ಸಸ್ಯ ಸಂಕುಲದ ಜತೆಗೆ ನೈಜ ನಾಗಬನದ ಮರುಸೃಷ್ಟಿ

7
ಕರಾವಳಿಯಲ್ಲಿ ಹೊಸ ಪರಿಕಲ್ಪನೆ

ಸಸ್ಯ ಸಂಕುಲದ ಜತೆಗೆ ನೈಜ ನಾಗಬನದ ಮರುಸೃಷ್ಟಿ

Published:
Updated:
ಸಸ್ಯ ಸಂಕುಲದ ಜತೆಗೆ  ನೈಜ ನಾಗಬನದ ಮರುಸೃಷ್ಟಿ

ಕರಾವಳಿಯಲ್ಲಿ ನಾಗಾರಾಧನೆಗೆ ಪ್ರಮುಖ ಪ್ರಾಶಸ್ತ್ಯ ಇದೆ. ಆಧುನಿಕ ಪರಿಸ್ಥಿತಿಯಲ್ಲಿ ಪ್ರಕೃತಿದತ್ತ ನಾಗಬನಗಳು ಹೇಳ ಹೆಸರಿಲ್ಲದಂತಾಗಿವೆ. ಮಾನವನ ಅನುಕೂಲತೆಗಳಿಗೆ ತಕ್ಕಂತೆ ಪ್ರಸ್ತುತ ನಾಗಾಲಯಗಳು ಕಾಂಕ್ರಿಟ್‌ಕರಣ ಆಗಿವೆ. ತನ್ನ ನಿಜ ಸ್ವರೂಪ ಕಳೆದುಕೊಳ್ಳುತ್ತಿರುವ ಕಾಲ ಘಟ್ಟದಲ್ಲಿ ಹಳೆಯ ಕಾಲದ ಪರಿಕಲ್ಪನೆ ಜತೆಗೆ ಪ್ರಕೃತಿ ದತ್ತವಾಗಿ ರೂಪುಗೊಂಡ ಅಪರೂಪದ ನಾಗಬನವೊಂದು ಗಮನ ಸೆಳೆದಿದೆ.

ಉಡುಪಿ ತಾಲ್ಲೂಕಿನ ಕುತ್ಯಾರು ಗ್ರಾಮೀಣ ಭಾಗದಲ್ಲಿ ಕೇಂಜ ತಂತ್ರಿ ಕುಟುಂಬದ ನಾಗಬನವನ್ನು ಪ್ರಾಕೃತಿಕ ಸೊಬಗಿನೊಂದಿಗೆ ಪರಿಸರ ಸ್ನೇಹಿಯಾಗಿ ನಿರ್ಮಾಣ ಮಾಡುವ ಮೂಲಕ ಹೊಸ ಅಧ್ಯಾಯವನ್ನು ಬರೆಯಲಾಗಿದೆ. ಶಾಸ್ತ್ರದ ಪ್ರಕಾರ ಒಂದು ನಾಗಬನ ಎಂದರೆ ನಾಗಬನದ ಸುತ್ತಲೂ 60 ರಿಂದ 70 ಬಗೆಯ ವೃಕ್ಷಗಳು ಇರಬೇಕು. ಜತೆಗೆ 30 ಕ್ಕೂ ಅಧಿಕ ವಿವಿಧ ಪುಷ್ಪದ ಗಿಡಗಳು, ಪಕ್ಷಿಗಳಿಗೆ ವಾಸ ಸ್ಥಾನ ಆಗಿರಬೇಕು. ನಾಗ ಸಂತತಿ ವೃದ್ಧಿ ಜತೆಗೆ ಕೃಷಿ ಸಂಪತ್ತು ವೃದ್ಧಿಗೆ ಅನುಕೂಲವಾಗುವಂತಹ ಪೂರಕ ತಂಪು ವಾತಾವರಣ ಇರಬೇಕು. ಮಾತ್ರವಲ್ಲದೆ ಸಮೀಪದಲ್ಲೇ ಕೆರೆ, ತೊರೆಗಳಿದ್ದು, ಅಂತರ್ಜಲ ವೃದ್ಧಿಯಾಗುವ ನಿಟ್ಟಿನಲ್ಲಿ ಸುಂದರ ಪರಿಸರ ನಾಗ ಬನಗಳು ರೂಪುಗೊಳ್ಳಬೇಕು.

ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕುತ್ಯಾರು ಕೇಂಜ ಶ್ರೀಧರ ತಂತ್ರಿ ಅವರು ತಮ್ಮ 10 ಸೆಂಟ್ಸ್ ಸ್ಥಳದಲ್ಲಿ ಸಂಪ್ರದಾಯಬದ್ಧ ಹಾಗೂ ಪ್ರಾಕೃತಿಕ ಚೆಲುವಿನ ಕರಾವಳಿಯಲ್ಲೇ ಅಪರೂಪ ಎಂದೆನೆಸಿರುವ ಬಲು ಆಕರ್ಷಕ ಮಾದರಿಯ ನಾಗಬನ ನಿರ್ಮಾಣ ಮಾಡಿದ್ದಾರೆ.

ತುಳುನಾಡಿನಲ್ಲಿ ನಮ್ಮ ಪೂರ್ವಿಕರಿಂದ ನಿರ್ಮಾಣ ಮಾಡಿರುವ ನಾಗಬನಗಳು ಯಾವ ರೀತಿಯಲ್ಲಿ ಸಸ್ಯಸಂಕುಲಗಳೊಂದಿಗೆ ಕಂಗೊಳಿಸುತ್ತಿತ್ತು. ಇದೇ ಮಾದರಿಯಲ್ಲಿ ಇಲ್ಲಿ ಬಿಸಿಲು ಮಳೆಗೆ ಮೈಯೊಡ್ಡಿ ನಿಂತಿರುವ ಸಣ್ಣ ನಾಗಾಲಯದಲ್ಲಿ ನಾಗನ ಶಿಲಾ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಾಗನ ಗುಡಿಯಲ್ಲಿ ಸುತ್ತಲೂ ಆವರಣ ಗೋಡೆ ನಿರ್ಮಿಸಿ, ವಾಯುವಿಹಾರಕ್ಕೆ ಸಹಕಾರಿಯಾಗುವಂತೆ ನೆಲಕ್ಕೆ ಹುಲ್ಲು ಹಾಸು ಹಾಕಲಾಗಿದೆ. ಗುಡಿ ಮುಂಭಾಗದಲ್ಲಿ ಭಕ್ತರು ನಿಲ್ಲಲು ಕೇರಳ ಮಾದರಿ ಸಣ್ಣ ಹೆಂಚಿನ ಮಾಡನ್ನು ನಿರ್ಮಾಣ ಮಾಡಲಾಗಿದೆ. ಬಿಟ್ಟರೆ ಉಳಿದಂತೆ ಪ್ರಕೃತಿಯೊಂದಿಗೆ ತೆರೆದು ಕೊಂಡಿದೆ.

ನಾಗನ ಗುಡಿಯ ಮುಂಭಾಗದಲ್ಲಿ ಹಳೆ ರಾಮತೀರ್ಥ ಕೆರೆಯನ್ನೇ ಸುಂದರವಾಗಿ ಅಭಿವೃದ್ಧಿ ಪಡಿಸಿ ಹೊಸ ರೂಪ ಕೊಡಲಾಗಿದೆ. ನಾಗ ಬನದ ಸುತ್ತಲೂ 84 ವಿವಿಧ ಬಗೆ ಔಷಧೀಯ ಸಸ್ಯಗಳು, 30 ವಿವಿಧ ಜಾತಿಯ ಹೂವಿನ ಗಿಡ ನೆಡಲಾಗಿದೆ. ಸುತ್ತಲೂ ಸುಮಾರು 15 ಗೆಂದಾಳಿ ಜಾತಿ ತೆಂಗಿನಮರ, 50 ಅಡಿಕೆ ಮರ ನಾಗಬನದ ನಾಲ್ಕು ಸುತ್ತಲಿನಲ್ಲೂ ಸಂಪಿಗೆ ಮರಗಳನ್ನು ನೆಡಲಾಗಿದೆ. ಭಕ್ತಾಧಿಗಳಿಗೆ ವಾಯುವಿಹಾರಕ್ಕೂ ಯೋಗ್ಯವಾಗು

ವಂತೆ ವ್ಯವಸ್ಥೆ ಮಾಡಲಾಗಿದೆ.

ಸಂಜೆ ವೇಳೆ ನಾಗಾಲಯದಲ್ಲಿ ಸುತ್ತಾಡಲು ಆವರಣಗೋಡೆಯ ಸುತ್ತಲೂ ಪಾರ್ಕ್‌ ಲೈಟ್‌ಗಳನ್ನು ಅಳವಡಿಸಿ ಹೊಸ ರೂಪ ನೀಡಲಾಗಿದೆ. ಹಳೆಯ ಕಾಲದ ನಾಗಾಲಯದ ಮಾದರಿಯಲ್ಲಿ ಅಪೂರ್ವ ಸಸ್ಯರಾಶಿಯೊಂದಿಗೆ ಆಕರ್ಷಕ ನಾಗಾಲಯವೊಂದು ನಿರ್ಮಾಣಗೊಂಡಿದೆ. ಕರಾವಳಿ ಆಸ್ತಿಕರನ್ನು ಆಕರ್ಷಿಸುವಂತಿದೆ. ವಿಶೇಷ ಶೈಲಿಯಲ್ಲಿ ಮಾದರಿ ಪರಿಸರ ಸ್ನೇಹಿಯಾಗಿ ನಿರ್ಮಾಣಗೊಂಡ ಅಪರೂಪದ ನಾಗಲಾಯ ನಿರ್ಮಾಣಕ್ಕೆ ಸುಮಾರು ₹10 ಲಕ್ಷ ವೆಚ್ಚ ತಗುಲಿದೆ. ಜೂ.3 ರಂದು ನಾಗಾಲಯ ಲೋಕಾರ್ಪಣೆ ಮಾಡಲಾಗುತ್ತದೆ. ಇಲ್ಲಿ ಮಾನಸಿಕ ನೆಮ್ಮದಿಯೊಂದಿಗೆ ಹೊಸ ಅನುಭವಕೊಡುವ ನೈಜ ನಾಗಬನದ ಮರು ಸೃಷ್ಟಿಯಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಅಪರೂಪ ಮಾದರಿ ನಿರ್ಮಾಣ

ಆಧುನಿಕ ಪರಿಸ್ಥಿತಿಯಲ್ಲಿ ಹೊಸ ಹೊಸ ಕಾಂಕ್ರೀಟಿನ ನಾಗಾಲಯಗಳನ್ನು ನಿರ್ಮಾಣ ಮಾಡುವ ಭರದಲ್ಲಿ ಪುರಾತನ ಹಾಗೂ ಅಮೂಲ್ಯ ಮರ ನಾಶ ಮಾಡಲಾಗುತ್ತಿದೆ. ಆ ಸ್ಥಳದಲ್ಲಿ ಮತ್ತೆ ಮರ ನೆಟ್ಟು ನಾಗಾಲಯ ಸದಾ ಹಸಿರು ಇರುವಂತೆ ಮಾಡುವ ಗೋಜಿಗೆ ಯಾರೂ ಹೋಗಲ್ಲ. ಈ ದಿಸೆಯಲ್ಲಿ ಕುತ್ಯಾರು ಕೇಂಜದಲ್ಲಿ ನಮ್ಮ ಪೂರ್ವಿಕರು  ಆರಾಧಿಸಿಕೊಂಡು ಬರುತ್ತಿರುವ ಹಳೆ ಕಾಲದ ಪ್ರಕೃತಿ ದತ್ತ ನಾಗಬನದ ಮರಗಳು ಬಿದ್ದು ಶಿಥಿಲವಾದಾಗ ಅದನ್ನೇ ಪುನರುಜ್ಜೀವನಗೊಳಿಸಲು ಮುಂದಾಗಿ, ಹಿಂದಿನ ಕಾಲದಲ್ಲಿದ್ದ ಮಾದರಿಯಲ್ಲಿ ಅದಕ್ಕಿಂತಲೂ ಆಕರ್ಷಕ ಗಿಡ ಮರಗಳನ್ನು ನೆಟ್ಟು, ಹಳೆಯ ಕೆರೆ ಅಭಿವೃದ್ಧಿ ಪಡಿಸಿ ನಾಗಾಲಯವನ್ನು ನಿರ್ಮಾಣ ಮಾಡಲಾಗಿದೆ. ಕರಾವಳಿಯಲ್ಲಿ ಇದೇ ಮಾದರಿಯಲ್ಲಿ ನಾಗಾಲಯಗಳು ರೂಪುಗೊಳ್ಳಬೇಕು ಎಂಬ ಅಭಿಪ್ರಾಯ ನಮ್ಮದು ಎನ್ನುತ್ತಾರೆ ಆಗಮ ವಿದ್ವಾಂಸ ಕುತ್ಯಾರು ಕೇಂಜ ಶ್ರೀಧರ ತಂತ್ರಿ.

ಪ್ರಕಾಶ ಸುವರ್ಣ ಕಟಪಾಡಿ

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry