ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಅರಸನ ಕೊಳಕ್ಕೆ ಬಂತು ಜೀವಕಳೆ

ಮೂರು ದಶಕಗಳ ನಂತರ ತುಂಬಿದ ಕೊಳ; ಜನರಲ್ಲಿ ಮೂಡಿದ ಹರ್ಷ
Last Updated 26 ಮೇ 2018, 9:31 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಪುರಾತನ ದೊಡ್ಡ ಅರಸನ ಕೊಳ ಬರೋಬರಿ 30ಕ್ಕೂ ಅಧಿಕ ವರ್ಷಗಳ ನಂತರ ಬಹುತೇಕ ಭರ್ತಿಯಾಗಿದೆ. ಕಾಲುವೆ ಯಲ್ಲಿ ಹರಿಯುವಂತೆ ನೀರು ಹರಿದು ಬರುತ್ತಿದ್ದು, ಸಂಪೂರ್ಣ ತುಂಬಿ ಕೋಡಿ ಬೀಳುವ ಸಾಧ್ಯತೆ ಇದೆ.

ಗಣಪತಿ ವಿಗ್ರಹವನ್ನು ವಿಸರ್ಜನೆ ಮಾಡಲು ಕೊಳವೆ ಬಾವಿ ಮೂಲಕ ಕೊಳದೊಳಗಿನ ಒಂದು ಹೊಂಡಕ್ಕೆ ನೀರು ತುಂಬಲಾಗುತ್ತಿತ್ತು. ಗಣಪತಿ ವಿಸರ್ಜನೆಯ ನಂತರ ಒಂದೆರಡು ದಿನಗಳು ಮಾತ್ರ ನೀರು ಇಲ್ಲಿರುತ್ತಿತ್ತು. ನಂತರದ ದಿನಗಳಲ್ಲಿ ಕೊಳದ ತುಂಬ ಕಸ ಕಡ್ಡಿಗಳೇ ತುಂಬಿರುತ್ತಿದ್ದವು. ಜತೆಗೆ, ಗಿಡಗಂಟಿಗಳು ಬೆಳೆದುಕೊಂಡು ಸುತ್ತಮುತ್ತಲ ನಿವಾಸಿಗಳಿಗೆ ಕಿರಿಕಿರಿಯನ್ನು ತಂದೊಡ್ಡಿತ್ತು.

ಇದೀಗ ಒಂದು ರಾತ್ರಿಯ ಮಳೆಗೆ ಕೊಳವು ಅರ್ಧಕ್ಕಿಂತಲೂ ಹೆಚ್ಚು ತುಂಬಿರುವುದು ನಿವಾಸಿಗಳಲ್ಲಿ ಸಂಭ್ರಮ ತಂದಿದೆ. ಶುಕ್ರವಾರ ಬೆಳ್ಳಂಬೆಳಿಗ್ಗೆ ಕೊಳಕ್ಕೆ ನೀರು ಹರಿದು ಬರುತ್ತಿರುವ ವಿಚಾರ ನಗರದಲ್ಲಿ ಮಿಂಚಿನಂತೆ ಹರಿ ದಾಡಿತು. ತಂಡೋಪತಂಡವಾಗಿ ಜನರು ಇಲ್ಲಿಗೆ ಬಂದು ತುಂಬುತ್ತಿರುವ ಕೊಳ ಕಂಡು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಕೆಲವರು ‘ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಕೊಳ ತುಂಬಿದ್ದು ನೋಡೇ ಇಲ್ಲ’ ಎಂದರೆ, ಮತ್ತೆ ಕೆಲವು ಹಿರಿಯರು ‘30 ವರ್ಷದ ಹಿಂದೆ ಒಮ್ಮೆ ಕೊಳ ತುಂಬಿತ್ತು’ ಎಂದು ಹೇಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಚಿಣ್ಣರು ಕೊಳಕ್ಕೆ ಕಲ್ಲೆಸೆದು ಸಂಭ್ರಮಿಸಿದರು.

ನೀರು ಎಲ್ಲಿಂದ?: ಇದುವರೆಗೂ ಹರಿದು ಬಾರದ ನೀರು ಎಲ್ಲಿಂದ ಬರುತ್ತಿದೆ ಎಂಬುದೇ ಎಲ್ಲರ ಪ್ರಶ್ನೆ ಯಾಗಿತ್ತು. ಕರಿವರದರಾಜ ಸ್ವಾಮಿ ಗುಡ್ಡದಿಂದ ಹರಿದು ಬರುವ ನೀರಿನ ಸಣ್ಣ ಝರಿಯನ್ನು ನಗರಸಭೆ ಅಭಿವೃದ್ಧಿ ಪಡಿಸಿದೆ. ಈಚೆಗೆ ಕೊಳಕ್ಕೆ ನೀರು ಸೇರುವ ಕಡೆ ಪೈಪ್‌ಲೈನ್‌ ಸಹ ಮಾಡಿದೆ. ಇದರಿಂದ ನೀರು ಸರಾಗವಾಗಿ ಹರಿದು ಬರಲು ಸಹಕಾರಿಯಾಗಿದೆ. ಜತೆಗೆ, ಮಳೆಯೂ ಹೆಚ್ಚಾಗಿ ಬಿದ್ದಿರುವುದರಿಂದ ಸುತ್ತಮುತ್ತಲ ಕಡೆಗಳಿಂದಲೂ ನೀರು ಸೇರತೊಡಗಿದೆ.

ಸ್ತ್ರೀಯರ ಬಳುವಳಿ ಈ ಕೊಳ: ದೊಡ್ಡ ಅರಸನ ಕೊಳ ನೆನ್ನೆ ಮೊನ್ನೆಯದಲ್ಲ. ಚಾಮರಾಜನಗರಕ್ಕೆ ಒಂದು ಕಾಲದಲ್ಲಿ ನೀರುಣಿಸುತ್ತಿದ್ದ ಮೂಲ ಸೆಲೆ ಇದು. ಚಾಮರಾಜನಗರ ಎಂಬ ಹೆಸರು ಬರುವುದಕ್ಕೂ ಮುನ್ನ ಇದಕ್ಕೆ ಅರಿಕುಠಾರ ಎಂಬ ಹೆಸರು ಇತ್ತು. ಆಗ ಇಲ್ಲಿ ದೊಡ್ಡ ಅರಸ ಹಾಗೂ ಚಿಕ್ಕ ಅರಸ ಎಂಬ ಸೋದರರು ಆಳ್ವಿಕೆ ಮಾಡುತ್ತಿದ್ದರು. ಇವರ ನಿಜವಾದ ಹೆಸರು ಹೇಳಲು ಕಷ್ಟವಾದ್ದರಿಂದಲೋ ಏನೋ ಜನಸಾಮಾನ್ಯರು ಇವರನ್ನು ಈ ಹೆಸರಿನಿಂದ ಕರೆಯಲಾರಂಭಿಸಿದರು. ಇವರು ಇಲ್ಲಿನ ಅಕ್ಕತಂಗಿಯರನ್ನು ಮದುವೆಯಾದರು.

ಬಳಿಕ ದೊಡ್ಡ ಅರಸ ಹಾಗೂ ಚಿಕ್ಕ ಅರಸ ತಮ್ಮ ಪತ್ನಿಯರಿಗೆ ಉಡುಗೊರೆ ಕೊಡಲು ಮುಂದಾದರು. ಆಗ ಆಕ್ಕ–ತಂಗಿಯರು ಅರಿಕುಠಾರದಲ್ಲಿದ್ದ ನೀರಿನ ಸಮಸ್ಯೆ ಕಂಡು ಎರಡು ಕೊಳಗಳನ್ನು ಕಟ್ಟಿಸಿಕೊಡಬೇಕು ಎಂದು ಕೇಳಿದರು. ಅದರಂತೆ ದೊಡ್ಡ ಅರಸು ಕಟ್ಟಿಸಿದ ಕೊಳ ದೊಡ್ಡ ಅರಸನ ಕೊಳವಾಯಿತು. ಸಂತೇಮರಹಳ್ಳಿ ವೃತ್ತದ ಬಳಿಯ ಆಂಜನೇಯಸ್ವಾಮಿ ದೇಗುಲ ಇರುವ ಸ್ಥಳದಲ್ಲಿ ಚಿಕ್ಕ ಅರಸ ಕಟ್ಟಿಸಿದ ಕೊಳ ಚಿಕ್ಕ ಅರಸನ ಕೊಳವಾಯಿತು ಎಂದು ಇಲ್ಲಿನ ಹಿರಿಯಜ್ಜ ವೆಂಕಟ್ ಅವರು ಇದರ ವೃತ್ತಾಂತವನ್ನು ತಿಳಿಸಿದರು.

ಆರಂಭದಲ್ಲಿ ಈ ಕೊಳಗಳು ಅರಿಕುಠಾರದ ಜನರಿಗೆ ಸಿಹಿ ನೀರು ಒದಗಿಸುತ್ತಿದ್ದ ಮೂಲಗಳಾಗಿದ್ದವು. ಆದರೆ, ನಗರೀಕರಣದ ಭರಾಟೆಯಲ್ಲಿ ಚಕ್ಕ ಅರಸನ ಕೊಳಕ್ಕೆ ಹರಿದು ಬರುತ್ತಿದ್ದ ನೀರನ ಮೂಲಗಳು ಸಂಪೂರ್ಣ ಬತ್ತಿ ಹೋದವು. ಇದರಿಂದ ಇದು ತನ್ನ ಸ್ವರೂಪವನ್ನೇ ಕಳೆದುಕೊಂಡಿತು. ನಂತರ, ದೊಡ್ಡ ಅರಸನ ಕೊಳವೂ ಬತ್ತತೊಡಗಿತು. ಜನರಿಗೆ ಕುಡಿಯುವ ನೀರಿನ ಇತರೆ ಮೂಲಗಳು ದೊರಕಿದಾಗ ಈ ಕೊಳ ನಿರ್ವಹಣೆ ಇಲ್ಲದೇ ಸೊರಗಿತು. ಪಕ್ಕದಲ್ಲಿದ್ದ ಕೆರೆಯು ಕ್ರೀಡಾಂಗಣ ಹಾಗೂ ಬಸ್‌ನಿಲ್ದಾಣಗಳು ಆದ ಬಳಿಕವಂತೂ ಇಲ್ಲಿ ಪಕ್ಷಿಗಳು ಗುಟುಕರಿಸಲೂ ನೀರು ಇರುತ್ತಿರಲಿಲ್ಲ.

ದೊಡ್ಡ ಅರಸನ ಕೊಳ ತುಂಬಿದ್ದಾಗ ಚಾಮರಾಜನಗರದಲ್ಲಿದ್ದ ಎಲ್ಲ ತೆರೆದ ಬಾವಿಗಳಲ್ಲೂ ನೀರು ಇರುತ್ತಿತ್ತು. ಕೊಳ ಬತ್ತಿದಾಗ ಮಾತ್ರ ಬಾವಿಗಳು ಬತ್ತುತ್ತಿದ್ದವು ಎಂದು ಪುಟ್ಟಸ್ವಾಮಪ್ಪ ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT