4
ಮಳೆ ಕೊರತೆ ಹಾಗೂ ಚುನಾವಣೆ ಕಾರಣ ತಾಲ್ಲೂಕಿನ ಕೃಷಿ ಚಟುವಟಿಕೆಗೆ ಹಿಡಿದಿದ್ದ ಗ್ರಹಣ

ತಡ ಪೂರ್ವ ಮುಂಗಾರು: ಆತಂಕದಲ್ಲಿ ರೈತ

Published:
Updated:
ತಡ ಪೂರ್ವ ಮುಂಗಾರು: ಆತಂಕದಲ್ಲಿ ರೈತ

ಚಿಕ್ಕನಾಯಕನಹಳ್ಳಿ: ಕಳೆದ ನಾಲ್ಕು ದಿನಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ಪೂರ್ವ ಮುಂಗಾರು ಬಿತ್ತನೆಗೆ ಈಗಾಗಲೇ ಸಮಯ ಆಗಿದ್ದರೂ ಮುಂದೆ ಮಳೆ ನಡೆಸಬಹುದು ಎಂಬ ನಂಬಿಕೆಯಿಂದ ರೈತ ಜಮೀನುಗಳತ್ತ ತೆರಳುತ್ತಿದ್ದಾರೆ.

ಮಳೆ ಕೊರತೆ ಹಾಗೂ ಚುನಾವಣೆ ಕಾರಣ ತಾಲ್ಲೂಕಿನ ಕೃಷಿ ಚಟುವಟಿಕೆಗೆ ಗ್ರಹಣ ಬಡಿದಿತ್ತು. ಕೃಷಿ ಇಲಾಖೆಯ ದಾಖಲೆ ಹೇಳುವಂತೆ ಪೂರ್ವ ಮುಂಗಾರು ಬಿತ್ತನೆ ಮೇ 20ರವರೆಗೆ ಗಣನೀಯವಾಗಿ ಆಗಿರಲಿಲ್ಲ. ಕಳೆದ 1 ವಾರದಿಂದ ಬಿತ್ತನೆ ಚುರುಕಾಗಿದೆ.

ಬರಗಾಲದಲ್ಲೂ ಉಳುಮೆ ರಾಸುಗಳನ್ನು ಕಾಪಾಡಿಕೊಂಡಿರುವ ಸಾಂಪ್ರದಾಯಿಕ ರೈತರುಗಳು ಮಾತ್ರ ಹೊಲಗಳತ್ತ ಮುಖಮಾಡಿದ್ದಾರೆ. ಹಾಗೂ ಕಳೆದ ಭಾನುವಾರದಿಂದ ಉಳುಮೆಗೆ ಮುಂದಾಗಿದ್ದಾರೆ. ಬುಧವಾರವೂ ತಾಲ್ಲೂಕಿನ ಅಲ್ಲಲ್ಲಿ ಮಳೆಯಾಗಿದ್ದರಿಂದ ರೈತರ ಬಿತ್ತನೆ ದೃಶ್ಯಗಳು ಕಂಡು ಬಂದವು.

ಏಪ್ರಿಲ್- ಮೇ ತಿಂಗಳಲ್ಲಿ ದಾಖಲಾದ ಬಿಸಿಲಿನ ತಾಪಮಾನದಿಂದ ಬಸವಳಿದಿದ್ದ ಅನ್ನದಾತನಿಗೆ ಈಗ ಸುರಿಯುತ್ತಿರುವ ಮಳೆಯಿಂದಾಗಿ ರೈತನ ಮೊಗದಲ್ಲಿ ಭರವಸೆ ಮೂಡಿದಂತಾಗಿದೆ. ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ತಾಲ್ಲೂಕಿನ ಪ್ರಮುಖ ಬೆಳೆಗಳಾದ ಹೆಸರು, ಅಲಸಂದೆ, ಉದ್ದು ಹಾಗೂ ತೊಗರಿ ಬೆಳೆಯನ್ನು ಬೆಳೆಯಲು ರೈತ ಮುಂದಾಗಿದ್ದಾರೆ.

ಸಕಾಲಕ್ಕೆ ಭರಣಿ ಮಳೆ ಬಂದಿದ್ದರೆ ನಿಗದಿಯಾದಂತೆ ಪೂರ್ವ ಮುಂಗಾರು ಬಿತ್ತನೆ ಪ್ರಾರಂಭವಾಗುತ್ತಿತ್ತು. ಭರಣಿ ಕೈಕೊಟ್ಟಿದ್ದರಿಂದ ರೈತರು ತಮ್ಮ ಜಮೀನಿನ ಕಡೆ ತಲೆ ಹಾಕಲಿಲ್ಲ. ಈಗ ಸುರಿಯುತ್ತಿರುವ ಕೃತಿಕೆ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಕಳೆದ ಮೂರು ದಿನಗಳಿಂದ ಚುರುಕಾಗಿವೆ.

ತಾಲ್ಲೂಕಿನ ವಾರ್ಷಿಕ ವಾಡಿಕೆ ಮಳೆ 757.00 ಮಿ.ಮೀ ಇದ್ದು ಮೇ 24ರ 2018ರ ಅಂತ್ಯಕ್ಕೆ 126.6.ಮಿ.ಮೀಗಳಷ್ಟಾಗಿದೆ. ಮೇ ತಿಂಗಳಿನಲ್ಲಿ 82.6 ಮಿ.ಮೀ ವಾಡಿಕೆ ಮಳೆ ಇದ್ದು, ಇಲ್ಲಿವರೆಗೆ 70.ಮಿ.ಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ತಿಂಗಳ ಅಂತ್ಯಕ್ಕೆ 70ರಷ್ಟು ಮಳೆಯಾಗಿದ್ದು, ಬಿತ್ತನೆ ಮತ್ತು ಬೆಳೆಗಳ ಬೆಳವಣಿಗೆಗೆ ಅಲ್ಪಸ್ವಲ ಸಹಕಾರಿಯಾಗಿದೆ.

ತಾಲ್ಲೂಕಿನಾದ್ಯಂತ ಶೇ 85ರಷ್ಟು ಭಾಗ ರೈತರು ಮಳೆ ಆಧಾರಿತ ಕೃಷಿಯನ್ನು ಅವಲಂಬಿಸಿದ್ದಾರೆ. ಪೂರ್ವ ಮುಂಗಾರಿನಲ್ಲಿ ಸಿರಿಧಾನ್ಯ ಹಾಗೂ ದ್ವಿದಳಧಾನ್ಯ ಬೆಳೆಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ ಹಾಗೂ ಎಣ್ಣೆಕಾಳು ಬೆಳೆಯಾದ ನೆಲಗಡಲೆ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚಳ್ಳು, ಸಾಸುವೆ ಮತ್ತು ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯಲಾಗುತ್ತದೆ.

ತಾಲ್ಲೂಕಿನ ಪ್ರಮುಖ ಪೂರ್ವ ಮುಂಗಾರು ಬೆಳೆ ಹೆಸರು ಬಿತ್ತನೆ ತಡವಾಗಿದ್ದು ಫಸಲು ಕೈಸೇರುವುದೋ ಇಲ್ಲವೋ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಅಂಕಿ ಅಂಶ

1,10,933 ಹೆಕ್ಟೇರ್ ತಾಲ್ಲೂಕಿನ ಒಟ್ಟು ಭೌಗೋಳಿಕ ವಿಸ್ತೀರ್ಣ

63,827 ಹೆಕ್ಟೇರ್ ಸಾಗುವಳಿಗೆ ಯೋಗ್ಯವಾದ ವಿಸ್ತೀರ್ಣ

52,422 ಹೆಕ್ಟೇರ್‌ ಸಾಗುವಳಿಗೆ ಒಳಪಟ್ಟಿರುವ ವಿಸ್ತೀರ್ಣ

ಚುನಾವಣೆಯಿಂದ ಬಿತ್ತನೆಗೆ ಕುತ್ತು

ಮೇ ಮೊದಲ ವಾರದಲ್ಲಿ ಧರಣಿ ಮಳೆ ಬಿದ್ದಿತ್ತು. ಚುನಾವಣೆ ಕಾವಿನಲ್ಲಿ ಬಿದ್ದ ಭರಣಿ ಮಳೆ ಹಾಗೇ ಆವಿಯಾಗಿ ಹೋಯಿತು. ಮೇ 11 ಹಾಗೂ 12 ರಾತ್ರಿ ಸುರಿದ ಮಳೆಗೆ ಕೆಲ ರೈತರು ಹೆಸರು, ಅಲಸಂದೆ ಹಾಗೂ ಎಳ್ಳು ಬಿತ್ತನೆ ಮಾಡಿದ್ದು, ಬೆಳೆ ನಳನಳಿಸುತ್ತಿವೆ.

ಕೃಷಿ ದಾಖಲೆ ಪ್ರಕಾರ ಧರಣಿ ಮಳೆಗೆ ಶೇ 7.5 ಪ್ರಮಾಣ ಬಿತ್ತನೆ ಆಗಿದೆ. ಸಕಾಲಕ್ಕೆ ಬಿತ್ತನೆಯಾಗಿರುವ ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಈ ಮಳೆಗೆ ಹೆಸರು ಬೆಳೆ ಹೂ-ಚೊಟ್ಟು ಕಟ್ಟುತ್ತದೆ. ಚುನಾವಣೆ ಹುಚ್ಚಾಟದಲ್ಲಿ ರೈತರು ಹೊಲ ಮನೆ ಮರೆತಿದ್ದರಿಂದ ಈ ಬಾರಿಯ ಪೂರ್ವ ಮುಂಗಾರು ಬಿತ್ತನೆ ಮಂಕಾಗಿದೆ ಎಂಬುದು ದೇವರಹಳ್ಳಿ ರೈತ ಗಂಗಾಭೋವಿ ಅವರ ಅಭಿಪ್ರಾಯ.'

ಬಿರುಗಾಳಿಗೆ ಹೆದರಿಕೆ

ಒಂದು ಕಡೆ ಉತ್ತಮ ಮಳೆ, ಇನ್ನೊಂದು ಕಡೆ ಬಿರುಗಾಳಿ, ಇಷ್ಟು ದಿನ ಬರಗಾಲ ಎನ್ನುತ್ತಿದ್ದವರು ಬಿರುಗಾಳಿಗೆ ಈಗ ಹೆದರುತ್ತಿದ್ದಾರೆ, ತಮ್ಮ ಮರಗಳು, ಮನೆಗಳು ಧರೆಗೆ ಉರುಳುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಉತ್ತಮ ಮಳೆಯಾಗುತ್ತಿರುವುದಕ್ಕೆ ರೈತರು ನೇಗಿಲುನೊಂದಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ತೆರಳುತ್ತಿದ್ದಾರೆ. ಆದರೆ ಸಂಜೆಯಾಗುತ್ತಲೇ ತಾಲ್ಲೂಕಿನಾದ್ಯಂತ ಬಿರುಗಾಳಿ ಮಳೆ ಬೀಸುತ್ತಿದೆ. ಹಳೆಯ ಮನೆಗಳು ನೆಲಕಚ್ಚುತ್ತಿವೆ. ಬಿರುಗಾಳಿಗೆ ಮರಗಳು ಧರೆಗುರುಳುತ್ತಿವೆ. ವಿದ್ಯುತ್ ಕಂಬಗಳು ಮುರಿದು ಬೀಳುತ್ತಿವೆ. ಬಿರುಗಾಳಿಗೆ ನೆಲ ಕಚ್ಚಿದ ಬೆಳೆ ಹಾಗೂ ಮಳೆ ನೀರಿಗೆ ಮನೆಗೋಡೆಗಳು ಬೀಳುತ್ತಿರುವುದುರಿಂದ ಮುಂದೇನು ಎಂಬ ಚಿಂತೆ ಜನರನ್ನು ಕಾಡುತ್ತಿದೆ.

**

ಈಗಾಗಲೇ ಹೆಸರು ಬಿತ್ತನೆಗೆ 15 ದಿನ ತಡವಾಗಿದೆ. ನೆಲವನ್ನು ಬೀಳು ಬಿಡಬಾರದು ಹಾಗೂ ಹಿಂಗಡೆಯಲ್ಲಿ ಮಳೆ ನಡೆಸಿದರೆ ಬೆಳೆ ಕೈಸೇರಬಹುದು ಎಂಬ ಆಸೆಯಿಂದ ಬಿತ್ತನೆ ಮಾಡುತ್ತಿದ್ದೇವೆ

ಪುಟ್ಟಯ್ಯ, ರೈತ, ದೇವರಹಳ್ಳಿ

**

ಉತ್ತಮ ಮಳೆ ಆಗುತ್ತಿದೆ. ಇಲಾಖೆ ವತಿಯಿಂದ ಸುಧಾರಿತ ತಳಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ. ಮೇ ಅಂತ್ಯದ ವೇಳೆಗೆ ನಿಗದಿತ ಬಿತ್ತನೆ ಗುರಿ ಸಾಧನೆಯಾಗುತ್ತದೆ

- ಎಚ್.ಹೊನ್ನದಾಸೇಗೌಡ, ಸಹಾಯಕ ಕೃಷಿ ನಿರ್ದೇಶಕ, ಚಿಕ್ಕನಾಯಕನಹಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry