ಮೂರ್ತಿಯಿಲ್ಲದ ಗುಡಿಗಳಿವೆ, ಹುಂಡಿಯಿಲ್ಲದ ಗುಡಿಯಿಲ್ಲ

6

ಮೂರ್ತಿಯಿಲ್ಲದ ಗುಡಿಗಳಿವೆ, ಹುಂಡಿಯಿಲ್ಲದ ಗುಡಿಯಿಲ್ಲ

ಪ್ರಕಾಶ್ ರೈ
Published:
Updated:
ಮೂರ್ತಿಯಿಲ್ಲದ ಗುಡಿಗಳಿವೆ, ಹುಂಡಿಯಿಲ್ಲದ ಗುಡಿಯಿಲ್ಲ

ಇತ್ತೀಚಿನ ಚುನಾವಣೆಯಲ್ಲಿ ಮಾರುವ, ಮಾರಿಕೊಳ್ಳುವ ಮನುಷ್ಯರ ಒಡನಾಟದಿಂದ ದೂರ ಸರಿದ ನಂತರ ಸ್ವಲ್ಪ ಬಿಡುವಾಗಿದ್ದೆ. ಒಂದು ಸಂಜೆ ಗೆಳೆಯರೊಡನೆ ತೋಟದಲ್ಲಿ ಕುಳಿತಿದ್ದೆ. ಮಾತು ಎತ್ತೆತ್ತಲೋ ಹೊರಳಿದರೂ ಕೊನೆಗೂ ಚುನಾವಣೆಯನ್ನು ಯಾರು, ಯಾವುದು ನಿರ್ಧರಿಸಿತು ಎನ್ನುವತ್ತ ಸರಿಯುತ್ತಿತ್ತು. ರಾಜಕಾರಣ ಎಂದರೆ ಹಾಗೆಯೇ, ಮೂಲಭೂತ ಆಸಕ್ತಿಗಳಲ್ಲಿ ಒಂದು. ಯಥಾಪ್ರಕಾರ ಖಾರ ಖಾರವಾಗಿ ನಡೆಯಿತು.

ಎತ್ತರದ ದನಿಯಲ್ಲಿ ಆರಂಭವಾದ ಮಾತು ಕ್ರಮೇಣ ಸಂವಾದದ ಹಂತಕ್ಕೆ ಬಂತು. ಎಲ್ಲರೂ ಸ್ವಲ್ಪ ಸಡಿಲವಾದೆವು. ಮನುಷ್ಯನನ್ನು ತೀವ್ರವಾಗಿ ಕಾಡುವ ಅಮಲು ಯಾವುದು ಎನ್ನುವತ್ತ ಮಾತು ಮಗ್ಗಲು ಬದಲಾಯಿಸಿತು. ಅದು ಪ್ರೇಮವೆಂದು ಕವಿಮನಸ್ಸಿನ ಗೆಳೆಯನೊಬ್ಬ ಹೇಳಿದ. ಪ್ರೇಮವನ್ನು ಅಮಲು ಎಂದು ನೋಡುವ ಅವಶ್ಯಕತೆಯಿಲ್ಲ. ಅದು ಆಗಾಗ ಹೊಸತಾಗಿ ಹುಟ್ಟುವ ಹೂವು. ಪ್ರೇಮವನ್ನು ಅಮಲೆಂದು ಮಾತ್ರ ನೋಡಿದರೆ ಅದು ಟೀನೇಜ್ ಪ್ರಾಬ್ಲಮ್. ಪ್ರೇಮ ಬಂದು ಹೋಗುವ, ಹೋಗಿ ಬರುವ, ಹೂವಾಗಿ ಅರಳಿದರೂ ಒಣಗಿ ಉದುರಿ ಬಿದ್ದರೂ ಅದು ‘ಕೇವಲ’ ಮತ್ತು ‘ಮಾತ್ರ’ ಅಲ್ಲ, ಅದೊಂದು ಮಧುರ ಅನುಭವ.

ಮತ್ತೊಬ್ಬ ಗೆಳೆಯ ‘ಪ್ರಶಂಸೆ ಅತಿ ದೊಡ್ಡ ಮತ್ತು’ ಎಂದ. ‘ಹೊಗಳಿಕೆಯ ಅಮಲು ಎಲ್ಲರನ್ನೂ ಆಟವಾಡಿಸುವುದಿಲ್ಲ. ಯಾರು ತುಂಬಾ ಬಲಹೀನರೋ ಅವರನ್ನು ಮಾತ್ರ ಕುಣಿಸುತ್ತದೆ’ ಎಂದೆ. ಇನ್ನೊಬ್ಬ ಅಧಿಕಾರದ ರುಚಿ ಕಂಡವನು, ‘ಅಧಿಕಾರ ಬಹಳ ದೊಡ್ಡ ಮತ್ತು’ ಎಂದು ವಾದಿಸಲು ಬಂದ. ಅವನ ಮಾತಲ್ಲಿ ನಿಜವಿತ್ತು. ಅಧಿಕಾರ ಇರುವವನಿಗೆ ಅದರ ಮತ್ತೇರಿದರೆ ಅದು ಅವನಿಗಷ್ಟೇ ಅಲ್ಲ, ಸುತ್ತಲಿರುವ ಅಷ್ಟೂ ಜನರಿಗೆ ಆಪತ್ತು.

ಆನೆ ಅದಕ್ಕೆ ಸರಿಯಾದ ಉದಾಹರಣೆ. ಅದಕ್ಕೆ ಶಕ್ತಿಯಿದೆ, ಆ ಶಕ್ತಿಗೆ ಮದ ಏರಿದರೆ ಎಲ್ಲವೂ ಚಿಕ್ಕದಾಗಿ ಕಾಣುತ್ತದೆ. ಅಧಿಕಾರವೂ ಅಷ್ಟೇ. ತನ್ನಲ್ಲಿರುವ ಬಲದಿಂದ ಬರುವ ಅಮಲಿನ ಮುಂದೆ ಉಳಿದದ್ದೆಲ್ಲಾ ಕ್ಷುಲ್ಲಕವಾಗಿ ಕಾಣುತ್ತದೆ. ಆದರೆ ಅಧಿಕಾರ ಎಲ್ಲರಿಗೂ ದಕ್ಕುವುದೂ ಅಲ್ಲ, ಎಲ್ಲರಿಗೂ ಅವಶ್ಯಕವೂ ಅಲ್ಲ. ದೇವರನ್ನು ನಂಬದ ಗೆಳೆಯನೊಬ್ಬ ‘ದೇವರು, ಧರ್ಮಕ್ಕಿಂತ ದೊಡ್ಡ ಮತ್ತು ಬೇರೆ ಇಲ್ಲ’ ಎಂದು ತನ್ನ ವಾದವನ್ನು ಮುಂದಿಟ್ಟ. ಮಾತು ಸಾಗುತ್ತಿದ್ದಂತೆ ಅದುವೇ ನಿಜವೆನ್ನಿಸತೊಡಗಿತು.

ಎಳೆಯ ಕಂದಮ್ಮಗಳ ಅಳುವನ್ನೂ ಕೇಳಿಸಿಕೊಳ್ಳಲಾಗದಂತೆ ದೇವರು– ಧರ್ಮಗಳು ಕೊಡುವ ‘ಮೋಕ್ಷದ ಮತ್ತು’ ದೊಡ್ಡ ಅಮಲು ಎನ್ನುವುದು ನಿಜ. ಪ್ರಪಂಚದಾದ್ಯಂತ ನಡೆಯುತ್ತಿರುವ ಕ್ರೂರವಾದ ಕೊಲೆಗಳ ಹಿಂದೆ ಈ ಜಾತಿ ಮತಗಳ ಅಮಲು ಘೋರವಾಗಿ ಗೋಚರಿಸುತ್ತಿದೆ. ಆದರೆ ಹೊಗಳಿಕೆ, ಅಧಿಕಾರ, ಜಾತಿ, ಮತಗಳು ಸಾಮಾನ್ಯ ಮನುಷ್ಯನಿಗೆ ಅಷ್ಟಾಗಿ ಸಂಬಂಧವಿರದ ವಿಷಯಗಳು. ಪ್ರತಿಯೊಂದಕ್ಕೂ ಕೆಲವರು ಮಾತ್ರ ಅಡಿಯಾಳಾಗಿ ಇರುತ್ತಾರೆ. ಆದರೆ ಇಡೀ ಪ್ರಪಂಚವನ್ನು ಕಟ್ಟಿ ಆಳುವ ಶಕ್ತಿ ಮೇಲೆ ಹೇಳಿದ ಯಾವ ವಿಷಯಗಳಲ್ಲೂ ಇಲ್ಲ. ನೆಲ, ನೀರು, ಬೆಂಕಿ ಆಕಾಶ ಇಲ್ಲದೆ ಹೇಗೆ ಮನುಷ್ಯನಿಗೆ ಜೀವಿಸಲು ಅಸಾಧ್ಯವೋ ಹಾಗೆಯೇ ಇಂದು ವಿಶ್ವರೂಪ ಪಡೆದು ನಿಂತಿರುವ ಮತ್ತೊಂದು ವಿಷಯವೆಂದರೆ ದುಡ್ಡು– ಹಣ, ಸಂಪತ್ತು.

ಈ ದುಡ್ಡಿನ ಮತ್ತು ಇದೆಯಲ್ಲ ಅದು ಸರ್ವವ್ಯಾಪಿ. ಸಾಮಾನ್ಯ ಮನುಷ್ಯನಿಂದ ಹಿಡಿದು ಇತಿಹಾಸವನ್ನೇ ಸೃಷ್ಟಿಸಿದ ಹೆಸರಾಂತ ಹಿರಿಯರು ಕೂಡ ಹಣದ ಹಿಂದೆ ಓಡಿದ್ದಿರಬೇಕು. ಪ್ರೇಮವನ್ನು ತ್ಯಜಿಸಿದ, ಕಾಮವನ್ನು ಗೆದ್ದ ಸನ್ಯಾಸಿಗೂ ಹಣ ಇಂದಿನ ಮೂಲಭೂತ ಅವಶ್ಯಕತೆ. ಪಕ್ವತೆಯಿಂದ ಕೆಲವರು ಹಣಕ್ಕೆ ಅಡಿಯಾಳಾಗದಂತೆ ತಮ್ಮನ್ನು ತಾವು ಕಾಪಾಡಿಕೊಳ್ಳಬಹುದೇ ಹೊರತು, ಅದರ ಅವಶ್ಯಕತೆಯಿಂದ ತಪ್ಪಿಸಿಕೊಳ್ಳಲಾಗದು. ಎಲ್ಲೆಲ್ಲೂ ಹರಡಿರುವ ಗಾಳಿಯಂತೆ ಕರೆನ್ಸಿ ಹಬ್ಬಿ ನಿಂತಿದೆ. ಎಂತಹ ಕೊಲೆಗೂ ಹೇಸದಂತೆ ಮಾಡುವ ಶಕ್ತಿ ಹಣಕ್ಕೆ ವಂಶಪಾರಂಪರ್ಯವಾಗಿ ಬಂದುಬಿಟ್ಟಿದೆ.

ಐದು ಸಾವಿರಕ್ಕೆ ಹತ್ತು ಸಾವಿರಕ್ಕೆಲ್ಲಾ ಕೊಲ್ಲುವ ಪಡೆಗಳು ಬಂದಾಗಿವೆ. ಕಣ್ಣು ಕಾಣದವನ ಭಿಕ್ಷಾಪಾತ್ರೆಯಿಂದ ಕದಿಯುವ ಬುದ್ಧಿಯನ್ನು ಕೊಡುವ ಶಕ್ತಿ ಹಣಕ್ಕಿದೆ. ಮೂರ್ತಿಗಳಿಲ್ಲದ ಗುಡಿಗಳಿವೆ. ಆದರೆ ಹುಂಡಿಯಿಲ್ಲದ ಗುಡಿಗಳಿಲ್ಲ. ಹಣ ಕೊಟ್ಟರೆ ಕಾಮ ಸಿಗುತ್ತದೆ. ಪ್ರೇಮವೂ ಸಿಗುತ್ತದೆ. ಈಗ ಬಾಡಿಗೆಗೆ ತಾಯ್ತನವೂ ಸಿಗುತ್ತದೆ. ಎಂತಹ ಪಾಪ ಮಾಡಿದರೂ ದೇವರಿಗೆ ಕಾಣಿಕೆಯ ರೂಪದಲ್ಲಿ ಸ್ವಲ್ಪ ಶೇರ್ ಕೊಟ್ಟರೆ ಸಾಕು ಎಂದುಕೊಂಡ ಮನುಷ್ಯರಿಂದ ಹಲವು ದೇವರುಗಳು ಶ್ರೀಮಂತರಾಗಿದ್ದಾರೆ.

ಪ್ರಕೃತಿಯ ಬಳುವಳಿಯಾದ ಭೂಮಿಯು ರಿಯಲ್ ಎಸ್ಟೇಟ್ ಆಗಿ ಹೋಯಿತು. ಕುಡಿಯುವ ನೀರು ಮಿನರಲ್ ವಾಟರ್ ಆಗಿ ಹೋಯಿತು. ಉಸಿರಾಡುವ ಗಾಳಿಗೂ ಇನ್ನು ಮುಂದೆ ಹಣ ತೆರಬೇಕಾಗಬಹುದು. ಮಾರಲು ಭೂಮಿ ಸಾಕಾಗದು ಎಂದು ಕಂಡುಕೊಂಡ ಬುದ್ಧಿಶಾಲಿಗಳು ಆಕಾಶವನ್ನು ತೋರಿಸುತ್ತಾ ಮಾರಾಟವನ್ನು ಆರಂಭಿಸುತ್ತಾರೆ. ನೂರಡಿಯ ಮೇಲಿನ ಆಕಾಶಕ್ಕೆ ಬೇರೆ ಬೆಲೆ, ಮೂವತ್ತನೇ ಫ್ಲೋರ್‌ನ ಫ್ಲಾಟ್‌ಗೆ, ಮುನ್ನೂರು ಅಡಿಯ ಮೇಲಿನ ಆಕಾಶಕ್ಕೆ ಬೇರೆ ಬೇರೆ... ಮನುಷ್ಯ ಅವಶ್ಯಕತೆಗೆಂದು ಕಂಡುಹಿಡಿದ ಹಣ ಇಂದು ಆಸೆಯಾಗಿ– ದುರಾಸೆಯಾಗಿ ರಾಕ್ಷಸನಂತೆ ನಮ್ಮ ಮುಂದೆ ಬೆಳೆದು ನಿಂತಿದೆ. ಬದುಕಲು ಬಳಕೆಯಾಗುತ್ತಿದ್ದ ಹಣವನ್ನು ದುಡಿಯಲು ನಾವು ಇಂದು ಬದುಕನ್ನೇ ಪಣವಾಗಿಡುವ ಹಂತಕ್ಕೆ ಬಂದಿದ್ದೇವೆ. ಸುಖ ಪ್ರಸವದಲ್ಲಿ ಹುಟ್ಟಬೇಕಾಗಿದ್ದ ಮಗು ಹಣಕ್ಕಾಗಿ ಸಿಸೇರಿಯನ್‌ನಲ್ಲಿ ಹುಟ್ಟಬೇಕಾಗಿದೆ. ಹೆಣವನ್ನು ಐಸಿಯುನಲ್ಲಿಟ್ಟು ಹಣ ಕಿತ್ತುಕೊಳ್ಳುವುದಕ್ಕೂ ತಯಾರಾಗಿದ್ದಾರೆ. ಚಿತ್ರಮಂದಿರದಲ್ಲಿ ಟಾಯ್ಲೆಟ್‌ಗೆ ಹೋಗಿ ನಿಂತರೆ ನಿಮ್ಮ ದೃಷ್ಟಿಗೆ ಜಾಹೀರಾತುಗಳು ಅಪ್ಪಳಿಸುತ್ತವೆ. ಆ ಕ್ಷಣದ ಬೆಲೆಯೂ ನಿಗದಿಯಾಗಿರುತ್ತದೆ.

ಎಲ್ಲರೂ ಎಲ್ಲವನ್ನೂ ತಿಳಿದೇ ಹಣವನ್ನು ಆಶಿಸಿಕೊಂಡು ಓಡುತ್ತಿದ್ದೇವೆ. ಪ್ರತಿಭೆಗೆ ದಕ್ಕದ ಮರ್ಯಾದೆ, ದುಡಿಮೆಗೆ ದೊರಕದ ಅಂಗೀಕಾರ ಹಣಕ್ಕೆ ಸಿಗುತ್ತಿದೆ. ಯಾವುದಕ್ಕಾಗಿ ಇಷ್ಟು ಓಡುತ್ತಿದ್ದೇವೆ ಎಂದು ಯೋಚಿಸುವ ಸಮಯಕ್ಕೆ, ಹಿಂತಿರುಗಿ ಹೋಗಲಾದಷ್ಟು ದೂರಕ್ಕೆ ಓಡಿ ಬಂದಿರುತ್ತೇವೆ.

ಬಂಗಾರದ ಬಣ್ಣದ ಜಿಂಕೆಯನ್ನು ಕಂಡ ಕ್ಷಣದಲ್ಲಿ ಸೀತೆಯ ಬುದ್ಧಿಯೂ ಯೋಚಿಸುವುದನ್ನು ನಿಲ್ಲಿಸಿತ್ತು. ವರುಷವೆಲ್ಲಾ ನೆನಪಾಗದ ಅಮ್ಮ, ಮದರ್ಸ್ ಡೇ ದಿನ ನೆನಪಾಗುತ್ತಾಳೆ. ಒಂದೇ ತಟ್ಟೆಯನ್ನು ಹಂಚಿಕೊಂಡ ಗೆಳೆಯನನ್ನು ನೆನೆಸಿಕೊಳ್ಳಲು ಒಂದು ದಿನ ನಿಗದಿಯಾಗಿದೆ. ಅಕ್ಷಯ ತೃತೀಯ ಬಂಗಾರವೆಂದು ಹೊಸ ಹೊಸದಾಗಿ ಹುಟ್ಟಿಸುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಎಸ್‌ಎಂಎಸ್‌ನಿಂದ ಹಿಡಿದು ಗ್ರೀಟಿಂಗ್ಸ್‌ನವರೆಗೆ ಕಾಸಿನ ಕಣ್ಣಾಮುಚ್ಚಾಲೆಯಾಟ ನಡೆಯುತ್ತಲೇ ಇದೆ. ನಂಬಿಕೆಯಿಂದ ವ್ಯಾಪಾರ ಮಾಡಿದ ದಿನಗಳು ಕಾಡಿಗೆ ಹೋಗಿ, ಮನುಷ್ಯನ ನಂಬಿಕೆಯನ್ನೇ ಮಾರಾಟ ಮಾಡಲು ಆರಂಭಿಸಿಬಿಟ್ಟಿದ್ದಾರೆ.

ಎಲ್ಲೋ ಎಂದೋ ಓದಿದ ಗೆಳತಿಯರಿಬ್ಬರ ಮಾತುಕತೆ ನೆನಪಾಗುತ್ತಿದೆ. ಮೀನು ಮಾರುವ ಹೆಣ್ಣು ಮಗಳೊಬ್ಬಳ ಜೊತೆ ಮಾತನಾಡುವ ಗೆಳತಿಯ ಮಾತು ‘ಹಣವೇ ದೊಡ್ಡ ಮತ್ತು’ ಎಂದು ಸಾರಿ ಹೇಳುತ್ತದೆ. ತಪ್ಪು ವ್ಯಕ್ತಿಗಳ ಬಳಿ ಸೇರುವ ಕಾಸು ಬಹಳ ಪ್ರಮಾದಕಾರಿ. ದೇವರು ಸೃಷ್ಟಿಸಿದ ಮನುಷ್ಯನಿಗಿಂತ ಮನುಷ್ಯ ಸೃಷ್ಟಿಸಿದ ಹಣ ಶಕ್ತಿಶಾಲಿ. ಹೀಗಾಗಿ ಏನು ಮಾಡುವುದೆಂದು ತೋಚದ ದೇವರು, ಮನುಷ್ಯ ಸೃಷ್ಟಿ ಮಾಡಿದ ಹಣವನ್ನು ಕರಗಿಸುವುದಕ್ಕಾಗಿ ಅವನಿಗೆ ಅರಿವಿಲ್ಲದೆ ಜೂಜು ಇತ್ಯಾದಿ ಸೃಷ್ಟಿಸಿದ್ದಾನೆಂದು ಹೇಳುತ್ತಾಳೆ.

‘ನಿನ್ನ ದೋಣಿಯಲ್ಲಿ ಸೇರಿರುವ ನೀರಿನಂತೆಯೇ ಈ ಹಣ. ಅದನ್ನು ನಿನ್ನ ಎರಡೂ ಕೈಗಳಿಂದ ಬಾಚಿ ಹೊರಗೆ ಹಾಕು. ಇಲ್ಲವಾದಲ್ಲಿ ಅದುವೇ ನಿನ್ನನ್ನು ಮುಳುಗಿಸಿ ಹಾಕುತ್ತದೆ’ ಎಂದರು ಕಬೀರದಾಸರು. ಆ ಕತೆಯನ್ನು ತಿಳಿದುಕೊಳ್ಳಲು ಇಂದು ನೀವು ಕಾಸು ಕೊಟ್ಟು ಯಾವುದಾದರೂ ಕ್ಲಾಸಿಗೆ ಹೋಗಬೇಕಾಗಬಹುದು. ಕಬೀರರ ಹೆಸರಲ್ಲಿ ಇದನ್ನೂ ಯಾವನಾದರೂ ಒಬ್ಬ ವ್ಯಾಪಾರಿ ಕಾಪಿ ರೈಟ್ ಕೊಂಡುಕೊಂಡಿರಬಹುದು. ನೀವು ನಿಮ್ಮ ದೋಣಿಯ ನೀರನ್ನು ಹೊರಹಾಕಲು ಸಿದ್ಧರಾದರೂ ‘ಒಂದು ನಿಮಿಷ ನಿಂತುಕೊಳ್ರಿ, ಈ ನದಿ ನಂದು, ನಿಮ್ಮ ದೋಣಿಯಲ್ಲಿರುವ ನೀರನ್ನು ಚೆಲ್ಲಲು ಕಾಸು ಕೊಡಬೇಕಾಗುತ್ತದೆ’

ಎಂದು ಒಬ್ಬ ಸುಂಕದವನು ಬಂದು ನಿಂತರೆ ಅಚ್ಚರಿಪಡಬೇಕಾಗಿಲ್ಲ. ‘ಎಲ್ಲರೂ ಕಾಸು ಕೇಳುತ್ತಿದ್ದಾರೆ ನಾನೇನು ಮಾಡಲಿ?’ ಎಂದು ದೇವರಿಗೆ ಮೊರೆ ಇಡಲು ನೀವು ಹೋದರೆ ‘ಸಾಮಾನ್ಯ ದರ್ಶನಕ್ಕೆ ಸಾಲಿನಲ್ಲಿ ನಿಂತುಕೊಳ್ಳಿ. ವಿಶೇಷ ದರ್ಶನಕ್ಕೆ ಮತ್ತು ಶೀಘ್ರ ದರ್ಶನಕ್ಕೆ ಇಷ್ಟು ಹಣ ನೀಡಿ ಇಲ್ಲಿ ಟಿಕೇಟು ಪಡೆದುಕೊಳ್ಳಿ’ ಎಂದು ಅಂಗಡಿಯಿಟ್ಟು ಕೌಂಟರ್‌ನಲ್ಲಿ ಕುಳಿತಿರುತ್ತಾರೆ.

ಕುರುಡು ಕಾಂಚಾಣ ಕುಣಿಯುತಲಿತ್ತ

ಕಾಲಿಗೆ ಬಿದ್ದವರ ತುಳಿಯುತಲಿತ್ತ

ಎಂಬ ಅಂಬಿಕಾತನಯದತ್ತರ ಮಾತುಗಳು ನಮ್ಮ ಇಂದಿನ ಅನುಭವವಾಗಿದೆ. ಕಾಸಿಗಾಗಿ ತಮ್ಮ ಬಳಿ ಇರುವ ಕಿಡ್ನಿಯನ್ನು ಮಾರುವುದಕ್ಕೆ ತಯಾರಾದ ಮನುಷ್ಯ, ಅದೇ ಕಾಸಿಗಾಗಿ ತನ್ನನ್ನೇ ಮಾರಿಕೊಳ್ಳುವ ಮಟ್ಟಕ್ಕೆ ಬಂದಿದ್ದಾನೆ. ಅವಶ್ಯಕತೆಗೆ ಬೇಕಾಗದಷ್ಟು ಹಣವಿದ್ದಾಗ ಹಣವೂ ಸುಂದರ ಅದನ್ನು ಹೊಂದಿದವರೂ ಸುಂದರ. ಆಸೆಗಾಗಿ ಹಣವಿದ್ದಾಗ ಅದುವೇ ಒಂದು ದೊಡ್ಡ ಭೂತವಾಗಿ ಆ ಮತ್ತು ನಮ್ಮನ್ನು ಸೊನ್ನೆಯಾಗಿಸುತ್ತದೆ.

‘ಈಗ ಹೇಳಿ, ಪ್ರಪಂಚದ ಅತಿದೊಡ್ಡ ಮತ್ತು ಯಾವುದೆಂದು?’ ಎಂದು ಗೆಳೆಯರಿಗೆ ಹೇಳಿ ಅಲ್ಲಿಂದ ನಾನು ಎದ್ದು ಹೊರಟೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry