ದಾರೆ. 1978ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. 1994–1999ರ ಅವಧಿಯಲ್ಲಿ ಸಭಾಧ್ಯಕ್ಷರಾಗಿದ್ದರು.

‘ಮನುಷ್ಯ ಒರಟ, ಮೋಸಗಾರ ಅಲ್ಲ’

‘ಯಡಿಯೂರಪ್ಪ ಅವರು ಒರಟ. ಆದರೆ, ಮೋಸಗಾರ ಅಲ್ಲ’ ಎಂದು ರಮೇಶ್‌ ಕುಮಾರ್ ಶ್ಲಾಘಿಸಿದರು.

ನನ್ನ ಒಳ್ಳೆತನದಿಂದಲೇ ಅವರ ಒರಟುತನವನ್ನು ತಿಳಿಗೊಳಿಸಬಲ್ಲೆ ಎಂಬ ವಿಶ್ವಾಸ ಇದೆ ಎಂದರು.

‘ಬಿಜೆಪಿಯವರು ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂಬ ವಿಶ್ವಾಸ ಇತ್ತು. ನಿಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ಕರೆ ಮಾಡಿ ತಿಳಿಸಿದರು’ ಎಂದರು.

‘ಸಿದ್ದರಾಮಯ್ಯ ಸಲಹೆ ಪಡೆಯಿರಿ’

‘ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಉತ್ತಮ ಬಜೆಟ್‌ ಮಂಡಿಸಿದ್ದಾರೆ. ವಿತ್ತೀಯ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ಅವರ ಸಲಹೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಡೆಯಬೇಕು. ಈ ಮಾತನ್ನು ರಾಜತಾಂತ್ರಿಕ ತಜ್ಞನಾಗಿ ಹೇಳುತ್ತಿದ್ದೇನೆ’ ಎಂದು ರಮೇಶ್‌ ಕುಮಾರ್ ಹೇಳಿದರು.

****

‘ನೀವು ನನ್ನ ಹೃದಯಕ್ಕೆ ಹತ್ತಿರದಲ್ಲಿರುವವರು (ವಿರೋಧ ಪಕ್ಷದವರು). ನಿಮಗೆ ಹೆಚ್ಚು ಅವಕಾಶ ನೀಡುತ್ತೇನೆ</p>

-ಕೆ.ಆರ್‌. ರಮೇಶ್‌ ಕುಮಾರ್‌

          ವಿಧಾನಸಭಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry