ಕೆಪಿಸಿಸಿ ಅಧ್ಯಕ್ಷ ಸ್ಥಾನ: ಪೈಪೋಟಿ ಆರಂಭ

7

ಕೆಪಿಸಿಸಿ ಅಧ್ಯಕ್ಷ ಸ್ಥಾನ: ಪೈಪೋಟಿ ಆರಂಭ

Published:
Updated:
ಕೆಪಿಸಿಸಿ ಅಧ್ಯಕ್ಷ ಸ್ಥಾನ: ಪೈಪೋಟಿ ಆರಂಭ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನವನ್ನು ತೊರೆಯುವುದಾಗಿ ಜಿ. ಪರಮೇಶ್ವರ ಹೇಳಿರುವ ಬೆನ್ನಲ್ಲೇ, ಈ ಹುದ್ದೆಗೆ ಪಕ್ಷದಲ್ಲಿ ಪೈಪೋಟಿ ಆರಂಭವಾಗಿದೆ.

ಎಂಟು ವರ್ಷಗಳ ಸುದೀರ್ಘ ಅವಧಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ಪರಮೇಶ್ವರ, ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ.

ಯಾರಿಗೆ ಒಲಿಯಲಿದೆ ಪಟ್ಟ?: ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಸದ್ಯ ಶಾಸಕಾಂಗ ಪಕ್ಷದ ನಾಯಕ. ಇವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡುವ ಒಲವನ್ನು ಹೈಕಮಾಂಡ್ ಹೊಂದಿದೆ ಎಂದು ಮೂಲಗಳು ಹೇಳಿವೆ.

ಉಪ ಮುಖ್ಯಮಂತ್ರಿ ಸ್ಥಾನವನ್ನು ದಲಿತ ಸಮುದಾಯದ ಪರಮೇಶ್ವರ ಅವರಿಗೆ ನೀಡಿರುವುದರಿಂದ, ಕುರುಬ ಸಮುದಾಯಕ್ಕೆ ಸೇರಿರುವ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಸಾರಥ್ಯ ಕೊಟ್ಟರೆ, ಲೋಕಸಭೆ ಚುನಾವಣೆಗೆ ಸಹಕಾರಿಯಾಗಬಹುದು ಎಂಬ ತರ್ಕ ರಾಷ್ಟ್ರೀಯ ನಾಯಕರದ್ದಾಗಿದೆ.

ಚುನಾವಣೆ ಫಲಿತಾಂಶ ಬರುವ ಮುನ್ನವೇ ಜೆಡಿಎಸ್‌ಗೆ ಬೇಷರತ್‌ ಬೆಂಬಲ ನೀಡುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದರು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ, ಪರಮೇಶ್ವರ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದ್ದವು. ಈ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಪರಮೇಶ್ವರ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ, ಸರ್ಕಾರ ರಚನೆಗೆ ಯಡಿಯೂರಪ್ಪ ಅವರನ್ನು ರಾಜ್ಯಪಾಲರು ಆಹ್ವಾನಿಸುತ್ತಿ

ದ್ದಂತೆ ತರ್ಕ ಬದಲಾಯಿತು. ಸಂಖ್ಯಾಬಲದಲ್ಲಿ ಎರಡನೇ ಅತಿ ಹೆಚ್ಚು ಬಲ ಹೊಂದಿರುವ ಕಾಂಗ್ರೆಸ್‌ಗೆ ವಿರೋಧ ಪಕ್ಷ ಸ್ಥಾನ ಸಿಗಲಿದೆ ಎಂಬ ಅಂದಾಜಿನಲ್ಲಿ, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಪರಮೇಶ್ವರ, ಆರ್.ವಿ. ದೇಶಪಾಂಡೆ, ಶಿವಕುಮಾರ್‌ ಈ ಸ್ಥಾನದ ಮೇಲೆ ಕಣ್ಣಿಟ್ಟರು. ಸದನದಲ್ಲಿ ಯಡಿಯೂರಪ್ಪ ಅವರನ್ನು ಎದುರಿಸುವುದು, ಮುಂದಿನ ದಿನಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ದರಾಮಯ್ಯನವರೇ ಸಮರ್ಥರು ಎಂದು ಲೆಕ್ಕ ಹಾಕಿದ ಹೈಕಮಾಂಡ್, ಪೈಪೋಟಿ ತಲೆನೋವಿನಿಂದ ಪಾರಾಗಲು ಈ ಮಾರ್ಗವನ್ನು ಅನುಸರಿಸಿತ್ತು.

ಬದಲಾದ ಸನ್ನಿವೇಶದಲ್ಲಿ ಮತ್ತೆ ಮೈತ್ರಿ ಸರ್ಕಾರ ಅಧಿಕಾರ ಹಿಡಿದಿದೆ. ಪರಮೇಶ್ವರ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವಂತೆ ಪಕ್ಷದ ಹೈಕಮಾಂಡ್ ಸೂಚಿಸಿದರೆ, ಸಿದ್ದರಾಮಯ್ಯ ಅವರು ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಅಂತಹ ಹೊತ್ತಿನಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯನವರ ಹೆಗಲಿಗೆ ಹೊರಿಸುವ ಇರಾದೆ ಹೈಕಮಾಂಡ್‌ಗೆ ಇದೆ ಎಂದು ಮೂಲಗಳು ಹೇಳಿವೆ.

ಆಕಾಂಕ್ಷಿಗಳ ಪಟ್ಟಿ: ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಬೇಕೆಂದು ಲಾಬಿ ನಡೆಸುತ್ತಿರುವ ಎಂ.ಬಿ. ಪಾಟೀಲ ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಕೂರುವ ಅಪೇಕ್ಷೆ ಇಟ್ಟುಕೊಂಡಿದ್ದಾರೆ.

‘ಏಳು ಬಾರಿ ಸಂಸದನಾಗಿ ಆಯ್ಕೆಯಾಗಿದ್ದು, ಪಕ್ಷದಲ್ಲಿ ಹಿರಿತನ ಹೊಂದಿದ್ದೇನೆ. ಪರಮೇಶ್ವರ ಪ್ರತಿನಿಧಿಸುತ್ತಿದ್ದ ಸ್ಥಾನವನ್ನು ದಲಿತರಿಗೇ ನೀಡಬೇಕು’ ಎಂಬುದು ಮುನಿಯಪ್ಪ ವಾದ.

ರಾಜ್ಯಸಭಾ ಸದಸ್ಯರೂ ಆಗಿರುವ ಬಿ.ಕೆ.ಹರಿಪ್ರಸಾದ್ ಕೂಡ ಈ ಹುದ್ದೆಯ ಆಕಾಂಕ್ಷಿ. ಪಕ್ಷದ ನಾಯಕಿ ಸೋನಿಯಾಗಾಂಧಿ ಅವರ ಜತೆಗಿರುವ ನಿಕಟ ಬಾಂಧವ್ಯವನ್ನು ಅವರು ನೆಚ್ಚಿಕೊಂಡಿದ್ದಾರೆ.

ಶಿವಕುಮಾರ್‌ ಅವರಿಗೆ ಸಚಿವ ಸ್ಥಾನದ ಬದಲು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡುವ ಚಿಂತನೆಯೂ ವರಿಷ್ಠರಲ್ಲಿದೆ.

‘ಪಕ್ಷದ ಸಂಘಟನೆಗೆ ಬೇಕಾದ ಸಂಪನ್ಮೂಲ ಕ್ರೋಡೀಕರಣ ಕಷ್ಟ. ಸಚಿವ ಸ್ಥಾನದ ಜತೆಗೆ ಅಧ್ಯಕ್ಷ ಸ್ಥಾನ ನೀಡಿದರೆ ಸ್ವೀಕರಿಸಲು ಸಿದ್ಧ’ ಎಂದು ಶಿವಕುಮಾರ್ ವರಿಷ್ಠರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ಎಂ.ಬಿ. ಪಾಟೀಲ ಕೂಡ ಇದೇ ತರ್ಕವನ್ನು ಮುಂದಿಟ್ಟಿದ್ದಾರೆ. ‘ಸಚಿವ ಸ್ಥಾನ ಮತ್ತು ಕೆಪಿಸಿಸಿ ಜವಾಬ್ದಾರಿಯನ್ನೂ ಕೊಡಿ. ಒಂದು ವೇಳೆ ಸಚಿವ ಸ್ಥಾನ ನೀಡದೇ ಇದ್ದರೆ ಕೆಪಿಸಿಸಿ ಅಧ್ಯಕ್ಷ ಗಾದಿ ಕೊಡಿ’ ಎಂದು ಪಾಟೀಲ ಬೇಡಿಕೆ ಇಟ್ಟಿದ್ದಾರೆ.

ತಮ್ಮ ಆಪ್ತರಾಗಿರುವ, ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಎಸ್.ಆರ್‌. ಪಾಟೀಲರಿಗೆ ಸಚಿವ ಸ್ಥಾನ ಕೊಡಿ, ಇಲ್ಲದೇ ಇದ್ದರೆ ಪಕ್ಷದ ಜವಾಬ್ದಾರಿ ವಹಿಸಿ ಎಂಬ ಸಲಹೆಯನ್ನು ಸಿದ್ದರಾಮಯ್ಯ ಅವರು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪಟ್ಟಿಯಲ್ಲಿ ಯಾರಿದ್ದಾರೆ?

- ಸಿದ್ದರಾಮಯ್ಯ

- ಕೆ.ಎಚ್. ಮುನಿಯಪ್ಪ

- ಡಿ.ಕೆ. ಶಿವಕುಮಾರ್

- ಬಿ.ಕೆ. ಹರಿಪ್ರಸಾದ್‌

- ಎಂ.ಬಿ. ಪಾಟೀಲ

- ಎಸ್.ಆರ್. ಪಾಟೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry