ಸಂಘ ಪರಿವಾರದ ಬೆಚ್ಚಿ ಬೀಳಿಸುವ ಕಥೆ

7

ಸಂಘ ಪರಿವಾರದ ಬೆಚ್ಚಿ ಬೀಳಿಸುವ ಕಥೆ

Published:
Updated:
ಸಂಘ ಪರಿವಾರದ ಬೆಚ್ಚಿ ಬೀಳಿಸುವ ಕಥೆ

ತಮಿಳು ಲೇಖಕ ವಿಡುದಲೈ ರಾಜೇಂದ್ರನ್‌ ಬರೆದಿರುವ ‘ಸಂಚುಗಾರ ಸಂಘ ಪರಿವಾರ– ಸಂಘ ಪರಿವಾರದ ಸಂಚಿನ ಇತಿಹಾಸ’ ಕೃತಿ ಸಂಘ ಪರಿವಾರದ ಕೆಲವು ನಡೆಗಳನ್ನು ವಿಸ್ತೃತವಾಗಿ ಕಟ್ಟಿಕೊಟ್ಟಿದೆ.

ಚುನಾವಣಾ ರಾಜಕೀಯವನ್ನು ಅವಕಾಶವನ್ನಾಗಿಸಿಕೊಂಡು ತಮಿಳುನಾಡಿನಲ್ಲಿ ಬಿಜೆಪಿ ಬೇರೂರುವ ಜತೆಗೆ ಸಂಘ ಪರಿವಾರವನ್ನೂ ಬೆಳೆಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಸಂಘ ಪರಿವಾರದ ಚರಿತ್ರೆಯನ್ನು ಯುವ ಸಮುದಾಯಕ್ಕೆ ತಿಳಿಸಿಕೊಡುವ ಉದ್ದೇಶದಿಂದ ಲೇಖಕರು ‘ಒಟ್ಟುಮೈ’ ಪಾಕ್ಷಿಕದಲ್ಲಿ ಬರೆದ ಅಂಕಣಗಳ ಸಂಗ್ರಹ ಈ ಕೃತಿ. ಇದನ್ನು ಲೇಖಕರಾದ ಕಲೈ ಸೆಲ್ವಿ ಮತ್ತು ಅಗಸ್ತ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೃತಿಯಲ್ಲಿ ಒಟ್ಟು ಹದಿನಾರು ಲೇಖನಗಳಿವೆ. ‘ದ್ರಾವಿಡ ನಾಡಿನಲ್ಲಿ ಆರ್‌.ಎಸ್‌.ಎಸ್‌ ಕರಿನೆರಳು’ ಲೇಖನದಿಂದ ಹಿಡಿದು ‘ಗೋಡ್ಸೆ ಆರ್‌.ಎಸ್‌.ಎಸ್‌ ಸದಸ್ಯನೇ’ ಲೇಖನದವರೆಗೂ ಸಂಘ ಪರಿವಾರದ ಇತಿಹಾಸ, ಸ್ವಾತಂತ್ರ್ಯ ಹೋರಾಟದ ಕಾಲದಿಂದ ಈವರೆಗೆ ನಡೆಸಿದ ಕಾರ್ಯಾಚರಣೆಗಳು ಮತ್ತು ರಾಜಕೀಯ ನಡೆಗಳ ಬಗ್ಗೆ ವಿವರಿಸಲಾಗಿದೆ.

ದೇಶದಲ್ಲಿ ಇಂದು ಬಲವಾಗಿ ಬೇರುಬಿಡುತ್ತಿರುವ ಕೋಮುವಾದವು ರಾಷ್ಟ್ರವಾದದ ಮುಸುಕು ಹಾಕಿಕೊಂಡು ಹೇಗೆ ವ್ಯವಹರಿಸುತ್ತಿದೆ ಎಂಬುದನ್ನು ಲೇಖಕರು ಇಲ್ಲಿ ವಿವರವಾಗಿ ಮಂಡಿಸಿದ್ದಾರೆ.

ಭಾರತ ಮಾತ್ರದಲ್ಲಿರುವ ಹಿಂದೂ ಧರ್ಮ ಎಷ್ಟು ಪುರಾತನವಾದುದು? ಇದರ ಆಚರಣೆ, ಪದ್ಧತಿ ಹೇಗೆ? ನಮ್ಮ ದೇಶದಲ್ಲಿ ಮುನ್ನೂರ ಮುವತ್ತಾರು ಕೋಟಿ ದೇವರುಗಳಿವೆ ಎಂಬ ಮಾತಿದೆ. ಒಂದೊಂದು ದೇವರಿಗೂ ಒಂದೊಂದು ಆಚಾರ– ವಿಚಾರ. ಕೆಲವು ಸಸ್ಯಾಹಾರಿ ಮತ್ತೆ ಕೆಲವು ಮಾಂಸಾಹಾರಿ ದೇವರುಗಳು. ಈ ಪೈಕಿ ಯಾವುದನ್ನು ಒಪ್ಪಬೇಕು. ಯಾವುದನ್ನು ತಿರಸ್ಕರಿಸಬೇಕು? ಒಂದೊಂದು ದೇವರಿಗೆ ಒಂದೊಂದು ಒಕ್ಕಲು. ಒಂದೊಂದು ಜಾತಿ. ಪ್ರತಿಯೊಂದು ಜಾತಿಗೂ ಒಬ್ಬೊಬ್ಬ ಧರ್ಮಗುರು. ಪ್ರತಿಯೊಬ್ಬ ಧರ್ಮಗುರುವಿನ ಸಿದ್ಧಾಂತಗಳು ಬೇರೆ ಬೇರೆ. ಹೀಗಿರುವಾಗ ಒಂದೇ ಧರ್ಮ ಹೇಗೆ ಸಾಧ್ಯ? ಎಂಬುದು ಪ್ರಕಾಶಕ ರವೀಂದ್ರನಾಥ ಅವರ ಪ್ರಶ್ನೆಗಳು. ಇಂತಹ ಹಲವು ಪ್ರಶ್ನೆಗಳಿಗೆ ಕೃತಿ ಉತ್ತರ ನೀಡಿದೆ.

ಹಿಂದೂ ರಾಷ್ಟ್ರ ಮತ್ತು ಹಿಂದೂ ಮಹಾಸಭಾ ನಡುವಿನ ಸಂಬಂಧ, ತಳಸಮುದಾಯಗಳನ್ನು ಹಲವು ಮುಖವಾಡಗಳ ಮೂಲಕ ವಂಚಿಸಿದ ಕಥೆ ಹೇಳುವ ರಾಜಾಜಿ ಮತ್ತು ಮೂಕಾಜಿ, ಸಂಘ ಪರಿವಾರ ಪ್ರತಿಪಾದಿಸುವ ರಾಮಾಯಣ ಹಾಗೂ ಈ ನೆಲದ ವೈವಿಧ್ಯಮಯ ರಾಮಾಯಣಗಳ ನಡುವಿನ ಭಿನ್ನತೆ, ಅಯೋಧ್ಯೆಯಲ್ಲಿ ಸಂಘ ಪರಿವಾರ ಮಾಡಿದ ಕೃತ್ಯ, ಶಿವಸೇನೆ, ಬಜರಂಗದಳ ಹುಟ್ಟು ಮತ್ತು ಬೆಳವಣಿಗೆ ಇತ್ಯಾದಿ ವಿಚಾರಗಳನ್ನು ಪುಸ್ತಕದಲ್ಲಿ ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 1

  Frustrated
 • 3

  Angry