ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ತಳಿಗಳ ಮಾವು!

ಐದು ದಿನಗಳ ಮಾವು ಮೇಳಕ್ಕೆ ಚಾಲನೆ
Last Updated 26 ಮೇ 2018, 12:52 IST
ಅಕ್ಷರ ಗಾತ್ರ

ಮಂಡ್ಯ: ನಗರದ ಹಾಪ್‌ಕಾಮ್ಸ್ ಬಳಿ ಐದು ದಿನಗಳ ಕಾಲ ನಡೆಯುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳ-2018ಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಚಾಲನೆ ನೀಡಿದರು.

‘ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಕರ್ನಾಟಕ ಮಾವು ಅಭಿವೃದ್ಧಿ ಹಾಗೂ ಮಾರಾಟ ನಿಗಮದ ವತಿಯಿಂದ ಆಯೋಜಿಸಿರುವ ಮೇಳದಲ್ಲಿ ಸುಮಾರು 60ಕ್ಕೂ ಹೆಚ್ಚು ತಳಿಗಳನ್ನು ಪ್ರದರ್ಶನ ಮಾಡಲಾಗಿದೆ. ತೋತಾಪುರಿ, ರತ್ನ, ಜಾಹಾಂಗೀರ್, ಸ್ವೀಟ್ ಲೇಡಿ, ಬಾದಾಮಿ, ಮಲಗೋವಾ, ಖಾದರ, ನಾಜೂಕ್ ಬಾದಾಮ್, ದಶಹರಿ, ದಿಲ್ ಪಸಂದ್, ಸೇಂಧೂರ, ರಾಯಲ್ ಸ್ಪೆಷಲ್, ಸಿಂಧೂ, ಕೇಸರ, ರಸಮ, ಡಾ.ಎಚ್.ಎಂ.ಮರೀಗೌಡ, ರಸಪುರಿ, ಸ್ವರ್ಣ ಜಹಂಗೀರ್, ಕುದೂಸ್ ಸೇರಿದಂತೆ ಐವತ್ತಕ್ಕೂ ಹೆಚ್ಚು ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಮಪಾಸ ಎಂಬ ಮಾವಿನ ತಳಿಯು ದೊಡ್ಡ ಗಾತ್ರ ಹೊಂದಿದ್ದು, ಸುಮಾರು ಒಂದರಿಂದ ಎರಡು ಕೆ.ಜಿಯವರೆಗೆ ತೂಗುತ್ತಿದ್ದು ಗ್ರಾಹಕರ ಆಕರ್ಷಣೆಯ ಕೇಂದ್ರವಾಗಿತ್ತು’.

ಜಿಲ್ಲೆಯ ಮಳವಳ್ಳಿ, ಪಾಂಡವ ಪುರ, ಮಂಡ್ಯ, ಕೆ.ಆರ್.ಪೇಟೆ ತಾಲ್ಲೂಕುಗಳಿಂದ ರೈತರು ಬಂದಿದ್ದರು. ಪಕ್ಕದ ಜಿಲ್ಲೆ ರಾಮ ನಗರದ ಒಂದೆರಡು ಮಳಿಗೆಗಳೂ ಇದ್ದವು. ಗ್ರಾಹರಿಗೆ ಬಾದಾಮಿ, ರಸಪೂರಿ, ಮಲಗೋವ, ಆಲ್ಫಾನ್ಸೋ, ಮಲ್ಲಿಕಾ, ಸೇಂಧೂರ, ರುಮಾನಿ, ತೋತಾಪುರಿ, ವಾಲಾಚೆ, ಕಾಲಂ ಪಾಡಿ, ದಿಲ್‌ಪಸಂದ್ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಇವುಗಳಿಗೆ ಹಾಪ್‌ಕಾಮ್ಸ್ ಹಾಗೂ ಮಾರುಕಟ್ಟೆ ದರವನ್ನು ಸರಿದೂಗಿಸಿ ಬೆಲೆ ನಿಗದಿ ಮಾಡಿ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಮಾಡಲಾಗುತ್ತಿದೆ.

ತೋಟಗಾರಿಕೆ ಇಲಾಖೆಯಿಂದ ಮೂರು ಮಳಿಗೆಗಳನ್ನು ತೆರೆಯ ಲಾಗಿದ್ದು, ವಿವಿಧ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ. ಸಪೋಟಾ, ಚಕ್ರಮುನಿ, ನಿಂಬೆ, ಕರಿಬೇವು, ನುಗ್ಗೆ ಸಸಿಗಳ ವಿವಿಧ ತಳಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಮಾವಿನ ವಿವಿಧ ತಳಿಯ ಕಸಿ ಮಾಡಿದ ಸಸಿಗಳನ್ನು ಹಾಗೂ ಅಲಂಕಾರಿಕ ಗಿಡಗಳನ್ನು ಕೂಡ ಮಾರಾಟ ಮಾಡಲಾಗುತ್ತಿತ್ತು. ಸಸಿ ಖರೀದಿ ಮಾಡುವವರಿಗೆ ಸಸಿ ನೆಡುವ ಕುರಿತು ಮಾಹಿತಿ ನೀಡುತ್ತ, ಮಾವಿನ ಬೆಳೆ ಹಾಕಲು ಅನುಸರಿಸಬೇಕಾದ ಕ್ರಮಗಳ ಮಾಹಿತಿಯ ಕರಪತ್ರ ವಿತರಣೆ ಮಾಡಲಾಯಿತು.

ಕಡಿಮೆ ಬೆಲೆ, ಗುಣಮಟ್ಟದ ಹಣ್ಣು: ‘ನೈಸರ್ಗಿಕವಾಗಿ ಮಾಗಿಸಿದ ಹಣ್ಣು ಮಾರಾಟ ಮೇಳ ಆಯೋಜನೆ ಮಾಡಿರುವುದರಿಂದ ಇಲ್ಲಿ ಹಣ್ಣುಗಳನ್ನು ಕೊಂಡು ತಿನ್ನಲು ಖುಷಿಯಾಗುತ್ತಿದೆ. ಹೊರಗೆ ಮಳಿಗೆ ಹಾಗೂ ಶಾಪಿಂಗ್ ಮಾಲ್‌ಗಳಲ್ಲಿ ₹ 100ರಿಂದ 120 ವರೆಗೆ ಬೆಲೆ ಇರುತ್ತದೆ. ಇಲ್ಲಿ ₹60ರಿಂದ 80ರವರೆಗೆ ಬೆಲೆ ಇರುತ್ತದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಹಣ್ಣುಗಳು ದೊರೆಯುತ್ತಿವೆ. ತಿನ್ನಲು ತುಂಬಾ ಸಿಹಿಯಾಗಿವೆ’
ಎಂದು ಗ್ರಾಹಕರು ಖುಷಿ ಹಂಚಿಕೊಂಡರು.

ನಿಫಾ ವೈರಸ್ ಆಂತಕ ಬೇಡ

ಮಾವು ಮೇಳದಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸದೆ, ನೈಸರ್ಗಿಕವಾಗಿ ಮಾಗಿರುವ ಹಣ್ಣುಗಳ ಮಾರಾಟ ನಡೆಯುತ್ತಿದೆ. ಗ್ರಾಹಕರು ಹಣ್ಣುಗಳ ಸೇವೆನೆ ಬಗ್ಗೆ ಯಾವುದೇ ಆತಂಕ ಪಡುವುದು ಬೇಡ. ನಿಫಾ ವೈರಸ್ ಬಗ್ಗೆ ಕೆಲವೆಡೆ ಆತಂಕವಿದ್ದು, ನಮ್ಮ ಜಿಲ್ಲೆಯಲ್ಲಿ ಯಾವುದೆ ಪ್ರಕರಣಗಳು ಕಂಡುಬಂದಿಲ್ಲ. ಗಿಳಿ, ಅಳಿಲು, ಬಾವಲಿ ಕಚ್ಚಿ ಕೆಳಗೆ ಬೀಳಿಸಿರುವ ಹಣ್ಣುಗಳನ್ನು ಸೇವನೆ ಮಾಡದೆ, ರೈತರು ಕೊಯ್ಲು ಮಾಡಿನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಸೇವನೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT