ಕಟ್ಟಿಗೆ ಅರಮನೆ ಸುತ್ತಾಡಿ ನೋಡಿ

7

ಕಟ್ಟಿಗೆ ಅರಮನೆ ಸುತ್ತಾಡಿ ನೋಡಿ

Published:
Updated:
ಕಟ್ಟಿಗೆ ಅರಮನೆ ಸುತ್ತಾಡಿ ನೋಡಿ

– ಲೋಕೇಶ್‌

ಕನ್ಯಾಕುಮಾರಿಯ ವೈಭವದ ದೃಶ್ಯವನ್ನು ಮೂರು ದಶಕಗಳ ಹಿಂದೆ ಭಾವುಕರಾಗಿ ಪುಟ್ಟಣ್ಣ ಅವರ ಸಿನೆಮಾದಲ್ಲಿ ನೋಡಿ ಆನಂದಿಸಿದ್ದೆವು. ಕಳೆದ ಮಾರ್ಚ್ ತಿಂಗಳಿನಲ್ಲಿ ಹೋಟೆಲಿನ ರೂಮಿನಲ್ಲಿ ಕುಳಿತು ವಿವೇಕಾನಂದ ರಾಕ್ ಹಾಗೂ ಪಕ್ಕದಲ್ಲೇ ಇರುವ ತಿರುವಳ್ಳಿಯಾರ್‌ ಪ್ರತಿಮೆಯನ್ನು ನೋಡುತ್ತಾ ಅನುಭವಿಸಿದ್ದು ಅತೀವವಾದ ಆನಂದ. ಶಬ್ದ ಬರುತ್ತಿದ್ದ ಅಲೆಗಳ ರಾಶಿ, ಶಾಂತವಾದ ಹಿಂದೂ ಮಹಾಸಾಗರ ಎಡಬಲಕ್ಕೆ ತಮ್ಮದೇ ವೈಭವ ತೋರಿಸುತ್ತಿದ್ದ ಬಂಗಾಳ ಕೊಲ್ಲಿ ಹಾಗೂ ಅರೇಬಿಯನ್ ಸಮುದ್ರವನ್ನು ಕಣ್ಣು ತುಂಬಾ– ವಿವೇಕಾನಂದ ಭವನದಲ್ಲಿ ಕುಳಿತು ಆನಂದಿಸುವುದು, ಅದೊಂದು ದೃಶ್ಯ ವೈಭವ.

ಪದ್ಮನಾಪುರಂ ಕಡೆಗೆ...

ಅಂದೇ ಅಲ್ಲಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ‘ತುಕಳೆ’ ಎನ್ನುವ ಸಣ್ಣ ಪಟ್ಟಣಕ್ಕೆ ಪ್ರಯಾಣ ಕಾರಿನಲ್ಲಿ. ಇಡೀ ತಮಿಳುನಾಡನ್ನು ಸುತ್ತಾ ಹಂಚಿಕೊಂಡಿರುವ ಮತ್ತೊಂದು ನಡುಗಡ್ಡೆಯೇ ಈ ‘ಪದ್ಮನಾಭಪುರಂ’. ಕೇರಳದ ರಾಜಧಾನಿ ತಿರುವನಂತಪುರದಿಂದ 60 ಕಿ.ಮೀ. ದೂರದಲ್ಲಿದೆ. ಇದನ್ನು ‘ಐಲ್ಯಾಂಡ್’ ಎನ್ನಬೇಕು. ಆರು ಎಕರೆ ಕೇರಳದ ಸುಪರ್ದಿಯಲ್ಲಿ ಇರುವ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ನೆಲ ನಿಂತಿದೆ ಭವ್ಯವಾದ ಪದ್ಮನಾಭಪುರಂ ಎಂಬ ಅರಮನೆ. ಹತ್ತಿರದಲ್ಲೇ ವೆಳ್ಳಿ ಹೊಳೆ ಹರಿಯುತ್ತಿದೆ.

ಒಳಗೆ ಹೋದಾಕ್ಷಣ ಭವ್ಯವಾದ ಅರಮನೆ ನಮ್ಮನ್ನು ಕೈಬೀಸಿ ಕರೆಯುತ್ತದೆ. ವಿಶಾಲವಾದ ಪ್ರಾಂಗಣ. ಶುಚಿಗೆ ಮಹತ್ವ ನೀಡಿರುವ ಕೇರಳ ಸರ್ಕಾರದ ಎ.ಎಸ್.ಐ. ಸುಪ‍ರ್ದಿಯಲ್ಲಿದೆ  64 ವಿಶಾಲ ಕೋಣೆಗಳನ್ನು ಒಳಗೊಂಡ ಪದ್ಮನಾಭಪುರಂ ಅರಮನೆ.

ಈ ಅರಮನೆಯ ಕಟ್ಟಿದ್ದು ಕ್ರಿ.ಶ. 1600ರಲ್ಲಿ. ಆಗ ಈಗಿನ ಸಾಕಷ್ಟು ತಮಿಳುನಾಡಿನ ಪಟ್ಟಣಗಳನ್ನು ತನ್ನ ರಾಜ್ಯವಾಗಿ ಆಳುತ್ತಿದ್ದವರು ಕೇರಳ ರಾಜ ವಂಶಜರು. 1700 ರಿಂದ 1758ರಲ್ಲಿ ತಿರುನಾಳ್ ಮಾರ್ತಾಂಡವರ್ಮ ತಮ್ಮ ಮನೆದೈವವಾದ ಪದ್ಮನಾಭಸ್ವಾಮಿ ಅಂಕಿತದಲ್ಲಿ ಈ ಅರಮನೆಯನ್ನು ವಿಶಾಲಗೊಳಿಸಿ ನಿರ್ಮಿಸಿದ್ದಕ್ಕೆ ದಾಖಲೆಗಳಿವೆ. ಇಡೀ ಅರಮನೆಯನ್ನು ತೇಗದ ಮರ, ಹಲಸಿನ ಮರದಿಂದ ಕೇರಳ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ನಿರ್ಮಿಸಿದ್ದಾರೆ. ಪ್ರಾಂಗಣದಲ್ಲೇ ಕಾಣುವ 300 ವರ್ಷಗಳಿಂದ ಈಗಲೂ ಚಾಲನೆಯಲ್ಲಿರುವ ಗಡಿಯಾರ ಎತ್ತರದಿಂದ ನಮ್ಮನ್ನು ಚಕಿತಗೊಳಿಸುತ್ತದೆ. ಒಳ ಬರುತ್ತಿದ್ದಂತೆ ಅಂದವಾದ ದೀ‍ಪದ ಕಂಬಗಳು, ಗ್ಯಾಲರಿಗಳು, ಕೇರಳದ ಕುಸುರಿ ಕೆಲಸಗಳನ್ನು ಒಳಗೊಂಡ ಮಜಲುಗಳು ಹಾಗೂ ಮೇಲ್ಚಾವಣಿಗಳು ನಮ್ಮನ್ನು ಯಾವುದೋ ಲೋಕಕ್ಕೆ ಒಯ್ಯುತ್ತದೆ.

ಪ್ರತಿ ವಿಚಾರವನ್ನೂ ಸಂಕ್ಷಿಪ್ತವಾಗಿ ತಿಳಿಸುವ ಪರಿಚಾರಿಕೆಯರು ನಮ್ಮನ್ನು ಚಕಿತಗೊಳಿಸುತ್ತಾರೆ. ಕನಿಷ್ಠ 30 ಜನ ಗೈಡುಗಳು ನಿಮಗೆ ಅಲ್ಲಲ್ಲಿ ಸಂಕ್ಷಿಪ್ತ ದಾಖಲೆಯನ್ನು ತಿಳಿಸುತ್ತಾರೆ.

ವಿನ್ಯಾಸದ ಸೊಬಗು

ಈ ಅರಮನೆಯನ್ನು ಹೇಗೆ ನಿರ್ಮಿಸಿದ್ದಾರೆ ಎಂದರೆ ಹೊರಗೆ ಎಷ್ಟೇ ಸುಡುಬಿಸಿಲು ಇದ್ದರೂ ಒಳಹೊಕ್ಕ ಕ್ಷಣದಿಂದ ಕತ್ತಲೆಗೆ ನಿಮ್ಮ ಕಣ್ಣುಗಳು ಹೊಂದಿಕೊಳ್ಳಲು ಒಂದು ನಿಮಿಷ ಬೇಕಾಗುತ್ತದೆ. ಜತೆಗೆ ವಾತಾವರಣವೂ ಅಷ್ಟೇ ತಣ್ಣಗಿದೆ. ಒಳಗೆ ಕುಳಿತ ರಾಜ ವಂಶದವರಾಗಲಿ, ಮಂತ್ರಿಗಳಾಗಲಿ ಅಥವಾ ಸೈನಿಕರಾಗಲಿ ಹೊರ ನೋಡಲು ಸಾಧ್ಯವಾಗುವಂತೆ ಸಣ್ಣ ರಂಧ್ರದ ಕವಾಟಗಳೂ ಇದೆ. ಸಾಕಷ್ಟು ಬೆಳಕು ಒಳಗೆ ಬರುತ್ತದೆ. ಇಡೀ ಅರಮನೆಯನ್ನು ಐದು ಭಾಗಗಳಾಗಿ ವಿಂಗಡಿಸಿ ಕಟ್ಟಿದ್ದಾರೆ.

ಸೌತ್ ಪ್ಯಾಲೇಸ್ ಅಥವಾ ‘ತಾಯಿ ಕೊಟ್ಟಾರಂ’ ಎಂದು ಕರೆಸಿಕೊಳ್ಳುವ (ಈಗಿನ ಮ್ಯೂಸಿಯಂ) ಭಾಗ ಅರಮನೆಯ ದಕ್ಷಿಣಕ್ಕಿದೆ. ಮಧ್ಯ ಪ್ರಾಂಗಣದಲ್ಲಿ ನೆಲಮಾಳಿಗೆಯಲ್ಲಿ ರಾಜರ ಒಡವೆ, ಹಣಕಾಸಿನ ತಿಜೋರಿಗಳಿವೆ.

ಮೇಲ್ಭಾಗದಲ್ಲಿ ಎರಡೂ ಕಡೆ ರಾಜನ ಮಲಗುವ ಕೋಣೆಗಳಿವೆ. 64 ವಿಧದ ಔಷಧಿಯುಕ್ತ ಮರಗಳಿಂದ ಮಾಡಿದ ಅಗಲವಾದ ಮಂಚ ಇದೆ. ರಾಣಿಯರಿಗಾಗಿ ಈಗಲೂ ಸುಸ್ಥಿತಿಯಲ್ಲಿರುವ ಅಟ್ಯಾಚ್ಡ್ ಟಾಯ್ಲೆಟ್ ಇದೆ. ಇದಕ್ಕಿರುವ ಕಿಟಕಿಗಳು ಕುಸರಿ ಕಲೆ, ಕಲ್ಲಿನಲ್ಲೇ ನಿರ್ಮಿಸಿರುವ ಕಮೋಡು, ನೆಲಹಾಸು ನಿಮ್ಮನ್ನು ದಿಗ್ಮೂಢಗೊಳಿಸುತ್ತವೆ.  ರಾಜ–ರಾಣಿ ವಾಸದ ಜಾಗದ ನೆಲವನ್ನು ತೆಂಗಿನ ವಿಶೇಷವಾದ ಇದ್ದಿಲು ಹಾಗೂ ಮೊಟ್ಟೆಯ ಬಿಳಿಯಿಂದ ಕಪ್ಪಗಿನ ನೆಲದ ಪಾಲಿಶ್ ಮಾಡಲಾಗಿದೆ. ಎಲ್ಲಾ ಮೇಲ್ಚಾವಣಿಗಳು ಮರದ ಕೆಲಸದ ಸೂಕ್ಷ್ಮತೆಯನ್ನು ಸಾರುತ್ತದೆ. ಕೇರಳದ ಅಲಂಕೃತ ದೀಪಸ್ತಂಭ ಕಿಟಕಿಗಳು ನಮ್ಮನ್ನು ಬಹಳ ಆಕರ್ಷಿಸುತ್ತದೆ.

ಎದುರಿಗೆ ಇರುವುದು ರಾಜರ ಶಸ್ತ್ರಾಸ್ತ್ರ ಕೊಠಡಿ. ಒಂದೂ ಕಿಟಕಿ ಇಲ್ಲ. ಒಂದೇ ಬಾಗಿಲು ಸಾಧಾರಣ 100 ಅಡಿ ಉದ್ದದ ಸಂಗ್ರಹಗಾರಕ್ಕೆ ಅಲ್ಲಲ್ಲಿ ಸೈನಿಕರು ನಿಲ್ಲಲು ಜಾಗವಿದೆ. ಉಪರೀಕ ಮಾಳಿಕ ಎಂದು ಕರೆಯುವ ನಾಲ್ಕನೇ ಮಜಲು (ಅಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ) ರಾಜ ಹಾಗೂ ಅವರ ವಂಶಿಗರು ಪ್ರಾರ್ಥನೆ ಹಾಗೂ ಪೂಜಾ ಮಂದಿರ.

ಕಣ್ಮನ ಸೆಳೆಯುವ ‘ನಾಟಕ ಶಾಲ’ ಅಥವಾ ಸಭಾಂಗಣವೂ ಒಂದು ಅದ್ಭುತ. ನವರಾತ್ರಿಯಲ್ಲಿ ನೃತ್ಯ, ನಾಟಕಗಳು ಏರ್ಪಡಿಸಿ ಇಡೀ ಮಂತ್ರಿವರ್ಗ ಹಾಗೂ ಸಾಮಾನ್ಯರಿಗೆ ಕಲಾ ವೈಭವವನ್ನು ಪ್ರದರ್ಶಿಸುತ್ತಿದ್ದ ವಿಶಾಲವಾದ ಪ್ರಾಂಗಣ. ಕರ್ನಾಟಕ ಸಂಗೀತಕ್ಕೆ ಉತ್ತೇಜನ ನೀಡುವ ‘ಸ್ವಾತಿ ತಿರುನಾಳ್’ ರಾಜ (1826–46) ಇದನ್ನು ಕಟ್ಟಿಸಿ ಕಲೆಗೆ ಪ್ರೋತ್ಸಾಹ ನೀಡಿದ ಧೀಮಂತ ವಂಶಜ. 1000 ಜನರು (ಮಂತ್ರಿಗಳು ಒಳಗೊಂಡಂತೆ) ಒಮ್ಮೆಗೆ ಕುಳಿತುಕೊಳ್ಳಬಹುದಾದ ವಿಶಾಲವಾದ ‘ಮಂತ್ರಶಾಲ’ವೂ ಗಮನಸೆಳೆಯುತ್ತದೆ.

ವಿದೇಶ – ವಿಶೇಷ ಆಹ್ವಾನಿತರಿಗೆ ಅಲ್ಲೇ ಉಳಿದುಕೊಳ್ಳಲು ಐದಾರು ರೂಮುಗಳಿವೆ. ಗಜ ವೀಕ್ಷಣೆಗೆ ಒಂದು ಅಟ್ಟಣೆಗೆ ಇದೆ. ಇಷ್ಟೆಲ್ಲಾ ಆದಮೇಲೆ ಊಟ ಉಪಚಾರಕ್ಕೆಂದು ದೊಡ್ಡ ಅಡುಗೆಮನೆ, ಉಗ್ರಾಣ, ರುಬ್ಬುವ ಕಲ್ಲುಗಳು, ಅಡುಗೆಮನೆಯವರೆಗೆ ನೀರು ಬರಲು ಏರ್ಪಾಡು ಹಾಗೂ ನೀರಿನ ಶೇಖರಣೆಗಾಗಿ ದೊಡ್ಡ ಕಲ್ಲಿನ ತೊಟ್ಟಿಗಳಿವೆ.

ಈಗ ಅರಮನೆಯನ್ನು ನೋಡಿಕೊಳ್ಳುತ್ತಿರುವ ಕೇರಳ ಸರ್ಕಾರದ ಎ.ಎಸ್.ಐ. ಅತ್ಯಂತ ಶುಭ್ರವಾಗಿ ಇರಿಸಿದ್ದಾರೆ ಈ ಜಾಗವನ್ನು. ಅಂದಹಾಗೆ ಹೊರಬಂದಾಕ್ಷಣ ಪೇಟೆಯಲ್ಲಿ ಎದುರಿಗೆ ಸಿಗುವ ‘ತಾಟಿನಿಂಗ್’ನ ಜ್ಯೂಸ್ ಕುಡಿಯಲು ಮರೆಯಬೇಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry