ಗುರುವಾರ , ಮೇ 6, 2021
25 °C

ಸೋಮವಾರ, 27–5–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರ, 27–5–1968

ಭಾರತ – ಪಾಕಿಸ್ತಾನ್ ಮಾತುಕತೆ ವಿಫಲ

ನವದೆಹಲಿ, ಮೇ 26–
ಗಂಗಾನದಿ ವಿವಾದ ಕುರಿತ ಭಾರತ ಪಾಕಿಸ್ತಾನಗಳ ಮಾತುಕತೆಗಳು ವಿಫಲವಾಗಿವೆ. ಮಾತುಕತೆಗಳು ವಿಧ್ಯುಕ್ತವಾಗಿ ಸಮಾಪ್ತಿಯಾಗುವ ಮೊದಲೇ ಈ ವಿಷಯವನ್ನು ಪಾಕಿಸ್ತಾನಿ ನಿಯೋಗದ ನಾಯಕ ಎಸ್.ಎಸ್. ಜಾಫ್ರಿ ಇಂದು ಇಲ್ಲಿ ಪ್ರಕಟಪಡಿಸಿದರು.

ಫರಕ್ಕಾ ಅಣೆಕಟ್ಟಿನ ಪ್ರಮುಖ ಪ್ರಶ್ನೆಗಳ ಬಗ್ಗೆ ರಾಜಕೀಯ ಮಟ್ಟದಲ್ಲಿ ಮಾತುಕತೆ ನಡೆಯಲೆಂದೂ ಇಲ್ಲವೇ ಅವುಗಳನ್ನು ವಿಶ್ವಬ್ಯಾಂಕಿನಂಥ ರಾಷ್ಟ್ರೀಯ ಏಜೆನ್ಸಿಗೆ ಮಧ್ಯಸ್ಥಿಕೆಗೆ ವಹಿಸಬೇಕೆಂದೂ ಅವರು ಕೇಳಿಕೊಂಡರು. ಮೇ 13ರಂದು ಮಾತುಕತೆಗಳು ಪ್ರಾರಂಭವಾದವು.

ಗಂಗೆ ಯಾರದು?

ನವದೆಹಲಿ, ಮೇ 26–
ಗಂಗಾ ನದಿ ನೀರಿನಲ್ಲಿ ಭಾರತಕ್ಕೆ ಹೆಚ್ಚು ಹಕ್ಕು. 1350ಮೈಲಿ ದೂರ ಹರಿಯುವ ಪ್ರವಾಹ ಪಾಕಿಸ್ತಾನದ 88 ಮೈಲಿ ಮೂಲಕ ಮಾತ್ರ ಸಾಗಿ ಅದು ಭಾರತದ ಶೇ 40 ರಷ್ಟು ಅಂದರೆ 20 ಕೋಟಿ ಜನರಿಗೆ ಆಧಾರವೆಂದು ಕೇಂದ್ರ ನೀರಾವರಿ ಕಾರ್ಯದರ್ಶಿ ಶ್ರೀ ಕೆ.ಪಿ. ಮಥರಾಣಿ ಸ್ಪಷ್ಟನೆ.

ನೆಹರೂ ನಾಲ್ಕನೆ ಪುಣ್ಯತಿಥಿ ಇಂದು

ನವದೆಹಲಿ, ಮೇ 26–
ಜವಾಹರಲಾಲ್ ನೆಹರೂ ಅವರ ನಾಲ್ಕನೆಯ ಪುಣ್ಯತಿಥಿ ನಾಳೆ. ಶಾಂತಿ ವನದಲ್ಲಿ ಶಾಂತಿ ಮಂತ್ರಗಳು ಮತ್ತು ಪ್ರಾರ್ಥನಾ ಗೀತೆಗಳೊಡನೆ ಈ ಸಮಾರಂಭವನ್ನು ನಡೆಸಲಾಗುವುದು.

ಸಂಸ್ಕೃತ, ಅರಬ್ಬಿ, ಬಂಗಾಳಿ, ಉರ್ದು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಗೀತೆಗಳನ್ನು ಹಾಡಲಾಗುವುದು. ಈ ಸಮಾರಂಭದಲ್ಲಿ ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರು ಭಾಗವಹಿಸುವರು.

ನೂತನ ಸಂಪುಟದಲ್ಲಿ ಹೊಸಬರಿಗೆ ಸ್ಥಾನ: ವೀರೇಂದ್ರ ‍ಪಾಟೀಲ್

ನವದೆಹಲಿ, ಮೇ 26–
ಬೆಂಗಳೂರಿನಲ್ಲಿ ಮೇ 29 ರಂದು ತಾವು ಪ್ರಮಾಣ ವಚನ ಸ್ವೀಕರಿಸಿದ ಕೂಡಲೆ  ಪ್ರಕಟಿಸುವ ತಮ್ಮ ಸಂಪುಟಕ್ಕೆ ‘ಹೊಸ ರಕ್ತ’ ತುಂಬುವುದಾಗಿ ಮೈಸೂರಿನ ನಿಯೋಜಿತ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಇಲ್ಲಿ ಸೂಚನೆ ಇತ್ತರು.

ಶ್ರೀ ಪಾಟೀಲ್ ಅವರು ಇಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಿರುವಾಗ, ಮಂತ್ರಿಮಂಡಲದ ಗಾತ್ರ, ರಚನೆಯ ಆಧಾರ ಕುರಿತ ಪ್ರಶ್ನೆಗಳಿಗೆ ಉತ್ತರ ಕೊಡಲು ನಿರಾಕರಿಸಿದರು.

‘ನಿಮ್ಮ ಸಂಪುಟದಲ್ಲಿ ಶ್ರೀ ಬಿ.ಡಿ. ಜತ್ತಿಯವರನ್ನು ಉಳಿಸಿಕೊಳ್ಳುವಿರಾ?’ ಎಂಬ ಪ್ರಶ್ನೆಗೆ ಶ್ರೀ ಪಾಟೀಲರು, ಈ ಬಗ್ಗೆ ತಾವಿನ್ನೂ ನಿರ್ಧಾರ ಕೈಗೊಂಡಿಲ್ಲವೆಂದು ತಿಳಿಸಿದರು.

ಶ್ರೀ ಪಾಟೀಲರು ಮೇ 29ರಂದು ಅಧಿಕಾರ ವಹಿಸಿಕೊಳ್ಳುವರು. ಆನಂತರ ಅವರ ಸಹೋದ್ಯೋಗಿಗಳು ಅಂದೇ ಪ್ರಮಾಣವಚನ ಸ್ವೀಕರಿಸುವರು. ಅಷ್ಟೊತ್ತಿಗೆ ಸಚಿವ ಖಾತೆಗಳ ಹಂಚಿಕೆ ನಿರ್ಧರಿಸುವುದಾಗಿ ಶ್ರೀ ಪಾಟೀಲ್‌ ಸೂಚನೆ ಇತ್ತರು.

ಇಂದಿರಾ ಸ್ವಾಗತಕ್ಕೆ ಗುಲಾಬಿ ಅಲಂಕಾರ

ಕೌಲಾಲಂಪುರ, ಮೇ 26–
ಮಲೇಷಿಯಾದ ರಾಜಧಾನಿಯ ಹೆದ್ದಾರಿಗಳಲ್ಲಿ ಸ್ವಾಗತ ಕಮಾನುಗಳು ಕೃತಕ ಗುಲಾಬಿ ಹೂವುಗಳಿಂದ ಅಲಂಕೃತವಾಗುತ್ತಿವೆ.

ಬುಧವಾರದಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಇಲ್ಲಿಗೆ ಮೂರು ದಿನಗಳ ಭೇಟಿಗಾಗಿ ಬರುವರು. ಅವರನ್ನು ಸ್ವಾಗತಿಸಲು ನಗರದ ಬೀದಿಗಳನ್ನು ಭವ್ಯವಾಗಿ ಸಜ್ಜುಗೊಳಿಸಲಾಗುತ್ತಿದೆ. ಗುಲಾಬಿ ಜವಾಹರಲಾಲ ನೆಹರೂ ಅವರಿಗೆ ಪ್ರಿಯವಾಗಿದ್ದ ಪುಷ್ಪ.

ಮಹಾರಾಷ್ಟ್ರದ ಶಾಲೆಗಳಲ್ಲಿ ಕಡ್ಡಾಯ ಇಂಗ್ಲಿಷ್ ಶಿಕ್ಷಣ

ಮುಂಬಯಿ, ಮೇ 26–
ಮಹಾರಾಷ್ಟ್ರದ ಆದ್ಯಂತ ಶಾಲೆಗಳಲ್ಲಿ ಐದನೇ ಸ್ಟಾಂಡರ್ಡಿನಿಂದ ಇಂಗ್ಲಿಷ್‌ನ್ನು ಕಡ್ಡಾಯವಾಗಿ ಬೋಧಿಸಲು ರಾಜ್ಯ ಶಿಕ್ಷಣ ಅಧಿಕಾರಿಗಳ ಮೂರುದಿನಗಳ ಸಮ್ಮೇಳನ ಇಂದು ಶಿಫಾರಸು ಮಾಡಿತು. ರಾಜ್ಯದ ವಿದ್ಯಾರ್ಥಿಗಳು ಅಖಿಲ ಭಾರತ ಪರೀಕ್ಷೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವಂತೆ ಸಜ್ಜುಗೊಳಿ ಸುವುದು ಇದರ ಉದ್ದೇಶ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.