ಮೋದಿ ನಿರ್ಮೂಲನೆಯೇ ವಿರೋಧಿಗಳ ಗುರಿ

7
ಭ್ರಷ್ಟಾಚಾರ, ಬಡತನ ತೊಡೆದು ಹಾಕುವುದು ಸರ್ಕಾರದ ಬಯಕೆ– ಅಮಿತ್ ಶಾ

ಮೋದಿ ನಿರ್ಮೂಲನೆಯೇ ವಿರೋಧಿಗಳ ಗುರಿ

Published:
Updated:
ಮೋದಿ ನಿರ್ಮೂಲನೆಯೇ ವಿರೋಧಿಗಳ ಗುರಿ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿರುವ ಭ್ರಷ್ಟಾಚಾರ ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಬಯಸಿದರೆ, ವಿರೋಧ ಪಕ್ಷಗಳು ಮಾತ್ರ ಮೋದಿ ಅವರನ್ನೇ ನಿರ್ಮೂಲನೆ ಮಾಡುವ ಏಕೈಕ ಕಾರ್ಯಸೂಚಿ ಹೊಂದಿವೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಶನಿವಾರ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಒಂದು ವರ್ಷ ಇರುವಾಗ, ದೇಶದಾದ್ಯಂತ ವಿರೋಧ ಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಒಟ್ಟಾಗುವ ಲಕ್ಷಣ ಗೋಚರಿಸುತ್ತಿರುವಾಗಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ನಾಲ್ಕನೇ ವರ್ಷಾಚರಣೆ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿರುವುದಕ್ಕೆ ಅವರು ಹೆಚ್ಚಿನ ಮಹತ್ವ ನೀಡಲಿಲ್ಲ. ಬಹುತೇಕ ಪಕ್ಷಗಳು ಇನ್ನೊಂದು ಪಕ್ಷ ಪ್ರಬಲವಾಗಿರುವ ರಾಜ್ಯಗಳಲ್ಲಿ ಅಸ್ತಿತ್ವವನ್ನೇ ಹೊಂದಿಲ್ಲ ಮತ್ತು 2014ರಲ್ಲಿ ಅವುಗಳು ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಪ್ರತ್ಯೇಕವಾಗಿಯೇ ಹೋರಾಡಿದ್ದವು ಎಂದು ಹೇಳಿದ್ದಾರೆ.

ನಿರಾಕರಣೆ: ವಿವಿಧ ರಾಜ್ಯಗಳಲ್ಲಿ ಲೋಕಸಭೆಗೆ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿಗೆ ಆಗಿರುವ ಸೋಲು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಶಾ ತಳ್ಳಿಹಾಕಿದ್ದಾರೆ.

‘ಉಪ ಚುನಾವಣೆಗಳು ಸಂಪೂರ್ಣ ಭಿನ್ನ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಗಾಗಿ ಜನರು ಮತದಾನ ಮಾಡುವಾಗ ಮಾನದಂಡಗಳೇ ಬೇರೆ ಇರುತ್ತವೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.

‘ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಕಾರ್ಯಸೂಚಿಯನ್ನು ವಿರೋಧ ಪಕ್ಷಗಳು ಹೊಂದಿದ್ದರೆ, ಅವರ ನಾಯಕತ್ವದಲ್ಲಿ ಈ ದೇಶದಲ್ಲಿರುವ ದುರಾಡಳಿತ, ಭ್ರಷ್ಟಾಚಾರ ಮತ್ತು ಬಡತನವನ್ನು ನಿರ್ಮೂಲನೆ ಮಾಡಿ ದೇಶಕ್ಕೆ ಸ್ಥಿರತೆ ತಂದುಕೊಂಡುವ ಕಾರ್ಯಸೂಚಿಯನ್ನು ನಾವು ಹೊಂದಿದ್ದೇವೆ’ ಎಂದು ಶಾ ಹೇಳಿದ್ದಾರೆ.

ಮೋದಿ ವಿರುದ್ಧ ಎಲ್ಲರೂ ಒಂದಾಗುತ್ತಿದ್ದಾರೆ ಎಂಬ ಭಾವನೆ ಈಗ ಮೂಡಿದೆಯಾದರೂ, ಅಂತಿಮವಾಗಿ ಇದು ಬಿಜೆಪಿಗೆ ನೆರವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಟಿಡಿಪಿ, ಎನ್‌ಡಿಎ ತೊರೆದಿರುವುದು ಮತ್ತು ಶಿವಸೇನಾ ಮೈತ್ರಿ ಕಡಿದುಕೊಳ್ಳುವ ಬಗ್ಗೆ ಪ್ರತಿದಿನ ಬೆದರಿಕೆ ಹಾಕುತ್ತಿರುವುದರಿಂದ ಮಿತ್ರ ಪಕ್ಷಗಳು ಎನ್‌ಡಿಎಯಿಂದ ದೂರವಾಗುತ್ತಿವೆ ಎಂಬ ಭಾವನೆ ಮೂಡಿರುವುದರ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ.

‘ಟಿಡಿಪಿ ಎನ್‌ಡಿಎ ಬಿಟ್ಟಿದ್ದರೆ, ನಿತೀಶ್‌ ಕುಮಾರ್‌ (ಜೆಡಿಯು) ಮತ್ತೆ ಮಿತ್ರಕೂಟ ಸೇರಿದ್ದಾರೆ. ಎನ್‌ಡಿಎ ಕುಟುಂಬ ಮತ್ತಷ್ಟು ಬೆಳೆದಿದೆ. ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಶಿವಸೇನಾವು ಈಗಲೂ ಮೈತ್ರಿಕೂಟದ ಭಾಗ’ ಎಂದು ಹೇಳಿದ್ದಾರೆ.

ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ನೀಡಿದ ಶಾ, ‘ಮೋದಿ ಸರ್ಕಾರವು ಗ್ರಾಮಗಳು, ಬಡವರು ಮತ್ತು ರೈತರಿಗಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದ್ದಾರೆ. ಅಲ್ಲದೇ, ಬಡವರು ಅಥವಾ ಉದ್ದಿಮೆ, ಗ್ರಾಮೀಣ ಅಥವಾ ನಗರ ಪ್ರದೇಶ ಎಂಬ ಭೇದ ಭಾವ ಮಾಡದೆ ಎಲ್ಲ ವರ್ಗಗಳನ್ನು ಹೇಗೆ ಸಮಾನವಾಗಿ ತೆಗೆದುಕೊಂಡು ಹೋಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

ಚುನಾವಣಾ ವಿಷಯಗಳ ಸುಲಿವು

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಯಾವೆಲ್ಲ ವಿಷಯಗಳನ್ನು ಪ್ರಮುಖವಾಗಿ ಬಿಂಬಿಸಲಿದೆ ಎಂಬ ಸುಳಿವನ್ನೂ ಅಮಿತ್‌ ಶಾ ಮಾಧ್ಯಮ ಸಂವಾದದಲ್ಲಿ ನೀಡಿದ್ದಾರೆ.

ಅಭಿವೃದ್ಧಿಯ ವಿಚಾರಗಳ ಜೊತೆಗೆ ಪಾಕಿಸ್ತಾನ ವಿರುದ್ಧ ನಡೆಸಿದ್ದ ನಿರ್ದಿಷ್ಟ ದಾಳಿ, ತ್ರಿವಳಿ ತಲಾಖ್‌ ಅನ್ನು ವಿರೋಧಿಸುವ ಪಕ್ಷದ ನಿಲುವನ್ನು ಪ್ರಸ್ತಾಪಿಸಿರುವ ಅವರು, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

‘ಕರ್ನಾಟಕದ ಗೆಲುವು ಶುಭ ಶಕುನ’: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದಿರುವುದು, ದಕ್ಷಿಣ ಭಾರತದಲ್ಲಿ ಪಕ್ಷವು ಪ್ರಾಬಲ್ಯ ವಿಸ್ತರಿಸಿರುವುದರ ಶುಭ ಶಕುನ’ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ದಕ್ಷಿಣ ಭಾರತದಲ್ಲಿ ಪಕ್ಷದ ವಿಸ್ತರಣೆಗೆ ನಿಮ್ಮ ಕಾರ್ಯತಂತ್ರವೇನು ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕೆ ಶಾ, ‘ತಂತ್ರಗಾರಿಕೆಯನ್ನೆಲ್ಲಾ ಯಾರಾದರೂ ಬಹಿರಂಗ ಪಡಿಸುತ್ತಾರೆಯೇ’ ಎಂದು ಮರುಪ್ರಶ್ನಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಸವಾಲು ಒಡ್ಡಲಿದ್ದಾರೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಾ, ‘ಇಲ್ಲ’ ಎಂದು ಉತ್ತರಿಸಿದರು. ‘2019ರ ಚುನಾವಣೆ ನಂತರ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದರು.

ಜನ ಮನ ತಿಳಿಯಲು ‘ನಮೋ’ ಸಮೀಕ್ಷೆ

ಕೇಂದ್ರ ಸರ್ಕಾರಕ್ಕೆ ನಾಲ್ಕು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಪ‍್ರಧಾನಿಯವರ ‘ನಮೋ ಆ್ಯಪ್‌’ ಮೂಲಕ ಸಾಧನೆಗಳ ಸಮೀಕ್ಷೆಗೆ ಸರ್ಕಾರ ಮುಂದಾಗಿದೆ.

ತಮ್ಮ ರಾಜ್ಯ ಮತ್ತು ಕ್ಷೇತ್ರದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಬಿಜೆಪಿಯ ಮೂವರು ನಾಯಕರು ಯಾರು ಎಂಬುದನ್ನು ತಿಳಿಸುವಂತೆ ಸೂಚಿಸಲಾಗಿದೆ. ನಾಯಕರ ಲಭ್ಯತೆ, ಪ್ರಾಮಾಣಿಕತೆ, ವಿನಯ ಮತ್ತು ಜನಪ್ರಿಯತೆಯ ಆಧಾರದಲ್ಲಿ ಅಂಕಗಳನ್ನು ನೀಡಬೇಕು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕ್ಷೇತ್ರಗಳ ಬಗ್ಗೆ ಜನರ ನಿಲುವು ಏನಿದೆ ಎಂಬುದನ್ನು ತಿಳಿಯಲು ಈ ಸಮೀಕ್ಷೆ ನೆರವಾಗಲಿದೆ. ಮತ ಹಾಕುವಾಗ ಜನರು ಗಮನದಲ್ಲಿ ಇರಿಸಿಕೊಳ್ಳುವ ಅತ್ಯಂತ ಮುಖ್ಯ ವಿಚಾರ ಯಾವುದು ಎಂಬ ಪ್ರಶ್ನೆಯೂ ಸಮೀಕ್ಷೆಯಲ್ಲಿ ಇದೆ. ಅವರವರ ಕ್ಷೇತ್ರದಲ್ಲಿ ಲಭ್ಯ ಇರುವ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಸ್ಥಿತಿಯ ಬಗ್ಗೆಯೂ ಜನರು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.

ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ಜನರ ಅಭಿಪ್ರಾಯ ಏನು ಎಂಬುದನ್ನು ತಿಳಿದುಕೊಳ್ಳುವ ಉದ್ದೇಶವನ್ನು ಈ ಸಮೀಕ್ಷೆ ಹೊಂದಿದೆ. ಆಡಳಿತದ ಸ್ವರೂಪದಲ್ಲಿ ಏನಾದರೂ ಬದಲಾವಣೆ ಅಗತ್ಯ ಇದೆ ಎಂದು ಜನರು ಭಾವಿಸಿದ್ದಾರೆಯೇ ಎಂಬು ದನ್ನೂ ಸಮೀಕ್ಷೆಯ ಮೂಲಕ ಸರ್ಕಾರ ಕಂಡುಕೊಳ್ಳಲಿದೆ. ಸಮೀಕ್ಷೆಯಲ್ಲಿ ಹತ್ತಾರು ಪ್ರಶ್ನೆಗಳನ್ನು ಸೇರಿಸಿಕೊಳ್ಳಲಾಗಿದೆ.

ವರ್ಷದೊಳಗೆ ಲೋಕಸಭೆಗೆ ಚುನಾವಣೆ ನಡೆಯಲಿದ್ದು ಬಿಜೆಪಿ ಈಗಾಗಲೇ ಸಿದ್ಧತೆ ಆರಂಭಿಸಿರುವುದರಿಂದ ಈ ಸಮೀಕ್ಷೆ ಮಹತ್ವ ಪಡೆದುಕೊಂಡಿದೆ.

*

ಶಾಸನಗಳು, ಸಾಂಸ್ಥಿಕ ಬದಲಾವಣೆಗಳ ಮೂಲಕ ಪಾರದರ್ಶಕ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಅವರು ರೂಪಿಸಿದ್ದಾರೆ. ಇದರಿಂದಾಗಿ ಹಗರಣಮುಕ್ತ ಸರ್ಕಾರ ನೀಡುವುದು ಸಾಧ್ಯವಾಗಿದೆ. ಹಿಂದಿನ ಯುಪಿಎ ಸರ್ಕಾರದಂತಲ್ಲದೆ, ಮೋದಿ ಅವರು ಸರ್ಕಾರ ಮತ್ತು ಪಕ್ಷಕ್ಕೆ ಸಹಜ ನಾಯಕನಾಗಿದ್ದಾರೆ.

–ಅರುಣ್‌ ಜೇಟ್ಲಿ, ಕೇಂದ್ರ ಸಚಿವ

*

ಬಿಜೆಪಿ ಮತ್ತು ಮೋದಿ ಅವರು ತಮ್ಮೆಲ್ಲ ಕೆಲಸಗಳನ್ನು ಚಾರಿತ್ರಿಕ ಎಂದು ಬಣ್ಣಿಸುತ್ತಾರೆ. ಹಾಗಾಗಿಯೇ ಅವರ ಆಡಳಿತದ ಅವಧಿಯಲ್ಲಿ ತೈಲ ಬೆಲೆ ಚಾರಿತ್ರಿಕ ಎತ್ತರಕ್ಕೆ ಏರಿದೆ. ತೈಲ ಬೆಲೆ ನಿಯಂತ್ರಿಸಲೇಬೇಕಿದೆ. ಇಲ್ಲವಾದರೆ ಬಿಎಸ್‌ಪಿ ದೇಶದಾದ್ಯಂತ ಪ್ರತಿಭಟನೆ ನಡೆಸಲಿದೆ.

–ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

*

ಜನರು ಬದಲಾವಣೆ ಬಯಸಿದ್ದಾರೆ. ಅವರಿಗೆ ಕೆಲಸ ಮಾಡುವ ಸರ್ಕಾರ ಬೇಕಾಗಿದೆ. ಅಸಮರ್ಪಕ ನೀತಿಗಳ ಪರಿಣಾಮವನ್ನು ನರೇಂದ್ರ ಮೋದಿ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ.

–ಅಮರಿಂದರ್‌ ಸಿಂಗ್‌, ಪಂಜಾಬ್‌ ಮುಖ್ಯಮಂತ್ರಿ

*

ಎನ್‌ಡಿಎಯೇತರ ಪಕ್ಷಗಳು ಒಟ್ಟಾಗುತ್ತಿರುವುದು ಬಿಜೆಪಿಗೆ ದಿಗಿಲು ಹುಟ್ಟಿಸಿದೆ. ಎನ್‌ಡಿಎ ಮಿತ್ರಪಕ್ಷಗಳು ಬಿಜೆಪಿಯಿಂದ ದೂರ ಸಾಗುತ್ತಿವೆ.

–ಅಭಿಷೇಕ್‌ ಮನು ಸಿಂಘ್ವಿ, ಕಾಂಗ್ರೆಸ್‌ ವಕ್ತಾರ

*

ಮುಂದಿನ ಪ್ರಧಾನಿ ಕಾಮ್‌ದಾರ್‌ (ಕೆಲಸ ಮಾಡುವವನು), ಜಿಮ್ಮೇದಾರ್‌ (ಹೊಣೆಗಾರ) ಮತ್ತು ಇಮಾನ್‌ದಾರ್‌ (ಪ‍್ರಾಮಾಣಿಕ) ಆಗಿರಬೇಕು. ಪ್ರಧಾನಿ ಜುಮ್ಲಾವಾರ್‌ (ಪೊಳ್ಳು ಭರವಸೆ ನೀಡುವವನು) ಆಗಿರಬಾರದು ಎಂದು ದೇಶದ ಜನರು ಬಯಸುತ್ತಿದ್ದಾರೆ.

–ಕಪಿಲ್‌ ಸಿಬಲ್‌, ಕಾಂಗ್ರೆಸ್‌ ಮುಖಂಡ

*

ಪ್ರಧಾನಿ ಕೃತಜ್ಞತೆ

ತಮ್ಮ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರು ನೀಡಿದ ನಿರಂತರ ಬೆಂಬಲಕ್ಕೆ ಕೃತಜ್ಞತೆ ಅರ್ಪಿಸಿದ್ದಾರೆ. ‘ಭಾರತ ಮೊದಲು’ ಎಂಬುದೇ ತಮ್ಮ ಸರ್ಕಾರದ ಧ್ಯೇಯ ಎಂದು ಪುನರುಚ್ಚರಿಸಿದ್ದಾರೆ. ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ ಸಂಭ್ರಮದಲ್ಲಿ ಅವರು ಸರಣಿ ಟ್ವೀಟ್‌ ಮೂಲಕ ತಮ್ಮ ಮನದಿಂಗಿತವನ್ನು ತೆರೆದಿಟ್ಟಿದ್ದಾರೆ.

‘2014ರಲ್ಲಿ ಈ ದಿನ (ಮೇ 26) ಭಾರತ ಪರಿವರ್ತನೆಗಾಗಿ ನಮ್ಮ ಕೆಲಸದ ಪಯಣ ಆರಂಭವಾಯಿತು. ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಎಂಬುದು ಚಲನಶೀಲ ಸಾಮೂಹಿಕ ಚಳವಳಿಯಾಗಿ ಬೆಳೆದುಬಿಟ್ಟಿದೆ. ಭಾರತದ ಪ್ರಗತಿಯ ಪಥದಲ್ಲಿ ಭಾಗಿಯಾದ ಭಾವನೆ ಪ್ರತಿ ಪೌರನಲ್ಲಿಯೂ ಇದೆ. 125 ಕೋಟಿ ಭಾರತೀಯರು ಭಾರತವನ್ನು ಹೊಸ ಎತ್ತರಕ್ಕೆ ಒಯ್ಯುತ್ತಿದ್ದಾರೆ’ ಎಂದು ಟ್ವೀಟ್‌ನಲ್ಲಿ ಪ್ರಧಾನಿ ಹೇಳಿದ್ದಾರೆ.

ಮೋದಿ ಟ್ವೀಟ್‌ಗಳು 

ನಮ್ಮ ಸರ್ಕಾರದಲ್ಲಿ ಅಚಲ ವಿಶ್ವಾಸ ಇರಿಸಿದ ಸಹ ಪೌರರಿಗೆ ನನ್ನ ನಮನ. ಈ ಬೆಂಬಲ ಮತ್ತು ಪ್ರೀತಿಯೇ ಇಡೀ ಸರ್ಕಾರದ ಅತಿ ದೊಡ್ಡ ಪ್ರೇರಣೆ ಮತ್ತು ಬಲವಾಗಿದೆ. ಇದೇ ಚೈತನ್ಯ ಮತ್ತು ಬದ್ಧತೆಯಿಂದ ಭಾರತದ ಜನರ ಸೇವೆಯನ್ನು ನಾವು ಮುಂದುವರಿಸುತ್ತೇವೆ.

ನಮಗೆ ಭಾರತವೇ ಸದಾ ಮೊದಲು!

ಅತ್ಯುತ್ತಮ ಆಶಯ ಮತ್ತು ಸಂಪೂರ್ಣ ಬದ್ಧತೆಯೊಂದಿಗೆ ಭವಿಷ್ಯದತ್ತ ದೃಷ್ಟಿ ನೆಟ್ಟ ಮತ್ತು ಜನಸ್ನೇಹಿಯಾದ ನಿರ್ಧಾರಗಳನ್ನು ನಾವು ಕೈಗೊಳ್ಳುತ್ತಿದ್ದು ಅದುವೇ ‘ನವ ಭಾರತ’ದ ನೆಲೆಗಟ್ಟಾಗಿದೆ. ಸಾಫ್‌ ನಿಯತ್‌, ಸಹಿ ವಿಕಾಸ್‌ (ಪರಿಶುದ್ಧ ಉದ್ದೇಶ, ಸರಿಯಾದ ವಿಕಾಸ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry