ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು

Last Updated 26 ಮೇ 2018, 19:30 IST
ಅಕ್ಷರ ಗಾತ್ರ

ಆ ದಿನ ರಾತ್ರಿ ನನ್ನ ಬಡಕಲು ಕಾಲುಗಳಿಗೆ ಎಣ್ಣೆ ನುಂಪಳಿಸಿ ‘ತಮಾ ನೀನಾದ್ರೂ ಚೊಲೋ ಕಲಿ’ ಎಂದು ನೆತ್ತಿಗೂ ತಿಕ್ಕಿ ಎರಡೆರಡು ಕಂಬಳಿ ಹೊದ್ದು ಗೊರಕೆ ಹೊಡೆಯುತ್ತ ಮಲಗಿದ ಅಬ್ಬೆ ಬೆಳಗಾದರೆ ಹೋದಳು. ಆಗಿನ್ನೂ ಅಮ್ಮನ ಆಸ್ರಿಂಗಿನ ತಯಾರಿ ಪೂರ ಮುಗಿದಿರಲಿಲ್ಲ.

ಅಬ್ಬ! ಇಷ್ಟೊತ್ತಿಗಾಗಲೇ ಎದ್ದು ಸೂರ್ಯದೇವರಿಗೆ ಕೈಮುಗಿಯುತ್ತಿದ್ದ ಅತ್ತೇರು ಇನ್ನೂ ಯಾಕೆ ಎದ್ದಿಲ್ಲ ಎಂದು ನೋಡಿದರೆ ಅಬ್ಬೆಯ ಮೂಗಲ್ಲಿ ಗಾಳಿ ಹರಿದಾಡಿದಂತೆ ಕಾಣಲಿಲ್ಲ. ಇನ್ನೂ ಅರಳದ ಹೂ ಕೊಯ್ಯುತ್ತಿದ್ದ ಅಪ್ಪ ಕಂಡಲ್ಲಿ ಕೊಕ್ಕೆ ಒಗೆದು ಓಡಿ ಬಂದ. ಮೂಗಿಗೆ ಬೆರಳಿಟ್ಟ. ಉಹು, ಆಡುತ್ತಿಲ್ಲ.

ಒಂದೊಂದೇ ತಯಾರಿ ಶುರುಮಾಡಲಾಯಿತು. ಯಾರಿಗೊ ಫೋನು ಮಾಡಿದ ಅಪ್ಪ ಅಬ್ಬೆಯ ಮುಂದೆ ಸ್ವಲ್ಪ ಹೊತ್ತು ಕುಳಿತು ಅತ್ತ. ದರ್ಬೆ ಹಿಡಿದು ಭಟ್ಟರು ಬಂದರು. ಕುಂಟೆ ಕೊಯ್ಯಲು ಗೌಡರು, ಸಿದ್ದಿಯರು ಕೊಡಲಿ ಕತ್ತಿ ಹೆಗಲಿಗೇರಿಸಿ ಬಂದರು.

ಯಾರೋ ಅಂದರು- ‘ಹೋದದ್ದು ಹೋದಳು. ಆದರೆ ಆಸ್ರಿಂಗೆ ಕುಡಿದಾದ ಮೇಲಾದರೂ ಹೋದಳೋ, ಇನ್ನು ಕ್ರಿಯೆ ಮುಗಿಯುವವರೆಗೂ ಉಪವಾಸವೇ’. ನೆಂಟರು- ‘ನಿದ್ದೆಯಲ್ಲಿ ಹೋದದ್ದೇ ಚೊಲೋ ಆಯಿತು ಮಾರಾಯ. ನರಳಾಟ ಇಲ್ಲ, ಗೊಣಗಾಟ ಇಲ್ಲ. ಬೇರೆಯವರ ಹಂಗಿಗೆ ಬೀಳಲಿಲ್ಲ. ಇದ್ದಷ್ಟು ದಿನ ತನ್ನ ಕೆಲಸ ತಾನು ಮಾಡಿಕೊಂಡಿದ್ದಳು. ಎಂಥ ಒಳ್ಳೆಯ ಮರಣ!’ ಎಂದರು. ಉಸಿರು ಬಾಯಿಂದ ಹೋಯಿತೋ ಮೂಗಿನಿಂದಲೋ? ನೆತ್ತಿಯಿಂದ ಹೋಗಿದ್ದರೂ ಹೋಗಿರಬಹುದು; ಆಕೆ ಪುಣ್ಯಾತಗಿತ್ತಿ. ದೋಸೆ ಬಾಯಿಗಿಳಿಸುತ್ತಿದ್ದವರು ಅಟ್ಟದಲ್ಲಿ ಅಟಿಕೆ ಹರಗುತ್ತಿದ್ದವರು ಬ್ರಶ್ಶಿಗೆ ಪೇಸ್ಟು ಹಚ್ಚುತ್ತಿದ್ದವರು ಹಣೆಗೆ ಮೂರುಪಟ್ಟೆ ಇಡುತ್ತಿದ್ದವರು- ಇದ್ದುದ್ದನ್ನು ಇದ್ದಲ್ಲಿಗೆ ಬಿಟ್ಟು ಓಡಿಬಂದರು.
ಯಾರೋ ತೆಂಗಿನ ಹೆಡೆ ತಂದರು. ಮತ್ಯಾರೋ ಸಮಿದೆ...

ಹೆಣವಾದ ಅಬ್ಬೆಗೆ ಮೀಯಿಸಿದರು. ಬೇರೆ ವಸ್ತ್ರ ಹಾಕಿದರು. ಎಲ್ಲರಂತೆ ನಾನೂ ಕಾಲಿಗೆ ಅಡ್ಡಬಿದ್ದು ಮುಖ ನೋಡಿಬಂದೆ. ಮುಖದಲ್ಲಿ ಸತ್ತ ಕಳೆ ಕಾಣಲಿಲ್ಲ. ಅದನ್ನು ಕಾಣಲು ಬೇರೆ ಕಣ್ಣು ಬೇಕೇನೋ. ಭಟ್ಟರು ಮಂತ್ರ ಹೇಳಿದರು. ಅಪ್ಪ ಕಣ್ಣಿಂದ ಹನಿ ಗುತ್ತಿಸಿದ. ತೆಂಗಿನ ಹೆಡೆಗಳನ್ನು ಕಟ್ಟಿ ಅದರ ಮೇಲೆ ಮಲಗಿಸಿದ ಅಬ್ಬೆಗಿಂತ ತೆಂಗಿನ ಹೆಡೆಗಳ ಭಾರವೇ ಹೆಚ್ಚಿದೆಯೆಂದು ಹೊತ್ತವರು ಹೇಳಿದರು. ಸೊಡ್ಳಿನ ದಿಕ್ಕಿನತ್ತ ದಡದಡ ನಡೆದೆವು. ಹಸಿವು ನೆನಪಾಗುತ್ತಿತ್ತು ಆಗಾಗ. ದಾರಿ ಮಧ್ಯ ಕೆಲವರು ಅತ್ತರು. ಕೆಲವರು ಅಳಲಿಲ್ಲ. ರಸ್ತೆಯ ಮಧ್ಯೆಯೆ ಅಲ್ಲಲ್ಲಿ ಮೂರು ಸಲ ದರ್ಬೆಯ ಮೇಲೆ ಅಬ್ಬೆಯನ್ನು ಮಡಗಿ ಮಂತ್ರ ಹೇಳಿ ಮತ್ತೆ ಮುಂದುವರೆಯಲಾಯಿತು. ಖಡಿ ರೋಡಿನ ಉದ್ದಕ್ಕೂ ಕಲ್ಲು ಎದ್ದುಬಿದ್ದಿತ್ತು. ಯಾರೂ ಚಪ್ಪಲಿ ಹಾಕಿಕೊಂಡು ಬಂದಿರಲಿಲ್ಲ. ಹೇಳಿದರೂ ಕೇಳದೆ ಬಂದಿದ್ದ ಹೆಂಗಸರ ಪಾದಗಳಿಗೆ ಕಲ್ಲು ಚುಚ್ಚಿತು.

‘ಸತ್ತ ಇವು ರಾಜಕಾರಣಿಗಳು! ವೋಟು ಕೇಳಲೊಂದು ಬರುತ್ತಾರೆ. ಒಂದೂ ಕೆಲಸ ಮಾಡುವುದಿಲ್ಲ. ಈ ದಾರಿ ದಾಂಬರು ಕಾಣುವುದು ಯಾವಾಗಲೋ’ ಎಂದು ಹಲುಬಿಕೊಂಡರು. ನಡೆದು ನಡೆದು ಕೊನೆಗೆ ಸುಡುವ ಹೊಳೆ ಅಂಚಿಗಿನ ಜಾಗ ಬಂತು. ಅಷ್ಟೊತ್ತಿಗಾಗಲೆ ಅಲ್ಲಿ ಕುಂಟೆ ಒಟ್ಟುಹಾಕಿ ಜಾಗ ಚೊಕ್ಕಗೊಳಿಸಿ ಅಬ್ಬೆಯನ್ನು ಸುಡಲು ಎಲ್ಲ ತಯಾರಿ ನಡೆಸಿ ಕಾಯುತ್ತಿದ್ದರು. ಅಬ್ಬೆ ಸುಡುವ ಪಕ್ಕದಲ್ಲೆ ಅಜ್ಜನನ್ನು ಸುಟ್ಟಿದ್ದರೆಂದು ಅಪ್ಪ ಹೇಳಿದ. ಇಷ್ಟಿಷ್ಟು ದೂರದಲ್ಲಿ ಸುಟ್ಟು ಸಮಾಧಿ ಮಾಡಿ ಗುರುತಿಗಾಗಿ ನೆಟ್ಟಿದ್ದ ಕಲ್ಲುಗಳು ಕಾಣುತ್ತಿದ್ದವು.

ಎಲ್ಲಿತ್ತೊ ಏನೋ, ಚೂರು ಕುತೂಹಲ ಬಂತು. ಇದು ಅಜ್ಜನದು ಇದು ಆಚೆಮನೆ ಹೆಗಡೆಯದು ಓ, ಅದು ಕೆಂಪುಸೀರೆ ದೊಡ್ಡೆಯದು... ಹೀಗೆ ನಾನೇ ಅಂದಾಜಿಗೆ ಗುರುತು ಮಾಡಿಕೊಂಡೆ.

ಅಷ್ಟು ಹೊತ್ತಿಗೆ ಪೇರಿಸಿದ ಕುಂಟೆಯ ಮೇಲೆ ಅಬ್ಬೆಯನ್ನು ಮಲಗಿಸಲಾಗಿತ್ತು. ಕಣ್ಣುಗಳು ತೆರೆದಿದ್ದವು. ಪ್ರತಿಯೊಬ್ಬರಿಗೂ ಅವು ತಮ್ಮನ್ನೇ ನೋಡುತ್ತಿದ್ದ ಹಾಗೆ ಅನಿಸುವ ಹಾಗಿತ್ತು. ಅಷ್ಟು ತೀಕ್ಷ್ಣವಾಗಿತ್ತು.

ಸಿದ್ದಿ ಕ್ರಿಷ್ಣ ಕೊಡಲಿಯನ್ನು ಒಂದು ಒಣಕಲು ಮರಕ್ಕೆ ಕಪ್ಪಿಸಿ ಕಣ್ಣುಮುಚ್ಚಿ ನಿಂತಿದ್ದ. ಅಲ್ಲೆ ಪಕ್ಕದಲ್ಲಿ ರಾಮ, ದತ್ತ, ಮಾದೇವ ಕುಣಬಿಯರಿದ್ದರು. ಅಬ್ಬೆ ಹೋದ ಸುದ್ದಿ ಗೊತ್ತಾದದ್ದೆ ತಡ, ಯಾರದೋ ಮನೆಯ ಕೆಲಸದಲ್ಲಿದ್ದವರು ತಾವಾಗಿಯೆ ಬಂದು ಸುಡಲು ಚೊಲೋ ಕುಂಟೆ ಕೂಡಿಸಿದ್ದರು. ನನ್ನ ನೆನಪಿನಂತೆ ರಾಮಸಿದ್ದಿಗೂ ಅಪ್ಪನಿಗೂ ಮೊನ್ನೆ ದಣಿ ಸೊಪ್ಪಿನಬೆಟ್ಟ ಕಡಿಯುವ ಪಗಾರಿನ ಕುರಿತು ಜಗಳವಾಗಿತ್ತು. ಅದೆಲ್ಲ ಮರೆತುಹೋದವರಂತೆ ನಿಂತಿದ್ದರು.

ಅಬ್ಬೆಯನ್ನು ಕಂಡರೆ ಅವರಿಗೆಲ್ಲ ಒಂದು ರೀತಿಯ ಪ್ರೀತಿಯಿತ್ತು. ಕೆಲಸಕ್ಕೆ ಬಂದಾಗಲೆಲ್ಲ ಸಾವಿರದ ಹದಿನೈದು ಸಲ ‘ಭಡ್ತೇರು ಭಡ್ತೇರು..’ ಎಂದು ಕರೆಯುತ್ತಲೇ ಕುಡಿಯಲು ನೀರಿಗಾಗಿಯೋ ನೆಂಜಿಕೊಳ್ಳಲ್ಳಲು ಬೆಲ್ಲಕ್ಕಾಗಿಯೋ ಕೇಳುತ್ತಿದ್ದರು. ಸಾರಿಗೆ ಬೆಲ್ಲ ಹಾಕಿದರೆ ಇದೆಂತ ಪಾಯಸ ಮಾಡಿದ್ದೀರಿ ಎಂದು ಬೈಯುತ್ತಿದ್ದರು. ಆದರೆ ಮಜ್ಜಿಗೆ ತಂಬುಳಿ ಉಣ್ಣಲು ಅವರಿಗೂ ಇಷ್ಟ.

ಎಂಕಣ್ಣ ಮಾವ ನನಗೆ ಅಜ್ಜನಮನೆಯ ಮಾವನಾಗಬೇಕು. ಅವನಿಗೆ ಅಪರಕ್ರಿಯೆಯ ಬಗ್ಗೆ ಸ್ವಲ್ಪ ಹೆಚ್ಚು ಗೊತ್ತುಂಟು. ಎಲ್ಲರಿಗಿಂತ ಮೊದಲು ಹಾಜರಾದವನು ಅವನೇ. ಸೀರೆಯ ಮಡಚಿದ ತುದಿಯಿಂದ ಕಣ್ಣ ಒರೆಸುತ್ತ ಕುಂತಿದ್ದ ಅಮ್ಮನನ್ನು ಎಬ್ಬಿಸಿ, ಅಳುತ್ತಾ ಕುಂತರೆ ಮುಂದಿನ ಕೆಲಸ ಮಾಡುವವರು ಯಾರು ಎಂದು ಬೈಯ್ದು ಗಡಬಡೆ ಕೊಟ್ಟಿದ್ದ. ಅಬ್ಬೆಯನ್ನು ಅಂಗಳದಲ್ಲಿ ಕೂರಿಸಿ ಕೊಡಪಾನದಲ್ಲಿ ಹಂಡೆಯಿಂದ ನೀರು ತಂದು ಮೈತೊಯ್ಯಿಸಿದ್ದ. ಅಮ್ಮ ನಂತರ ಅಬ್ಬೆಗೆ ಬಿಳೀ ಧೋತರ ಉಡಿಸಿದ್ದಳು.

ಇನ್ನೂ ಸ್ವಲ್ಪ ಹೊತ್ತು ಕಾಯುವ ಎಂದು ಅವನೇ ಅಂದದ್ದು. ಇಲ್ಲದಿದ್ದರೆ ಭಟ್ಟರು ಅಗಲೆ ಅಪ್ಪನ ಬಳಿ ಕೊಳ್ಳಿ ಹಚ್ಚಲು ಹೇಳಿದ್ದರು.

ದೊಡ್ಡಪ್ಪ ಅಬ್ಬೆಗೆ ಹಿರಿಮಗ. ಆ ಕಾಲಕ್ಕೆ ವೈ.ಟಿ.ಎಸ್‌.ಎಸ್ ಹೈಸ್ಕೂಲಿಗೆ ಫಸ್ಟ್ ಬಂದಿದ್ದನಂತೆ. ಎಂತೆಂಥದೋ ಓದಿ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದ. ಒಬ್ಬನಾದರೂ ಮನೆ ನೋಡಿಕೊಳ್ಳಲು ಬೇಕು ಎಂದು ಅಪ್ಪ ಕನ್ನಡ ಶಾಲೆ ಮುಗಿಸಿ ಅಡಿಕೆ ಹೆಕ್ಕಲು ತೋಟ ಗುತ್ತಿದ್ದ. ಈಗ ಮಾವ ಕಾಯಲು ಹೇಳಿದ್ದು ದೊಡ್ಡಪ್ಪ ಬರಲಿ ಎಂದು. ಭಟ್ಟರಿಗೆ ಸೌಡು ಇರಲಿಲ್ಲ. ಇಲ್ಲಿ ಮುಗಿಸಿ ಮತ್ತೆ ಎಲ್ಲಿಗೊ ಹೋಗಬೇಕಂತೆ.

ಸುಮಾರು ಜನ ಆವಾಗಿಂದ ಸಣ್ಣದಾಗಿ ಅಳುತ್ತಿದ್ದರು. ಒಬ್ಬಳು ಮುದಿ ದೊಡ್ಡೆ ನನ್ನ ಪಾಳಿ ಯಾವಾಗ ಬರುವುದೋ, ಭಗವಂತ ಇನ್ನೂ ಕಣ್ಣು ಬಿಟ್ಟಿಲ್ಲ ಎನ್ನುತ್ತಿದ್ದಳು. ಸಾಯುವ ಆಸೆ ಆಗಿರಬೇಕು ಅಂದುಕೊಂಡೆ.

ಪಾಪ, ಬಡಪಾಯಿ ಜೀವ ಏನೇನು ಕಂಡಿದೆಯೋ. ಹಲವರಿಗೆ ತಮಗಿಂತ ಸಣ್ಣವರು ಸತ್ತಾಗ ಸಾಯುವ ಆಸೆ ಜಾಸ್ತಿಯಾಗುತ್ತದೆ. ಸಿಕ್ಕಸಿಕ್ಕವರಲ್ಲಿ ತಮ್ಮ ಸಾವಿನ ಬಗ್ಗೆ ಅಲವತ್ತುಕೊಳ್ಳುತ್ತಾರೆ.

ಅಬ್ಬೆಯ ಅಜ್ಜಿಯ ಮನೆಯ ಅತ್ತಿಗೆಯಂತೆ ಆಕೆ. ಅವಳನ್ನು ನಾನು ಕಂಡದ್ದು ಇಂದೇ ಮೊದಲು. ಅವಳಲ್ಲೇ ಉಳಿದುಹೋದ ಅಬ್ಬೆಯ ಪತ್ತಲವೊಂದು ಹಾಗಿತ್ತು ಹೀಗಿತ್ತು ಎಂದೆಲ್ಲ ನೆನಪು ಮಾಡಿಕೊಂಡಳು.

ಎಷ್ಟೋ ವಶಿಗೆಗಳಲ್ಲಿ ಸಿಕ್ಕಾಗ ಅವರು ತಮ್ಮ ಪತ್ತಲ ಪವನ ಸರ ಹೀಗೆ ಏನೇನೋ ಹೆಂಗಸರ ವಸ್ತುಗಳನ್ನು ಅದಲು ಬದಲು ಮಾಡಿಕೊಳ್ಳುತ್ತಿದ್ದರಂತೆ. ತನ್ನ ಗೆಳತಿ ರೆಪ್ಪೆ ಅಲುಗಿಸದೆ ಕುಂಟೆಯ ಮೇಲೆ ಮಲಗಿದ್ದನ್ನು ಕಂಡು ಒನ್ನಮೂನೆ ಮುಖ ಮಾಡಿದಳು.

ರಸ್ತೆಯಲ್ಲಿ ಹೋಗುವ ಬರುವ ಗಾಡಿಗಳ ಸದ್ದು ಕಿವಿಗೆ ಬಡಿಯುವ ದೂರದಲ್ಲೆ ಸೊಡ್ಳು. ಎಷ್ಟು ಗಾಡಿಗಳು ಬಂದವು. ಗೊತ್ತಿಲ್ಲ. ‘ಹೊ ಹೊ ಇಲ್ಲೇಯ’ ಎಂದು ಕೂಗಿದೆವು. ಎಷ್ಟು ಹೊತ್ತು ತಾನೆ ಹೀಗೆ ಗಂಟಲು ಹರಿಯುವ ಹಾಗೆ ಕೂಗುವುದು ಎಂದು ಕೊನೆಗೆ ಸೊಡ್ಳಿಗೆ ದಾರಿ ಕವಲು ಒಡೆಯುವಲ್ಲಿ ಬರುವವರಿಗೆ ದಾರಿ ತೋರಲು ನನ್ನನ್ನು ಕಳುಹಿಸಿದರು.

‘ದೊಡ್ಡಪ್ಪನ ಗಾಡಿ ಬಂದಕೂಡಲೆ ಡೈರೆಕ್ಟ್ ಇಲ್ಲೇ ಬರಲು ಹೇಳು’ ಎಂದು ಮಾವ ಮತ್ತೊಮ್ಮೆ ಹೇಳಿ ಕಳಿಸಿದ.

ಹೀಗೆ ಬರುತ್ತಿದ್ದಾಗ ಸ್ವಲ್ಪ ದೂರದಲ್ಲಿ ನಿಂತು ಅತ್ತೆ ಮುಸುಮುಸು ಅಳುತ್ತಿದ್ದದ್ದು ಕಾಣಿಸಿತು. ಅಬ್ಬಾ! ಯಾಕೆ ಅತ್ತೆ ಅಲ್ಲಿಯವರಿಗೂ ಹೋಗಿಲ್ಲ ಎಂದು ದಿಗಿಲಾಯಿತು. ಮಾತಾಡಿಸಿದೆ. ಮುಟ್ಟು ಎಂದಳು. ಪಾಪ ಸ್ವಂತ ಅಮ್ಮ ಸತ್ತಾಗಲೂ ತೊಟ್ಟು ನೀರು ಬಾಯಿಗೆ ಬಿಡಲು ಆಗದೆ ಮತ್ತೆ ಮುಖ ಕಿವುಚಿಕೊಂಡು ನೀರು ಗುತ್ತಿಸಿದಳು.

ಹಾಗೇ ಮುಂದೆ ಬಂದು ಘಟ್ಟ ಹತ್ತಿದೆ. ಅಲ್ಲಿಂದ ಬಲಕ್ಕೆ ಹೋದರೆ ಮನೆ. ಎಡಕ್ಕೆ ಅರಬೈಲು ಪೇಟೆ. ಬರುವವರೆಲ್ಲ ಬಂದದ್ದು ಎಡದಿಂದಲೇ.

ಈ ಮೂರು ದಾರಿ ಕೂಡುವಲ್ಲಿ ಒಂದು ಕಪರುಗುಟ್ಟ ಹುಗಿದು ರಟ್ಟಿನ ತುಂಡೊಂದಕ್ಕೆ ಡಬ್ಗುಳಿಗೆ ದಾರಿ ಎಂದು ಕೆಂಪು ಬಣ್ಣದಲ್ಲಿ ಬರೆದು ಕೆಳಗೊಂದು ಬಾಣ ಹಾಕಿದ್ದರು. ಡಬ್ಗುಳಿ ಎಂದರೆ ಒಟ್ಟು ಆರೆಂಟು ಮನೆಗಳ, ಊರು ಎಂದು ಕರೆಯಬಹುದಾದ ಊರು. ಅರಬೈಲಿಂದ ಈ ದಾರಿಯ ದಿಕ್ಕು ಹಿಡಿದು ಬರುವವರ ಉದ್ದೇಶವೆಲ್ಲ ಡಬ್ಗುಳಿಯೆ. ಮುಂದೆ ದಾರಿಯಿಲ್ಲ. ಇಂದು ಬರುವವರು ನೇರ ಕೆಳಗೆ ಸೊಡ್ಳಿಗೆ ಗುತ್ತುತ್ತಿದ್ದರು.

ಆಗಲೇ ಚಡ್ಡಿ ಕಿಸೆಯಲ್ಲಿ ಮೊಬೈಲ್ ಗುಂಯ್‌ಗುಟ್ಟಿದ್ದು. ಮನೆಯಿಂದ ಹೊರಡುವಾಗ ಯಾಕಾದರೂ ಬೇಕಾದೀತು ಎಂದು ಕಿಸೆಗೆ ತುರುಕಿದ್ದೆ. ಆದರೆ ಇಷ್ಟೊತ್ತು ಲಕ್ಷಕ್ಕಿರಲಿಲ್ಲ. ಸುಡುವ ಜಾಗದ ತಗ್ಗಿನಿಂದ ಎತ್ತರಕ್ಕೆ ಎದ್ದದ್ದೆ ತಡ, ಬುಳುಬುಳುನೆ ಮೆಸೇಜುಗಳು ಹರಿದುಬಂದವು. ತೆಗೆದು ನೋಡಿದೆ. ಇದ್ದಬಿದ್ದ ಗ್ರೂಪುಗಳಿಂದ ‘ಗುಡ್‌ ಮಾರ್ನಿಂಗ್’ ‘ಗುಡ್ ನೈಟ್’ ಬಿಟ್ಟರೆ ಮತ್ತೇನೂ ಇರಲಿಲ್ಲ. ಅದನ್ನೆಲ್ಲ ಓದಿದರೆ ತಲೆ ಮುದ್ದಾಂ ಕೆಟ್ಟು ಹೋಗುತ್ತದೆ ಎಂದು ಏನು ಮಾಡುವುದು ತಿಳಿಯಲಿಲ್ಲ.

ಮೂರ್ನಾಕು ಬೈಕುಗಳು ಆ ಕಡೆಯಿಂದ ಬಂದವು. ಸುಡುವ ಜಾಗದ ದಾರಿ ಹೇಳಿದೆ. ಮೊದಲು ಹಳ್ಳ ಗುತ್ತಿ ಮೈತೋಯಿಸಿ ಬೇರೆ ಪಂಜಿ ಉಟ್ಟುಕೊಂಡು ಹೋಗುವ, ಸುಡುವಾಗ ಹಾಕಿದ ವಸ್ತ್ರವನ್ನು ತೋಯಿಸಬೇಕ, ಆಮೇಲೆ ಅದು ಒಣಗದೆ ಅಲವರಿಕೆ ಎಂದು ಮಾತನಾಡುತ್ತ ಬಡಬಡ ಇಳಿದುಹೋದರು.
ದೊಡ್ಡಪ್ಪ ಬರುವ ಹೊತ್ತು ಇನ್ನೂ ಆದಹಾಗೆ ಕಾಣಲಿಲ್ಲ. ಮೊಬೈಲು ತೆಗೆದು ಏನಾದರೂ ಮಾಡಿದರೆ ಹೊತ್ತು ಕಳೆಯಬಹುದೆನಿಸಿತು. ಬಹಳ ಕಾಲ ಆಯಿತು, ವಾರಿಣಿಗೆ ಮೆಸೇಜು ಮಾಡದೆ ಎಂದು ನೆನಪಾಗಿ ‘ಹಾಯ್’ ಎಂದು ಕಳಿಸಿದೆ.


ನನ್ನ ಮೆಸೇಜಿಗೆ ಬರುಕಾಯುತ್ತಿದ್ದವಳ ಹಾಗೆ ಅತ್ತಕಡೆಯಿಂದ ‘ಹಾಯ್’ ವಾಪಸ್ಸು ಬಂತು. ಟಕಟಕನೆ ಅದು ಇದು ಸುದ್ದಿ ವಿನಿಮಯವಾಯಿತು.
ಆಕೆ ವಾಟ್ಸ್‌ಆ್ಯಪ್ ಡಿಪಿ ಹಾಕಿರಲಿಲ್ಲ. ಕೇಳಿದೆ. ‘ಸುಮ್ಮನೆ ಹಾಕಿಲ್ಲ’ ಎಂದಳು. ನಿನ್ನ ಮುಖ ನೋಡದೆ ಬಹಳ ಕಾಲ ಆಗಿದೆ ಎಂದೆ. ಹತ್ತು ಸೆಕೆಂಡುಗಳ ತರುವಾಯ ಅವಳ ನಾಕು ಪೋಟೊಗಳು ಗ್ಯಾಲರಿಯಲ್ಲಿದ್ದವು.

ಅವೆಲ್ಲ ಯಾವುದೋ ಗೋವಾದ ಬೀಚಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪೋಟೊಗಳು. ಒದ್ದೆ ವಸ್ತ್ರಗಳು ಒಳಗನ್ನು ಪೂರ ತೋರಿಸುತ್ತಿದ್ದವು.

ಮೈರೋಮ ಚುರುಕಾಯಿತು. ತೊಡೆಗಳಲ್ಲಿ ಸೆಳೆತ ಕಂಡಿತು. ಬಿಸಿಲು ಚೂರ್ಚೂರೆ ಹೆಚ್ಚಾಗುತ್ತಿತ್ತು.

ಅಷ್ಟೊತ್ತಿಗೆ ದೊಡ್ಡಪ್ಪನ ಕಾರು ಖಡಿರೋಡಿನಲ್ಲಿ ದಡಕಬಡಕ ಗುಪ್ಪು ಹೊಡೆಯುತ್ತ ಹಾರಿದ ದೂಳಿನ ಬಣ್ಣ ಹೊತ್ತು ಬಂತು. ನನ್ನನ್ನು ಕಂಡು ನಿಲ್ಲಿಸಿದ. ‘ಮನೆಗೆ ಹೋದರೆ ತಡ ಆಗ್ತು, ಸೊಡ್ಳಲ್ಲಿ ಎಲ್ಲ ನಿನಗೆ ಹೇಳೇ ಕಾಯ್ತಿದ್ದೊ’ ಎಂದೆ. ಕಾರು ಬದಿಗೆ ಹಚ್ಚಿ ಸಟಕ್ಕನೆ ಇಳಿದು ಸೊಡ್ಳದಿಕ್ಕಿಗೆ ಓಡಿದ.
ನಾನೂ ತಡ ಮಾಡಲಿಲ್ಲ. ಅವನ ಹಿಂದೆಯೇ ದಡದಡನೆ ಹೆಜ್ಜೆಹಾಕಿದೆ.

ಅಷ್ಟರಲ್ಲಿ ಎಲ್ಲರ ಅಳು ಒಂದು ಹಂತಕ್ಕೆ ನಿಂತಿತ್ತು. ಅಬ್ಬೆ ಮಲಗಿಸಿದ ಹಾಗೆ ಮಲಗಿದ್ದಳು. ಭಟ್ಟರು ಹಿಂದಿನ ಮಳೆಗಾಲದಲ್ಲಿ ಮುರಿದುಬಿದ್ದ ಸಾಗವಾನಿ ನಾಟಾದ ಮೇಲೆ ಕುಳಿತು ಬಾಯಿಗೆ ಕವಳ ವಗೆಯುತ್ತಿದ್ದರು.

‘ಹು, ಇನ್ನು ತಡಮಾಡುವುದು ಬೇಡ’ ಮಾವ ಅಂದ.

ದೊಡ್ಡಪ್ಪನ ತಲೆಯಲ್ಲಿ ಕೂದಲು ಹಾಗೆ ಇತ್ತು. ದೊಡ್ಡಪ್ಪನನ್ನು ನೋಡಿದವನೇ ಕತ್ತರಿ ಕೈಗೆ ತೆಗೆದುಕೊಂಡ ರಾಮ. ಸಂದರ್ಭಾನುಸಾರ ಹಜಾಮಿಕೆಯನ್ನೂ ಮಾಡುತ್ತಾನೆ. ಯಾವ ಕೆಲಸಕ್ಕೂ ಉಹು ಅಂದವನಲ್ಲ ಅವ.

‘ಇದೆಲ್ಲ ನನಗೆ ಯಡೀತ್ಲೆ’ ಎಂದ ದೊಡ್ಡಪ್ಪ. ‘ಬೋಳು ಕೆತ್ತಿಕೊಂಡು ಆಫೀಸಿಗೆ ಹೋಗಲು ಹೇಶಿಗೆ ಅವ್ತು. ಇದೆಲ್ಲ ಬೇಡ’ ಎಂದ. ಭಟ್ಟರೂ ಒಂದು ಸಲ ಅಪ್ಪನ ಮುಖ ನೋಡಿದರು. ‘ಈಗಿನ ಕಾಲದಲಿ ಇದೆಲ್ಲ ಮಾಮೂಲೆ, ಹೊಂದಿಕೊಳ್ಳುವ ಸಂಗತಿಗಳು ಬಹಳಷ್ಟಿವೆ’ ಎಂದು ಮಾವ ದೊಡ್ಡಪ್ಪನ ವಸ್ತ್ರ ಕಳಚಿ ಪಂಜಿ ಉಡಿಸಿದ.

ಭಟ್ಟರ ಮಂತ್ರ ಕೇಳತೊಡಗಿತು. ನೀರು ತುಂಬಿದ ಕನ್ನ ಗಡಿಗೆಯನ್ನ ಭುಜದ ಮೇಲಿಟ್ಟುಕೊಂಡು ದೊಡ್ಡಪ್ಪ ಮೂರು ಸುತ್ತು ಹೊಡೆದ. ಸುತ್ತು ಮುಗಿದಂತೆ ನೀರು ಖಾಲಿಯಾಯಿತು. ಕೈಮುಗಿದು ನಿಂತ. ಕೊಳ್ಳಿ ಕೊಟ್ಟು ಅಬ್ಬೆಗೆ ಬೆಂಕಿ ಹಚ್ಚಲು ಹೇಳಿದರು. ಅಬ್ಬೆ ಕುಂಟೆಯ ಸಂದಿಯಲ್ಲಿ ಕಾಣುತ್ತಿರಲಿಲ್ಲ. ಹಳೆಯ ಜೀವ ಶೀತಕ್ಕೆ ಮುರುಟಿಹೋಗಿತ್ತು. ಹೊರಗಿಂದ ಕಾಣುವ ಹಲಸಿನ ತುಂಡಿಗೆ ಬೆಂಕಿ ಹಚ್ಚಿದ ದೊಡ್ಡಪ್ಪ ಭೋ ಎಂದು ಅತ್ತ. ಅಪ್ಪನಿಗೂ ತಡೆಯಲಾಗಲಿಲ್ಲ. ಕೂಡಿಸಿದ ಕುಂಟೆ ಚೆನ್ನಾಗಿ ಒಣಗಿತ್ತು. ತುಪ್ಪ ಸುರಿಯುವ ಪ್ರಮೇಯ ಬರಲಿಲ್ಲ. ಎಲ್ಲರೂ ಮುಂದೆ ಬಂದು ಕೈಯಲ್ಲಿದ್ದ ಸಮಿದೆ, ಅಗರಬತ್ತಿ, ಕರ್ಪೂರವನ್ನೆಲ್ಲ ಚಿತೆಗೆ ಸುರಿದರು. ಅಬ್ಬೆ ಬೆಂಕಿಯಾದಳು. ಬೆಂಕಿ ಗಹಗಹಿಸಿ ನಕ್ಕಂತೆ ಉರಿಯಿತು.

ಬಂದವರು ಬಂದ ಕೆಲಸ ಮುಗಿಯಿತು ಎಂಬಂತೆ ಹೊರಟರು. ಅಬ್ಬೆ ಹೋದದ್ದು ಲೆಕ್ಕಕ್ಕೆ ಇರದವರಂತೆ ತನ್ನಷ್ಟಕ್ಕೆ ಹರಿಯುತ್ತಿದ್ದ ಹಳ್ಳದಲ್ಲಿ ಮಿಂದು ಬಿಸಿಲಿಗೆ ಮೈಒಣಗಿಸಿ ತಿರುಗಾಟದ ವಸ್ತ್ರ ಧರಿಸಿ ಬಂದವರಲ್ಲಿ ಮುಕ್ಕಾಲು ಜನ ಹೊರಟರು. ‘ಮನೆಗೆ ಬಂದರೆ, ಅಲ್ಲಿ ಮಾಡುವ ಫಳಾರದ ಅವಲಕ್ಕಿ ತಿಂದರೆ ಮೂರು ದಿನದ ಸೂತಕ’ ಎಂದು ಹೇಳುತ್ತ ಗಾಡಿ ಚಾಲು ಮಾಡಿದರು. ‘ಏನಾದರು ಆಗುವುದಿದ್ದರೆ ಹೇಳು, ಈ ಹೊತ್ತಿನಲ್ಲಿ ಬಿಡ್ಯಾ ಮಾಡಿಕೊಳ್ಳುವುದು ಬೇಡ’ ಎಂದು ಹೇಳುವುದು ಮರೆಯಲಿಲ್ಲ.

ಬಡಬಡ ಮನೆಯ ಕಡೆ ನಡೆಯತೊಡಗಿದೆವು. ಅಂಗಳ ಜಗುಲಿ ಒಳ ಎಲ್ಲ ನೋಡುವ ಹಾಗಿಲ್ಲ. ಹನ್ನೆರಡನೆಯ ದಿನದ ಒಳಗಾಗಿ ಬಳುಗಿ ಎಲ್ಲ ಚೊಕ್ಕ ಮಾಡಬೇಕು ಅಮ್ಮ ವಟಗುಟ್ಟುತ್ತ ನಡೆಯುತ್ತಿದ್ದಳು. ಚೂಪು ಕಲ್ಲು ಕಾಲು ಚುಚ್ಚುತ್ತಿತ್ತು. ಅಪ್ಪ ಎಲ್ಲರಿಗಿಂತ ಮುಂದೆ ನೆಲ ಆಕಾಶ ನೋಡುತ್ತ ನಡೆಯುತ್ತಿದ್ದ. ಹೆರೆದ ಬೋಳು ಬಿಸಿಲಿಗೆ ಮಿರಿಮಿರಿಗುಡುತ್ತಿತ್ತು. ಒಮ್ಮಿಂದೊಮ್ಮೆಲೆ ವಾರಿ ಜೊತೆ ಮಾಡುತ್ತಿದ್ದ ಚಾಟಿಂಗ್ ನೆನಪಾಗಿ, ಯಾರಿಗೂ ಗೊತ್ತಾಗದ ಹಾಗೆ ಕಿಸೆಯೊಳಗೆ ಹೊಸ ಮೆಸೇಜ್ ಬಂದಿದೆಯೇ ನೋಡಿದೆ. ಸಿಗ್ನಲ್ ಇರದೆ ಮೊಬೈಲು ಕೂಡ ಸತ್ತು ಮಲಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT