ಸಾಮೂಹಿಕ ಅತ್ಯಾಚಾರ; ಯುವತಿಯಿಂದ ದೂರು

7

ಸಾಮೂಹಿಕ ಅತ್ಯಾಚಾರ; ಯುವತಿಯಿಂದ ದೂರು

Published:
Updated:
ಸಾಮೂಹಿಕ ಅತ್ಯಾಚಾರ; ಯುವತಿಯಿಂದ ದೂರು

ಬೆಂಗಳೂರು: ‘ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಮೂವರು ಯುವಕರು, ಅದರ ವಿಡಿಯೊ ಮಾಡಿಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ’ ಎಂದು ಯುವತಿಯೊಬ್ಬರು, ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.

‘ದೀಪಾಂಜಲಿ ನಗರದ ಪೇಯಿಂಗ್‌ ಗೆಸ್ಟ್‌ ಕಟ್ಟಡದಲ್ಲಿ ನೆಲೆಸಿರುವ ಯುವತಿ ದೂರು ನೀಡಿದ್ದಾರೆ. ಸ್ಥಳೀಯ ನಿವಾಸಿಗಳಾದ ಕಾರ್ತಿಕ್ ಹಾಗೂ ಆತನ ಇಬ್ಬರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಎರಡು ವರ್ಷಗಳಿಂದ ಪೇಯಿಂಗ್‌ ಗೆಸ್ಟ್‌ ಕಟ್ಟಡದಲ್ಲಿ ವಾಸವಿದ್ದೇನೆ. ಮಾರ್ಚ್ 18ರಂದು ಕೊಠಡಿಗೆ ನುಗ್ಗಿದ್ದ ಆರೋಪಿಗಳು, ಮುಖಕ್ಕೆ ಮತ್ತು ಬರುವ ಔಷಧಿ ಸಿಂಪಡಿಸಿ ಪ್ರಜ್ಞೆ ತಪ್ಪಿಸಿದ್ದರು. ಕೆಲ ಗಂಟೆಗಳ ಬಳಿಕ ಎಚ್ಚರವಾದಾಗಲೇ ನನ್ನ ಮೇಲೆ ಅತ್ಯಾಚಾರ ನಡೆದಿದ್ದು ಗೊತ್ತಾಯಿತು. ಜತೆಗೆ, ಅತ್ಯಾಚಾರದ ದೃಶ್ಯಗಳನ್ನು ಆರೋಪಿಗಳು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಕೃತ್ಯದ ಬಗ್ಗೆ ದೂರು ನೀಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್‌ಲೋಡ್‌ ಮಾಡುವುದಾಗಿ ಬೆದರಿಕೆ ಸಹ ಹಾಕುತ್ತಿದ್ದಾರೆ’ ಎಂದು ಯುವತಿಯು ದೂರಿನಲ್ಲಿ ಹೇಳಿದ್ದಾರೆ.

‘ಪೇಯಿಂಗ್ ಗೆಸ್ಟ್‌ ಕಟ್ಟಡದ ವ್ಯವಸ್ಥಾಪಕಿಯು ನಾನು ಇಲ್ಲದ ವೇಳೆಯಲ್ಲಿ ಕೊಠಡಿಗೆ ನುಗ್ಗಿ, 65 ಗ್ರಾಂ ಚಿನ್ನ ಮತ್ತು ₹75 ಸಾವಿರ ಕದ್ದಿದ್ದಳು. ಆ ಬಗ್ಗೆ ಗೊತ್ತಾಗುತ್ತಿದ್ದಂತೆ ತರಾಟೆಗೆ ತೆಗೆದುಕೊಂಡಿದ್ದೆ. ಚಿನ್ನ, ಹಣ ವಾಪಸ್‌ ಕೊಡುವಂತೆ ಹೇಳಿದ್ದೆ’

‘ತಾನು ಹೇಳಿದ ಯುವಕರೊಂದಿಗೆ ಸಹಕರಿಸಿದರೆ ಮಾತ್ರ, ಚಿನ್ನ ಹಾಗೂ ಹಣ ವಾಪಸ್ ನೀಡುವುದಾಗಿ ಆಕೆ ಹೇಳಿದ್ದಳು. ಆಕೆಯೇ ಯುವಕರನ್ನು ನನ್ನ ಕೊಠಡಿಗೆ ಕರೆದುಕೊಂಡು ಬಂದು ಅತ್ಯಾಚಾರ ನಡೆಸಲು ಸಹಕಾರ ನೀಡಿದ್ದಾಳೆ’ ಎಂದು ಆರೋಪಿಸಿದ್ದಾರೆ.

ದೂರು ಪಡೆಯಲು ನಿರಾಕರಣೆ: ಯುವತಿ ನೀಡಿದ್ದ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲು ಬ್ಯಾಟರಾಯನಪುರ ಪೊಲೀಸರು ನಿರಾಕರಿಸಿದ್ದರು. ನೊಂದ ಯುವತಿ, ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದರು. ಕಮಿಷನರ್ ಸೂಚನೆ ನೀಡುತ್ತಿದ್ದಂತೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry