‘ಗಣಿಗಾರಿಕೆ ಕಾನೂನು ತಿದ್ದುಪಡಿ ಶೀಘ್ರ’

7
ಕಾರ್ಮಿಕರ ಸುರಕ್ಷತೆ ಹಾಗೂ ಪರಿಹಾರಕ್ಕೆ ಒತ್ತು: ನಿರ್ದೇಶಕರ ಭರವಸೆ

‘ಗಣಿಗಾರಿಕೆ ಕಾನೂನು ತಿದ್ದುಪಡಿ ಶೀಘ್ರ’

Published:
Updated:
‘ಗಣಿಗಾರಿಕೆ ಕಾನೂನು ತಿದ್ದುಪಡಿ ಶೀಘ್ರ’

ಬೆಂಗಳೂರು: ‘ಗಣಿಗಳಲ್ಲಿ ದುಡಿಯುವ ಕಾರ್ಮಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗಣಿಗಾರಿಕೆಗೆ ಸಂಬಂಧಿಸಿದ ಕಾನೂನುಗಳಿಗೆ ಸೂಕ್ತ ತಿದ್ದುಪಡಿ ತರಲಾಗುವುದು’ ಎಂದು ಕೇಂದ್ರ ಗಣಿ ಸುರಕ್ಷತೆ ಮತ್ತು ಕಾರ್ಮಿಕ ಇಲಾಖೆಯ ಪ್ರಧಾನ ನಿರ್ದೇಶಕ ಪ್ರಶಾಂತ ಕುಮಾರ್‌ ಸರ್ಕಾರ್‌ ಹೇಳಿದರು.

ರಾಜ್ಯ ಗಣಿ ಸುರಕ್ಷಾ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಗಣಿಗಾರಿಕೆಗೆ ಸಂಬಂಧಿಸಿದ ಕಾನೂನುಗಳು ದುರ್ಬಲಗೊಂಡಿದ್ದು, ಗಣಿ ಸುರಕ್ಷಾ ಸಂಘದೊಂದಿಗೆ ಚರ್ಚಿಸಿ ಬದಲಾವಣೆ ಮಾಡಲಾಗುವುದು’ ಎಂದರು.

‘ಗಣಿಗಾರಿಕೆ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದ್ದು, ಗಣಿ ಉದ್ಯಮಿಗಳು, ಕಾರ್ಮಿಕರ ಜೀವ ರಕ್ಷಣೆ ಮತ್ತು ಸುರಕ್ಷತೆಗೆ ಒತ್ತು ಕೊಡಬೇಕು. ಈ ಬಗ್ಗೆ ಉದ್ಯಮಿಗಳಿಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ರಾಜಸ್ಥಾನದಲ್ಲಿ ಕೆಲವು ಗಣಿ ಕಾರ್ಮಿಕರು ಸಿಲಿಕೋಸಿಸ್‌ ರೋಗಕ್ಕೆ ತುತ್ತಾಗಿದ್ದಾರೆ. ಅವರಿಗೆ ಪರಿಹಾರ ಕೊಡಿಸಲು ನಿಯಮಗಳು ಅಡ್ಡಿಯಾಗಿವೆ. ಹೀಗಾಗಿ, ನಿಯಮಗಳನ್ನು ಕಠಿಣಗೊಳಿಸುವ ಬಗ್ಗೆಯೂ ಇಲಾಖೆ ಯೋಚಿಸುತ್ತಿದೆ’ ಎಂದು ಹೇಳಿದರು.

’ಉದ್ದಿಮೆದಾರರು ಹಾಗೂ ಈ ಕ್ಷೇತ್ರಕ್ಕೆ ಸಂಬಂಧಿಸಿದ ಸಂಘ– ಸಂಸ್ಥೆಗಳೊಂದಿಗೆ ಚರ್ಚಿಸಿ ರೂಪಿಸಲಾದ ತಿದ್ದುಪಡಿ ನಿಯಮಗಳನ್ನು ಈಗಾಗಲೇ ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಎಲ್ಲಾ ಸಲಹೆ–ಸೂಚನೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲಾಗಿದೆ’ ಎಂದು ಅವರು ನುಡಿದರು.

ಬಳ್ಳಾರಿ ವಿಭಾಗದ ಗಣಿ ಸುರಕ್ಷಾ ನಿರ್ದೇಶಕ ಮನೀಶ್ ಮುರ್ಕುಟೆ, ‘ಗಣಿಗಾರಿಕೆಯಲ್ಲಿ ಆಧುನಿಕ ಯಂತ್ರಗಳ ಅಳವಡಿಕೆ, ಮುನ್ನೆಚ್ಚರಿಕೆ ಕ್ರಮ, ಕಾರ್ಮಿಕರ ತರಬೇತಿಯಂಥ ಕಾರ್ಯಕ್ರಮಗಳಿಂದ ಅಪಘಾತಗಳ ಪ್ರಮಾಣ ಇಳಿಕೆಯಾಗಿದೆ. ಮೂರು ದಶಕಗಳ ಹಿಂದೆ ಶೇ 1.25 ಇದ್ದ ಅಪಘಾತಗಳ ಪ್ರಮಾಣ ಈಗ ಶೇ 0.4ಕ್ಕೆ ತಗ್ಗಿದೆ. ಕಲ್ಲಿದ್ದಲು ಗಣಿಗಳಲ್ಲಿ ಅವಘಡಗಳು ಸಂಭವಿಸುತ್ತಿದ್ದು, ಅವುಗಳನ್ನು ಶೂನ್ಯ ಪ್ರಮಾಣಕ್ಕಿಳಿಸುವ ಗುರಿ ಹೊಂದಿದ್ದೇವೆ’ ಎಂದರು.

ಗಣಿಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು 400 ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಸುರಕ್ಷತೆ, ಸುಸ್ಥಿರ ಅಭಿವೃದ್ಧಿ ಹಾಗೂ ವೈಜ್ಞಾನಿಕ ಗಣಿಗಾರಿಕೆ ಕುರಿತ ವಿಚಾರಗೋಷ್ಠಿಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry