4
ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಕೆರೆ–ಕಟ್ಟೆಗಳಿಗೆ ಜೀವಕಳೆ, ಧರಗೆ ಉರುಳಿದ ಮರಗಳು

ಜಿಲ್ಲೆಯಾದ್ಯಂತ ವರ್ಷಧಾರೆ ಮತ್ತೆ ಚುರುಕು

Published:
Updated:
ಜಿಲ್ಲೆಯಾದ್ಯಂತ ವರ್ಷಧಾರೆ ಮತ್ತೆ ಚುರುಕು

ರಾಮನಗರ: ಜಿಲ್ಲೆಯಲ್ಲಿ ಕಳೆದ ಎರಡು ವಾರದಿಂದ ವರ್ಷಧಾರೆ ಉತ್ತಮವಾಗಿದ್ದು, ಮುಂಗಾರು ಪೂರ್ವ ಮಳೆಯು ಉತ್ತಮ ಮುನ್ನುಡಿ ಬರೆಯುತ್ತಿದೆ.

ಗುರುವಾರ ಕೊಂಚ ವಿರಾಮ ನೀಡಿದ್ದ ಮಳೆರಾಯ ಶುಕ್ರವಾರ ಮತ್ತೆ ಅಬ್ಬರಿಸಿದ್ದು. ವಿವಿಧೆಡೆ

ಮಳೆಯಾಯಿತು. ಚಂಡಮಾರುತದ ಪರಿಣಾಮದಿಂದಾಗಿ ಮಧ್ಯಾಹ್ನದ ನಂತರ ಮೋಡ ಕವಿದು, ಮಳೆ ಆರಂಭಗೊಂಡಿದ್ದು, ಆಗಾಗ್ಗೆ ಹನಿಯುತ್ತಲೇ ಇತ್ತು.

ಈಗಾಗಲೇ ಸಾಕಷ್ಟು ಕಡೆ ಬೆಳೆಗಳು ಹಾನಿಯಾಗಿದ್ದು, ಮರಗಳು ಧರೆಗೆ ಉರುಳುತ್ತಿರುವುದು ವರದಿಯಾಗಿದೆ. ಕೃಷಿ ಕಾರ್ಯಕ್ಕೆ ಸಿದ್ಧತೆಯನ್ನೂ ಮಾಡಿಕೊಳ್ಳಲು ಬಿಡದಂತೆ ಮಳೆ ಅಬ್ಬರಿಸುತ್ತಿದೆ. ಮುಂಗಾರು ಪೂರ್ವ ಬಿತ್ತನೆ ಗುರಿ ಭಾಗಶಃ ಪೂರ್ಣಗೊಳ್ಳುತ್ತಿದ್ದು, ಎಳ್ಳು, ಅಲಸಂದೆ, ತೊಗರಿ ಹಾಗೂ ಜೋಳ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ.

ಕೆರೆಗಳಿಗೆ ಜೀವ ಕಳೆ: ಮಳೆಯಿಂದಾಗಿ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳಿಗೆ ಜೀವ ಕಳೆ ಬಂದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಿಂದಾಗಿ ಬಹುತೇಕ ಕೆರೆಗಳು ಭರ್ತಿಯಾಗಿದ್ದವು. ಹೀಗಾಗಿ ಈ ಬಾರಿ ಬೇಸಿಗೆಯಲ್ಲೂ ನೀರು ಉಳಿದಿತ್ತು. ಇದೀಗ ಉತ್ತಮ ಮಳೆಯಾಗುತ್ತಿದ್ದು, ಕೆರೆ–ಕಟ್ಟೆಗಳಿಗೆ ಒಳಹರಿವು ಆರಂಭವಾಗಿದೆ.

ಮಳೆಯಿಂದಾಗಿ ಈ ಬಾರಿ ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಅಷ್ಟಾಗಿ ಬಾಧಿಸಿಲ್ಲ. ಸದ್ಯ ಎಲ್ಲೆಡೆ ಹಸಿರು ಮೇವು ಲಭ್ಯವಿದೆ. ಕಾಡಿನಲ್ಲಿಯೂ ನೀರು–ಮೇವು ದೊರಕುತ್ತಿದ್ದು, ವನ್ಯಜೀವಿಗಳ ಉಪಟಳ ಕೊಂಚ ತಗ್ಗಿದೆ.

ಚನ್ನಪಟ್ಟಣದಲ್ಲಿ ಅತಿ ಹೆಚ್ಚು: ಮೇ ತಿಂಗಳಲ್ಲಿ ಜಿಲ್ಲೆಯು ಉತ್ತಮ ಮಳೆ ಪಡೆಯುತ್ತಾ ಬಂದಿದೆ. ನಾಲ್ಕು ವರ್ಷ ಬರದಿಂದ ಕಂಗೆಟ್ಟಿದ್ದ ರೈತರಿಗೆ ಕಳೆದ ವರ್ಷ ಮುಂಗಾರು ಪೂರ್ವ ವರ್ಷಧಾರೆ ವರವಾಗಿತ್ತು.

ಈ ತಿಂಗಳಲ್ಲಿ ಚನ್ನಪಟ್ಟಣವು ಅತಿ ಹೆಚ್ಚು ಮಳೆ ದಾಖಲಿಸಿದೆ. ರಾಮನಗರ ಹಾಗೂ ತಾಲ್ಲೂಕುಗಳು ಸಹ ಉತ್ತಮ ಮಳೆಯನ್ನೇ ಪಡೆದಿವೆ. ಕನಕಪುರ ತಾಲ್ಲೂಕು ಕಳೆದ ವರ್ಷ ಮೇನಲ್ಲಿ ದಾಖಲೆಯ ಮಳೆ ಪಡೆದಿದ್ದು, 200 ಮಿಲಿಮೀಟರ್‌ಗೂ ಹೆಚ್ಚು ಮಳೆ ಪಡೆದಿತ್ತು. ಈ ಬಾರಿ ಕೊಂಚ ಕಡಿಮೆ ಇದೆ. ನರೇಗಾ ಅಡಿ ತಾಲ್ಲೂಕಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಚೆಕ್ ಡ್ಯಾಮ್‌ಗಳ ನಿರ್ಮಾಣ ಆಗಿದ್ದು, ಕಳೆದ ವರ್ಷ ಅವು ಮೊದಲ ಬಾರಿಗೆ ತುಂಬಿದ್ದವು. ಇದೇ ಸಂದರ್ಭ ಕಳಪೆ ಕಾಮಗಾರಿಯಿಂದಾಗಿ ಹಲವು ಚೆಕ್‌ ಡ್ಯಾಮ್‌ ಕೊಚ್ಚಿ ಹೋಗಿದ್ದವು

ಮಾವಿಗೆ ಕೀಟಬಾಧೆ

ಅತಿಯಾದ ಮಳೆಯಿಂದಾಗಿ ಮಾವಿಗೆ ಕೀಟಬಾಧೆ ಕಾಣಿಸಿಕೊಂಡಿದೆ.ಕೊಯ್ಲಿಗೆ ಸಿದ್ಧವಾಗಿರುವ ಮರಗಳಲ್ಲಿ ಹೂಜಿ ಉಳುವಿನ ಕಾಟ ಹೆಚ್ಚಾಗಿದ್ದು, ಕಾಯಿಗಳು ನಾಶವಾಗುತ್ತಿವೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಮಳೆಯು ಮಾವಿನ ಕೊಯ್ಲಿಗೂ ಅಡ್ಡಿಯಾಗಿದ್ದು, ಬೆಳೆಗಾರರು ಪರದಾಡುವಂತೆ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry