ಮುಂದುವರಿದ ಮಳೆಯ ಆರ್ಭಟ

7
ಅಲ್ಲಲ್ಲಿ ಉರುಳಿದ ಮರ; ಸಂಚಾರ ಅಸ್ತವ್ಯಸ್ತ

ಮುಂದುವರಿದ ಮಳೆಯ ಆರ್ಭಟ

Published:
Updated:
ಮುಂದುವರಿದ ಮಳೆಯ ಆರ್ಭಟ

ಮೈಸೂರು: ನಗರದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಶುಕ್ರವಾರ ಸಂಜೆಯಿಂದ ರಾತ್ರಿಯವರೆಗೆ ಉತ್ತಮ ಮಳೆಯಾಗಿದೆ.

ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ 4ರ ವೇಳೆಗೆ ಗಾಳಿ ಸಹಿತ ಮಳೆ ಆರಂಭವಾಯಿತು. ಮೊದಲ ಅರ್ಧ ಗಂಟೆ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯಿತು. ಆ ಬಳಿಕ ಜಿಟಿಜಿಟಿ ಮಳೆ ರಾತ್ರಿಯವರೆಗೆ ಮುಂದುವರಿಯಿತು.

ಸಂಜೆ 4 ರಿಂದ 5.30ರ ವರೆಗೆ ಸುಮಾರು 15 ಮಿ.ಮೀ. ಮಳೆಯಾಗಿದೆ. ನಗರದಲ್ಲಿ ಕಳೆದ ಒಂದು ವಾರ ರಾತ್ರಿ 8ರ ಬಳಿಕ ಮಳೆ ಸುರಿದಿತ್ತು. ಆದರೆ ಶುಕ್ರವಾರ ಬೇಗನೇ ಮಳೆ ಸುರಿದಿದ್ದರಿಂದ ಹಲವರು ಪರದಾಡುವಂತಾಯಿತು.

ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಹಲವರು ಕಚೇರಿಗಳಿಂದ ಮನೆಗೆ ತಡವಾಗಿ ತಲುಪಿದರು. ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಿಗೆ ಬರಲು ಪ್ರಯಾಣಿಕರು ಕಷ್ಟಪಟ್ಟರು. ಶಾಲಾ ಮಕ್ಕಳು ಮಳೆಯಲ್ಲಿ ನೆನೆದುಕೊಂಡು ಬಸ್ ನಿಲ್ದಾಣ ಮತ್ತು ಮನೆಯತ್ತ ಹೆಜ್ಜೆಯಿಟ್ಟ ದೃಶ್ಯಗಳು ಕಂಡುಬಂದವು.

ಕೆಲವೆಡೆ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ರಸ್ತೆ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

ಧರೆಗುರುಳಿದ ಮರ: ಮಳೆ ಹಾಗೂ ಗಾಳಿಗೆ ನಗರದ ಕೆಲವೆಡೆ ಮರಗಳು ಧರೆಗುರುಳಿದವು. ಕೆಲವು ಕಡೆ ಕೊಂಬೆಗಳು ಮುರಿದುಬಿದ್ದವು.

ಕೆ.ಆರ್‌.ಎಸ್‌ ರಸ್ತೆಯ ವಾಣಿ ವಿಲಾಸ ನೀರು ಸರಬರಾಜು ಕೇಂದ್ರ, ತಿಲಕ್‌ನಗರ, ವಾಲ್ಮೀಕಿ ರಸ್ತೆ, ಆದಿಪಂಪ ರಸ್ತೆ, ಕಾಳಿದಾಸ ರಸ್ತೆ, ಆರ್‌.ಸಿ.ಕಚೇರಿ ರಸ್ತೆ ಮತ್ತು ಯಾದವಗಿರಿಯಲ್ಲಿ ಮರಗಳು ಉರುಳಿಬಿದ್ದವು. ಪಾಲಿಕೆಯ ಅಭಯ ತಂಡದ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಗುರುವಾರ ಧಾರಾಕಾರ ಮಳೆ: ಗುರುವಾರ ರಾತ್ರಿಯೂ ನಗರದಲ್ಲಿ ಧಾರಾಕಾರ ಮಳೆ ಬಿತ್ತು. 10.30ರ ಸುಮಾರಿಗೆ ಆರಂಭವಾದ ಮಳೆ ಒಂದೂವರೆ ಗಂಟೆ ಸುರಿದಿತ್ತು. ಸುಮಾರು 9 ಮಿ.ಮೀ. ಮಳೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry