ಒಳ ಹೊರಗು

7

ಒಳ ಹೊರಗು

Published:
Updated:
ಒಳ ಹೊರಗು

– ಗಿರೀಶ ಜಕಾಪುರೆ

ಅಗಾಧ ಪ್ರೀತಿಯಿದೆ ನಿನ್ನ ವಂಚನೆಯ ಒಳಗೂ ಹೊರಗೂ

ಗೊತ್ತು, ನಾನೇ ತುಂಬಿರುವೆ ನಿನ್ನೆದೆಯ ಒಳಗೂ ಹೊರಗೂ

ಎಷ್ಟು ಕುಡಿದರೂ ತೃಪ್ತಿಯಿಲ್ಲ, ತಲ್ಲಣಗಳು ತಣಿಯುತ್ತಿಲ್ಲ

ತೀರ ವಿಚಿತ್ರ ದಾಹವಿದೆ ಸಾಕಿ ದೇಹದ ಒಳಗೂ ಹೊರಗೂ

ಚೀತ್ಕಾರದಂತೆ ಕೇಳಿಸುತಿದೆ ಕೋಗಿಲೆಯ ಕುಹೂ ದನಿಯೂ

ಏನೋ ಗೌಜು ಗದ್ದಲ ಎದ್ದಿದೆ ಕಾಡಿನ ಒಳಗೂ ಹೊರಗೂ

ನನ್ನ ಕೆಲವು ಗಜಲ್ ಗಳ ಹೊರತು ಇಲ್ಲಿ ನನ್ನದೇನಿದೆ ಹೇಳು

ಬರೀ ನಿನ್ನದೇ ಚರ್ಚೆ ಮಧುರಾಲಯದ ಒಳಗೂ ಹೊರಗೂ

ಅಷ್ಟೇ ಸ್ತಬ್ಧ, ಸುಶಾಂತ; ಅಷ್ಟೇ ಮುಗ್ಧ, ಮೌನ; ಅಷ್ಟೇ ತಟಸ್ಥ

ಅದೇ ನಿರ್ಭಾವವಿದೆ ನಿನ್ನ ಭಾವಚಿತ್ರದ ಒಳಗೂ ಹೊರಗೂ

ನೀನಿರುವ ಭಾಸ ಆಭಾಸವಿದೆ, ಏಕಾಂತದಲೂ ಏಕಾಂತವಿಲ್ಲ

ನಿನ್ನ ಪ್ರೀತಿಯೇ ತುಂಬಿದೆ ವಿರಹಗೀತೆಯ ಒಳಗೂ ಹೊರಗೂ

ನೀತಿಯ ಅದೃಶ್ಯ ಸರಪಳಿಯಲಿ ಬಂಧಿತ ಆಜೀವ ಕೈದಿ ನಾನು

ಚಿಟ್ಟೆಗಳು ಮಾತ್ರ ಹಾರಬಲ್ಲವು ಕಿಟಕಿಯ ಒಳಗೂ ಹೊರಗೂ

ದೇವ ಎಲ್ಲಿಹನು ಎಲ್ಲಿ ಇಲ್ಲ ಎಂದು ಹೇಗೆ ಹೇಳುವೆ 'ಅಲ್ಲಮ'

ಕಲ್ಲು ಬಂಡೆಗಳೇ ಕಂಡಿರುವೆನು ಗುಡಿಯ ಒಳಗೂ ಹೊರಗೂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry