ಬಹುತ್ವವಿಲ್ಲದ ‘ಹಿಂದುತ್ವ ಭಾರತ’ ಅಪಾಯಕಾರಿ

7

ಬಹುತ್ವವಿಲ್ಲದ ‘ಹಿಂದುತ್ವ ಭಾರತ’ ಅಪಾಯಕಾರಿ

Published:
Updated:
ಬಹುತ್ವವಿಲ್ಲದ ‘ಹಿಂದುತ್ವ ಭಾರತ’ ಅಪಾಯಕಾರಿ

ಧಾರವಾಡ: ‘ಬಹುತ್ವದ ಭಾರತ ನಶಿಸಿ, ಹಿಂದುತ್ವದ ಭಾರತ ಮುನ್ನೆಲೆಗೆ ಬರುತ್ತಿದೆ. ಭಾರತೀಯರು ಬಹುತ್ವದಿಂದ ಬಹು ದೂರ ಸಾಗುತ್ತಿರುವುದು ಅಪಾಯಕಾರಿ ಸಂಗತಿ’ ಎಂದು ತೆಲುಗು ಲೇಖಕಿ ಓಲ್ಗಾ (ಪಿ.ಲಲಿತಾಕುಮಾರಿ) ಕಳವಳ ವ್ಯಕ್ತಪಡಿಸಿದರು.

ಲಡಾಯಿ ಪ್ರಕಾಶನ, ಕವಿ ಪ್ರಕಾಶನ ಹಾಗೂ ಚಿತ್ತಾರ ಕಲಾ ಬಳಗದ ಸಹಯೋಗದಲ್ಲಿ ಶನಿವಾರ ಆರಂಭವಾದ ‘ಬಹುತ್ವ ಭಾರತ: ಇಂದು ಮತ್ತು ನಾಳೆ’ ಎಂಬ ವಿಷಯ ಕುರಿತ ಎರಡು ದಿನಗಳ ಮೇ ಸಾಹಿತ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುಟ್ಟಿಕೊಂಡ ರಾಷ್ಟ್ರೀಯತೆ ಎಂಬ ಪದ ಪ್ರಜಾಪ್ರಭುತ್ವದಿಂದ ದೂರ ಸರಿಯುತ್ತಿದೆ. ರಾಷ್ಟ್ರೀಯತೆ ಎಂಬುದು ಅಲ್ಪಸಂಖ್ಯಾತರಲ್ಲಿ ಅಭದ್ರತೆಯನ್ನೂ, ಬಹುಸಂಖ್ಯಾತರಲ್ಲಿ ಅಸಹಿಷ್ಣತೆಯನ್ನೂ ಸೃಷ್ಟಿಸುತ್ತಿದೆ. ಬಹುತ್ವ ಪ್ರದರ್ಶಿಸಬೇಕಾದ ರಾಷ್ಟ್ರವು ಒಂದು ವರ್ಗದ ಪರವಾಗಿರುವುದನ್ನು ಬಹಿರಂಗಪಡಿಸುವ ಮೂಲಕ ಇತರರಲ್ಲಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ಕಾರ್ಯಕರ್ತರು ಅಸಹಿಷ್ಣುತೆಯುಳ್ಳ ವ್ಯಕ್ತಿಗಳಾಗಿದ್ದಾರೆ. ಅವರು ಅಪರಾಧ ಎಸಗುತ್ತಾರೆಯೇ ಹೊರತು, ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ಇಂಥ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿಯುವುದರ ಜತೆಗೆ ಅದನ್ನು ಉಳಿಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿಯಬೇಕಿದೆ’ ಎಂದು ಓಲ್ಗಾ ಹೇಳಿದರು.

‘ಸಾಂವಿಧಾನಿಕ ನೈತಿಕತೆ ಎಲ್ಲರಿಗೂ ಇರಬೇಕಾದ್ದು ಕಡ್ಡಾಯ. ಆದರೆ, ಇಂದಿನ ಸರ್ಕಾರ ಮಾತ್ರವಲ್ಲ, ಹಿಂದಿನ ಸರ್ಕಾರಕ್ಕೂ ಇಂಥ ನೈತಿಕತೆ ಇರಲಿಲ್ಲ. ನಮ್ಮೆಲ್ಲರನ್ನೂ ರಾಜಕೀಯವಾಗಿ ಸರಿಸಮಾನರನ್ನಾಗಿ ಮಾಡಿರುವ ಸರ್ಕಾರಗಳು ಸಾಮಾಜಿಕ ಹಾಗೂ ಆರ್ಥಿಕವಾಗಿ ದೊಡ್ಡ ವ್ಯತ್ಯಾಸ ಹುಟ್ಟುಹಾಕಿವೆ. ತಮಿಳುನಾಡಿನ ತೂತ್ತುಕುಡಿಯ ಘಟನೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ರೈತರ ಹೋರಾಟದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಜೀವ ವಿರೋಧಿ ಕಂಪನಿಗಳ ಪರವಾಗಿ ನಿಂತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಮಾಜದಲ್ಲಿ ಪೊಳ್ಳು ರಾಷ್ಟ್ರೀಯತೆ ಹಾಗೂ ಆಳವಾಗಿ ಬೇರುಬಿಟ್ಟಿರುವ ಪುರಾತನ ಕಾಲದ ಮೂಲಭೂತ ಅಂಶಗಳನ್ನು ತೊಡೆದುಹಾಕಬೇಕು. ಇಲ್ಲವಾದಲ್ಲಿ, ಡಾ. ಬಿ.ಆರ್.ಅಂಬೇಡ್ಕರ್‌ ಅವರ ಪ್ರಜಾತಂತ್ರದ ಸೌಧ ಹೆಚ್ಚು ದಿನ ಉಳಿಯದು’ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನದಾಸ್ ಮಾತನಾಡಿ, ‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತಕ್ಕೆ ವಿವಿಧ ಉದ್ದೇಶಗಳನ್ನಿಟ್ಟುಕೊಂಡು ವಿವಿಧ ಜನಾಂಗದವರು, ಭಾಷಿಗರು, ವಿಭಿನ್ನ ಸಂಸ್ಕೃತಿಯವರು ಬಂದಿದ್ದಾರೆ. ಈಗ ಅವರೆಲ್ಲರೂ ಇಲ್ಲಿಯವರಾಗಿ ಎಲ್ಲರೊಡನೆ ಬೆರೆತುಹೋಗಿರುವುದರಿಂದ ಇದು ಬಹುತ್ವ ಭಾರತವಾಗಿ ಹೊರಹೊಮ್ಮಿದೆ. ಹೀಗಾಗಿ, ಇಲ್ಲಿ ಏಕಸಂಸ್ಕೃತಿ ಹೇರುವುದು ತಪ್ಪಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಸಂವಿಧಾನ ಬದಲು ಮಾಡುವ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಇಂಥ ಸಂವಿಧಾನ ವಿರೋಧಿ ನಡೆಯನ್ನು ಇತ್ತೀಚೆಗೆ ಕರ್ನಾಟಕದ ರಾಜ್ಯಪಾಲರು ಇಟ್ಟಿದ್ದು ಇನ್ನೂ ಹಸಿಯಾಗಿಯೇ ಇದೆ. ನೋಟುಗಳ ಅಮಾನ್ಯೀಕರಣದಿಂದ ಜಗತ್ತಿನಲ್ಲೇ ಪ್ರತಿಷ್ಠಿತವಾಗಿರುವ ಆರ್‌ಬಿಐ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಲಾಗಿದೆ. ಜಿಎಸ್‌ಟಿ ಮೂಲಕ ರಾಜ್ಯಗಳು ಕೇಂದ್ರದ ಬಳಿ ಭಿಕ್ಷೆ ಬೇಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆತಂಕ

ವ್ಯಕ್ತಪಡಿಸಿದರು.

‘ಎಲ್ಲರೂ ಸಂವಿಧಾನವನ್ನು ಉಳಿಸಿಕೊಳ್ಳಬೇಕು. ಅದಕ್ಕೆ ಮುಕ್ತ ಮನಸ್ಸಿನಿಂದ ಧೈರ್ಯವಾಗಿ ಮಾತನಾಡಬೇಕಿದೆ. ಪರ್ಯಾಯ ರಾಜಕೀಯದ ಕುರಿತು ಚರ್ಚೆ ಶುರುವಾಗಬೇಕಿದೆ’ ಎಂದು ಅವರು ಹೇಳಿದರು.

*******

ಕರ್ನಾಟಕದ ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಮುಖಂಡರ ಮೇಲೆ ದಾಳಿ ನಡೆದಿದ್ದು ಸೋಜಿಗ. ಇವು ಮನು ವಿಲ್ ಡಿಸೈಡ್‌ ಯುವರ್‌ ಮೆನು ಎನ್ನುವಂತಾಗಿದೆ.

ನ್ಯಾ. ನಾಗಮೋಹನ ದಾಸ್, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry