3

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ: ಹೆಚ್ಚಿದ ಒಳಹರಿವು

Published:
Updated:
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ: ಹೆಚ್ಚಿದ ಒಳಹರಿವು

ಬೆಂಗಳೂರು: ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಆಲಿಕಲ್ಲು ಸಹಿತ ಮಳೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಒಂದು ವಾರದಿಂದ ಮಳೆಯಾಗುತ್ತಿದ್ದು, ಕೆಆರ್‌ಎಸ್‌ ಅಣೆಕಟ್ಟೆಗೆ ಒಳ ಹರಿವು ಹೆಚ್ಚಳವಾಗಿದೆ. ಮಳೆ ಅವಘಡದಲ್ಲಿ ರಾಜ್ಯದ ವಿವಿಧೆಡೆ ಮಹಿಳೆ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಕೆಆರ್‌ಎಸ್‌ ಜಲಾಶಯದ ಒಳ ಹರಿವು 3,073 ಕ್ಯುಸೆಕ್‌ಗೆ ಏರಿಕೆಯಾಗಿದೆ. ಮೇ 20ರಂದು 69.14 ಅಡಿಗೆ ಕುಸಿದಿದ್ದ ಜಲಾಶಯದ ನೀರಿನ ಮಟ್ಟ, ಶನಿವಾರ 71.90 ಅಡಿಗೆ ಏರಿಕೆ ಕಂಡಿದೆ. ಆರು ದಿನಗಳಲ್ಲಿ 2.76 ಅಡಿ ನೀರು ಹರಿದು ಬಂದಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 68.27 ಅಡಿ ಇತ್ತು. 273 ಕ್ಯುಸೆಕ್‌ ಒಳಹರಿವು, 477 ಕ್ಯುಸೆಕ್‌ ಹೊರಹರಿವು ಇತ್ತು.

ಚನ್ನಗಿರಿ ತಾಲ್ಲೂಕಿನ ಕಾಕನೂರು ಗ್ರಾಮದ ಬಳಿ ಹಿರೇಹಳ್ಳದ ಪ್ರವಾಹದಲ್ಲಿ ಲಕ್ಷ್ಮೀಸಾಗರ ಗ್ರಾಮದ ರೈತ ಬಸಪ್ಪ (65) ಹಿರೇಹಳ್ಳದ ಪ್ರವಾಹದಲ್ಲಿ ಶುಕ್ರವಾರ ಸಂಜೆ ಕೊಚ್ಚಿ ಹೋಗಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವಕ್ಕಾಗಿ ಶೋಧ ನಡೆಸಿದ್ದು, ಶನಿವಾರ ಸಂಜೆಯಾದರೂ ಮೃತದೇಹ ಪತ್ತೆಯಾಗಲಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಚನ್ನಗಿರಿ ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್ ತಿಳಿಸಿದರು.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಉಪಲೀಕನಹಳ್ಳಿಯ ಸಮೀಪದ ಶನಿವಾರ ಸಂಜೆ ಕುರಿ ಮೇಯಿಸುತಿದ್ದ ಚಿಕ್ಕಣ್ಣ (32) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ತುಮಕೂರು ತಾಲ್ಲೂಕು ಗೋವಿಂದನಾಯಕನಹಳ್ಳಿ ಗ್ರಾಮದಲ್ಲಿ ಸಂಜೆ ಹಳೇ ಮನೆಯ ಗೋಡೆ ಕುಸಿದು ಬಿದ್ದು ಶ್ರೀರಂಗಪ್ಪ (85) ಮೃತಪಟ್ಟಿದ್ದಾರೆ

ಮೂಡುಬಿದಿರೆ ಸಮೀಪದ ನೆಲ್ಲಿಕಾರು ಎಂಬಲ್ಲಿ ಶುಕ್ರವಾರ ರಾತ್ರಿ ಮನೆಗೆ ಸಿಡಿಲು ಬಡಿದು ಬಾದಾಮಿಯ ಕೂಲಿಕಾರ್ಮಿಕ ಮಹಿಳೆ ಸಾವಿತ್ರಿ ರಾಥೋಡ್ (35) ಎಂಬುವವರು ಮೃತಪಟ್ಟಿದ್ದಾರೆ. ಅವರ ಪತಿ ಲಾಲಪ್ಪ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ನೆಲ್ಲಿಕಾರಿನಲ್ಲಿ ಅರಣ್ಯ ವೀಕ್ಷಕರಾಗಿ ಕೆಲಸ ಮಾಡುತ್ತಿದ್ದರು.

ಇಬ್ಬರಿಗೆ ಗಾಯ: ಪಡುಮಾರ್ನಾಡು ಗ್ರಾಮದ ಕಾಪ್ರೊಟ್ಟು ಎಂಬಲ್ಲಿ ಶುಕ್ರವಾರ ರಾತ್ರಿ ಮನೆಗೆ ಸಿಡಿಲು ಬಡಿದು ಅಕ್ಷಯಾ (25) ಹಾಗೂ ಅವರ 5 ತಿಂಗಳ ಗಂಡು ಮಗು ಗಾಯಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಗಾಳಿ, ಗುಡುಗು ಸಹಿತ ಬಿರುಸಿನ ಮಳೆ ಸುರಿದಿದೆ. ಬೆಳ್ತಂಗಡಿಯಲ್ಲಿ 64.5 ಮಿ.ಮೀ., ಪುತ್ತೂರಿನಲ್ಲಿ 53.1, ಬಂಟ್ವಾಳದಲ್ಲಿ 50.7 ಮಿ.ಮೀ., ಸುಳ್ಯದಲ್ಲಿ 44 ಹಾಗೂ ಮಂಗಳೂರಿನಲ್ಲಿ 37.6 ಮಿ.ಮೀ.ಮಳೆ ಸುರಿದಿದೆ.

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಭಾಗಮಂಡಲ, ತಲಕಾವೇರಿ, ನಾಪೋಕ್ಲು ವ್ಯಾಪ್ತಿಯಲ್ಲಿ ಶನಿವಾರವೂ ಭಾರಿ ಮಳೆ ಬಿದ್ದಿದೆ. ಹೊದ್ದೂರು ಗ್ರಾಮದಲ್ಲಿ ಎಂಟು ವಿದ್ಯುತ್ ಕಂಬಗಳು ಬಿದ್ದಿದ್ದು, ನಾಪೋಕ್ಲು ವ್ಯಾಪ್ತಿಯ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ಗೋಣಿಕೊಪ್ಪಲು, ವಿರಾಜಪೇಟೆ, ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆಯಲ್ಲೂ ಮಳೆಯಾಗುತ್ತಿದೆ. ವಿರಾಜಪೇಟೆ, ಮಡಿಕೇರಿ ರಸ್ತೆಯ ಅಲ್ಲಲ್ಲಿ ಮರಗಳು ಉರುಳಿ ಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಹೊಗೆಸೊಪ್ಪು ಪ್ರದೇಶ ಜಲಾವೃತ: ಹಾಸನ ಜಿಲ್ಲೆ ಕೊಣನೂರು, ರಾಮನಾಥಪುರ ಭಾಗದಲ್ಲಿ ಶುಕ್ರವಾರ ರಾತ್ರಿಯಿಂದ ಮಳೆಯ ಆರ್ಭಟ ಮುಂದುವರೆದಿದೆ.

ರಾಮನಾಥಪುರ ಹೋಬಳಿಯ ಕಟ್ಟೇಪುರ ನಾಲಾ ಹಂತದ ಕೇರಳಾಪುರ, ಬಸವನಹಳ್ಳಿ ಗ್ರಾಮಗಳ ಹೊಗೆಸೊಪ್ಪು ಬೆಳೆ ಪ್ರದೇಶ ಜಲಾವೃತವಾಗಿದೆ.

ಬೇಲೂರು, ಆಲೂರು, ಜಾವಗಲ್‌ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಆಲೂರು ತಾಲ್ಲೂಕಿನ ಟಿ.ಗುಡ್ಡೆನಹಳ್ಳಿಯಲ್ಲಿ ಬೃಹತ್‌ ಮರಗಳು ಮನೆ ಮೇಲೆ ಬಿದ್ದು, ಹಾನಿಯಾಗಿದೆ. ಸತತ ಮಳೆಯಿಂದ ಹೇಮಾವತಿ ಜಲಾಶಯದ ಒಳ ಹರಿವು ಕೊಂಚ ಏರಿಕೆಯಾಗಿದೆ.

ಉತ್ತಮ ಮಳೆ: ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಉತ್ತಮ ಮಳೆ ಸುರಿಯಿತು. ಕೆ.ಆರ್‌.ಪೇಟೆ, ಮದ್ದೂರು, ಶ್ರೀರಂಗಪಟ್ಟಣ, ನಾಗಮಂಗಲ, ಮಳವಳ್ಳಿ, ಪಾಂಡವಪುರದಲ್ಲೂ ಉತ್ತಮ ಮಳೆಯಾಗಿದೆ.

ಧರೆಗುರುಳಿದ ಮರಗಳು: ಬೀದರ್‌ ನಗರ, ಭಾಲ್ಕಿ ಹಾಗೂ ಚಿಟಗುಪ್ಪ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಶನಿವಾರ ಸಂಜೆ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಬಿರುಗಾಳಿಗೆ ಎರಡು ಮರಗಳು ಧರೆಗುರುಳಿವೆ.

ಬಿರುಗಾಳಿಯಿಂದಾಗಿ ನಗರದ ಜನವಾಡ ರಸ್ತೆಯಲ್ಲಿ ಎರಡು ಮರಗಳು ನೆಲಕ್ಕೆ ಉರುಳಿವೆ. ಬಸ್‌ ತಂಗುದಾಣದ ಬಳಿ ಮರದ ಟೊಂಗೆಯೊಂದು ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಸರಾಫ್‌ ಬಜಾರ್‌ನಲ್ಲಿ ಮರ ಬುಡಮೇಲಾಗಿ ಬಿದ್ದಿದ್ದು, ಮರದ ಕೆಳಗೆ ನಿಲ್ಲಿಸಿದ ದ್ವಿಚಕ್ರ ವಾಹನ ಜಖಂಗೊಂಡಿದೆ.

ಉರುಳಿದ ರೇವಣಸಿದ್ದೇಶ್ವರ ಮೂರ್ತಿ

ಕಲಬುರ್ಗಿ: ಕಾಳಗಿ ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ರೇವಗ್ಗಿ ಗುಡ್ಡದಲ್ಲಿದ್ದ ರೇವಣಸಿದ್ದೇಶ್ವರ ಬೃಹತ್‌ ಮೂರ್ತಿ ಬಿರುಗಾಳಿ ಹಾಗೂ ಮಳೆಯ ರಭಸಕ್ಕೆ ಶನಿವಾರ ಮುರಿದುಬಿದ್ದಿದೆ.

ಸುಡುಗಾಡು ಸಿದ್ದರ ಕಾಲೊನಿ ಜಲಾವೃತ

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ರಾಮಗಿರಿ ಸಮೀಪದ ಸುಡುಗಾಡು ಸಿದ್ದರ ಕಾಲೊನಿ ಜಲಾವೃತಗೊಂಡಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಧಾನ್ಯಗಳು, ಆಹಾರ ಸಾಮಗ್ರಿಗಳು ನೀರು ಪಾಲಾಗಿವೆ. ಬಟ್ಟೆ, ಅಡುಗೆ ಪರಿಕರ ಮತ್ತಿತರ ದಿನಬಳಕೆಯ ವಸ್ತುಗಳು ಹಾನಿಗೊಳಗಾಗಿವೆ. ‘ಮಿನಿಷ್ಟ್ರು ಆಂಜನೇಯ ಒಂದು ದಿನ ಇಲ್ಲೇ ಮಲಗಿದ್ದರು. ಮೂರು ತಿಂಗಳ ಒಳಗೆ ನಿಮಗೆಲ್ಲ ಮನೆ ಕಟ್ಟಿಸಿಕೊಡುವುದಾಗಿ ಹೇಳಿ ಹೋದವರು 2 ವರ್ಷವಾದರೂ ಮತ್ತೆ ಈ ಕಡೆ ತಿರುಗಿ ನೋಡಲಿಲ್ಲ. ನಮ್ಮ ಗುಡಿಸಲುಗಳು ನೀರಿನಲ್ಲಿ ಮುಳುಗಿದ್ದು, ನಾವು ಬೀದಿಪಾಲಾಗಿದ್ದೇವೆ’ ಎಂದು ಕಾಲೊನಿಯ ನಿವಾಸಿ ಗಂಗಮ್ಮ ಆಕ್ರೋಶ ವ್ಯಕ್ತಪಡಿಸಿದರು. ‘ಜಲಾವೃತಗೊಂಡ 30 ಕುಟುಂಬಗಳನ್ನು ಬಡಾವಣೆಯ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ತಾಡಪಾಲ್‌ಗಳನ್ನು ವಿತರಿಸಿದ್ದು, ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ’ ಎಂದು ತಹಶೀಲ್ದಾರ್ ಭಾಗ್ಯಮ್ಮ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry