ಬುರುಡೆ ಜಲಧಾರೆಯ ತುಂತುರು ಹಾಡು

7

ಬುರುಡೆ ಜಲಧಾರೆಯ ತುಂತುರು ಹಾಡು

Published:
Updated:
ಬುರುಡೆ ಜಲಧಾರೆಯ ತುಂತುರು ಹಾಡು

ಎಲ್ಲರೂ ಏದುಸಿರೆಳೆಯುತ್ತ ಬಂಡೆಯ ಮೇಲೆ ಕುಳಿತು ಕೊಂಚ ಹೊತ್ತು ಕಣ್ಮುಚ್ಚಿದೆವು. ಮೆಲುವಾದ ತಿಳಿಗಾಳಿ ನಮ್ಮನ್ನು ನೇವರಿಸಿ ದಣಿವನ್ನು ಕಳೆಯಲು ಯತ್ನಿಸುತ್ತಿತ್ತು. ಕಣ್ಮುಂದೆ ನೀರು, ಶಾಲೆಗೆ ತಡವಾಗಿ ಹೊರಟ ಮಗುವಂತೆ ಅವಸರವಸರವಾಗಿ ಓಡುತ್ತಿತ್ತು. ಸಂಜೆ ಸೂರ್ಯ ಯಾವುದೋ ಗುಡ್ಡದ ಹಿಂದೆ ಸರಿಯುತ್ತ ಮನೆಗೆ ಹೊರಟಿದ್ದ.

ಹೆಚ್ಚೂ ಕಮ್ಮಿ ಬಾವಿಗೆ ಇಳಿದಷ್ಟೇ ಪ್ರಯಾಸದಿಂದ ಮರದ ಬೇರು, ಕಲ್ಲು, ಬಳ್ಳಿಗಳನ್ನು ಹಿಡಿದುಕೊಂಡು ಕೆಳಗಿಳಿದು ಬಂದಿದ್ದೆವು. ಇಡೀ ಜೀವದ ಭಾರವನ್ನು ಕೊರಕಲಲ್ಲಿ ಹೊತ್ತು ಹಿಡಿದಿದ್ದ ಮೊಣಕಾಲು ನಡುಗುತ್ತಿತ್ತು. ಕಲಕಲ ಹರಿಯುವ ನೀರಿನಲ್ಲಿ ಕಾಲು ಇಳಿಬಿಟ್ಟುಕೊಂಡು ಮುಖಕ್ಕೊಂದಿಷ್ಟು ನೀರು ಎರಚಿಕೊಂಡಾಗ ದಣಿವೆಲ್ಲ ಮಾಯವಾಗಿ ಮತ್ತೆ ಉತ್ಸಾಹ ತುಂಬಿಕೊಂಡಿತು. ಎದ್ದು ನಿಂತು ಸುತ್ತ ನೋಡಿದೆ. ಮೂರೂ ದಿಕ್ಕಿಗೆ ಎತ್ತರೆತ್ತರ ಗುಡ್ಡಗಳು. ನಾವು ಬಂದ ದಾರಿಯನ್ನು ಮುಚ್ಚಿ ಅಡಗಿಸಿಕೊಂಡಿರುವ ದಟ್ಟ ಕಾಡು. ಎದುರುಗಡೆ ಗುಡ್ಡದ ವಿಶಾಲ ಬಂಡೆಯ ಅಂಚಿಂದ ಜಿಗಿಯುವ ನೀರ ಸೆಲೆ, ಮೊದಲು ಎಡಕ್ಕೆ ಬಿದ್ದು, ಅಲ್ಲಿಂದ ಬಲಕ್ಕೆ ಸರಿದು ಹಂತಹಂತವಾಗಿ ಹರಡಿಕೊಳ್ಳುತ್ತಾ ಮಧ್ಯದಲ್ಲೆಲ್ಲೋ ಮಾಯವಾಗಿ ಮತ್ತೊಂದು ಹಂತದಲ್ಲಿ ಒಮ್ಮಿಂದೊಮ್ಮೆಲೇ ಪ್ರತ್ಯಕ್ಷವಾಗಿ ಕಲ್ಲದಾರಿಯಲ್ಲಿ ನುಸುಳಿಕೊಂಡು ನಮ್ಮ ಪಾದವನ್ನು ತೊಳೆಯುತ್ತಿರುವ ಜಲಪಾತ. ಮತ್ತೊಂದು ದಿಕ್ಕಿಗೆ ನೋಡಿದರೆ ನಾವು ನಿಂತಿದ್ದ ಜಾಗದಿಂದಲೇ ಹೋದ ನೀರು ಕಿಲಾಡಿ ಹುಡುಗನ ಹಾಗೆ ಅತ್ತಿತ್ತ ಹೊಯ್ದಾಡುತ್ತ ಬಂಡೆಗಳನ್ನು ಸವರಿಕೊಂಡು ಮುಂದಿನ ಪ್ರಪಾತದಂಥ ಕೊರಕಲಿಗೆ ಕೂಗುತ್ತಾ ಬೀಳುತ್ತಿದೆ.

ಅದು ಬುರುಡೆ ಫಾಲ್ಸ್‌. ಇಲ್ಲಿ ನೀರು ಏಳು ಹಂತಗಳಲ್ಲಿ ಜಿಗಿಯುತ್ತದೆ. ಪ್ರತಿಯೊಂದು ಹಂತದಲ್ಲಿಯೂ ಒಂದೊಂದು ಜಲಪಾತ ನಿರ್ಮಾಣಗೊಂಡಿದೆ. ನಾವು ಆ ಜಲಪಾತದ ಮಧ್ಯಭಾಗದಲ್ಲಿದ್ದೆವು. ಜಲಪಾತದ ಒಂದು ಭಾಗದ ಬುಡದಲ್ಲಿಯೂ ಇನ್ನೊಂದು ಭಾಗದ ನೆತ್ತಿಯ ಮೇಲೂ ನಿಂತಿದ್ದೆವು. ನಮ್ಮ ಮುಂದೆ ನಾಲ್ಕು ಹಂತಗಳಲ್ಲಿ ನೀರು ಧುಮುಕುತ್ತಿತ್ತು. ಹಿಂದೆ ಮೂರು ಹಂತಗಳಲ್ಲಿ ಇಳಿಯುತ್ತಿತ್ತು. ಆದರೆ ನಾವಿದ್ದಲ್ಲಿಂದ ಎರಡು ಹಂತಗಳು ಮಾತ್ರ ಕಾಣುತ್ತಿದ್ದವು.

ಕಡುಬೇಸಿಗೆಯಾಗಿದ್ದರಿಂದ ನೀರು ಕಡಿಮೆ ಇತ್ತು. ಮೇ ತಿಂಗಳು ಜಲಪಾತಗಳನ್ನು ನೋಡಲು ಒಳ್ಳೆಯ ಸಮಯವೇನೂ ಅಲ್ಲ. ಜಲಧಾರೆಯ ರುದ್ರನರ್ತನ ನೋಡಬೇಕು ಎಂದರೆ ಮಳೆಗಾಲವೇ ಸರಿ. ಆದರೆ ಈಗಲೂ ಹೇಗಿರುತ್ತದೆ ಒಮ್ಮೆ ನೋಡಿಯೇ ಬಿಡೋಣ ಎಂದು ನಾವು ಈ ‘ಬುರುಡೆ’ ಸುಂದರಿಯನ್ನು ಅರಸಿಕೊಂಡು ಬಂದುಬಿಟ್ಟಿದ್ದೆವು. ನೀರು ಕಡಿಮೆ ಇದ್ದಿದ್ದು ನಮಗೊಂದು ಬಗೆಯಲ್ಲಿ ಒಳ್ಳೆಯದೇ ಆಯ್ತು. ಸರಾಗವಾಗಿ ಬಂಡೆಗಳ ಮೇಲೆ ಕಾಲಿಟ್ಟು ದಾಟಿ ಆಚೆ ದಡ ತಲುಪಿ ಕಡಿದಾದ ಬಂಡೆಗಳನ್ನು ಏರಿ ಮೇಲಿನ ಹಂತಕ್ಕೆ ಹೋಗಲು ಸಾಧ್ಯವಾಯ್ತು.

ಈಗ ನಾವು ಎತ್ತರದ ಜಲಪಾತದ ತೀರಾ ಸನಿಹದಲ್ಲಿದ್ದೆವು. ನಿಂತಲ್ಲಿಂದ ಮೇಲೆ ಇನ್ನೊಂದು ಹಂತ ಕಾಣುತ್ತಿತ್ತು. ಬಿಳಿಯ ಸೀರೆಯ ಸೆರಗೊಂದು ಜೋರು ಗಾಳಿಗೆ ಹಾರಾಡುವಂತೆ ನೊರೆನೊರೆಯಾಗಿ ನೀರು ಧುಮುಕುತ್ತಿತ್ತು. ಎದುರಿಗೆ ಕೈಚಾಚಿ ನಿಂತ ನಮ್ಮನ್ನೂ ಹನಿಬೆರಳುಗಳಿಂದ ತಾಕಿ, ಕಚಗುಳಿಯಿಟ್ಟು ಕ್ಷಣಮಾತ್ರದಲ್ಲಿ ಒದ್ದೆಯಾಗಿಸಿತು.

ಸುತ್ತಲೂ ಗಾಢ ಕಾಡಿನ ಗಂಭೀರ ಸೌಂದರ್ಯ. ನಡುವೆ ಬಂಡೆಯ ಹಣೆಗೆ ನಾಮವಿಟ್ಟಂತೆ, ತಿರುಗಿ ನಿಂತ ನಿಸರ್ಗದಮ್ಮನ ಬೆನ್ನಮೇಲೆ ನೀಳಕೂದಲು ಹರಡಿದಂತೆ, ಗುಡ್ಡದ ಎದೆಯನ್ನೇ ವೇದಿಕೆ ಮಾಡಿಕೊಂಡು ನೀರ ಪೋರಿ ಮೈಚಳಿಬಿಟ್ಟು ನರ್ತಿಸುತ್ತಿರುವಂತೆ... ಎದುರಿಗೆ ನಿಂತಷ್ಟೂ ಹೊತ್ತು ಬುರುಡೆ ಜಲಪಾತ ನಮ್ಮೊಳಗೆ ಹಲವು ಅವತಾರಗಳಲ್ಲಿ ಬಿಚ್ಚಿಕೊಳ್ಳುತ್ತಲೇ ಇತ್ತು. ಕಣ್ಣ ಚಾಚಿದಷ್ಟೂ ದೂರ ಒಂದಕ್ಕಿಂತ ಒಂದು ಎತ್ತರಕ್ಕೆ ನಿಂತ ಗುಡ್ಡಗಳು ಈ ಹರಿಯುವ ಸುಂದರಿಯ ಕಾವಲಿಗೆ ನಿಂತಂತೆ ಕಾಣುತ್ತಿದ್ದವು. ಕಡುಬೇಸಿಗೆಯಲ್ಲಿಯೇ ಈ ಜಲಪಾತ ಹೀಗಿರಬೇಕಾದರೆ ಮಳೆಗಾಲದಲ್ಲಿ ಇನ್ನೆಷ್ಟು ಸಮೃದ್ಧವಾಗಿರಬೇಡ? ಸುತ್ತಲಿನ ಕಲ್ಲುಬಂಡೆ, ಕಾಡುಗಳೆಲ್ಲ ಹಸಿರ ತುಂಬಿಕೊಂಡು... ಕಾಲ್ಪನಿಕ ಚಿತ್ರವೊಂದು ನನ್ನ ಮನಸಲ್ಲಿ ಹಾಗೆಯೇ ಹಾದು ಹೋಯ್ತು.

ಮನದಣಿಯೆ ನೀರಹನಿಗಳಿಗೆ ಮುಖಕೊಟ್ಟು ಸುತ್ತಲಿನ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸಂಜೆಯಾಗುವ ಮೊದಲೇ ದಾರಿ ಸೇರಿಕೊಳ್ಳುವ ಅವಸರದಲ್ಲಿ ಮರಳಿ ಹೆಜ್ಜೆ ಹಾಕತೊಡಗಿದೆವು.

ಎಲ್ಲಿದೆ ಬುರುಡೆ ಫಾಲ್ಸ್‌?

ಉತ್ತರ ಕನ್ನಡದ ಸಿದ್ದಾಪುರದಿಂದ ಕುಮಟಾಕ್ಕೆ ಹೋಗುವ ದಾರಿಯಲ್ಲಿ 20ಕಿ.ಮೀ ಸಾಗಿದರೆ ಕ್ಯಾದಗಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಕೊಂಚ ಮುಂದಕ್ಕೆ ಬಲಕ್ಕೆ ‘ಬುರುಡೆ ಫಾಲ್ಸ್‌ಗೆ ಹೋಗುವ ದಾರಿ’ ಎಂಬ ಫಲಕವಿದೆ. ಆ ಮುಖ್ಯರಸ್ತೆಯಿಂದ ಕಾಡಿನ ನಡುವೆ ಐದು ಕಿ.ಮೀ ಸಾಗಿದರೆ ಬುರುಡೆ ಫಾಲ್ಸ್‌ ತಲುಪಬಹುದು. ಸಾಕಷ್ಟು ತಿರುವು ಮುರುವು, ಏರು ತಗ್ಗುಗಳ ದಾರಿಯಾದರೂ ಡಾಂಬರೀಕರಣ ಮಾಡಿರುವುದರಿಂದ ದಾರಿಯಲ್ಲಿ ಪ್ರಯಾಸಪಡಬೇಕಾದ ಅವಶ್ಯಕತೆ ಇಲ್ಲ. ಈ ರಸ್ತೆಯ ಕೊನೆಯಲ್ಲಿ ಪ್ರವಾಸೋದ್ಯಮ ಇಲಾಖೆ ಒಂದು ತಂಗುದಾಣವನ್ನೂ ನಿರ್ಮಿಸಿದೆ. ಅಲ್ಲಿ ವಾಹನವನ್ನು ಪಾರ್ಕ್‌ ಮಾಡಿ ಕೊಂಚ ಹೊತ್ತು ವಿಶ್ರಮಿಸಿಕೊಳ್ಳಬಹುದು.

ಆ ತಂಗುದಾಣದಿಂದ ಸುಮಾರು ನೂರು ಅಡಿಗಳಷ್ಟು ಪ್ರಪಾತದಂಥ ಕೊರಕಲಿನಲ್ಲಿ ಇಳಿಯಬೇಕಾಗುತ್ತದೆ. ಈಗ ಅರ್ಧದವರೆಗೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಮೆಟ್ಟಿಲು ಮುಗಿದ ಮೇಲೆ ಮರದ ಬೇರು, ಕಲ್ಲುಬಂಡೆ, ಗಿಡಗಂಟಿಗಳನ್ನು ಆಧಾರವಾಗಿ ಹಿಡಿದುಕೊಂಡೇ ಇಳಿಯಬೇಕು. ವಯಸ್ಸಾದವರಿಗೆ, ಅಂಗವಿಕಲರಿಗೆ ಈ ದಾರಿ ಸುರಕ್ಷಿತ ಅಲ್ಲವೇ ಅಲ್ಲ. ಯಾಕೆಂದರೆ ಒಮ್ಮೆ ಕಾಲು ಜಾರಿದರೆ ಸಾಕಷ್ಟು ಆಳದ ಬಂಡೆಗಳಲ್ಲುಗಳ ಮೇಲೆ ಬಿದ್ದು ಪ್ರಾಣಕ್ಕೇ ಸಂಚಕಾರ ಆಗುವ ಅಪಾಯ ಇದ್ದೇ ಇದೆ.

ಯಾವ ಕಾಲ ಸೂಕ್ತ?

ಮೊದಲೇ ಹೇಳಿದಂತೆ ಯಾವುದೇ ಜಲಪಾತ ನೋಡಬೇಕು ಎಂದರೆ ಮಳೆಗಾಲವೇ ಸೂಕ್ತ. ಬುರುಡೆ ಫಾಲ್ಸ್‌ಗೂ ಈ ಮಾತು ಅನ್ವಯಿಸುತ್ತದಾದರೂ, ಬೇಸಿಗೆಗಾಲ ಹೆಚ್ಚು ಸುರಕ್ಷಿತ ಎನ್ನಬಹುದು. ಯಾಕೆಂದರೆ ಮಳೆ ಸುರಿಯುತ್ತಿರುವಾಗ ನಾವು ಇಳಿಯುವ ಕೊರಕಲಿನ ದಾರಿಯೂ ಒಂದು ಜಲಪಾತವೇ ಆಗಿರುತ್ತದೆ. ಕಲ್ಲುಗಳು, ಮಣ್ಣು ಎಲ್ಲವೂ ಜಾರುತ್ತವೆ. ಇಂಬಳಗಳ ಕಾಟವೂ ತಪ್ಪಿದ್ದಲ್ಲ. ನೀರು ಜಾಸ್ತಿ ಇರುವುದರಿಂದ ಜಲಪಾತದ ನೀರನ್ನು ದಾಟಿಕೊಂಡು ಮೇಲಿನ ಹಂತಕ್ಕೆ ಹೋಗುವುದು ಸಾಧ್ಯವಾಗುವುದಿಲ್ಲ. ದೂರದಿಂದಲೇ ನೋಡಿಕೊಂಡು ಸಮಾಧಾನ ಮಾಡಿಕೊಳ್ಳಬಹುದು. ಆದರೆ ಇಷ್ಟೆಲ್ಲ ಕಷ್ಟಗಳ ನಡುವೆಯೂ ನೀವು ಮಳೆಗಾಲದಲ್ಲಿ ಬುರುಡೆ ಫಾಲ್ಸ್‌ಗೆ ಎದುರಾದಿರಾದರೆ ಸುತ್ತಲಿನ ಮೂರೂ ದಿಕ್ಕುಗಳಿಂದ ನುಗ್ಗಿ ಬರುವ ನೀರಿನ ಆರ್ಭಟದ ದಿವ್ಯಾನುಭೂತಿ ಸಿಗುತ್ತದೆ.

ಕಡು ಬೇಸಿಗೆಯಲ್ಲಿ ಹೋದರೆ ನೀರು ಕಡಿಮೆ ಇರುತ್ತದೆ. ಹಾಗಾಗಿ ಜನವರಿ ಅಥವಾ ಫೆಬ್ರುವರಿ ತಿಂಗಳು ಈ ಜಲಪಾತಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಆದರೆ ನೀರಿನ ಸೆಳವು ತೀವ್ರವಾಗಿರುತ್ತದೆ. ಅಪ್ಪಿ ತಪ್ಪಿಯೂ ನೀರಲ್ಲಿ ಈಜುವ ಸಾಹಸಕ್ಕೆ ಇಳಿಯದಿರಿ. ಗೊತ್ತಿಲ್ಲದೆಯೇ ನೀರು ನಿಮ್ಮನ್ನು ಹೊತ್ತೊಯ್ದು ಪ್ರಪಾತದ ಕೊರಕಲಿಗೆ ನೂಕಿಬಿಡಬಹುದು.

ಅಲ್ಲಿ ಯಾವ ಅಂಗಡಿ ಅಥವಾ ಹೋಟೆಲ್‌ಗಳೂ ಇಲ್ಲ. ಆದ್ದರಿಂದ ಮಧ್ಯಾಹ್ನ ಸಮಯವಾದರೆ ಊಟವನ್ನು ಪಾರ್ಸೆಲ್ ತೆಗೆದುಕೊಂಡು ಹೋಗುವುದು ಸೂಕ್ತ. ಒಂದಿಷ್ಟು ಕುರುಕಲು ತಿನಿಸುಗಳು ಮತ್ತು ನೀರಿನ ಬಾಟಲ್ ಕೂಡ ನಿಮ್ಮ ಬ್ಯಾಗಿನಲ್ಲಿರಲಿ. ನೀವು ತಿನಿಸುಗಳನ್ನು ಕಟ್ಟಿಕೊಂಡುಹೋದ ಪ್ಲಾಸ್ಟಿಕ್‌ ಕವರ್‌ಗಳು, ಬಾಟಲ್‌, ಕಸಗಳನ್ನೂ ನಿಮ್ಮ ಬ್ಯಾಗಿನಲ್ಲಿಯೇ ಇರಿಸಿಕೊಂಡು ಮೇಲೆ ಬಂದು ಕಸದ ಡಬ್ಬಿಯಲ್ಲಿಯೇ ಹಾಕಿ. ಸಹಜ ಸುಂದರವಾದ ಪರಿಸರದ ನೈರ್ಮಲ್ಯದ ನಡುವೆ ನಮ್ಮ ಕಲುಷಿತ ಗುರುತುಗಳು ಉಳಿದುಕೊಳ್ಳುವುದು ಬೇಡ.

ಯಾಕೆ ಈ ಹೆಸರು?

ಉತ್ತರ ಕನ್ನಡದ ಕೆಲವೆಡೆ ಸೀಮೆಎಣ್ಣೆ ದೀಪವನ್ನು ಬುರುಡೆ ದೀಪ ಎಂದೂ ಹೇಳುತ್ತಾರೆ. ಸಾಮಾನ್ಯವಾಗಿ ಅದರ ವಿನ್ಯಾಸ ಮಧ್ಯದಲ್ಲಿ ಅಗಲವಾಗಿರುತ್ತದೆ. ಮೇಲೆ ಮತ್ತು ಕೆಳಗೆ ಹಂತಹಂತವಾಗಿ ಚಿಕ್ಕದಾಗುತ್ತ ಹೋಗುತ್ತದೆ. ಬುರುಡೆ ಫಾಲ್ಸ್‌ನ ಆಕಾರವೂ ಇದನ್ನೇ ಹೋಲುತ್ತದೆ. ಮಧ್ಯದಲ್ಲಿ ನಿಂತು ನೋಡಿದರೆ ಮೇಲೂ ಕೆಳಗೂ ಚಿಕ್ಕದಾಗುತ್ತ ಹೋದಂತೆ ತುದಿಯಲ್ಲಿ ಕುಡಿಯಂತೆಯೂ ಕಾಣುತ್ತದೆ. ಆದ್ದರಿಂದ ಇದಕ್ಕೆ ಬುರುಡೆ ಫಾಲ್ಸ್‌ ಎಂದು ಕರೆಯುತ್ತಾರೆ ಎಂಬುದು ಸ್ಥಳೀಯರ ವಿವರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry