ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನಾದ ಋಷಿ ಪುತ್ರ

Last Updated 26 ಮೇ 2018, 19:30 IST
ಅಕ್ಷರ ಗಾತ್ರ

ಅದೊಂದು ಅದ್ಭುತ ತಪೋವನ. ಅಲ್ಲೊಬ್ಬ ಋಷಿಯಿದ್ದ. ಅವನಿಗೊಬ್ಬ ಮಗನೂ ಇದ್ದ. ತಾಯಿಯಿಲ್ಲದ ಮಗುವಿಗೆ ತಾನೇ ಎಲ್ಲವೂ ಆಗಿ ಸಾಕಿದ್ದ ಋಷಿ. ಋಕ್ಕು‌ಗಳು ಬಾಯಲ್ಲಿ ಸರಾಗವಾಗಿ ಹರಿಯುವಂತೆ ಮಗನನ್ನು ತಯಾರು ಮಾಡಿದ್ದ ಋಷಿ. ತಾನು ಬ್ರಾಹ್ಮಣ, ಜಪ ತಪ ವೇದಗಳಷ್ಟೇ ತನ್ನ ಬದುಕೆಂಬುದು ತಂದೆಯ ವರ್ತನೆಗಳಿಂದ ಅವನಿಗಾಗಲೇ ಅರಿವಾಗಿತ್ತು. ಒಂದು ಮಧ್ಯರಾತ್ರಿ ತಂದೆಯನ್ನು ಬಿಟ್ಟು ಎದ್ದು ನಡೆದುಬಿಟ್ಟ. ತಂದೆಯು ಮಗ ಸಿಗದೆ ನಿತ್ಯವೂ ನೊಂದುಕೊಳ್ಳುತ್ತ ದಿನ ಕಳೆಯುತ್ತಿದ್ದ.

ಅವತ್ತೊಂದು ದಿನ ಕಾಡಿನಲ್ಲಿ ಗಲಾಟೆ ಎದ್ದಿತು. ಕೊಂಬು, ಕಹಳೆಗಳ ದನಿ ಕೇಳಿಸಿತು. ಕುದುರೆಗಳ ಹೇಷಾರವ, ಆನೆಗಳ ಘೀಳು ಕೇಳಿಸಿತು. ರಾಜ ಬೇಟೆಗೆ ಬಂದಿರುವುದರಿಂದಾಗಿ ಈ ಗದ್ದಲವೆಂದು ತಿಳಿದಿದ್ದ ಋಷಿ ತನ್ನ ಓದಿನಲ್ಲಿ ಮುಳುಗಿಹೋದ. ಸ್ವಲ್ಪ ಹೊತ್ತಾದ ಮೇಲೆ ಆಶ್ರಮದ ಹೊರಗೆ ಯಾರೋ ಕರೆಯುವ ದನಿ ಕೇಳಿ ಆಚೆ ಬಂದ ಋಷಿ. ಅಲ್ಲಿ ಒಬ್ಬ ಸೈನಿಕ ನಿಂತಿದ್ದ. ‘ಬೇಟೆಯ ನಡುವೆ ವಿಶ್ರಾಂತಿಗೆಂದು ಮಹಾರಾಜರು ನಿಮ್ಮ ಆಶ್ರಮಕ್ಕೆ ಬರುತ್ತಿದ್ದಾರೆ ಸ್ವಾಮಿ. ನಿಮಗೆ ತಿಳಿಸಿ ಬನ್ನಿ ಎಂದು ಮಹಾರಾಜರು ಅಪ್ಪಣೆ ನೀಡಿ ಕಳುಹಿಸಿರುವರು’ ಎಂದು ಹೇಳಿದ ಸೈನಿಕ, ಋಷಿಗೆ ನಮಸ್ಕರಿಸಿ ಹೊರಟುಹೋದ. ರಾಜನಿಗೆ ಒಳ್ಳೆಯ ಆತಿಥ್ಯ ನೀಡಲು ವೃದ್ಧ ಋಷಿ ತಯಾರಿ ಆರಂಭಿಸಿದ.

ಸ್ವಲ್ಪ ಸಮಯದ ಬಳಿಕ ಜೋರಾದ ಗಲಾಟೆಯ ಸದ್ದು ಆಶ್ರಮಕ್ಕೆ ಹತ್ತಿರವಾಗತೊಡಗಿತು. ಮಹಾರಾಜರು ಬರುತ್ತಿರುವುದು ಋಷಿಗೆ ಗೊತ್ತಾಯಿತು. ಅವರನ್ನು ಸ್ವಾಗತಿಸಲು ಆಚೆ ಬಂದರು ಋಷಿ. ರಥದಲ್ಲಿ ಕೂತಿದ್ದ ಮಹಾರಾಜರನ್ನು ಕಂಡು ಋಷಿಗೆ ಅಚ್ಚರಿ, ದುಃಖ, ಸಂತೋಷ ಎಲ್ಲವೂ ಒಟ್ಟಿಗೇ ಉಂಟಾದವು. ರಾಜನೂ ರಥ ಇಳಿದು ಓಡಿ ಬಂದನು. ಬಂದ ಮಹಾರಾಜ, ಋಷಿಯ ಕಾಲಿಗೆರಗಿ ‘ಅಪ್ಪ, ನನ್ನನ್ನು ಕ್ಷಮಿಸು! ನೀವಿನ್ನೂ ಈ ಕಾಡಿನಲ್ಲಿ ಇದ್ದೀರೆಂದು ನನಗೆ ಗೊತ್ತಿರಲಿಲ್ಲ. ನನಗಿಂದು ನಿಮ್ಮನ್ನು ಕಂಡು ಸಂತೋಷವಾಗಿದೆ. ನೀವು ನನಗೆ ವೇದ, ಉಪನಿಷತ್ತು, ತರ್ಕ, ವ್ಯಾಕರಣಗಳನ್ನು ಕಲಿಸುತ್ತಿದ್ದುದು ನನಗೆ ಇಷ್ಟವಿರಲಿಲ್ಲ. ನನಗ್ಯಾಕೋ ಅದು ಒಗ್ಗುತ್ತಿರಲಿಲ್ಲ. ನನ್ನ ತೋಳುಗಳು ಖಡ್ಗ ಹಿಡಿ ಎಂದು ನನ್ನನ್ನು ಕಾಡುತ್ತಿದ್ದವು. ವೇದ, ಉಪನಿಷತ್ತುಗಳು, ವ್ಯಾಕರಣ ನಿನ್ನ ದಾರಿಯಲ್ಲ ಎಂದು ನನ್ನ ಅಂತರಾತ್ಮ ಮತ್ತೆ ಮತ್ತೆ ಹೇಳುತ್ತಿತ್ತು. ರಾಜನಾಗುವ ಗುರಿ ಇಟ್ಟುಕೊಂಡು ಇಲ್ಲಿಂದ ಹೊರಟೆ. ನನ್ನ ಬುದ್ದಿವಂತಿಕೆ ಮತ್ತು ಸಾಮರ್ಥ್ಯದಿಂದ ನಾನು ರಾಜ ಆದೆ. ಜನರನ್ನು ಆಳುವುದರಲ್ಲಿ, ಅವರನ್ನು ಮಕ್ಕಳಂತೆ ನೋಡಿಕೊಳ್ಳುವುದರಲ್ಲಿ ನನಗೆ ಖುಷಿ ಇದೆ. ನಿಮ್ಮನ್ನು ಮಧ್ಯದಲ್ಲಿಯೇ ಬಿಟ್ಟುಹೋಗಿದ್ದಕ್ಕೆ ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಬೇಡಿಕೊಂಡನು. ಅವನ ಕಣ್ಣುಗಳಿಂದ ನೀರು ಜಿನುಗುತ್ತಿತ್ತು.

ಋಷಿಯು ಮಗನ ಭುಜ ಹಿಡಿದು ಎತ್ತಿಕೊಂಡು ಅವನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದನು. ತನ್ನ ಅಜ್ಞಾನಕ್ಕೆ ವ್ಯಥೆಪಟ್ಟನು. ‘ಹೌದು, ವ್ಯಕ್ತಿಯ ಮೇಲೆ ಯಾವುದನ್ನೇ ಆದರೂ ಬಲವಂತವಾಗಿ ಹೇರಿದರೆ ಅದು ಆ ವ್ಯಕ್ತಿಯನ್ನು ದುರ್ಬಲನನ್ನಾಗಿ ಮಾಡುತ್ತದೆ. ನಮಗೆ ಇಷ್ಟವಿಲ್ಲದ ಕೆಲಸ ಮಾಡುವುದು ನಾಟಕ ಮಾಡಿದಂತೆ. ಅದರ ಬದಲು ನಾವು ಪ್ರೀತಿಸುವ ಕೆಲಸ ಮಾಡುತ್ತ ಹೋಗಬೇಕು. ಹಾಗೆ ಮಾಡಿದಾಗ ವ್ಯಕ್ತಿ ಗೆಲುವು ಕಾಣುತ್ತಾನೆ. ಅದು ಇಂದು ನಿನ್ನಿಂದ ಸ್ಪಷ್ಟವಾಯಿತು. ನೀನು ನಿನ್ನಿಷ್ಟದಂತೆ ಮಹಾರಾಜನಾಗಿಯೇ ಬಾಳು. ಪ್ರಜೆಗಳು ಮೆಚ್ಚುವಂತೆ ಬಾಳು. ನಿನ್ನನ್ನು ಅರ್ಥ ಮಾಡಿಕೊಳ್ಳದ ಕಾರಣಕ್ಕೆ ನನ್ನನ್ನು ಕ್ಷಮಿಸು’ ಎಂದು ಮಗನನ್ನು ತಬ್ಬಿಕೊಂಡನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT