ಕೃಷಿ ಚಟುವಟಿಕೆ ಚುರುಕು

7
ಅಧಿಕೃತ ಮಾರಾಟಗಾರರಿಂದ ಬೀಜ, ಗೊಬ್ಬರ ಖರೀದಿಸಲು ಸಲಹೆ

ಕೃಷಿ ಚಟುವಟಿಕೆ ಚುರುಕು

Published:
Updated:
ಕೃಷಿ ಚಟುವಟಿಕೆ ಚುರುಕು

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಉತ್ತಮ ಮಳೆ ಆಗಿದೆ. ಹೀಗಾಗಿ ರೈತರು ಕುಂಟೆ, ರಂಟೆ, ಮಡಿಕೆ, ಸಮತಟ್ಟು, ಕಸಕಡ್ಡಿ ಆಯುವುದು ಸೇರಿ ಇನ್ನಿತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಗುರುವಾರ ಭಾರಿ ಗಾಳಿ, ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ಯಾವುದೇ ನಷ್ಟ ಸಂಭವಿಸಿದ ವರದಿಗಳು ಬಂದಿಲ್ಲ. ಲಿಂಗಸುಗೂರಿನಲ್ಲಿ 16 ಮಿ.ಮೀ, ಮುದಗಲ್‌ 3.4 ಮಿ.ಮೀ, ಹಟ್ಟಿ 24 ಮಿ.ಮೀ, ಗುರುಗುಂಟಾ 8 ಮಿ.ಮೀ, ಮಸ್ಕಿ 2.4 ಮಿ.ಮೀ ಮಳೆ ಆಗಿದೆ.

‘ತಾಲ್ಲೂಕಿನ 1,55,240 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಮುಂಗಾರು ಹಂಗಾಮಿನಲ್ಲಿ 67,570 ಹೆಕ್ಟೇರ್‌ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತದೆ. ಈ ಪೈಕಿ 13,880 ಹೆಕ್ಟೇರ್‌ ಜಮೀನಿನಲ್ಲಿ ತೊಗರಿ, 23 ಸಾವಿರ ಹೆಕ್ಟೇರ್‌ ಸಜ್ಜೆ, 500 ಹೆಕ್ಟೇರ್‌ ಸೂರ್ಯಕಾಂತಿ, 3 ಸಾವಿರ ಹೆಕ್ಟೇರ್‌ ಹತ್ತಿ ಬೆಳೆಯಲು ಬೀಜ ಪೂರೈಕೆಗೆ ಕೃಷಿ ಇಲಾಖೆ ಪೂರ್ವ ಸಿದ್ಧತೆ ಮಾಡಿಕೊಂಡಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಎಚ್‌. ರಕ್ಕಸಗಿ ವಿವರಿಸಿದರು.

‘ಈಗಾಗಲೆ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸಲು 150 ಕ್ವಿಂಟಲ್‌ ಸಜ್ಜೆ, 50 ಕ್ವಿಂಟಲ್‌ ಸೂರ್ಯಕಾಂತಿ, 100 ಕ್ವಿಂಟಲ್‌ ಹೆಸರು, 4 ಸಾವಿರ ಕ್ವಿಂಟಲ್‌ ಭತ್ತ, 400 ಕ್ವಿಂಟಲ್‌ ತೊಗರಿ ಬಿತ್ತನೆ ಬೀಜ ಪೂರೈಸಲು ಬೇಡಿಕೆ ಸಲ್ಲಿಸಲಾಗಿದೆ. ಸಾಮಾನ್ಯ ರೈತರಿಗೆ ಶೇ 50 ಮತ್ತು ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಶೇ 75ರ ರಿಯಾಯಿತಿ ದರದಲ್ಲಿ ಬೀಜ ಪೂರೈಕೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಮಸ್ಕಿ, ಲಿಂಗಸುಗೂರು, ಮುದಗಲ್‌, ಗುರುಗುಂಟಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಿದೆ. ಬೀಜದ ಜೊತೆಗೆ ರೈತರು ಲಘು ಪೋಷಕಾಂಶಗಳಾದ ಜಿಂಕ್‌ ಸಲ್ಪೇಟ್‌, ಜಿಪ್ಸಮ್‌, ಬಿಜೋಪಚಾರ ಪರಿಕರಗಳ ಜೊತೆಗೆ ರೈಸೋಬಿಯಮ್‌, ಟ್ರೈಕೋಡರ್ಮ್‌ ಹಾಗೂ ಸಸ್ಯ ಸಂರಕ್ಷಣಾ ಔಷಧಿ ಬೇವಿನ ಎಣ್ಣೆಯನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬೇಕು’ ಎಂದು ರೈತರಲ್ಲಿ ಮನವಿ ಮಾಡಿದರು.

‘ರೈತರು ರೈತ ಸಂಪರ್ಕ ಕೇಂದ್ರ ಸೇರಿ ಅಧಿಕೃತ ಗೊಬ್ಬರ ಬೀಜ ಮಾರಾಟಗಾರರ ಬಳಿಯೆ ಪ್ರಮಾಣೀಕೃತ ಬಿತ್ತನೆ ಬೀಜ, ಗೊಬ್ಬರ ಖರೀದಿಸಬೇಕು. ತಾವು ಖರೀದಿಸಿದ ಬೀಜ ಗೊಬ್ಬರಕ್ಕೆ ರಸೀದಿ ಪಡೆದುಕೊಳ್ಳುವುದು ಕಡ್ಡಾಯ. ರಸೀದಿ ಜೊತೆ ಪ್ಯಾಕೆಟ್‌, ಶ್ಯಾಂಪಲ್‌ಗಾಗಿ ಹಿಡಿ ಬೀಜ ಇಟ್ಟುಕೊಂಡಿರಬೇಕು. ನಕಲಿ ಬೀಜ, ಗೊಬ್ಬರ ಮಾರಾಟ ಕಂಡು ಬಂದಲ್ಲಿ ಮಾಹಿತಿ ನೀಡಬೇಕು’ ಎಂದು ಎಚ್ಚರಿಕೆ ನೀಡಿದರು.

**

ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ರೈತರು ಖುಷಿಯಾಗಿದ್ದಾರೆ. ಕೃಷಿ ಇಲಾಖೆ ರೈತರ ಬೇಡಿಕೆ ಆಧರಿಸಿ ಅಗತ್ಯ ಬೀಜ ಪೂರೈಸಲು ಮುಂದಾಗಬೇಕು

–  ಅಮರಣ್ಣ ಗುಡಿಹಾಳ, ಮುಖಂಡ, ರಾಜ್ಯ ರೈತ ಸಂಘ

ಬಿ.ಎ. ನಂದಿಕೋಲಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry