ರಾಣಾ ರನ್‌ಔಟ್‌ ಸೋಲಿಗೆ ಕಾರಣ

7

ರಾಣಾ ರನ್‌ಔಟ್‌ ಸೋಲಿಗೆ ಕಾರಣ

Published:
Updated:
ರಾಣಾ ರನ್‌ಔಟ್‌ ಸೋಲಿಗೆ ಕಾರಣ

ಕೋಲ್ಕತ್ತ: ಮಹತ್ವದ ಘಟ್ಟದಲ್ಲಿ ನಿತೀಶ್ ರಾಣಾ ಅವರು ‘ಅನಗತ್ಯವಾಗಿ’ ರನ್ ಔಟ್‌ ಆದದ್ದು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ನ ಸೋಲಿಗೆ ಪ್ರಮುಖ ಕಾರಣ’ ಎಂದು ತಂಡದ ನಾಯಕ ದಿನೇಶ್ ಕಾರ್ತಿಕ್‌ ಆರೋಪಿಸಿದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ ಮುಂದಿಟ್ಟ 175 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡ 14 ರನ್‌ಗಳಿಂದ ಸೋತಿತ್ತು. ಕ್ರಿಸ್ ಲಿನ್‌ ಮತ್ತು ಸುನಿಲ್ ನಾರಾಯಣ್‌ ಮೊದಲ ವಿಕೆಟ್‌ಗೆ 20 ಎಸೆತಗಳಲ್ಲಿ 40 ರನ್ ಸೇರಿಸಿದ್ದರು. ನಿತೀಶ್ ರಾಣಾ ಅವರಿಗೆ ಬಡ್ತಿ ನೀಡಿ ಮೂರನೇ ಕ್ರಮಾಂಕದಲ್ಲಿ ಕಳುಹಿಸಲಾಗಿತ್ತು. ಲಿನ್‌ ಜೊತೆ 47 ರನ್ ಸೇರಿಸಿದ ರಾಣ (22 ರನ್‌) ರನ್ ಔಟ್ ಆಗಿದ್ದರು.

‘ರಾಣಾ ಅವರ ರನ್‌ ಔಟ್‌ ಪಂದ್ಯದ ಗತಿಯನ್ನೇ ಬದಲಿಸಿತು. ಅವರು ಇನ್ನಷ್ಟು ಹೊತ್ತು ಕ್ರೀಸ್‌ನಲ್ಲಿ ಉಳಿಯುತ್ತಿದ್ದರೆ ಪಂದ್ಯ ನಮ್ಮದಾಗುತ್ತಿತ್ತು’ ಎಂದು ಕಾರ್ತಿಕ್ ಹೇಳಿದರು.

ಕೇವಲ ಎರಡು ರನ್ ಗಳಿಸಿ ಔಟಾದ ರಾಬಿನ್‌ ಉತ್ತಪ್ಪ ಅವರ ಮೇಲೆಯೂ ಕಾರ್ತಿಕ್ ಆರೋಪ ಮಾಡಿದರು. ‘ರಾಬಿನ್ ಉತ್ತಪ್ಪ ಅವರು ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಅದು ಅವರ ಸಹಜ ಶೈಲಿಯ ಹೊಡೆತ ಆಗಿರಲಿಲ್ಲ’ ಎಂದರು.

ಈಡನ್ ಗಾರ್ಡನ್ಸ್ ಉತ್ತಮ ಅಂಗಣ

ಕೋಲ್ಕತ್ತ:
ಐಪಿಎಲ್‌ 11ನೇ ಆವೃತ್ತಿಯ ಪಂದ್ಯಗಳು ನಡೆದ ಕ್ರೀಡಾಂಗಣಗಳ ಪೈಕಿ ಇಲ್ಲಿನ ಈಡನ್ ಗಾರ್ಡನ್ಸ್‌ ಅತ್ಯುತ್ತಮ ಅಂಗಣ ಎಂದು ಕ್ರಿಕೆಟ್ ಅಭಿಮಾನಿಗಳು ಅಭಿ‍ಪ್ರಾಯಪಟ್ಟಿದ್ದಾರೆ.

ಈ ವಿಷಯವನ್ನು ಬಿಸಿಸಿಐ ಅಧಿಕೃತವಾಗಿ ಭಾನುವಾರ ಘೋಷಿಸಲಿದೆ. ಆದರೆ ಇದಕ್ಕೂ ಮುನ್ನ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಈ ವಿಷಯವನ್ನು ಶನಿವಾರ ಟ್ವೀಟ್ ಮಾಡಿದ್ದಾರೆ.

‘ಈಡನ್ ಗಾರ್ಡನ್ಸ್ ಕ್ರೀಡಾಂಗಣ ಮತ್ತೊಮ್ಮೆ ಅತ್ಯುತ್ತಮ ಅಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಬಂಗಾಳ ಕ್ರಿಕೆಟ್ ಸಂಸ್ಥೆ ಹೆಮ್ಮೆಪಡುತ್ತದೆ’ ಎಂದು ಅವರು ಹೇಳಿದ್ದಾರೆ.

ಈ ಬಾರಿ ಈಡನ್‌ ಗಾರ್ಡನ್ಸ್‌ನಲ್ಲಿ ಲೀಗ್ ಹಂತದ ಏಳು ಪಂದ್ಯಗಳು ನಡೆದಿದ್ದವು. ಪುಣೆಯಲ್ಲಿ ನಡೆಯಬೇಕಾಗಿದ್ದ ಪ್ಲೇ ಆಫ್‌ ಹಂತದ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸುವ ಅವಕಾಶವೂ ಈ ಅಂಗಣಕ್ಕೆ ಲಭಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry