ದೇಶದಲ್ಲಿ ಏಳು ಸಾವಿರ ಸೊಳ್ಳೆ ಪ್ರಭೇದ 

7
ಕಲಬುರ್ಗಿಯ ವಲಯ ಕೀಟಶಾಸ್ತ್ರಜ್ಞೆ ಗಂಗೋತ್ರಿ ಚಿಮ್ಮನಸೂರ್ ಹೇಳಿಕೆ

ದೇಶದಲ್ಲಿ ಏಳು ಸಾವಿರ ಸೊಳ್ಳೆ ಪ್ರಭೇದ 

Published:
Updated:

ಬೀದರ್: ‘ವಿಶ್ವದಲ್ಲಿ ಹನ್ನೊಂದು ಸಾವಿರ ಸೊಳ್ಳೆ ಪ್ರಭೇದಗಳಿವೆ. ಭಾರತದಲ್ಲಿ ಏಳು ಸಾವಿರ ಪ್ರಭೇದಗಳು ಕಾಣಸಿಗುತ್ತವೆ. ಅರಣ್ಯ ಪ್ರದೇಶದಲ್ಲಿರುವ ಸೊಳ್ಳೆಗಳಿಗಿಂತ ಜನವಸತಿ ಪ್ರದೇಶ ದಲ್ಲಿರುವ ಸೊಳ್ಳೆಗಳು ಇತ್ತೀಚಿನ ದಿನಗಳಲ್ಲಿ ಮಾರಣಾಂತಿಕವಾಗಿ ಪರಿಣಮಿಸುತ್ತಿವೆ’ ಎಂದು ಕಲಬುರ್ಗಿಯ ವಲಯ ಕೀಟಶಾಸ್ತ್ರಜ್ಞೆ ಗಂಗೋತ್ರಿ ಚಿಮ್ಮನಸೂರ್ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಡೆಂಗಿ ಹಾಗೂ ಚಿಕೂನ್‌ಗುನ್ಯ ನಿಯಂತ್ರಣ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಶೇ 80ರಿಂದ 90 ರಷ್ಟು ಸೊಳ್ಳೆಗಳು ಕಾಡುಗಳಲ್ಲಿ ಹುಟ್ಟಿ ಅಲ್ಲಿಯೇ ಅಂತ್ಯ ಕಾಣುತ್ತವೆ. ಶೇ 10 ರಿಂದ 20 ರಷ್ಟು ಸೊಳ್ಳೆಗಳು ಮಾತ್ರ ಮನುಷ್ಯನ ಸಂಪರ್ಕಕ್ಕೆ ಬರುತ್ತವೆ. ಹೆಣ್ಣು ಸೊಳ್ಳೆಗಳಿಗಿಂತ ಗಂಡು ಸೊಳ್ಳೆಗಳು ಅತಿ ವೇಗವಾಗಿ ರೆಕ್ಕೆ ಬಡಿಯುತ್ತವೆ. ಸಾಮಾನ್ಯವಾಗಿ ಸೊಳ್ಳೆಗಳಿಂದ ಹೊಮ್ಮುವ ಸದ್ದು 200-700 ಹರ್ಟ್ಸ್ ಆವರ್ತನ ಹೊಂದಿದ್ದು, ಅವುಗಳಿಂದ ಸೃಷ್ಟಿಯಾಗುವ ಕಂಪನದ ಆಧಾರದ ಮೇಲೆಯೇ ಪ್ರಭೇದ ಗುರುತಿಸಬಹುದಾಗಿದೆ’ ಎಂದು ತಿಳಿಸಿದರು.

‘ವಿಶ್ವದ 3 ಶತಕೋಟಿ ಜನರಿಗೆ ಕಾಯಿಲೆ ಹರಡುವಷ್ಟು ಪ್ರಭಾವ ಸೊಳ್ಳೆಗಳಿಗೆ ಇದೆ. ಅನಾಫೆಲಿಸ್‌ ಹೆಣ್ಣು ಸೊಳ್ಳೆಯಿಂದ ಮಲೇರಿಯಾ, ಏಡಿಎಸ್‌ನಿಂದ ಡೆಂಗಿ, ಚಿಕೂನ್‌ಗುನ್ಯ , ಕ್ಯೂಲೆಕ್ಸ್‌ ಸೊಳ್ಳೆಯಿಂದ ಮಿದುಳು ಜ್ವರ ಹಾಗೂ ಆನೆಕಾಲು ರೋಗ ಹರಡುತ್ತದೆ’ ಎಂದು ತಿಳಿಸಿದರು.

‘ವಿಶ್ವದಲ್ಲಿ ಪ್ರತಿ ವರ್ಷ 50 ರಿಂದ 100 ಕೋಟಿ ಜನ ಡೆಂಗಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ಜನ ಆಸ್ಪತ್ರೆ ಸೇರಿದರೆ 12,500 ರಿಂದ 25 ಸಾವಿರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2009ರಲ್ಲಿ ಬೀದರ್‌ ನಗರದಲ್ಲಿ ಮೊದಲ ಬಾರಿಗೆ ಆರು ಪ್ರಕರಣಗಳು ಪತ್ತೆಯಾಗಿದ್ದವು. ಜಿಲ್ಲೆಯಲ್ಲಿ 10 ವರ್ಷಗಳ ಅವಧಿಯಲ್ಲಿ 309 ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ಬೀದರ್‌ ನಗರವೊಂದರಲ್ಲೇ 203 ಜನರಿಗೆ ಡೆಂಗಿ ಇರುವುದು ಪತ್ತೆಯಾಗಿದೆ. ಸಾಮಾನ್ಯವಾಗಿ ಜುಲೈ ನಂತರ ಡೆಂಗಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಆವರು ಹೇಳಿದರು.

‘ವಿಶ್ವದ 100 ರಾಷ್ಟ್ರಗಳ 2.5 ಶತಕೋಟಿ ಜನ ಡೆಂಗಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸೊಳ್ಳೆಯ ಜೀವನ ಚಕ್ರ ಕೇವಲ 28 ದಿನಗಳು ಮಾತ್ರ. ಸೊಳ್ಳೆಗಳಿಗೆ 2 ರಿಂದ 3 ಕಿ.ಮೀ ವರೆಗೆ ಹಾರಾಡುವ ಸಾಮರ್ಥ್ಯ ಇದೆ. ಹೀಗಾಗಿ ಸೊಳ್ಳೆ ಮೂಲದಿಂದ ಬರುವ ಕಾಯಿಲೆಗಳು ಬಹುಬೇಗ ಹರಡುತ್ತವೆ’ ಎಂದು ತಿಳಿಸಿದರು.

‘ಸ್ವಚ್ಛವಾದ ನೀರಿನಲ್ಲಿ ಏಡಿಎಸ್‌ ಸೊಳ್ಳೆಗಳು ವಾಸ ಮಾಡುತ್ತವೆ. ನೀರಿನ ಟ್ಯಾಂಕ್, ಎಳನೀರು, ಪ್ಲಾಸ್ಟಿಕ್‌ ಗ್ಲಾಸ್, ಟೈರ್ ಹಾಗೂ ಮರದ ಪೊಟರೆಗಳಲ್ಲಿ ಬೆಳೆಯುತ್ತವೆ. ಪರಿಸರ ನೈರ್ಮಲ್ಯ ಹಾಗೂ ಮನೆಗಳಲ್ಲಿ ಸಂಗ್ರಹಿಸುವ ನೀರಿನ ಟ್ಯಾಂಕ್‌, ಕೊಡಗಳ ಮೇಲೆ ಮುಚ್ಚಳ ಹಾಕಬೇಕು. ಈ ಮೂಲಕ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಲೇರಿಯಾ ಅಧಿಕಾರಿ ಅನಿಲ ಚಿಂತಾಮಣಿ, ತಾಯಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ರವೀಂದ್ರ ಸಿರಸಗಿ, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ರಾಜಶೇಖರ ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುಧಾಳೆ, ಮಲ್ಲಿಕಾರ್ಜುನ ಸದಾಶಿವ ಇದ್ದರು. ಜಿಲ್ಲಾ ನೋಡಲ್‌ ತಂತ್ರಜ್ಞ ರಾಜೀವ್ ಕುಲಕರ್ಣಿ ಸ್ವಾಗತಿಸಿದರು.

ಸೊಳ್ಳೆ ನಿಯಂತ್ರಣಕ್ಕೆ ಹೊಸ ಕೆಮಿಕಲ್‌: ಸೊಳ್ಳೆಗಳ ನಿಯಂತ್ರಣಕ್ಕೆಂದೇ ಹೊಸ ಕೆಮಿಕಲ್‌ ಬಿಡುಗಡೆ ಮಾಡಲಾಗಿದೆ. ಬಟ್ಟೆ ಮಿಶ್ರಿತ ಸೊಳ್ಳೆ ಪರದೆಗಳನ್ನು ಅದರಲ್ಲಿ ಸ್ವಲ್ಪ ತೊಯ್ಯಿಸಿ ಬಳಸಬಹುದು. ಒಮ್ಮೆ ಕೆಮಿಕಲ್‌ನಲ್ಲಿ ಅದ್ದಿದರೆ ಅದರ ಪ್ರಭಾವ ಮೂರು ತಿಂಗಳ ವರೆಗೂ ಇರುತ್ತದೆ. ಸೊಳ್ಳೆಗಳು ಪರದೆಯ ಮೇಲೆ ಬಂದು ಕೂರುತ್ತಲೇ ಸಾವಿಗೀಡಾಗುತ್ತವೆ’ ಎಂದು ಗಂಗೋತ್ರಿ ಚಿಮ್ಮನಸೂರ್ ತಿಳಿಸಿದರು.

‘ಆರೋಗ್ಯ ಇಲಾಖೆಯು ಅಧಿಕ ಸೊಳ್ಳೆ ಉತ್ಪಾದನೆಯಾಗುವ ಪ್ರದೇಶ ಗಳಲ್ಲಿ ಅವುಗಳನ್ನು ಬಳಸಲು ಶಿಫಾರಸು ಮಾಡಿದೆ. ಸದ್ಯ ಅದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ’ ಎಂದು ಹೇಳಿದರು.

ಕೊಳಚೆ ನೀರಿನಲ್ಲಿ ಉತ್ಪತ್ತಿ ಯಾಗುವ ಕ್ಯೂಲೆಕ್ಸ್‌ ಸೊಳ್ಳೆಗಳ ನಿಯಂತ್ರಣಕ್ಕೆ ಡೇಟೆಕ್ಸ್‌ ಆಯಿಲ್‌ ಬಳಸಬಹುದಾಗಿದೆ. ನೀರಿನಲ್ಲಿ ಹಾಕಿ ಸಿಂಚನ ಮಾಡುವುದರಿಂದ ಸೊಳ್ಳೆಗಳು ಸಾವಿಗೀಡಾಗುತ್ತವೆ ಅಲ್ಲದೇ ಸೊಳ್ಳೆಗಳ ಕಾಟ ಕಡಿಮೆಯಾಗುತ್ತದೆ’ ಎಂದು ತಿಳಿಸಿದರು.

**

ನೈರ್ಮಲ್ಯ ಕಾಪಾಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ. ಸೊಳ್ಳೆಗಳನ್ನು ನಿಯಂತ್ರಿಸುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ

ಡಾ. ಅನಿಲ ಚಿಂತಾಮಣಿ, ಜಿಲ್ಲಾ ಮಲೇರಿಯಾ ಅಧಿಕಾರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry