ಜಂಟಿ ಕಾರ್ಯದರ್ಶಿ ಕಚೇರಿ ಬೀಗ ಮುರಿಸಿದ ಕಾರ್ಯದರ್ಶಿ!

7

ಜಂಟಿ ಕಾರ್ಯದರ್ಶಿ ಕಚೇರಿ ಬೀಗ ಮುರಿಸಿದ ಕಾರ್ಯದರ್ಶಿ!

Published:
Updated:
ಜಂಟಿ ಕಾರ್ಯದರ್ಶಿ ಕಚೇರಿ ಬೀಗ ಮುರಿಸಿದ ಕಾರ್ಯದರ್ಶಿ!

ಬೆಂಗಳೂರು: ‘ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಸ್‌.ಮೂರ್ತಿ ನೇತೃತ್ವದಲ್ಲಿ ತಮ್ಮ ಕಚೇರಿ ಬೀಗ ಮುರಿದು, ಅಕ್ರಮವಾಗಿ ಒಳ ಪ್ರವೇಶಿಸಿ ಕೆಲವು ಮಹತ್ವದ ದಾಖಲೆಗಳು, ಚೆಕ್‌ ಪುಸ್ತಕಗಳನ್ನು ಸಾಗಿಸಲಾಗಿದೆ’ ಎಂದು ಆರೋಪಿಸಿ ವಿಧಾನಸೌಧ ಪೊಲೀಸರಿಗೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಶಶಿಕಲಾ ಭಟ್‌ ದೂರು ನೀಡಿದ್ದಾರೆ.

ತಾವು ಶನಿವಾರ ಒಂದು ದಿನ ರಜೆ ಹೋಗಿದ್ದಾಗ ಬೀಗ ಮುರಿಯಲಾಗಿದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ. ಆದರೆ, ಶಶಿಕಲಾ ಭಟ್‌ ಅವರ ಕಚೇರಿ ಸ್ಥಳಾಂತರಿಸುವಂತೆ ವಿಧಾನಸಭೆಯ ಅಧ್ಯಕ್ಷ ರಮೇಶ್‌ ಕುಮಾರ್‌ ಆದೇಶಿಸಿದ್ದಾರೆ ಎಂದು ಗೊತ್ತಾಗಿದೆ.

‘ಬಡ್ತಿ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ವಿಧಾನಸಭೆ ಸಚಿವಾಲಯಕ್ಕೂ ವಿಸ್ತರಿಸುವಂತೆ ನಾವು  ಒತ್ತಾಯಿಸುತ್ತಿದ್ದೇವೆ.  ಈ ಬಗ್ಗೆ ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದೇವೆ. ತೀರ್ಪು ಜಾರಿಯಾದರೆ ಮೂರ್ತಿ ಜಂಟಿ ಕಾರ್ಯದರ್ಶಿ ಹುದ್ದೆಗೆ ಹಿಂಬಡ್ತಿ ಪಡೆಯಲಿದ್ದಾರೆ. ಈ ಕಾರಣಕ್ಕೆ ನನ್ನ ವಿರುದ್ಧ ಹಗೆ ಸಾಧಿಸುತ್ತಿದ್ದಾರೆ’ ಎಂದು ಭಟ್‌ ದೂರಿನಲ್ಲಿ ವಿವರಿಸಿದ್ದಾರೆ.

ವಿಧಾನಸೌಧದ ಮೊದಲ ಮಹಡಿಯಲ್ಲಿರುವ 124ನೇ ಸಂಖ್ಯೆ ಕೊಠಡಿಯು ವಿಧಾನಸಭೆ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಿಗೆ ಬಹಳ ಹಿಂದೆಯೇ ನಿಗದಿಯಾಗಿದೆ. ಹಿಂದಿದ್ದ ಅನೇಕರು ಇದೇ ಕೊಠಡಿಯನ್ನು ಬಳಸಿದ್ದಾರೆ. ಈಗ ವಿಧಾನಸಭೆ ಅಧ್ಯಕ್ಷರ ಆಪ್ತ ಕಾರ್ಯದರ್ಶಿಗೆ ಕೊಠಡಿ ಬಿಟ್ಟುಕೊಡುವಂತೆ ಕಾರ್ಯದರ್ಶಿ ಸೂಚಿಸಿದ್ದರು ಎನ್ನಲಾಗಿದೆ.

‘ಕಾರ್ಯದರ್ಶಿ ವರ್ತನೆಯನ್ನು ವಿಧಾನಸಭೆ ಅಧ್ಯಕ್ಷರ ಗಮನಕ್ಕೆ ತರಲು ಪ್ರಯತ್ನಿಸಿದೆ. ಅವರು ಸಿಗಲಿಲ್ಲ. ಅವರ ಆ‍ಪ್ತ ಕಾರ್ಯದರ್ಶಿಗೆ ಸುದ್ದಿ ಮುಟ್ಟಿಸಿದ್ದೇನೆ’ ಎಂದೂ ಶಶಿಕಲಾ ಭಟ್‌ ತಿಳಿಸಿದ್ದಾರೆ.

ಸಚಿವಾಲಯ ಕಾರ್ಯದರ್ಶಿ ಮೂರ್ತಿ ಪ್ರತಿಕ್ರಿಯೆಗೆ ಸಿಗಲಿಲ್ಲ. ಹಲವು ಸಲ ಅವರ ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry