ಕಲಕೇರಿಗೆ ಬೇಕಿದೆ ಶಾಶ್ವತ ಪರಿಹಾರ

7
ಸಿಂದಗಿ: ಬೇಸಿಗೆ ಬಂತೆಂದರೆ ಹಾಹಾಕಾರ; ಟ್ಯಾಂಕರ್‌ ನೀರಿಗಾಗಿ ಕಾತರ

ಕಲಕೇರಿಗೆ ಬೇಕಿದೆ ಶಾಶ್ವತ ಪರಿಹಾರ

Published:
Updated:
ಕಲಕೇರಿಗೆ ಬೇಕಿದೆ ಶಾಶ್ವತ ಪರಿಹಾರ

ಸಿಂದಗಿ: ಕಲಕೇರಿ 15 ಸಾವಿರ ಜನಸಂಖ್ಯೆ ಹೊಂದಿರುವ ಹೋಬಳಿ ಕೇಂದ್ರ. ಈ ಗ್ರಾಮಕ್ಕೆ ಅದೆಷ್ಟೋ ದಶಕಗಳಿಂದ ನೀರಿನ ಶಾಪ ಕಾಡುತ್ತಲಿದೆ. ಬೇಸಿಗೆ ಬಂತು ಅಂದ್ರೆ ಜನರಲ್ಲಿ ಹಾಹಾಕಾರ ಉಂಟಾಗುತ್ತದೆ. ಗ್ರಾಮಸ್ಥರಿಗೆ ಪ್ರತಿ ವರ್ಷ ಬೇಸಿಗೆಯಲ್ಲಿ ಈ ಸಮಸ್ಯೆ ಮಾಮೂಲಿಯಾಗಿ ಬಿಟ್ಟಿದೆ.

ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಲಕೇರಿ ಯಾವತ್ತಿಗೂ ನೀರಿನ ಸಮಸ್ಯೆಯನ್ನು ಎದುರಿಸುತ್ತಲಿದೆ. ಬಿಂಜಲಬಾವಿ, ಹುಣಶ್ಯಾಳ, ಬೆಕಿನಾಳ, ರಾಂಪೂರ, ಬಿ.ಬಿ.ಇಂಗಳಗಿ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ಹಳ್ಳಿಗಳು. ಕಲಕೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ₹80 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿ ಕುದರಗೊಂಡ ಕೆರೆಯಲ್ಲಿ ತೆರೆದ ಬಾವಿ ನಿರ್ಮಾಣ ಮಾಡಲಾಗಿದೆ. ಇದರಿಂದ ತಿಳಗೂಳ, ಕೆರೂಟಗಿ ಗ್ರಾಮಗಳಿಗೆ ಅನುಕೂಲವಾಯಿತು. ಬೇಸಿಗೆಯಲ್ಲಿ ಕೆರೆ ಒಣಗುತ್ತಿದ್ದಂತೆ ಈ ಬಾವಿ ಕೂಡ ಖಾಲಿ ಆಗುತ್ತವೆ.

‘ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಒಂದು ಚಾಲೂ ಸ್ಥಿತಿಯಲ್ಲಿದ್ದು ಇನ್ನೊಂದು ದುರಸ್ತಿಯಲ್ಲಿದೆ. ಈ ಘಟಕಕ್ಕೂ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ಎಷ್ಟೇ ಕೊಳವೆಬಾವಿ ಕೊರೆಯಿಸಿದರೂ ವ್ಯರ್ಥ. ಹೀಗಾಗಿ ವ್ಯಾಪಕ ನೀರಿನ ಪ್ರಮಾಣ ಹೊಂದಿರುವ ಮೂರು ಕಿ.ಮೀ ದೂರದಲ್ಲಿನ ನಾಯಿ ಹಳ್ಳದಲ್ಲಿ ಬೃಹತ್ ತೆರೆದ ಬಾವಿ ತೋಡಿಸಿದರೆ ಕಲಕೇರಿಗಿರುವ ಬಹು ವರ್ಷಗಳ ನೀರಿನ ಶಾಪ ವಿಮೋಚನೆ ಸಾಧ್ಯ’ ಎನ್ನುತ್ತಾರೆ ಗ್ರಾಮದ ಮಹಿಳೆ ಶಿವುಬಾಯಿ ಗದ್ದಗಿಮಠ.

‘ನಿಯೋಜಿತ ಬೂದಿಹಾಳ–ಪೀರಾಪುರ ನೀರಿನ ಯೋಜನೆ ಎಷ್ಟು ಬೇಗ ಅನುಷ್ಠಾನಕ್ಕೆ ಬರುತ್ತೋ ಅಂದಿನಿಂದ ಕಲಕೇರಿ ನೀರಿನ ಸಮಸ್ಯೆ ದೂರಾಗುತ್ತದೆ’ ಎಂದು ಶಿವಾನಂದ ಕೌದಿ ಅಭಿಪ್ರಾಯಪಟ್ಟರು.

ಕಲಕೇರಿ ಪಟ್ಟಣದಂತೆ ಕಲಕೇರಿ ತಾಂಡಾದಲ್ಲೂ ನೀರಿನ ಸಮಸ್ಯೆ ವಿಪರೀತವಾಗಿದೆ. ಹಲವು ಕಿ.ಮೀ.ವರೆಗೆ ಹೋಗಿ ತೋಟದಲ್ಲಿನ ತೆರೆದ ಬಾವಿಗಳಿಂದ ನೀರು ತುಂಬಿಕೊಂಡು ಕೊಡ ತಲೆಯ ಮೇಲೆ ಹೊತ್ತು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿಯೂ ತಾಲ್ಲೂಕು ಆಡಳಿತ

ಒಂದು ಟ್ಯಾಂಕರ್ ಮಂಜೂರಾತಿ ಮಾಡಿದೆ.

ಪ್ರತಿ ಕುಟುಂಬಕ್ಕೆ 5ರಿಂದ 6 ಕೊಡಗಳು ಮಾತ್ರ ಎಂಬ ಕಡ್ಡಾಯ ನಿಯಮ ರೂಪಿಸಲಾಗಿದೆ. ತಾಂಡಾ ಜನತೆ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಾಯುತ್ತ ಟ್ಯಾಂಕರ್‌ಗಾಗಿ ಕಾಯಬೇಕಾದ ಕೆಟ್ಟ ಪರಿಸ್ಥಿತಿ ಎದುರಾಗಿದೆ ಎಂದು ತಾಂಡಾದ ಅನೇಕ ಮಹಿಳೆಯರು ಹೇಳಿದರು.

ಶಾಂತೂ ಹಿರೇಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry