₹ 1.5 ಕೋಟಿ ಆಸ್ತಿ ಒಡೆಯ ಪ್ರಹ್ಲಾದ್‌

7

₹ 1.5 ಕೋಟಿ ಆಸ್ತಿ ಒಡೆಯ ಪ್ರಹ್ಲಾದ್‌

Published:
Updated:
₹ 1.5 ಕೋಟಿ ಆಸ್ತಿ ಒಡೆಯ ಪ್ರಹ್ಲಾದ್‌

ಬೆಂಗಳೂರು: ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಪ್ರಹ್ಲಾದ್‌ (ಬಾಬು) ₹ 1.51 ಕೋಟಿಯ ಒಡೆಯ. ಅವರಿಗೆ ಸಾಲವೂ ಇಲ್ಲ. ಅವರ ಬಳಿ ವಾಹನವೂ ಇಲ್ಲ.

ಜಯನಗರ ನಾಲ್ಕನೇ ಬ್ಲಾಕ್‌ ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದ ಬಳಿಕ ಪ್ರಹ್ಲಾದ್‌ ಅವರು ಜಯನಗರದ ಬಿಡಿಎ ಸಂಕೀರ್ಣದಲ್ಲಿರುವ ಬಿಬಿಎಂಪಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಪ್ರಹ್ಲಾದ್‌ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿರುವ ಮಾಹಿತಿ ಪ್ರಕಾರ, ಅವರ ಬಳಿ ಕೇವಲ ₹ 15 ಸಾವಿರ ನಗದು ಇದೆ. ಅವರು ಎರಡು ಕಡೆ ಸ್ಥಿರಾಸ್ತಿ ಹೊಂದಿದ್ದು, ಅದರ ಮೌಲ್ಯ ₹ 50 ಲಕ್ಷ. ಪತ್ನಿ  ಎನ್‌.ಅನ್ನಪೂರ್ಣ ಬಳಿ 75 ಗ್ರಾಂ ಚಿನ್ನ ಹಾಗೂ 1 ಕೆ.ಜಿ. ಬೆಳ್ಳಿ ಸಾಮಗ್ರಿಗಳಿವೆ. ಇವುಗಳ ಮೌಲ್ಯ

₹ 3.35 ಲಕ್ಷ.

ಪ್ರಹ್ಲಾದ್‌ ಅವರು ಮ್ಯೂಚುವಲ್‌ ಫಂಡ್‌ನಲ್ಲಿ  ₹ 26 ಲಕ್ಷ, ಅವರ ಪತ್ನಿ ₹ 13 ಲಕ್ಷ ಹಾಗೂ ಪುತ್ರ ₹ 19 ಲಕ್ಷ ಹೂಡಿಕೆ ಮಾಡಿದ್ದಾರೆ. ಅಭ್ಯರ್ಥಿಯು ಅಂಚೆಕಚೇರಿಯಲ್ಲಿ ₹ 5 ಲಕ್ಷ ಹಾಗೂ ಪತ್ನಿ ₹ 1 ಲಕ್ಷ ಹೂಡಿಕೆ ಮಾಡಿದ್ದಾರೆ. ದಂಪತಿ ₹ 9 ಲಕ್ಷ ಮೊತ್ತದ ಅಂಚೆ ವಿಮೆ ಮಾಡಿಸಿದ್ದಾರೆ. ಅಭ್ಯರ್ಥಿಯು ₹ 10.68 ಲಕ್ಷ, ಅವರ ಪತ್ನಿ ₹ 7.22 ಲಕ್ಷ ಹಾಗೂ ಅವರ ಪುತ್ರಿ ಬಿ.ಪಿ.ಅದಿತಿ ₹ 3.25 ಲಕ್ಷ ಮೊತ್ತವನ್ನು ಪಿಪಿಎಫ್‌ ಖಾತೆಯಲ್ಲಿ ಹೊಂದಿದ್ದಾರೆ.

ಸತತ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿಜಯ್‌ ಕುಮಾರ್‌ ಅವರನ್ನೇ ಬಿಜೆಪಿಯು ಈ ಬಾರಿಯೂ ಕಣಕ್ಕಿಳಿಸಿತ್ತು. ಅವರು ಅಕಾಲಿಕ ನಿಧನ ಹೊಂದಿದ್ದರಿಂದ ಚುನಾವಣಾ ಆಯೋಗವು ಇಲ್ಲಿನ ಚುನಾವಣೆಯನ್ನು ಮುಂದೂಡಿತ್ತು. ಪಕ್ಷದ ಸ್ಥಳೀಯ ಮುಖಂಡರಾದ ಸಿ.ಕೆ.ರಾಮಮೂರ್ತಿ, ಪಾಲಿಕೆ ಸದಸ್ಯ ಎನ್‌.ನಾಗರಾಜ್‌, ಮಾಜಿ ಮೇಯರ್‌ ಎಸ್‌.ಕೆ.ನಟರಾಜ್‌, ಚಿತ್ರ ನಟಿ ತಾರಾ ಅವರು ಇಲ್ಲಿನ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಅನುಕಂಪದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ವಿಜಯ್‌ ಕುಮಾರ್‌ ತಮ್ಮ ಪ್ರಹ್ಲಾದ್‌ ಅವರಿಗೆ ಬಿ–ಫಾರಂ ನೀಡಿತ್ತು. ಇದು ಇಲ್ಲಿನ ಕೆಲವು ಪಾಲಿಕೆ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು.

ಪಾಲಿಕೆ ಸದಸ್ಯರ ಜೊತೆ ಸಂಧಾನ: ಅಭ್ಯರ್ಥಿ ಆಯ್ಕೆ ವಿರುದ್ಧ ಬಹಿರಂಗ ವಾಗಿಯೇ ಅಸಮಾಧಾನ ತೋಡಿಕೊಂಡಿದ್ದ ಪಾಲಿಕೆ ಸದಸ್ಯರನ್ನು ಸಮಾಧಾನ ಪಡಿಸಲು ಶಾಸಕ ಆರ್‌.ಅಶೋಕ ಮನೆಯಲ್ಲಿ ಸಂಧಾನ ಸಭೆ ನಡೆಯಿತು. ಕಾರ್ಪೊರೇಟರ್‌ ಗಳಾದ ಆರ್‌.ಗೋವಿಂದ ನಾಯ್ಡು, ಕೆ.ಎನ್‌.ಲಕ್ಷ್ಮೀ ನಟರಾಜ್‌, ದೀಪಿಕಾ ಎಲ್‌.ಮಂಜುನಾಥ ರೆಡ್ಡಿ, ಎಂ.ಮಾಲತಿ ಹಾಗೂ ಎಚ್‌.ಸಿ.ನಾಗರತ್ನ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಭೈರಸಂದ್ರ ವಾರ್ಡ್‌ನ ಸದಸ್ಯ ಎನ್‌.ನಾಗರಾಜು ಅವರು ಸಭೆಯಲ್ಲಿ ಭಾಗವಹಿಸಲಿಲ್ಲ.

ತಮ್ಮನ್ನು ವಿಶ್ವಾಸಕ್ಕೆ ಪಡೆಯದೆಯೇ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವ ಬಗ್ಗೆ ಪಾಲಿಕೆ ಸದಸ್ಯರು ಸಭೆಯಲ್ಲಿ ತೀವ್ರ ಅಸಮಾಧಾನ ತೋಡಿಕೊಂಡರು. ‘ಒಂದು ವೇಳೆ ಪಕ್ಷದ ಅಭ್ಯರ್ಥಿ ಸೋತರೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ. ಆಭ್ಯರ್ಥಿ ಆಯ್ಕೆಗೆ ಮುನ್ನವೇ ಎಲ್ಲರ ಸಲಹೆ ಪಡೆಯುತ್ತಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ’ಎಂದು ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಹಾಗೂ ಆರ್‌.ಅಶೋಕ

ಅವರನ್ನು ತರಾಟೆಗೆ ತೆಗೆದುಕೊಂಡರು.

‘ತಪ್ಪಾಗಿರುವುದು ನಿಜ ಎಂದು ನಾಯಕರು ಒಪ್ಪಿಕೊಂಡಿದ್ದಾರೆ. ಏನೇ ಬೇಸರವಿದ್ದರೂ ಹೊಟ್ಟೆಗೆ ಹಾಕಿಕೊಳ್ಳಿ. ಇದು ಪಕ್ಷದ ಪಾಲಿಗೆ ಪ್ರತಿಷ್ಠೆಯ ಚುನಾವಣೆ.

ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಶಕ್ತಿ ಮೀರಿ ಶ್ರಮಿಸಿ ಎಂದು ಮನವಿ ಮಾಡಿದ್ದಾರೆ. ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸಲು ನಾವೆಲ್ಲ ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry