ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50ಕೆ ಟೆನಿಸ್‌ ಟೂರ್ನಿ: ರಾಜ್ಯದ ಅಲೋಕ್‌ಗೆ ಪ್ರಶಸ್ತಿ ‘ಟ್ರಿಪಲ್‌’

ಮಹಿಳೆಯರ ಸಿಂಗಲ್ಸ್‌ನಲ್ಲಿ ಅಪೂರ್ವಾಗೆ ಜಯ
Last Updated 25 ಮೇ 2018, 19:27 IST
ಅಕ್ಷರ ಗಾತ್ರ

ದಾವಣಗೆರೆ: ಎರಡನೇ ಶ್ರೇಯಾಂಕದ ಆಟಗಾರ, ಕರ್ನಾಟಕದ ಅಲೋಕ್‌ ಆರಾಧ್ಯ ಶುಕ್ರವಾರ ಇಲ್ಲಿ ಮುಕ್ತಾಯಗೊಂಡ 50ಕೆ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌, ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಎದುರಾಳಿಗಳನ್ನು ಸೋಲಿಸಿ ‘ಟ್ರಿಪಲ್‌ ಪ್ರಶಸ್ತಿ’ ಸಾಧನೆ ಮಾಡಿದರು.

ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಮತ್ತು ಜಿಲ್ಲಾ ಟೆನಿಸ್‌ ಸಂಸ್ಥೆ ಹಮ್ಮಿಕೊಂಡಿರುವ ಟೂರ್ನಿಯ ಐದನೇ ದಿನ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಈ ಟೂರ್ನಿಯಿಂದ 22 ಪಾಯಿಂಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ಪುರುಷರ ಸಿಂಗಲ್ಸ್‌ನಲ್ಲಿ ಅಲೋಕ್‌ 6–1, 6–1ರಲ್ಲಿ ತೆಲಂಗಾಣದ ಹೇವಂತ್‌ ವಿ. ಕುಮಾರ್‌ ಅವರನ್ನು ಸೋಲಿಸಿ ಮೊದಲ ಬಾರಿಗೆ ರಾಷ್ಟ್ರೀಯ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಮೊದಲ ಸೆಟ್‌ನಲ್ಲಿ ಏಸ್‌, ಆಕರ್ಷಕ ಸರ್ವೀಸ್‌ ಹಾಗೂ ಉತ್ತಮ ಪ್ಲೇಸ್‌ಮೆಂಟ್‌ ಮೂಲಕ ಅಲೋಕ್‌ ಎರಡು ಗೇಮ್‌ಗಳನ್ನು ಬ್ರೇಕ್‌ ಮಾಡಿ 6–1ರಲ್ಲಿ ಮುನ್ನಡೆ ಸಾಧಿಸಿದರು.

ಎರಡನೇ ಸೆಟ್‌ನಲ್ಲೂ ಆಕ್ರಮಣಕಾರಿ ಆಟ ತೋರಿದ ಅವರು, ಎದುರಾಳಿಗೆ ಯಾವುದೇ ಅವಕಾಶ ನೀಡದೆ ಎರಡು ಮೂರು ಗೇಮ್‌ಗಳನ್ನು ಬ್ರೇಕ್‌ ಮಾಡಿ 6–1ರಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಮಹಿಳೆಯರ ಸಿಂಗಲ್ಸ್‌: ಅಗ್ರ ಶ್ರೇಯಾಂಕದ ಆಟಗಾರ್ತಿ, ರಾಜ್ಯದ ಅಪೂರ್ವಾ ಎಸ್‌. 6–0, 6–2ರಲ್ಲಿ ನೇರ ಸೆಟ್‌ಗಳಿಂದ ತೆಲಂಗಾಣದ ಬಿಪಾಷಾ ಅವರನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಮೊದಲ ಸೆಟ್‌ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅಪೂರ್ವಾ ಎದುರಾಳಿಗೆ ಯಾವುದೇ ರೀತಿಯ ಅವಕಾಶ ನೀಡದೆ ಮೂರು ಗೇಮ್‌ಗಳನ್ನು ಬ್ರೇಕ್‌ ಮಾಡಿ 6–0ಯಲ್ಲಿ ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ನಲ್ಲೂ ಆತ್ಮವಿಶ್ವಾಸದಿಂದ ಆಡಿದ ಅವರು ಎರಡು ಗೇಮ್‌ಗಳನ್ನು ಬ್ರೇಕ್‌ ಮಾಡಿ 6–2ರಲ್ಲಿ ಗೆದ್ದರು.

ಪುರುಷರ ಡಬಲ್ಸ್‌: ಆತಿಥೇಯರಾದ ಅಲೋಕ್‌– ರಿಭವ್‌ ರವಿಕಿರಣ್‌ 7–6 (7–4), 6–3ರಲ್ಲಿ ಶಾಹುಲ್‌ ಅನ್ವರ್‌ (ಕರ್ನಾಟಕ)– ಉಮೇರ್‌ ಶೇಖ್‌ (ಆಂದ್ರಪ್ರದೇಶ) ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.

ಮೊದಲ ಸೆಟ್‌ನ ಆರಂಭದಲ್ಲಿ ಉತ್ತಮವಾಗಿ ಆಡಿದ ಎರಡೂ ತಂಡಗಳು 6–6ರಲ್ಲಿ ಸಮಬಲ ಪ್ರದರ್ಶಿಸಿದವು. ಟೈಬ್ರೇಕರ್‌ನಲ್ಲಿ ಉತ್ತಮ ಹೊಂದಾಣಿಕೆಯೊಂದಿಗೆ ಅಲೋಕ್‌– ರಿಭವ್‌ ಅವರು 7–4 ಪಾಯಿಂಟ್‌ಗಳಲ್ಲಿ ಸೆಟ್‌ ಗೆದ್ದರು.

ಎರಡನೇ ಸೆಟ್‌ನಲ್ಲೂ ಎದುರಾಳಿಗೆ ಅವಕಾಶ ನೀಡದ ಅಲೋಕ್‌– ರಿಭವ್‌ ಜೋಡಿ ಒಂದು ಗೇಮ್‌ ಬ್ರೇಕ್‌ ಮಾಡಿ 6–3ರಲ್ಲಿ ಟ್ರೋಫಿಯನ್ನು ಗೆದ್ದುಕೊಂಡಿತು.

ಮಿಶ್ರ ಡಬಲ್ಸ್‌: ರಾಜ್ಯದ ಅಲೋಕ್‌ ಆರಾಧ್ಯ– ನಿಕಿಟಾ ಪಿಂಟೊ 9–8(7–4)ರಲ್ಲಿ ಆತಿಥೇಯರಾದ ರಿಭವ್‌ ರವಿಕಿರಣ್‌– ಖುಷಿ ಸಂತೋಷ್‌ ಅವರನ್ನು ಪರಾಭವಗೊಳಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ಬೆಸ್ಟ್‌ ಆಫ್‌ 17 ಗೇಮ್ಸ್‌ನ ಪಂದ್ಯದ ಆರಂಭದಲ್ಲಿ ಉತ್ತಮ ಆಟವಾಡಿದ ರಿಭವ್‌– ಖುಷಿ ಒಂದು ಹಂತದಲ್ಲಿ 8–6ರಲ್ಲಿ ಮುನ್ನಡೆ ಸಾಧಿಸಿದ್ದರು.

ಆದರೆ, ಚೇತರಿಸಿಕೊಂಡ ಅಲೋಕ್‌– ನಿಕಿಟಾ ಒಂದು ಗೇಮ್‌ ಬ್ರೇಕ್‌ ಸೇರಿ ಸತತ ಎರಡು ಗೇಮ್‌ಗಳನ್ನು ಗೆದ್ದುಕೊಂಡು 8–8ರಲ್ಲಿ ಸಮಬಲ ಸಾಧಿಸಿದರು. ಟೈ ಬ್ರೇಕರ್‌ ನಲ್ಲಿ ಅಲೋಕ್‌ ಅವರ ಆಕ್ರಮಣಕಾರಿ ರಿಟರ್ನ್‌ ಹಾಗೂ ಏಸ್‌ನಿಂದಾಗಿ 7–4 ಪಾಯಿಂಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT