ಹಾಡುವ ಅಲೆಗಳ ನಾಡು ತರಂಗಂಬಡಿ

7

ಹಾಡುವ ಅಲೆಗಳ ನಾಡು ತರಂಗಂಬಡಿ

Published:
Updated:
ಹಾಡುವ ಅಲೆಗಳ ನಾಡು ತರಂಗಂಬಡಿ

ಬೆಂಗಳೂರಿನಿಂದ ಮೈಲಾಡುತುರೈಗೆ ಇರುವುದು ಒಂದೇ ಒಂದು ರೈಲು. ಮುಸ್ಸಂಜೆ ರೈಲು ಹತ್ತಿದರೆ ಮರುದಿನ ಮುಂಜಾನೆ ತಲುಪುತ್ತೇವೆ. ಹೀಗೆ ರೈಲು ಹತ್ತಿ ಹೊರಟದ್ದು ನಾವೈದು ಜನ. ಇರುಳೆಲ್ಲ ರೈಲಿನ ಸದ್ದು ಕೇಳುತ್ತ ಅರೆನಿದ್ದೆಯಲ್ಲಿ ಏಳುತ್ತಿರುವಾಗಲೇ ಮೈಲಾಡುತುರೈ ಬಂದುಬಿಟ್ಟಿತ್ತು. ತಮಿಳುನಾಡಿನ ರಸ್ತೆ ಬದಿಯ ಕ್ಯಾಂಟೀನುಗಳಲ್ಲಿ ಸಿಗುವ ಇಡ್ಲಿಯ ರುಚಿಯೇ ಬೇರೆ. ಘಳಿಗೆಗೊಮ್ಮೆ ಬರುವ ತರಂಗಂಬಡಿಯ ಬಸ್ಸಿಗೆ ಬಿಸಿಲಲ್ಲಿ ಕಾಯಲೇಬೇಕು. ಬಿರುಬಿಸಿಲಿಗೆ ತಂಪೆರಚಲು ರೋಜ್ ಮಿಲ್ಕ್, ಬಸ್ಸಿನಾಚೆಗೂ ಕೇಳುವ ಟಪಾಂಗುಚ್ಚಿ ಹಾಡು, ಇಷ್ಟು ಸಾಕು, ಪಯಣಕ್ಕೆ ಕಿಚ್ಚು ಹಚ್ಚಲು.

ತರಂಗಂಬಡಿ ತಲುಪುವ ಹೊತ್ತಿಗೆ ಬೆಳಿಗ್ಗೆ ಹನ್ನೊಂದಾಗಿತ್ತು. ನೆತ್ತಿ ಸುಡುವಷ್ಟು ಬಿಸಿಲಿತ್ತು. ಅಲ್ಪಸ್ವಲ್ಪ ತಿಳಿದಿದ್ದ ತಮಿಳಿಗೆ ಕನ್ನಡ ಬೆರೆಸಿ ತಂಗಲು ಹೋಟೆಲ್ ಒಂದನ್ನು ಹುಡುಕಿದ್ದಾಯ್ತು. ಕಡಲ ಸುತ್ತ ಹೋಟೆಲ್‌ಗಳು ಸ್ವಲ್ಪ ದುಬಾರಿಯೇ. ತರಂಗಂಬಡಿಯ ಮುಖ್ಯ ಪಟ್ಟಣಕ್ಕೂ, ಬೀಚಿಗೆ ಅಂಟಿಕೊಂಡಿರುವ ಐತಿಹಾಸಿಕ ನಗರಕ್ಕೂ 8-10 ಕಿಲೋಮೀಟರ್ ದೂರ. ಹಾಗಾಗಿ, ದುಬಾರಿಯಾದರೂ ಸರಿ, ಹತ್ತಿರದ ಹೋಟೆಲ್ಲೆ ಲೇಸು ಎಂದು ನಿರ್ಧಾರ ಮಾಡಿದೆವು.

ಕೆದಕಿದಷ್ಟೂ ಕುತೂಹಲ ಹುಟ್ಟಿಸುವ ಇತಿಹಾಸ ಈ ನಗರಕ್ಕಿದೆ. ಕ್ರಿ.ಶ. 500ರ ತನಕ ಬೌದ್ಧ ಧರ್ಮದ ಕೇಂದ್ರವಾಗಿದ್ದ ಈ ನಗರ, ಚೋಳ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. ತದನಂತರ ಬೌದ್ಧ ಧರ್ಮ ಮರೆಯಾಗುತ್ತಾ ಹೋದಂತೆಲ್ಲ, ಮಾಸಿಲ್ಲಮಣಿ ಎಂಬ ದೇವಾಲಯ ಎದ್ದು ನಿಂತಿತ್ತು. ಕ್ರಿ.ಶ. 1400ರ ತನಕ ಚೋಳರ ಆಳ್ವಿಕೆಯಲ್ಲೇ ಮೆರೆಯುತ್ತಿದ್ದ ನಗರ, ಹಿಂದೂ ಧರ್ಮದ ಮೂಲ ಕೇಂದ್ರವಾಗಿ ಬದಲಾಗಿತ್ತು. ಆದರೆ, ವಿಜಯನಗರ ಸಾಮ್ರಾಜ್ಯದ ಪ್ರಾಬಲ್ಯಕ್ಕೆ ಚೋಳರು ಸೋತಾಗ ತರಂಗಂಬಡಿ ಮೈಸೂರು ಪ್ರಾಂತ್ಯಕ್ಕೆ ಸೇರಿತು. ತಂಜಾವೂರಿನ ನಾಯಕನ ಕೈಗೊಪ್ಪಿಸಿ ಆಡಳಿತವನ್ನು ನಿಯಂತ್ರಿಸುತ್ತಿದ್ದ ವಿಜಯನಗರದ ಅರಸರು, ತಮಿಳುನಾಡಿನ ಕಡಲ ಕಿನಾರೆಗಳ ಬಗ್ಗೆ ಹೆಚ್ಚು ಕಾಳಜಿವಹಿಸುವಂತೆ ಕಾಣಲಿಲ್ಲ.

1620ರ ನಂತರ ತರಂಗಂಬಡಿಯ ನಕಾಶೆಯೇ ಬದಲಾದಂತೆ ತೋರಿತು. ತಂಜಾವೂರಿನ ನಾಯಕನಿಗೆ ವಿದೇಶಿ ವ್ಯವಹಾರಗಳ ಸೆಳೆತ ಹೆಚ್ಚಿತ್ತು.  ಸ್ವಲ್ಪ ಹಣಕ್ಕೆ ಡೆನ್ಮಾರ್ಕಿನೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದ. ಆನಂತರ ಶುರುವಾದದ್ದೇ ಡ್ಯಾನಿಶ್ ಅಧಿಪತ್ಯ. ಕೆಲವೇ ಕೆಲವು ದಶಕಗಳಲ್ಲಿ ಭಾರತದ ಡ್ಯಾನಿಶ್ ನಗರವಾಗಿ ತರಂಗಂಬಡಿ ಬೆಳೆದು ನಿಂತಿತ್ತು.

ಊರ ನಡುವೆ ಬಸ್ಸು ಬಂದು ನಿಂತಿತ್ತು. ಒಂದಷ್ಟು ಅಂಗಡಿಗಳು ಕಣ್ಣಿಗೆ ಬಿದ್ದವು. ಪುಟ್ಟ ಪುಟ್ಟ ಅಂಗಡಿ ಸಾಲನ್ನೆಲ್ಲ ದಾಟಿದರೆ, ಸೇತುವೆಯೊಂದು ಕಾಣುವುದು. ಅದರ ಇಕ್ಕೆಲದಲ್ಲಿ ನಿಂತ ನೂರಾರು ದೋಣಿಗಳು. ಮುಂದೆ ಹೋದಷ್ಟು ದೂರ ಸ್ಮಶಾನ ಮೌನ. ವಾರಾಂತ್ಯಕ್ಕೆ ಹೋದರೂ ಜನಗಳೇ ಇಲ್ಲದಿದ್ದನ್ನು ನೋಡಿದಾಗ, ಈ ಪ್ರವಾಸಿ ತಾಣದ ಬಗ್ಗೆ ಯಾರಿಗೂ ತಿಳಿದಿಲ್ಲವೆಂದು ತಿಳಿದಿತ್ತು. ಒಂದಷ್ಟು ಬಣ್ಣದ ಮನೆಗಳು. ನಂತರ ಒಂದು ಹೆಬ್ಬಾಗಿಲು. ಹಿಂದೂ ಸಾಮ್ರಾಜ್ಯಕ್ಕೂ ಡ್ಯಾನಿಶ್ ಐಷಾರಾಮಕ್ಕೂ ನಡುವೆ ಗೋಡೆಯೊಂದು ನಿಂತಂತೆ.

ಈ ಸುಂದರ ಲೋಕವೊಂದರ ಸೃಷ್ಟಿಗೆ ಗವರ್ನರ್ ಆಗಿದ್ದ ಜಿಗೇನ್ ಬಾಲ್ಗ್ ಕೊಡುಗೆಯೇ ಹೆಚ್ಚಿದೆ. ಕೇವಲ ತರಂಗಂಬಡಿಯಷ್ಟೇ ಅಲ್ಲದೆ, ತಮಿಳುನಾಡಿನ ಹಲವೆಡೆ, ಹತ್ತಾರು ಸುಂದರ ಕಟ್ಟಡಗಳನ್ನೂ, ಉತ್ತಮ ಶೈಕ್ಷಣಿಕ ಕೇಂದ್ರಗಳನ್ನೂ ಈತ ಸೃಷ್ಟಿಸಿದ.  ಫ್ರೆಂಚ್ ವಾಸ್ತುಶಿಲ್ಪ ಕುರಿತು ಅಪಾರ ಗೌರವ ಹೊಂದಿದ್ದ ಈತ, ಬಣ್ಣದ ಗೋಡೆಗಳನ್ನೂ, ಎತ್ತರದ ಬಾಗಿಲುಗಳನ್ನೂ ಹೊಂದಿದ ಗವರ್ನರ್ ಬಂಗಲೆಯೊಂದನ್ನು ಕಟ್ಟಿದ್ದ. 2004ರ ಸುನಾಮಿಯಿಂದ ತತ್ತರಿಸಿ ಹೋದ ಇಲ್ಲಿಯ ವಾಸ್ತುಶಿಲ್ಪಗಳನ್ನು ತಮಿಳುನಾಡು ಮತ್ತು ಡೆನ್ಮಾರ್ಕ್ ಸರ್ಕಾರ ಸೇರಿ ಪುನರ್‌ವಿನ್ಯಾಸ ಮಾಡಿವೆ. ಗವರ್ನರ್ ಬಂಗಲೆಯ ಎದುರಿಗೊಂದು ಚರ್ಚು, ಅದರ ಹಿಂದೊಂದು ಮ್ಯೂಸಿಯಂ ಕಾಂಪ್ಲೆಕ್ಸ್, ನೀಲಿ ಸೂರಿನ ಕೆಳಗೆ ವಿಶಾಲವಾಗಿ ನಿಂತ ಸ್ಪಿರಿಚುಯಲ್ ಸೆಂಟರ್ ಹೀಗೆ ಸಾಗಿದರೆ, ಡ್ಯಾನಿಶ್ ಲೋಕವೇ ಕಣ್ಣ ಮುಂದೆ ಬಂದಂತೆ ಕಾಣುತ್ತದೆ. ಗತಿಸಿದ ಇತಿಹಾಸ ಸಾರುವ ಹಲವಾರು ಸುಂದರ ಕಟ್ಟಡಗಳನ್ನು ದಾಟಿ ಬಂದರೆ, ಪಾಳುಬಿದ್ದ ಪುಟ್ಟ ಕಟ್ಟಡವೊಂದು ಕಾಣುತ್ತದೆ. ಅದೇ ಜಿಗೇನ್ ಬಾಲ್ಗ್ ಪ್ರೆಸ್. ಇದು ಭಾರತದ ಮೊಟ್ಟ ಮೊದಲ ಪ್ರಿಂಟಿಂಗ್ ಪ್ರೆಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಾದಿಯ ಕೊನೆಯಲ್ಲೊಂದು ಜಿಗೇನ್ ಬಾಲ್ಗ್‌  ಪ್ರತಿಮೆ. ಒಮ್ಮೆ ದೂರಕ್ಕೆ ಕಣ್ಣು ಹಾಯಿಸಿದರೆ, ಕಡಲಿಗೆ ಸೆಡ್ಡು ಹೊಡೆದು ನಿಂತಂತಹ ಎತ್ತರದ ಕೋಟೆ. ಅದುವೇ ಡ್ಯಾನ್ಸ್ ಬೋರ್ಗ್ ಕೋಟೆ. ಕೆಂಪುಮಣ್ಣಿನ ಬಣ್ಣದಲ್ಲಿ ರಾರಾಜಿಸುವ ಈ ಎರಡು ಅಂತಸ್ತಿನ ಕೋಟೆ, ವಿಶ್ವದ ಡ್ಯಾನಿಶ್ ಕೋಟೆಗಳಲ್ಲಿ ಎರಡನೇ ದೊಡ್ಡ ಕೋಟೆ. ಹತ್ತಾರು ಡ್ಯಾನಿಶ್ ಹಡಗುಗಳು ಒಮ್ಮೆಗೇ ಬಂದಾಗ, ಮೆಣಸು, ಚಿನ್ನ ಮತ್ತು ರೇಷ್ಮೆಯನ್ನು ಇದೇ ಕೋಟೆಯಲ್ಲಿ ಸಂಗ್ರಹಿಸಿ ರಫ್ತು ಮಾಡಲಾಗುತ್ತಿತ್ತು. ಈಗ ಕೋಟೆಯ ಎರಡಂತಸ್ತಿನ ಕಟ್ಟಡವನ್ನು ಡ್ಯಾನಿಶ್ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಕಡಲಿನ ಅಲೆಗಳು ಬಂದು ಕೋಟೆಗೆ ಅಪ್ಪಳಿಸುವಂತೆ ತೋರುವ ದೃಶ್ಯ ಮನಮೋಹಕವಾಗಿರುತ್ತದೆ.

ಇತಿಹಾಸದ ಹೆಜ್ಜೆಗುರುತುಗಳನ್ನು ದಾಟಿ ಬಂದರೆ ದೃಷ್ಟಿಗೂ ನಿಲುಕದಷ್ಟು ವಿಸ್ತಾರವಾದ ಕಡಲೊಂದು ಕಾಣುತ್ತದೆ. ಜೀವ ಸುಡುವಂತ ಮಧ್ಯಾಹ್ನದ ಸೂರ್ಯ ಸಂಜೆಯಾಗುತ್ತಿದ್ದಂತೆ ಚೆಲುವ ಚೆನ್ನಿಗನಾಗುತ್ತಾನೆ. ಕಡಲ ತಡಿಯಲ್ಲಿ ಬಿದ್ದ ಶಿಲೆಯ ಕಲ್ಲುಗಳು, ಮುಸ್ಸಂಜೆ ಬೆಳಕಲ್ಲಿ ಹೊನ್ನಂತೆ ಹೊಳೆಯುತ್ತವೆ. ನಡುವೆ ಮಲ್ಲಿಗೆ ಬಳ್ಳಿಯೊಂದು ಅರಳಿ ನಗುತ್ತದೆ. ನಿರಂತರವಾಗಿ ಕೇಳುವ ಅಲೆಗಳ ಸದ್ದು ತರಂಗಂಬಡಿಯ ತುಂಬೆಲ್ಲ ಗುನುಗುನಿಸುತ್ತದೆ. ಅದಕ್ಕೇ ತಾನೇ, ಈ ಊರಿಗೆ ಹಾಡುವ ಅಲೆಗಳ ನಾಡು ಎಂಬ ಹೆಸರಿಟ್ಟಿದ್ದು! ಹೀಗೆ ಕಡಲ ತಡಿಯಲ್ಲಿ ಸಾಗಿದರೆ, ದೂರದಲ್ಲೊಂದು ದೇಗುಲ. ಕ್ರಿ.ಶ. 1306ರಲ್ಲಿ ಮಾರವರ್ಮನ್ ಕುಲಶೇಖರ ಪಾಂಡಿಯನ್ ಎಂಬಾತ ಕಟ್ಟಿದ ಮಾಸಿಲ್ಲಮಣಿ ದೇಗುಲ, ಬಣ್ಣ ಕಳೆದುಕೊಂಡು ನಿಂತಂತೆ ತೋರುತ್ತದೆ. 2004ರ ಸುನಾಮಿಗೆ ದೇಗುಲದ ವಿಮಾನ ಮುರಿದು ಬಿದ್ದದ್ದು ಗೋಚರವಾಗುತ್ತದೆ.

ಹೀಗೆ ದೇವಾಲಯವನ್ನು ದಾಟಿ ಹೋದರೆ, ದಣಿದು ಬಂದು ಕಿನಾರೆಯಲ್ಲಿ ನಿಂತ ಬಣ್ಣಬಣ್ಣದ ದೋಣಿಗಳು ಕಾಣುವವು. ಹರಡಿದ ಮರಳ ಮೇಲೆ ಸಾಗಿದಷ್ಟೂ ಹುದುಗಿಹೋಗುವ ಹೆಜ್ಜೆಗಳು, ಬಣ್ಣದ ಮುಗಿಲು, ದಡದ ತುಂಬೆಲ್ಲ ಸತ್ತು ಬಿದ್ದ ಜೀವಚರಗಳು, ದಿನಕ್ಕೆ ಅಂತ್ಯ ಹೇಳುತ್ತಿರುವ ಕಡಲ ನಾವಿಕರು- ಕಿನಾರೆಯಲ್ಲಿ ಸಾಗಿದಷ್ಟೂ ಕಥೆಗಳು ಹುಟ್ಟಿಕೊಳ್ಳುತ್ತವೆ. ಅಲ್ಲಲ್ಲಿ ಕಾಣುವ ಈಜಾಡುವ ಕಡಲ ಮಕ್ಕಳು ಫೋಟೊಗೆಂದು ಹಿಂದೆ ಮುಂದೆ ಓಡುತ್ತಿದ್ದುದು ಕ್ಯಾಮೆರಾ ಕಣ್ಣಿಗೆ ಇನ್ನೊಂದಷ್ಟು ದೃಶ್ಯಗಳನ್ನು ಸೇರಿಸಿಕೊಟ್ಟಿದ್ದಂತೂ ನಿಜ. ಇರುಳಾಗುವ ಹೊತ್ತಿಗೆ ತಿಂಡಿ ಅಂಗಡಿಗಳು ತೆರೆದುಕೊಳ್ಳುತ್ತವೆ. ಅಂತೆಯೇ ಕ್ರಿಶ್ಚಿಯನ್ ಬೋಧನಾ ಸಂಸ್ಥೆಗಳೂ. ಕಾಲಿಗಂಟಿದ ಮರಳು, ಸುತ್ತೆಲ್ಲ ಮೀನಿನ ವಾಸನೆ ಇದ್ದರೂ, ಕುರುಕಲು ತಿಂಡಿಗಳು ಕರೆದರೆ ಬೇಡ ಎನ್ನಲಾಗದು. ರಾತ್ರಿಪೂರ್ತಿ ಕಡಲ ಕಿನಾರೆಯಲ್ಲೇ ಕುಳಿತು ವಿಹರಿಸುವವರಿಗೆ, ಬೀಚಿನ ಸಾಲಿನಲ್ಲಿ ಸಾಲಾಗಿ ಜೋಡಿಸಿದ ಪಾರ್ಕಿನ ಬೆಂಚುಗಳು ಕಂಡುಬರುತ್ತವೆ.

ಕುಡುಕರ ಕಾಟ ಸ್ವಲ್ಪ ಹೆಚ್ಚೇ ಇದೆ ಎಂದು ತಿಳಿದು ಬಂತು. ಪಟ್ಟಣದ ನಡುವೆ ರಾತ್ರಿ ತೆರೆದುಕೊಳ್ಳುವ ಪುಟ್ಟ ಪುಟ್ಟ ಅಂಗಡಿಗಳು, ಹೊಟ್ಟೆ ತುಂಬಿಕೊಳ್ಳಲು ಸಾಕು. ಯಾವ ಹೋಟೆಲ್ಲೂ ಹೋಟೆಲ್ಲಿನ ರೀತಿ ಕಾಣದೆ, ಬಾಳೆ ಎಲೆಯಲ್ಲಿ ಬಡಿಸುವ ಸಂಸ್ಕೃತಿಯಿಂದ ವಿಶೇಷವೆನಿಸಿಕೊಳ್ಳುತ್ತದೆ. ತಮಿಳು ಬಾರದೆ ಇದ್ದರೂ, ಸನ್ನೆಗಳಲ್ಲೇ ಮಣೆ ಹಾಕುವ ಇಲ್ಲಿಯ ಹಳ್ಳಿ ಜನರ ಬದುಕಿಗೆ, ಸುನಾಮಿ ಅಪ್ಪಳಿಸಿದ ಕುರುಹುಗಳು ಇನ್ನೂ ಕಾಣಸಿಗುತ್ತವೆ. ಮಣ್ಣಾದ ದೇಹಕ್ಕೆ ಬಿಸಿನೀರೆರಚಿ, ಮುಂಜಾನೆದ್ದು, ನಮ್ಮ ಪ್ರಯಾಣ ಮತ್ತೆ ಶುರುವಾಯಿತು.

ಸರಿಸುಮಾರು ಮುಂಜಾನೆ 4.30ರ ವೇಳೆಗೆ ನಾವಿಕರ ಬದುಕು ಆರಂಭವಾಗುತ್ತದೆ. ಅದನ್ನು ನೋಡಲೇಬೇಕೆಂದು ಅರೆನಿದ್ದೆಯಲ್ಲೇ 2–3 ಕಿಲೋಮೀಟರ್‌ ನಡೆದು ಬಂದೆವು. ಬೆಳಗಾಗುವ ಸಮಯಕ್ಕೆ ಹೊರಟು ನಿಂತ ದೋಣಿಗಳು, ನೀರಲ್ಲಿ ಸೆಣಸಾಟ ನಡೆಸುತ್ತಿರುವ ದೋಣಿಗಳು, ದಡಕ್ಕೆ ಮೀನನ್ನೆಲ್ಲ ಹೊತ್ತು ತಂದ ದೋಣಿಗಳು, ಹೀಗೆ ಹತ್ತು ಹಲವು ದೃಶ್ಯಗಳು ಕಾಣಸಿಗುತ್ತವೆ. ಪೋಣಿಸಿದ ಬಲೆಯೊಂದು ಮುಂಜಾನೆ ಬೆಳಗಿನ ಕಿರಣಕ್ಕೆ ಹೊಳೆಯುತ್ತದೆ. ವಿಲವಿಲನೆ ಒದ್ದಾಡುವ ಹಲವು ಜಾತಿಯ, ಹಲವು ಬಣ್ಣದ, ವಿಷಕಾರಿ ಮೀನುಗಳೆಲ್ಲ ಗೋಚರಿಸುತ್ತವೆ. ಮೀನುಗಾರರಿಗೆ ಕ್ಯಾಮೆರಾ ಒಂದು ವಿಸ್ಮಯ. ಟ್ರೈಪ್ಯಾಡ್ ನೋಡಿದ ಮೇಲಂತೂ ನಮ್ಮನ್ನು ಸಿನಿಮಾದವರೂ ಎಂದೇ ತಿಳಿದರೇನೋ. ಆದರೇನು? ಭಾಷೆ ಎನ್ನುವ ಬ್ಯಾರಿಯರ್ ನಡುವಿದ್ದು, ಮೂಕ ಸಂಭಾಷಣೆಗಳೇ ಹೆಚ್ಚಾದವು.

ಕಡಲ ಭೇಟಿ ಮುಗಿಸಿ ಡ್ಯಾನ್ಸ್ ಬೋರ್ಗ್ ಮ್ಯೂಸಿಯಂಗೆ ಬಂದೆವು. ಎರಡಂತಸ್ತಿನ ಈ ಕಟ್ಟಡದಲ್ಲಿ ನೂರಾರು ವರ್ಷಗಳ ಹಿಂದಿನ ಡ್ಯಾನಿಶ್ ಇತಿಹಾಸ ಇದ್ದರೂ, ಸುಡುವ ಬಿಸಿಲಿಗೆ, ಕಾಡುವ ಸೆಕೆಗೆ, ಅಧ್ಯಯನ ಕಷ್ಟಸಾಧ್ಯ ಎನಿಸತೊಡಗಿತ್ತು. ಕೋಟೆಯ ಮೇಲಿಂದ ವಿಸ್ತಾರವಾದ ಕಡಲನ್ನು ಕಣ್ತುಂಬಿಕೊಂಡು ಮತ್ತೆ ಡ್ಯಾನಿಶ್ ಬೀದಿಗಳಿಗೆ ಬಂದೆವು. ಅದೊಂದು ಹೊಸ ಲೋಕ. ಹಿಂದೂ- ಕ್ರಿಶ್ಚಿಯನ್ ಧರ್ಮಗಳು ಇಲ್ಲಿ ಹೊಂದಾಣಿಕೆಯಿಂದ ಇರುವುದು ಕಂಡರೂ, ಡ್ಯಾನಿಶ್ ಮತ್ತು ಭಾರತೀಯರ ನಡುವೆ ಕಾಣದೊಂದು ಅಂತರ ಇರುವಂತೆ ಗೋಚರಿಸುತ್ತದೆ.

ಡ್ಯಾನಿಶ್ ದೊರೆಗಳು ತಮ್ಮ ಆಡಳಿತದಲ್ಲಿ ತರಂಗಂಬಡಿಯ ಮುಗ್ಧ ಜನಗಳನ್ನು ಸಾಕಷ್ಟು ಹಿಂಸಿಸಿದ್ದರೆಂದೂ, ಅವರನ್ನು ಕೀಳಾಗಿ ನೋಡಿದ್ದರೆಂದೂ ಇತಿಹಾಸ ಕೆದಕಿದಾಗ ತಿಳಿದುಬರುತ್ತದೆ. ಅದೇ ದ್ವೇಷದ ಬೆಂಕಿ ಇನ್ನೂ ಆರಿಲ್ಲದಂತೆ ಕಾಣುತ್ತದೆ.

ಗಾರ್ಡನ್‌ಗಳಿಂದ ಅಲಂಕೃತ ಹಳೆಯ ಬಣ್ಣದ ಮನೆಗಳು, ವಾಹನಗಳೇ ಕಾಣದ ಸುಸಜ್ಜಿತ ರಸ್ತೆಗಳು. ಅಲ್ಲಲ್ಲಿ ಕಾಣುವ ಕ್ರೈಸ್ತ ಧರ್ಮದ ಪಾದ್ರಿಗಳು- ಹೀಗೆ ಡ್ಯಾನಿಶ್ ಲೋಕವನ್ನು ದಾಟಿ ಬರುತ್ತಿದ್ದಂತೆಯೇ, ಹಣ್ಣಿನ ಅಂಗಡಿಗಳು, ಹೋಟೆಲ್‌ಗಳು ಮತ್ತು ಗುಡಿಸಲುಗಳಿಂದ  ಹಳ್ಳಿ ಬದುಕೊಂದು ಕಾಣಸಿಗುತ್ತದೆ. ನಡುವೆ  ಸಾಮರಸ್ಯ ಎನ್ನುವುದಕ್ಕಿಂತ, ನೂರಾರು ವರ್ಷಗಳ ಬಾಳ್ವೆಯಿಂದ ಬದುಕು ತನ್ನಷ್ಟಕ್ಕೆ ತಾನು  ಹೊಂದಿಕೊಳ್ಳುತ್ತ ಸಾಗಿಬಂದಿರುವುದು ಗೋಚರಿಸುತ್ತದೆ. ಇದೇ ಸತ್ಯವೋ ಅಥವಾ ಅರಿಯದ ಸತ್ಯವಿದೆಯೋ? ಕೆದಕಿ ನೋಡಬಹುದು. ಕೆದಕಿದಷ್ಟೂ ಕಗ್ಗಂಟಲ್ಲವೇ ಇತಿಹಾಸ?

ಸುಮುಖನ ಫೋಟೊಗ್ರಫಿ ಹುಚ್ಚು, ಫಣಿಯ ಇತಿಹಾಸದ ಹುಚ್ಚು, ನನ್ನ ಬರವಣಿಗೆಯ ಹುಚ್ಚು, ನಿಂಗಪ್ಪನ ತಿರುಗಾಟದ ಹುಚ್ಚು, ಆಕಾಶ್‌ನ ತಂತ್ರಜ್ಞಾನದ ಹುಚ್ಚು- ಎಲ್ಲವನ್ನೂ ತಣಿಸಿದ ಈ ಊರಿನ ಮೇಲೆ ಧನ್ಯತಾ ಭಾವ ಮೂಡಿತ್ತು. ವಿದಾಯ ಹೇಳುವ ಸಮಯ ಬಂದಿತ್ತು.

ನಾಗಪಟ್ಟಿಣಂ ಜಿಲ್ಲೆಯಲ್ಲಿ ಬಂಗಾಳ ಕೊಲ್ಲಿಗೆ ಅಂಟಿಕೊಂಡು ನಿಂತ ಈ ಪುಟ್ಟ ಊರು ಪ್ರವಾಸಿಗರಿಗೊಂದು ಹೊಸ ಲೋಕ. ಭಾರತವಲ್ಲದ ಭಾರತೀಯ ನಾಡು. ಎರಡು ಸಂಸ್ಕೃತಿಗಳು ಕೂಡಿ ಬಾಳಿದ್ದ ನಾಡು. ಕುತೂಹಲ ಕೆರಳಿಸುವಷ್ಟು ಇತಿಹಾಸ, ಮನ ತುಂಬಿ ಬರುವಷ್ಟು ಸೌಂದರ್ಯ- ಇಷ್ಟು ಸಾಕಲ್ಲವೇ? ಊರೊಂದಕೆ ಮೆರುಗು ಬರಲು. ಪ್ರವಾಸಿಗರನು ಹೊತ್ತು ತರಲು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry