ಬಿಎಸ್‌ಎನ್‌ಎಲ್‌ ಉಳಿವಿಗೆ ಸಂಘಟಿತ ಹೋರಾಟ

7
8ನೇ ಜಿಲ್ಲಾ ಸಮ್ಮೇಳನ: ಜಿಲ್ಲಾ ಕಾರ್ಯದರ್ಶಿ ತನ್ವೀರ್ ಪಾಷಾ ಹೇಳಿಕೆ

ಬಿಎಸ್‌ಎನ್‌ಎಲ್‌ ಉಳಿವಿಗೆ ಸಂಘಟಿತ ಹೋರಾಟ

Published:
Updated:

ಉಡುಪಿ: ಟವರ್ ಕಂಪೆನಿಗಳ ಉಳಿವಿಕೆಯ ಮೇಲೆ ಬಿಎಸ್‌ಎನ್‌ಎಲ್‌ ಸಂಸ್ಥೆಯ ಭವಿಷ್ಯ ನಿಂತಿದೆ. ಈ ನಿಟ್ಟಿನಲ್ಲಿ ಕಂಪೆನಿಗಳ ಉಳಿವಿಗೆ ಸಂಘಟಿತ ಹೋರಾಟ ಅಗತ್ಯ ಎಂದು ಬಿಎಸ್‌ಎನ್‌ಎಲ್‌ ಎಂಪ್ಲಾಯೀಸ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ತನ್ವೀರ್ ಪಾಷಾ ಅಭಿಪ್ರಾಯಪಟ್ಟರು.

ನಗರದ ನಾರಾಯಣ ಗುರು ಸಭಾ ಭವನದಲ್ಲಿ ಶುಕ್ರವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ 8ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ವೇತನ ಆಯೋಗದ ಶಿಫಾರಸು ಜಾರಿ ಎಷ್ಟು ಮುಖ್ಯವೋ, ಟವರ್ ಕಂಪೆನಿಗಳ ಉಳಿವೂ ಅಷ್ಟೇ ಮುಖ್ಯ. ಟವರ್‌ಗಳನ್ನು ಖಾಸಗಿ ಸಂಸ್ಥೆಗಳ ತೆಕ್ಕೆಗೆ ಹೋಗದಂತೆ ಕಾರ್ಮಿಕ ಸಂಘಟನೆಗಳು ಹೋರಾಟದ ಮೂಲಕ ತಡೆಯಬೇಕು ಎಂದರು.

ಬಿಎಸ್‌ಎನ್‌ಎಲ್‌ ಸಂಸ್ಥೆ ಸಮುದ್ರವಿದ್ದಂತೆ. ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ದೊಡ್ಡ ಪ್ರಮಾಣದ ನಷ್ಟ ಅನುಭವಿಸಿದರೂ, ಸಂಸ್ಥೆ ಇಂದಿಗೂ ಸದೃಢವಾಗಿದೆ. ಬಿಎಸ್‌ಎನ್‌ಎಲ್‌ ಖಾಸಗೀಕರಣವಾಗುತ್ತದೆ ಎಂಬ ಅನುಮಾನ ಬೇಡ ಎಂದರು.

ಬಿಎಸ್‌ಎನ್‌ಎಲ್‌ಇಯು ವೃತ್ತ ಕಾರ್ಯದರ್ಶಿ ಗುಂಡಣ್ಣ ಮಾತನಾಡಿ, ದುರ್ಗಮ ಪ್ರದೇಶ, ಕಡಿದಾದ ಗಡಿಭಾಗಗಳಿಗೂ ಸಂವಹನ ಸೇವೆ ಒದಗಿಸಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರು.

ಬಿಎಸ್‌ಎನ್‌ಎಲ್‌ಇಯು ವೃತ್ತದ ಅಧಿಕಾರಿ ಬಿ.ಪಿ.ನಾರಾಯಣ ಮಾತನಾಡಿ, ಬಿಎಸ್‌ಎನ್‌ಎಲ್‌ ಸಂಸ್ಥೆ ನಷ್ಟದಲ್ಲಿದೆ ಎನ್ನಲಾಗುತ್ತಿದ್ದು, ಸಂಸ್ಥೆಯ ಒಟ್ಟು ಆದಾಯದ ಅರ್ಧ ಭಾಗ ಸಿಬ್ಬಂದಿ ವೇತನಕ್ಕೆ ವ್ಯಯಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಸಂಸ್ಥೆಯಲ್ಲಿ ಅಗತ್ಯ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ ಎಂದರು.

ಪ್ರತಿವರ್ಷ ಸಾವಿರಾರು ಸಿಬ್ಬಂದಿ ನಿವೃತ್ತರಾಗುತ್ತಿದ್ದಾರೆ. ಈ ಜಾಗಕ್ಕೆ ಮರು ನೇಮಕಾತಿ ನಡೆಯುತ್ತಿಲ್ಲ. ಇರುವ ಸಿಬ್ಬಂದಿ ಮೇಲೆ ಕೆಲಸದ ಹೊರೆ ಹೆಚ್ಚುತ್ತಿದೆ. ದುಡಿಯುವ ವರ್ಗದ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಿಬ್ಬಂದಿಗೆ ಕೆಲವು ಕಡೆ ಶೌಚಾಲಯವೂ ಇಲ್ಲದಂತಹ ಪರಿಸ್ಥಿತಿ ಇದೆ. ನಗರ ಪ್ರದೇಶಗಳಲ್ಲಿ ಸಮರ್ಪಕವಾಗಿ ಟವರ್ ಸಿಗ್ನಲ್‌ ದೊರೆಯುತ್ತಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವತ್ತ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಡಿಕೆಟಿಡಿ ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್ ಜಿ.ಆರ್.ರವಿ. ಡಿಕೆಟಿಡಿ ಡಿಜಿಎಂ ಎಂ.ಎಚ್‌.ಪ್ರಕಾಶ್, ಡಿಜಿಎಂ (ಹಣಕಾಸು) ಶಿವರಾಂ ಕಾರಂತ್, ಉಡುಪಿ ಡಿಜಿಎಂ ರೇಖಾ ಭಟ್, ಬಿಎಸ್‌ಎನ್‌ಎಲ್‌ಇಯು ವೃತ್ತದ ಸಹಾಯಕ ಕಾರ್ಯದರ್ಶಿ ಪಿ.ಡೀಕಯ್ಯ, ಸಂಘಟನಾ ಕಾರ್ಯದರ್ಶಿ ಗುರುರಾಜ್, ಜಿಲ್ಲಾಧ್ಯಕ್ಷ ಬಿ.ಕೃಷ್ಣ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry