ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳದಿಂಗಳ ಸಂಗೀತಕ್ಕೆ 200ರ ಸಂಭ್ರಮ

Last Updated 26 ಮೇ 2018, 19:30 IST
ಅಕ್ಷರ ಗಾತ್ರ

–ಕೆ. ರಾಮಮೂರ್ತಿರಾವ್

ಮೈಸೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಸುತ್ತೂರು ಮಠವು ನೂರಾರು ವರ್ಷಗಳಿಂದ ಸಮಾಜದ ಉದ್ಧಾರಕ್ಕಾಗಿ ವಿವಿಧ ರೀತಿಯಲ್ಲಿ ಕೊಡುಗೆ ನೀಡುತ್ತ ಬಂದಿದೆ. ಕರ್ನಾಟಕದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಶ್ರೀಮಠದ ಕೊಡುಗೆ ಅಪಾರ.

ಸುತ್ತೂರು ವೀರಸಿಂಹಾಸನ ಮಠಕ್ಕೆ ಒಂದು ಬಹುಮುಖಿ ಆಯಾಮ ನೀಡಿದವರು ಶ್ರೀ ಪೀಠದ 23ನೆಯ ಜಗದ್ಗುರುಗಳಾದ ಡಾ.  ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು. ಶ್ರೀಮಠದ ಮೂಲಕ ಅನ್ನ, ವಿದ್ಯೆ ಹಾಗೂ ಆರೋಗ್ಯದ ತ್ರಿವಿಧ ದಾಸೋಹ ನಿರಂತರವಾಗಿ ನಡೆಯುತ್ತಿದೆ. ಅದರ ಜತೆಯಲ್ಲಿ ಪರಮಪೂಜ್ಯರು ಲಲಿತಕಲೆಗಳಿಗೂ ಆಶ್ರಯದಾತರಾಗಿದ್ದು ಕಲೆಯ ಪೋಷಣೆ ಇಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಡಾ. ರಾಜೇಂದ್ರ ಸ್ವಾಮೀಜಿಯವರು ಸ್ಥಾಪಿಸಿದ ಜೆ.ಎಸ್‌.ಎಸ್ ಸಂಗೀತಸಭೆಯ ಮೂಲಕ ಶಾಸ್ತ್ರೀಯ ಸಂಗೀತದ ಪೋಷಣೆ, ಪ್ರತಿ ವರ್ಷವೂ ಸಂಗೀತ ಸಮ್ಮೇಳನದ ಆಯೋಜನೆ, ಬಹಳ ಹಿಂದಿನಿಂದಲೂ ಜೆ.ಎಸ್‌.ಎಸ್ ಶಾಲೆಗಳಲ್ಲಿ ಸಂಗೀತ, ನೃತ್ಯ, ಅಧ್ಯಾಪಕರ ನೇಮಕಾತಿ ಮುಂತಾದ ಕಲಾಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ.

ಈಗ ಶ್ರೀ ಪೀಠದ 24ನೆಯ ಜಗದ್ಗುರುಗಳಾದ ಪರಮಪೂಜ್ಯ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಕೂಡ ಉನ್ನತ ಕಲಾಪ್ರೇಮಿಗಳೂ, ಕಲಾಸಂರಕ್ಷಕರೂ ಆಗಿದ್ದು ಸುತ್ತೂರಿನ ಜಾತ್ರೆ ಸಂದರ್ಭದಲ್ಲಿ ಒಂದು ವಾರ ಕಾಲ ವಿವಿಧ ವೇದಿಕೆಗಳಲ್ಲಿ ಸಂಗೀತ, ನೃತ್ಯ, ನಾಟಕ ಮುಂತಾದ ಕಲೆಗಳ ಪ್ರದರ್ಶನಗಳ ಏರ್ಪಡಿಸುವ ಮೂಲಕ, ರಾಜ್ಯ ಮಟ್ಟದ ಭಜನಾ ಮೇಳವನ್ನು ಏರ್ಪಡಿಸುವ ಮೂಲಕ ಮತ್ತು ಸೋಬಾನೆ ಪದಗಳ ಸ್ಪರ್ಧೆ ಮುಂತಾದ ನಶಿಸಿಹೋಗುತ್ತಿರುವ ಕಲೆಗಳಿಗೆ ಮರು ಜೀವ ತುಂಬುವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತ ನಮ್ಮ ನಾಡಿನ ಎಲ್ಲ ಕಲಾವಿದರ ಕಣ್ಮಣಿಯೆನಿಸಿದ್ದಾರೆ.

ಸಂಗೀತ ಕಲೆಯ ಸಂಗೋಪನೆಯ ಘನ ಉದ್ದೇಶದೊಂದಿಗೆ ಮತ್ತು ನಾಡಿನ ಒಳಗಿನ ಮತ್ತು ಹೊರಗಿನ ಪ್ರಸಿದ್ಧ ಕಲಾವಿದರ ಕಲೆಯ ರಸದೌತಣವನ್ನು ಮೈಸೂರಿನ ಜನತೆಗೆ ಉಣಬಡಿಸುವ ಸಲುವಾಗಿ 2002 ರಿಂದ ಇಲ್ಲಿಯತನಕ 15 ವರ್ಷಗಳಿಂದ ಶ್ರೀಮಠವು ಹುಣ್ಣಿಮೆಯ ದಿನದಂದು ‘ಬೆಳದಿಂಗಳ ಸಂಗೀತ’ ಎಂಬ ಹೆಸರಿನ ಸರಣಿ ಸಂಗೀತ ಕಛೇರಿಗಳನ್ನು ನಡೆಸುತ್ತ ಬಂದಿದೆ. ಚಾಮುಂಡಿಬೆಟ್ಟದ ತಪ್ಪಲಿನ ನಿತ್ಯಹರಿದ್ವರ್ಣದ ಪರಿಸರದಲ್ಲಿ ಶ್ರೀಮಠದ ಆವರಣದಲ್ಲಿರುವ ಕಲ್ಯಾಣಿಯ ಸುತ್ತಲಿನ ಕಲ್ಲಿನ ಪಾವಟಿಗೆಯ ಮಧ್ಯೆ ಈ ಕಾರ್ಯಕ್ರಮ ನಡೆಯುತ್ತಿದೆ. ಬೆಳದಿಂಗಳ ಚಂದ್ರ ಮೂಡುವ ದಿಕ್ಕಿಗೆ ಅಂದರೆ ಪೂರ್ವಾಭಿಮುಖವಾಗಿ ಕಲಾವಿದರಿಗೆ ವೇದಿಕೆ, ಅವರಿಗೆ ಅಭಿಮುಖವಾಗಿ ಸುತ್ತಲೂ ಕಲ್ಲುಹಾಸಿನ ಮೆಟ್ಟಿಲುಗಳ ಮೇಲೆ ಜನರು ಆಸೀನರಾಗಲು ಅಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹುಣ್ಣಿಮೆಯ ಚಂದ್ರನ ಹಾಲು ಬೆಳಕು ಕೊಳದ ಮೇಲೆ ಪ್ರತಿಫಲಿಸುತ್ತಿದ್ದಂತೆ ರಸಿಕರ ಕಿವಿಗೆ ಸಂಗೀತಸುಧೆಯ ಸಮಾರಾಧನೆಯೂ ನಡೆಯುತ್ತದೆ. ಇಲ್ಲಿನ ಪವಿತ್ರ ಪರಿಸರದಲ್ಲಿ ಪ್ರಸ್ತುತಗೊಳ್ಳುವ ದೈವಿಕ ಸಂಗೀತ ಎಂತಹ ಪಂಡಿತ ಪಾಮರರನ್ನೂ ತಲೆದೂಗಿಸುವಂತೆ ಮಾಡುತ್ತಿದೆ.

ಲಲಿತಕಲೆಗಳಲ್ಲಿ ಸಂಗೀತವನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಏಕೆಂದರೆ ಅದು ಹೃದಯವನ್ನು ನೇರವಾಗಿ ಮುಟ್ಟುತ್ತದೆ. ಕೇಳುಗನಿಗೆ ಮನಶ್ಶಾಂತಿ ನೀಡುತ್ತದೆ ಮತ್ತು ಪರಮಾನಂದವನ್ನು ಕೊಡುತ್ತದೆ. ಇದರಲ್ಲಿ ಭಕ್ತಿಗೇ ಪರಮಸ್ಥಾನ. ಭಕ್ತಿಯು ಭಗವಂತನನ್ನು ಒಲಿಸುವ ಒಂದು ಪರಿ. ಅದಕ್ಕೆ ಸಂಗೀತವೇ ಸುಲಭ ಸಾಧನ. ಜನರಲ್ಲಿ ಆಧ್ಯಾತ್ಮಿಕತೆಯನ್ನು ಬೆಳಸುವುದರ ಜತೆಗೆ ಭಕ್ತಿಮಾರ್ಗದ ಸಾಧನವಾಗಿರುವ ಸಂಗೀತವನ್ನೂ ಕೇಳಿಸುವ ಕೈಂಕರ್ಯವು ಶ್ರೀಮಠದ ಮೂಲಕ ನಡೆಯುತ್ತಿದೆ.

ಜೀವನದ ಹೊರೆ ಹಗುರವಾಗಲು, ವ್ಯಕ್ತಿ ವ್ಯಕ್ತಿಗಳ ಮಧ್ಯೆ ಸಂಬಂಧ ನಿಕಟವಾಗಲು, ಜನರ ಮಧ್ಯೆ ಸೌಹಾರ್ದ ಮೂಡಿಸಲು ತನ್ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸುವಲ್ಲಿ ಇಂತಹ ಸಂಗೀತ ಕಾರ್ಯಕ್ರಮಗಳ ಪಾತ್ರ ಅತ್ಯಂತ ಮಹತ್ವದೆಂಬುದನ್ನು ಅರಿತಿರುವ ಶ್ರೀಗಳು ಸಂಗೀತದ ಸೊಗಸು, ಸೌರಭವನ್ನು ಪಸರಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ.

ಬೆಳದಿಂಗಳ ಸಂಗೀತದ ಈ ಪವಿತ್ರ ವೇದಿಕೆಯಲ್ಲಿ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ವಿವಿಧ ರೀತಿಯ ವಾದ್ಯಸಂಗೀತ, ದ್ವಂದ್ವ ಗಾಯನ, ಸಂಗೀತದ ದಿಗ್ಗಜರಿಂದ ಜುಗಲ್‌ಬಂದಿ ಮುಂತಾದ ಕಾರ್ಯಕ್ರಮಗಳು ನಡೆದಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಖ್ಯಾತರು ಹಾಗೂ ಉದಯೋನ್ಮುಖರು ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಕಲಾವಿದರು ಇಲ್ಲಿ ಪ್ರಧಾನ ಕಲಾವಿದರಾಗಿ ಅಥವಾ ಪಕ್ಕವಾದ್ಯ ಕಲಾವಿದರಾಗಿ ಭಾಗವಹಿಸಿ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ.

ಪದ್ಮಭೂಷಣ ತ್ರಿಚೂರ್ ರಾಮಚಂದ್ರನ್, ಪದ್ಮಶ್ರೀ ಎಂ. ವೆಂಕಟೇಶ್‌ಕುಮಾರ್, ಪದ್ಮಶ್ರೀ ವಿಶ್ವಮೋಹನ ಭಟ್, ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ, ಉಸ್ತಾದ್ ರಫೀಕ್ ಖಾನ್. ಪಂಡಿತ ಕೈವಲ್ಯಕುಮಾರ್ ಗುರವ, ಡಾ. ಮೈಸೂರು ಮಂಜುನಾಥ, ಮೈಸೂರು ಎಂ. ನಾಗರಾಜ್, ಪ್ರವೀಣ್ ಗೋಡಖಿಂಡಿ, ಎಂ.ಡಿ. ಪಲ್ಲವಿ, ವಿಜಯಪ್ರಕಾಶ್, ವಿದುಷಿಯರಾದ ಡಾ. ಸುಕನ್ಯಾ ಪ್ರಭಾಕರ, ಟಿ.ಎಸ್. ಸತ್ಯವತಿ, ನೀಲಾ ರಾಮ್‌ಗೋಪಾಲ್, ಸರಳಾಯ ಸಹೋದರಿಯರು ಮುಂತಾದವರಲ್ಲದೆ ನರಸಿಂಹಲು ವಡಿವಾಟಿ, ಕದ್ರಿ ಗೋಪಾಲನಾಥನ್, ಎಸ್. ಶಂಕರ್, ಆರ್.ಕೆ. ಪದ್ಮನಾಭ ಮುಂತಾದ ಪ್ರಖ್ಯಾತ ವಿದ್ವಾಂಸರು ಇಲ್ಲಿ ಕಾರ್ಯಕ್ರಮ ನೀಡುತ್ತಾರೆ.

ಇದೇ ತಿಂಗಳು 29ರಂದು ಹುಣ್ಣಿಮೆಯ ದಿನದ ಬೆಳದಿಂಗಳ ಸಂಗೀತಕ್ಕೆ 200ರ ಸಂಭ್ರಮ. ಅಂದು ಸಂಜೆ 6 ಗಂಟೆಗೆ ವಿದುಷಿ ಜಯಂತಿ ಕುಮರೇಶ್ ಅವರ ವೀಣಾವಾದನ ಹಾಗೂ ಪ್ರವೀಣ್ ಗೋಡಖಿಂಡಿ ಅವರ ವೇಣುವಾದನದ ಜುಗಲ್ಬಂದಿ ಕಾರ್ಯಕ್ರಮ ವ್ಯವಸ್ಥೆಯಾಗಿದೆ. ವಿದ್ವಾನ್ ಕೆ.ಯು. ಜಯಚಂದ್ರರಾವ್ ಮೃದಂಗದಲ್ಲೂ, ಪಂ. ಉದಯರಾಜ ಕರ್ಪೂರ್ ತಬಲಾದಲ್ಲೂ ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಬರಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ. ಸಂಗೀತಪ್ರೇಮಿಗಳು  ಸಂಗೀತದ ರಸದೌತಣ ಸವಿಯಬಹುದಾದ ಕಾರ್ಯಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT