7

ಕಪ್ಪು ನೆಲದಂಥ ಅವ್ವ– ಮಗನ ಕಥೆ

Published:
Updated:
ಕಪ್ಪು ನೆಲದಂಥ ಅವ್ವ– ಮಗನ ಕಥೆ

ಮಾತಿನಲ್ಲೂ ನಗುವಿನಲ್ಲೂ ಒಳ್ಳೆಯತನವನ್ನೇ ತುಳುಕಿಸುವಂತೆ ಕಾಣಿಸುವ ಧಾರವಾಡದ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕವಿ, ನಾಟಕಕಾರ, ಅಧ್ಯಾಪಕರಾಗಿ ಪ್ರಸಿದ್ಧರು. ಅವರ ‘ಗಿರಿಜವ್ವನ ಮಗ’ ಕೃತಿಯ ಮೂಲಧಾತು ಕೂಡ ವ್ಯಕ್ತಿ ಹಾಗೂ ಸಮಾಜದಲ್ಲಿರಬಹುದಾದ ಒಳ್ಳೆಯತನದ ಅನಾವರಣ.

ಲೇಖಕರು ತಮ್ಮ ಕೃತಿಯನ್ನು ‘ಬಾಲ್ಯಸ್ಮೃತಿಗಳು’ ಎಂದು ಕರೆದುಕೊಂಡಿದ್ದರೂ, ವ್ಯಕ್ತಿನಿಷ್ಠ ಬರಹವಾಗಿ ಉಳಿಯದೇ ಸಮುದಾಯದ ಸ್ಮೃತಿಗಳ ಸಂಕಲನವಾಗಿ ರೂಪುಗೊಂಡಿರುವುದು ಈ ಕೃತಿಯ ಸಾಧ್ಯತೆಗಳನ್ನು ಹೆಚ್ಚಿಸಿದೆ. ಲೇಖಕರ ಬಾಲ್ಯದಿಂದ ಹೈಸ್ಕೂಲ್‌ ದಿನಗಳವರೆಗಿನ ಬದುಕಿನ ನೆನಪುಗಳು ಇಲ್ಲಿವೆ.

ಪೂರ್ಣ ಪ್ರಮಾಣದ ಆತ್ಮಕಥನಕ್ಕೆ ಮುನ್ನುಡಿಯಂತಿರುವ ಈ ಕೃತಿ, ಒಂದು ಕಾಲಘಟ್ಟದ ಗ್ರಾಮೀಣ ಬದುಕಿನ ದಾಖಲೆಯಂತೆಯೂ ಇದೆ. ಯಾದವಾಡ, ಮನಗುಂಡಿ ಹಾಗೂ ಧಾರವಾಡ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಬಾಲ್ಯವನ್ನು ರೂಪಿಸಿದ ಊರುಗಳು. ಬಾಲ್ಯವನ್ನು ಹಿಂತಿರುಗಿ ನೋಡುವ ನೆಪದಲ್ಲಿ ಈ ಮೂರು ಊರುಗಳ ಒಂದು ಕಾಲಘಟ್ಟದ ಪರಿಸರದ ಚಿತ್ರಣವನ್ನು ಅವರು ಕಟ್ಟಿಕೊಟ್ಟಿದ್ದಾರೆ. ಯಾದವಾಡ ಹಾಗೂ ಮನಗುಂಡಿ ಪುಟ್ಟ ಊರುಗಳಾದರೆ, ಧಾರವಾಡ ಒಂದು ದೊಡ್ಡ ಹಳ್ಳಿಯಂತಿರುವ ಪಟ್ಟಣ. ಇಲ್ಲಿನ ಅಪೂರ್ವ ಮನುಷ್ಯರು ತನ್ನನ್ನು ರೂಪಿಸಿದ ಕಥೆಯನ್ನು ಹೇಳುವ ಲೇಖಕರು, ಪ್ರಾಸಂಗಿಕವಾಗಿ ಕಹಿ ಪ್ರಸಂಗಗಳನ್ನು ದಾಖಲಿಸುತ್ತಾರಾದರೂ, ಆ ಕಹಿ ಕೂಡ ಬದುಕಿನ ಬೆಳವಣಿಗೆಗೆ ಬೇಕಾದ ದ್ರವ್ಯವಾಗಿಯೇ ಕಾಣಿಸುತ್ತದೆ. ಮನಗುಂಡಿಯ ಬಸಪ್ಪಜ್ಜನ ಪ್ರಸಂಗ ಇದಕ್ಕೊಂದು ಉದಾಹರಣೆ.

ಎರಡೂವರೆ ವರ್ಷದ ಹುಡುಗನಾಗಿದ್ದಾಗ ಅಪ್ಪನನ್ನು ಕಳೆದುಕೊಳ್ಳುವ ಬಾಲಕ, ಅಮ್ಮನೊಂದಿಗೆ ಯಾದವಾಡದ ಅಜ್ಜ ವಿರೂಪಾಕ್ಷಪ್ಪ ಹಂಪಣ್ಣನವರ ಮನೆ ಸೇರಿಕೊಳ್ಳುತ್ತಾನೆ. ಹಂಪಣ್ಣನವರದು ಬಡತನವನ್ನೇ ಹಾಸಿ ಹೊದ್ ದಹೃದಯವಂತಿಕೆಯ ಕುಟುಂಬ. ಯಾದವಾಡದಲ್ಲಿ ಹಾಗೂ ಹೀಗೂ ಮೂರು ವರ್ಷ ಕಳೆಯುವ ಗಿರಿಜವ್ವ, ಮನಗುಂಡಿಯಲ್ಲಿದ್ದ ತಂದೆಯ ತಮ್ಮನಾದ ಬಸಪ್ಪನವರ ಆಶ್ರಯಕ್ಕೆ ಬರುತ್ತಾಳೆ. ಬಸಪ್ಪಜ್ಜನದು ವಿಚಿತ್ರ ಬದುಕು. ಗದಿಗೆಮ್ಮ ಎನ್ನುವ ಹೆಣ್ಣಿನೊಡನೆ ಮದುವೆಯಾಗದೆಯೂ ಘನತೆಯ ಬದುಕನ್ನು ಬಾಳಿದ ವ್ಯಕ್ತಿಯಾತ. ಬಸಪ್ಪ– ಗದಿಗೆಮ್ಮರ ಆಶ್ರಯದಲ್ಲಿ, ಅವರ ಚಹಾ ಅಂಗಡಿಯ ಪರಿಸರದಲ್ಲಿ ಗಿರಿಜವ್ವ ಹಾಗೂ ಅವರ ಮಗನ ಬದುಕು ಟಿಸಿಲೊಡೆಯುತ್ತದೆ. ಆದರೆ, ಗದಿಗೆಮ್ಮನ ಸಾವಿನ ನಂತರ ಬಸಪ್ಪಜ್ಜ ವಿಚಿತ್ರವಾಗಿ ವರ್ತಿಸುತ್ತಾನೆ. ಮನೆಗೆ ಮಾರಿ ಎನ್ನುವ ಆತನ ನಡವಳಿಕೆ, ಮನೆಯವರ ಪಾಲಿಗೆ ಕ್ರೌರ್ಯವಾಗಿ ಪರಿಣಮಿಸುತ್ತದೆ. ಕೊನೆಗೆ, ಗಿರಿಜವ್ವ ಹಾಗೂ ಆಕೆಯ ಮಗ ಅಳುತ್ತಲೇ ಯಾದವಾಡದ ದಾರಿ ಹಿಡಿಯುತ್ತಾರೆ. ಈ ಪ್ರಸಂಗ ಅದೆಷ್ಟು ಸೂಕ್ಷ್ಮವಾಗಿ ಚಿತ್ರಣಗೊಂಡಿದೆಯೆಂದರೆ– ಗಿರಿಜವ್ವ ಮತ್ತು ಮಗನ ದುಃಖಕ್ಕೆ ಓದುಗರು ಸ್ಪಂದಿಸಿದರೂ, ಆ ಪ್ರತಿಕ್ರಿಯೆ ಬಸಪ್ಪಜ್ಜನ ಕುರಿತು ತಿರಸ್ಕಾರವಾಗಿ ಬದಲಾಗುವುದಿಲ್ಲ. ಬಸಪ್ಪಜ್ಜನ ಬದುಕು ಒಬ್ಬನೇ ವ್ಯಕ್ತಿ ಪ್ರತಿನಿಧಿಸಬಹುದಾದ ಉದಾತ್ತತೆ ಹಾಗೂ ಸಣ್ಣತನವನ್ನು ಪ್ರತಿನಿಧಿಸುವಂತಿದೆ.

ಪಟ್ಟಣಶೆಟ್ಟಿಯವರ ಬಾಲ್ಯವನ್ನು ಪ್ರಭಾವಿಸಿದ ಹಲವು ವ್ಯಕ್ತಿತ್ವಗಳು ಕೃತಿಯಲ್ಲಿ ಕಿಕ್ಕಿರಿದಿವೆ. ತನ್ನ ಸಂಪರ್ಕಕ್ಕೆ ಬಂದ ಜನರನ್ನು ಪರಿಚಯಿಸುವ ಮೂಲಕವೇ, ಆ ವ್ಯಕ್ತಿತ್ವಗಳ ಮೊತ್ತ ‘ಇಂದಿನ ನಾನು’ ಎಂದು ಚಿತ್ರಿಸುವ ವಿನಯದ ದಾರಿ ಕೃತಿಯಲ್ಲಿದೆ.ಇಲ್ಲಿನ ಪುಟ್ಟ ಪುಟ್ಟ ವ್ಯಕ್ತಿಚಿತ್ರಗಳಲ್ಲಿನ ಕೆಲವರು, ಪುಸ್ತಕದ ಚೌಕಟ್ಟನ್ನು ದಾಟಿ ವರ್ತಮಾನವನ್ನು ಪ್ರವೇಶಿಸಲು ಹವಣಿಸುವಂತೆ ಕಾಣಿಸುತ್ತದೆ. ಧಾರವಾಡದಿಂದ ಮನಗುಂಡಿಗೆ ಬರುತ್ತಿದ್ದ ಗಣೀಸಾಬಿ ಎನ್ನುವ ದನಗಳ ವ್ಯಾಪಾರಿಯದು ಅಂಥದೊಂದು ವ್ಯಕ್ತಿತ್ವ. ಊರಿನಲ್ಲೆಲ್ಲ ಸ್ನೇಹದ ಬಳಕೆ ಹೊಂದಿದ್ದ ಗಣೀಸಾಬಿ, ಒಂದು ಮನೆಯಲ್ಲಿ ವಸತಿಯ ಆತಿಥ್ಯವನ್ನೂ ಪಡೆಯುತ್ತಿದ್ದ.  ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವ ಇಂದಿನ ಸಂದರ್ಭದಲ್ಲಿ ಗಣೀಸಾಬಿ ನಮ್ಮ ನಡುವೆಯೇ ಎಲ್ಲೂ ಸುಳಿದಾಡುತ್ತಿರುವಂತೆ ಕಾಣಿಸುತ್ತಾನೆ. ಅಲ್ಲಾಬಖ್ಶಾ ಎನ್ನುವ ಸಹಪಾಠಿಯ ಮನೆಯಲ್ಲಿ ಬಾಲಕ ಸಿದ್ಧಲಿಂಗ ತಿಂದ ಚೊಂಗ್ಯಾ ಎನ್ನುವ ಸಿಹಿಯ ಸವಿ ಓದುಗರದೂ ಆಗುತ್ತದೆ.

ಗ್ರಾಮೀಣ ಪರಿಸರ ಎಂದಮೇಲೆ ಸ್ವಾರಸ್ಯಕರ ಪ್ರಸಂಗಗಳಿಗೇನು ಕಡಿಮೆ. ನಾಟಕದ ಸ್ಟೇಜಿನ ಮೇಲೆ ಯಮನ ಪಾತ್ರಧಾರಿ ಕೋಣವನ್ನು ಹತ್ತಿಸುವ ಪ್ರಸಂಗ, ಮಾವನೊಂದಿಗೆ ಚೈನಿ ಮಾಡಲಿಕ್ಕೆ ಧಾರವಾಡಕ್ಕೆ ಹೋಗುವ ಹುಡುಗ ತನ್ನ ಹೊಸ ಚೆಡ್ಡಿ ಕಳಕೊಂಡು ಬರಿಕುಂಡಿಯಲ್ಲಿ ಮನೆಗೆ ವಾಪಸ್ಸಾಗುವುದು– ಇಂಥ ಕೆಲವು ಘಟನೆಗಳು ‘ಗಿರಿಜವ್ವನ ಮಗ’ ಕೃತಿಯ ಓದಿಗೆ ಸರಾಗಸ್ಪರ್ಶ ನೀಡಿವೆ.

‘ತಗಣೀ ಪೇಂಟಿಂಗ್ಸ್’ ಪುಸ್ತಕದಲ್ಲಿನ ಸ್ವಾರಸ್ಯಕರ ಪ್ರಸಂಗಗಳಲ್ಲೊಂದು. ಧಾರವಾಡದಲ್ಲಿ ಕಲಿಯುವ ದಿನಗಳಲ್ಲಿ ಪ್ರಚಂಡ ತಗಣೀಸೈನ್ಯದ ಎದುರು ಲೇಖಕರು ಹಾಗೂ ಗಿರಿಜವ್ವ ಮಂಡಿಯೂರಿ, ಸಂಘರ್ಷರಹಿತ ಸಹಜೀವನವನ್ನು ರೂಢಿಸಿಕೊಳ್ಳುತ್ತಾರೆ. ಆದರೆ, ಗಿರಜವ್ವನ ಎದುರು ಮನೆಯವರು ತಗಣಿ ದಾಳಿ ಎದುರಿಸಲು ಕಂಡುಕೊಂಡ ದಾರಿ ಅಪೂರ್ವವಾದುದು. ಜೈನಧರ್ಮೀಯರೂ ಅಹಿಂಸಾಪಾಲಕರೂ ಆದ ಆ ಕುಟುಂಬದವರು ವ್ಯಕ್ತಿಯೊಬ್ಬನಿಗೆ ಪಗಾರ ಕೊಟ್ಟು ತಮ್ಮ ಮನೆಯಲ್ಲಿ ಮಲಗಿಸಿಕೊಳ್ಳಲು ನೇಮಿಸಿಕೊಳ್ಳುತ್ತಾರೆ. ಪ್ರತಿದಿನ ರಾತ್ರಿ ಮುಂಬಾಗಿಲ ಕಡೆಗೆ ಮುಖ ಮಾಡಿಕೊಂಡು ಮಲಗುವುದು ಅವನ ಕೆಲಸ. ಆ ಮನುಷ್ಯನ ಶರೀರದ ವಾಸನೆಗೆ ಆಕರ್ಷಿತವಾಗಿ ಮನೆಯಲ್ಲಿದ್ದ ತಿಗಣೆಗಳೆಲ್ಲ ಆತನ ಮೇಲೆ ದಾಳಿ ಮಾಡುತ್ತಿದ್ದವು. ಜೈನಧರ್ಮದವರ ಮನೆಯಲ್ಲಿ ಹಿಂಸೆ ನಿಷೇಧವಾದ ಕಾರಣ ಆತ ತಿಗಣಿಗಳನ್ನುಹೊಸಕುವಂತಿರಲಿಲ್ಲ, ಕೊಲ್ಲುವಂತಿರಲಿಲ್ಲ. ಪಗಾರದ ಕಾರಣದಿಂದಾಗಿ ತಗಣಿಗಳಿಂದ ಮೌನವಾಗಿ ಕಡಿಸಿಕೊಳ್ಳುತ್ತ, ರಕ್ತದಾನ ಮಾಡುವುದು ಆತನ ಕೆಲಸವಾಗಿತ್ತು.

ಧಾರವಾಡದಲ್ಲಿನ ಬಾಸೆಲ್ಮಿಶನ್‌ ಹೈಸ್ಕೂಲ್‌ನಲ್ಲಿನ ಕಲಿಕೆ ಪಟ್ಟಣಶೆಟ್ಟರಲ್ಲಿನ ಕಾವ್ಯ ಪ್ರತಿಭೆ ಚಿಗುರಲಿಕ್ಕೆ ವೇದಿಕೆಯಾಯಿತು. ಅಲ್ಲಿನ ಗುರುಗಳು, ವಿಶೇಷವಾಗಿ ವರದರಾಜ ಹುಯಿಲಗೋಳರು ತಮಗೆ ನೀಡಿದ ಉತ್ತೇಜನವನ್ನು ಲೇಖಕರು ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ. ಬೇಂದ್ರೆಯವರ ಕುರಿತು ಕವಿತೆ ವಾಚಿಸಿದ್ದು, ಕುವೆಂಪು ಭಾಷಣ ಕೇಳಿ ನಿರಾಶನಾದದ್ದು – ಇವೆಲ್ಲ ನೆನಪುಗಳು ಸೊಗಸಾಗಿವೆ.

ಪುಸ್ತಕದ ಕೊನೆಯಲ್ಲಿ ದಿನಚರಿಯನ್ನು ಆಧರಿಸಿ ನೀಡಿರುವ ಕೆಲವು ಘಟನೆಗಳ ದಿನಾಂಕವಾರು ವಿವರಗಳು ಲೇಖಕರ ವೈಯಕ್ತಿಕ ಶಿಸ್ತಿಗೆ ಉದಾಹರಣೆಯಂತಿವೆ. ಎಲ್ಲಿಯೂ ಅತಿ ಬರವಣಿಗೆ ಇಲ್ಲದಿರುವುದು ‘ಗಿರಿಜವ್ವನ ಮಗ’ ಕೃತಿಯ ಮತ್ತೊಂದು ವಿಶೇಷ. ಮಗನಿಗೆ ಎರಡೂವರೆ ವರ್ಷವಿದ್ದಾಗ ಗಂಡನನ್ನು ಕಳೆದುಕೊಳ್ಳುವ, ದಾಂಪತ್ಯದ ಮುಂಜಾವಿನಿಂದ ಇನ್ನೂ ಹೊರಬರದ ಗಿರಿಜಾ ಎನ್ನುವ ಹೆಣ್ಣುಮಗಳು, ಬಡತನದ ನಡುವೆಯೂ ಸ್ವಾಭಿಮಾನವನ್ನು ಉಳಿಸಿಕೊಂಡು ಮಗನನ್ನು ಬೆಳೆಸಿದ ಸಾಹಸಗಾಥೆಯನ್ನು ಪಟ್ಟಣಶೆಟ್ಟಿಯವರು ಭಾವಾವೇಶಕ್ಕೊಳಗಾಗದೆ ಚಿತ್ರಿಸಿದ್ದಾರೆ. ‘ಅಪ್ಪನ ದೇಹವನ್ನು ಹೆಣದ ಕುಳಿಯೊಳಗೆ ಇಳಿಸಿದ ದೃಶ್ಯ ತನ್ನೊಳಗೆ ಈಗಲೂ ನೆನಪಿದೆ’ ಎನ್ನುವ ಅವರು, ‘ಬಾಲ್ಯದ ಅನುಭವಗಳ ಕಾರಣದಿಂದಲೇ ಈಗಲೂ ಅತ್ಯಂತ ಮುಕ್ತವಾಗಿ ನಗುವುದು, ಸುಖದ ತುತ್ತ ತುದಿಯನ್ನು ಸಹ ಸಂತೋಷ ಎಂದು ಭಾವಿಸುವುದು ನನಗೆ ಸಾಧ್ಯವಾಗುವುದೇ ಇಲ್ಲ’ ಎನ್ನುತ್ತಾರೆ. ಇಂಥ ಅಂತರ್ಮುಖಿ ವ್ಯಕ್ತಿತ್ವವನ್ನು ರೂಪಿಸಿದ ಕವಿಯ ಬಾಲ್ಯಕಾಲವನ್ನು, ಈ ಹೊತ್ತಿನ ಅವರ ಪ್ರಾಂಜಲ ನಗುವನ್ನು ನೆನಪಿನಲ್ಲಿಟ್ಟುಕೊಂಡೇ ಓದುವುದು ಒಂದು ವಿಶೇಷ ಅನುಭವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry